ಈ ಆಹಾರ ರೋಗಗಳಿಗೆ ಪರಿಹಾರ
ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ. ಹತ್ತು ವರ್ಷದ ಮಕ್ಕಳಿಗೆ ಡಯಾಬೀಟೀಸ್, ಬೇಗ ಮುಟ್ಟಾಗಲು ಕಾರಣವೇನು? ಡಯಾಬಿಟೀಸ್, ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಗ್ಯಾಂಗ್ರೀನ್, ಫಿಟ್ಸ್... ಗುಣವಾಗುತ್ತದೆ. ಪ್ರಖ್ಯಾತ ವೈದ್ಯರಾದ ಡಾ.ಖಾದರ್ ಅವರು ಗುಣಪಡಿಸುತ್ತಿರುವ ರೋಗಗಳು ಮತ್ತು ಔಷಧಗಳು. ಸಿರಿಧಾನ್ಯ ಕೃಷಿ ವಿಧಾನ. ಸಿರಿಧಾನ್ಯದಲ್ಲಿರುವ ಔಷಧೀಯ ಗುಣಗಳು. ಡಾ. ಖಾದರ್ ಸಂದರ್ಶನ, ಸಿರಿಧಾನ್ಯದ ಅಡುಗೆಗಳು.’ ಇವಿಷ್ಟೂ ವಿಷಯಗಳನ್ನು ಮುಖಪುಟದಲ್ಲೇ ಪ್ರಕಟಿಸಲಾಗಿದ್ದು, ಆಸಕ್ತಿಯನ್ನು ಕೆರಳಿಸುತ್ತದೆ.
ಪತ್ರಕರ್ತರಾದ ಅಶ್ವಿನ್ ಲಾರೆನ್ಸ್ ಅವರು ಈ ಪುಸ್ತಕದ ಲೇಖಕರಾದ ಎನ್ ಭವಾನಿಶಂಕರ್ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಉಡುಪಿ ಜಿಲ್ಲೆಯ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಭವಾನಿಶಂಕರ್ ಅವರು ಈಗ ನಿವೃತ್ತರಾಗಿದ್ದಾರೆ. ಇವರ ಕನ್ನಡ ಪಾಠವೆಂದರೆ ಕೇವಲ ಪಂಪ, ಕುಮಾರವ್ಯಾಸರಲ್ಲ. ಪ್ರಪಂಚದ ಯಾವುದೇ ಆಗುಹೋಗುಗಳನ್ನು ಕನ್ನಡ ಪಾಠದ ಚೌಕಟ್ಟಿನ ಒಳಗೆ ತರುತ್ತಾರೆ. ಅದಕ್ಕೆ ಹಾಸ್ಯವನ್ನೂ ಸೇರಿಸಿ ವಿದ್ಯಾರ್ಥಿಗಳಿಗೆ ರಸವತ್ತಾಗಿ ವಿವರಿಸುತ್ತಾರೆ. ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕಂಪ್ಯೂಟರ್ ಬಗ್ಗೆ, ಇಂಟರ್ ನೆಟ್ ಬಗ್ಗೆ, ಭಗವದ್ಗೀತೆ ಬಗ್ಗೆ, ಚಿಕ್ಕ ಚಿಕ್ಕ ಮಕ್ಕಳಿಗಾಗಿ ಇಂಗ್ಲೀಷ್ ಕಲಿಕೆ, ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ, ಡಯಾಬಿಟೀಸ್ ಕಾಯಿಲೆ ಬಗ್ಗೆ, ಕತೆ ಬರೆಯುವುದು ಹೇಗೆ?, ನಟನೆ ಕಲಿಯುವುದು ಹೇಗೆ?, ಬೈಕ್ -ಸ್ಕೂಟರ್ ಕಲಿಕೆ ಬಗ್ಗೆ ಹೀಗೆ ಹತ್ತು ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸರಳ ಮತ್ತು ಸುಲಭ ಭಾಷೆಯಲ್ಲಿ ಬರೆದಿರುವುದರಿಂದ ಸಾಮಾನ್ಯರೂ ಇವರ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳಬಹುದಾಗಿದೆ.
ನಮ್ಮ ಆಹಾರ ವ್ಯವಸ್ಥೆಯ ಬಗ್ಗೆ ಬಹಳ ಸರಳವಾಗಿ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದ ಪರಿವಿಡಿಯಲ್ಲಿ ನೀಡಿದ ಅಂಶಗಳನ್ನು ಗಮನಿಸಿದಾಗಲೇ ನಮಗೆ ಪುಸ್ತಕ ಓದಿಯೇ ಬಿಡುವ ಎಂದು ಅನಿಸುತ್ತದೆ. ನಮ್ಮ ಆರೋಗ್ಯದ ಮೇಲೆ ದಾಳಿ ಮಾಡುತ್ತಿರುವವರು ಯಾರು? ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಮತ್ತು ರೋಗಗಳು, ಗೋಧಿ ಮತ್ತು ಮೈದಾಗಳು ವಿಷವಲ್ಲದೇ ಬೇರೆ ಅಲ್ಲ. ಮಾಂಸ ತಿನ್ನುವ ಮೊದಲು ಇರಬೇಕಾದ ಎಚ್ಚರಿಕೆ, ಹಾಲು ಕುಡಿಯುವುದರ ಮೊದಲು ಇದನ್ನು ಓದಿ, ಪ್ಲಾಸ್ಟಿಕ್ ಬಾಟಲಿ ನೀರನ್ನು ಯಾಕೆ ಕುಡಿಯಬಾರದು?, ನೂಡಲ್ಸ್, ಫಾಸ್ಟ್ ಫುಡ್ ತಿನ್ನುವ ಮಕ್ಕಳ ಬಗ್ಗೆ ಮೊದಲ ಭಾಗದಲ್ಲಿ ತಿಳಿಸಿಕೊಟ್ಟಿದ್ದಾರೆ.
ಪುಸ್ತಕದ ಎರಡನೇ ಭಾಗದಲ್ಲಿ ನಾವು ತಿನ್ನುವ ಆಹಾರಗಳಿಂದ ಬರುವ ಅನಾರೋಗ್ಯವನ್ನು ಗುಣಪಡಿಸುವ ಬಗ್ಗೆ ತಿಳಿಸಿದ್ದಾರೆ. ರೋಗ ಪರಿಹಾರದ ಮೂಲ ಮಂತ್ರಗಳು ಎಂಬುದರ ಅಡಿಯಲ್ಲಿ ಸಿರಿಧಾನ್ಯಗಳಲ್ಲಿರುವ ಔಷಧೀಯ ಅಂಶಗಳು, ಸಿರಿಧಾನ್ಯದ ಕೃಷಿ ಬಗ್ಗೆ, ಸಿರಿಧಾನ್ಯದ ಕೃಷಿ ಮಾಡಿದವರ ಬಗ್ಗೆ, ರಾಸಾಯನಿಕ, ಗೊಬ್ಬರಗಳು ಬೇಡವಾದ ಕಾಡು ಕೃಷಿ ವಿಧಾನದ ಬಗ್ಗೆ, ಕರಾವಳಿಯಲ್ಲಿ ಸಿರಿಧಾನ್ಯ ಬೆಳೆಯ ಬಗ್ಗೆ, ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು, ಸಾಮೆ, ಬರಗು, ಕೊರಲು, ರಾಗಿ , ಸಜ್ಜೆ, ಜೋಳ ಮೊದಲಾದುವುಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಡಾ. ಖಾದರ್ ಅವರ ಅಪರೂಪದ ಸಂದರ್ಶನವೂ ಈ ಪುಸ್ತಕದಲ್ಲಿದೆ. ಸಿರಿಧಾನ್ಯದ ಅಡುಗೆ ಮಾಡುವ ವಿಧಾನ ಹಾಗೂ ಕರ್ನಾಟಕದಲ್ಲಿ ಸಿರಿಧಾನ್ಯ ಮಾರುವ ಅಂಗಡಿಗಳ ವಿವರಗಳನ್ನು ನೀಡಿದ್ದಾರೆ.
ಆರೋಗ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ಸಿರಿಧಾನ್ಯಗಳ ಉತ್ಪನ್ನಗಳು ಎಂದು ಬಹಳ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಅವುಗಳಿಂದ ಜಾಗರೂಕರಾಗಿರಬೇಕು ಎನ್ನುತ್ತಾರೆ ಲೇಖಕರಾದ ಭವಾನಿ ಶಂಕರ್ ಇವರು. ಸುಮಾರು ೨೩೦ ಪುಟಗಳನ್ನು ಹೊಂದಿರುವ ಈ ಪುಸ್ತಕದ ಪ್ರತೀ ಪುಟಗಳಲ್ಲಿ ಉಪಯುಕ್ತ ಮಾಹಿತಿ ಅಡಕವಾಗಿದೆ.