ಈ ಎಳೆ ಬಿಸಿಲು, ಸುಂದರ ಹಗಲು ....
ಕವನ
ಈ ಎಳೆ ಬಿಸಿಲು, ಸುಂದರ ಹಗಲು
ನೀನಿರದೆ ಈಗ ಭೀಕರ ಇರುಳು ...
ಇನ ದರುಶನದೆ ನಳನಳಿಸಿದೆ ಭುವನ
ಬನದಲ್ಲಿದೆ ಮಲ್ಲಿಗೆ, ಮೊರಗಾ, ಧವನ;
ಬೆಳಗಿನ ಮೋಡಿಗೆ ಅರಳದು ಹೃದಯ
ನೀನಿಲ್ಲಿರದಿರುವುದೆ ಇದಕೆ ಕಾರಣ ಗೆಳೆಯಾ
ಹೊರೆಯಾಗಿದೆ ಕೇಳು ನೀನಿಲ್ಲದ ಬಾಳು
ಯಾರಿಗೆ ಹೇಳಲಿ ಈ ವಿರಹದ ಗೋಳು ;
ದೂರದಲಿರುವೆ ಮರೆತು ನನ್ನ
ಹಾತೊರೆದಿದೆ ಮನ ಸೇರಲು ನಿನ್ನ
ಕೊನೆಯಾಗಲಿ ಈ ಕಾಯುವ ಶಿಕ್ಷೆ
ಬಂದು ಬೇಗನೆ ಕೊಡು ಪ್ರೇಮದ ರಕ್ಷೆ;
(ಇದು ರತಿಯೊಬ್ಬಳೆ ನಿಂತಿಹ ಸುಂದರ ಚಿತ್ರ
ಪರಿಪೂರ್ಣತೆ ಮದನನು ಇಲ್ಲಿದ್ದರೆ ಮಾತ್ರ)
ಈ ಎಳೆ ಬಿಸಿಲು, ಸುಂದರ ಹಗಲು
ನೀನಿರದೆ ಈಗ ಭೀಕರ ಇರುಳು ...
-ಮಾಲು