ಈ ಕುರಿ‌ ಕಾಯೋನ ಮಗನಿಗ್ಯಾಕ್ರೋ ಪಿಯುಸಿ ಎಲ್ಲ..

ಈ ಕುರಿ‌ ಕಾಯೋನ ಮಗನಿಗ್ಯಾಕ್ರೋ ಪಿಯುಸಿ ಎಲ್ಲ..

ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡಿಗರು. ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿ ಜನ ಸಾಮಾನ್ಯರೂ ವಿಮಾನದಲ್ಲಿ ಹೋಗಬಹುದೆಂಬ ಕನಸನ್ನು ನನಸು ಮಾಡಿದವರು. ಮೊನ್ನೆ ಕ್ಯಾಪ್ಟನ್ ಗೋಪಿನಾಥ್ ಅವರ ಒಂದು ಸಂದರ್ಶನ ನೋಡುತ್ತಿದ್ದೆ.‌ ಅವರು ತಮ್ಮ ಡೆಕ್ಕನ್ ಹೆಲಿಕಾಪ್ಟರ್ ಸರ್ವಿಸಸ್ ಸಂಸ್ಥೆಯಲ್ಲಿ ಆದ ಒಂದು ಗ್ರಾಹಕ ಅನುಭವದ ಬಗ್ಗೆ ಹೇಳಿದ್ದು ಹೀಗೆ...

‘ಒಂದು ದಿನ ಅಮೇರಿಕದಿಂದ ಮಂಜುನಾಥ್ ಅನ್ನುವವರ ಕರೆ ಬಂತು. ಅಲ್ಲಿ ಜಿ.ಎಂ ಸಂಸ್ಥೆಯಲ್ಲಿ ಜನರಲ್ ಮ್ಯಾನೆಜರ್ ಆಗಿದ್ದ ಮಂಜುನಾಥ್ ಹೆಲಿಕಾಪ್ಟರ್ ಒಂದು ದಿನಕ್ಕೆ ಬಾಡಿಗೆಗೆ ಪಡೆಯಲು ಕರೆ ಮಾಡಿದ್ದರು. ಮಂಜುನಾಥ್ ಚಿಕ್ಕಮಗಳೂರಿನ ಬಳಿಯ ಹಳ್ಳಿಯವರು. ಕುರಿ ಕಾಯುತ್ತಿದ್ದ ಅವರ ತಂದೆ ಮಗನಿಗೆ ಒಳ್ಳೆಯ ಕಲಿಕೆ ಕೊಡಿಸಬೇಕು ಅನ್ನುವ ಆಸೆ ಹೊತ್ತವರು. ಅಪ್ಪನ ಬಯಕೆಯಂತೆ ಮಗ ಎಸ್ಸೆಸೆಲ್ಸಿಯಲ್ಲಿ ಒಳ್ಳೆಯ ಅಂಕ ಪಡೆದು ಪಿಯುಸಿಗೆ ಪಕ್ಕದ ಪಟ್ಟಣವೊಂದರಲ್ಲಿ ಪಿಯುಸಿ ವಿಜ್ಞಾನ ಓದುವ ಪ್ರಯತ್ನದಲ್ಲಿದ್ದರು. ಆದರೆ ಕಾಲೇಜಿಗೆ ಸೇರಿಸಲು ಹಣವಿಲ್ಲದ ಸ್ಥಿತಿಯಲ್ಲಿ ಆ ಊರಿನ ಹಣವಂತರ ಬಳಿ ಹೋಗಿ ಸಾಲ ಕೇಳಿದಾಗ "ಈ ಕುರಿ‌ ಕಾಯೋನ ಮಗನಿಗ್ಯಾಕ್ರೋ ಪಿಯುಸಿ ಎಲ್ಲ.." ಅನ್ನುವ ಅವಮಾನದ ಮಾತುಗಳನ್ನು ಅಪ್ಪ ಎದುರಿಸಿದರು. ಈ ಅವಮಾನವನ್ನೇ ಛಲವಾಗಿ ತೆಗೆದುಕೊಂಡು ಬಿಡದೇ‌ ಮಗನ ಕಲಿಕೆಗೆ ಬೆನ್ನೆಲುಬಾಗಿ ಅಪ್ಪ ನಿಂತ ಕಾರಣ ಇಂಜಿನಿಯರಿಂಗ್ ಓದಿ, ಮಾಸ್ಟರ್ಸ್ ಮಾಡಲು ಅಮೇರಿಕಕ್ಕೆ ತೆರಳಿ ಕೊನೆಗೆ ಅಲ್ಲೇ ಕೆಲಸ ಹಿಡಿದ ಮಂಜುನಾಥ್ ಅಪ್ಪ ಜಾತಿ ಮತ್ತು ಬಡತನದ ಕಾರಣಕ್ಕೆ ಎದುರಿಸಿದ ಅವಮಾನಕ್ಕೆ ಅದೇ ಊರಿನಲ್ಲಿ ಉತ್ತರ ಕೊಡುವ ಹಟದಲ್ಲಿದ್ದರು. ಕ್ಯಾಪ್ಟನ್ ಅವರಿಗೆ ಕರೆ ಮಾಡಿದ ಆತ ಹೇಳಿದ್ದು ನನಗೆ ಒಂದು ದಿನಕ್ಕೆ ಹೆಲಿಕಾಪ್ಟರ್ ಬಾಡಿಗೆಗೆ ಬೇಕು. ಮೊದಲು ತಮ್ಮೂರಿನ ಬಳಿಯ ಹಳ್ಳಿಯೊಂದರಲ್ಲಿ ಇರುವ ಅಕ್ಕ ಮತ್ತು ಅವರ ಜೊತೆಯಿರುವ ಅಪ್ಪನನ್ನು ಹೆಲಿಕಾಪ್ಟರ್ ಗೆ ಹತ್ತಿಸಿಕೊಂಡು ಅಲ್ಲಿಂದ ತಮ್ಮೂರಿನಲ್ಲಿ ಲ್ಯಾಂಡ್ ಮಾಡುವುದು. ಅವಮಾನಿಸಿದ ಜನರ ಎದುರೇ ಕುರಿ ಕಾಯುವ ತಂದೆಯ ಜೊತೆ ಹೆಲಿಕಾಪ್ಟರ್ ಅಲ್ಲಿ ಊರಿಗೆ ಕಾಲಿಡುವುದು. ‘

ಇದಕ್ಕೆ ಬೇಕಾದ ಏರ್ಪಾಡೆಲ್ಲವನ್ನೂ ಮಾಡಿ ಕೊಟ್ಟು ಇದನ್ನು ಸಾಧ್ಯವಾಗಿಸಿದ್ದು ತಮ್ಮ ಹೆಲಿಕಾಪ್ಟರ್ ಸೇವೆಯ ಕಂಪನಿಯಲ್ಲಿ ಒಂದು ಮರೆಯಲಾಗದ ಘಟನೆ ಎಂದರು ಕ್ಯಾಪ್ಟನ್..

 (ಫೇಸ್ ಬುಕ್ ನಲ್ಲಿ ಓದಿದ್ದು)