ಈ ಕೆಳಗಿನ ಹತ್ತು ಉಲ್ಲೇಖಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು.

ಈ ಕೆಳಗಿನ ಹತ್ತು ಉಲ್ಲೇಖಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು.

ಈ ಕೆಳಗಿನ ಹತ್ತು ಉಲ್ಲೇಖಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು. 
ಸಿಗ್ಮಂಡ್ ಫ್ರಾಯ್ಡ್ ಅವರು ಪ್ರಸಿದ್ಧ ಮನಶಾಸ್ತ್ರಜ್ಞರು. ಅವರ ಶಿಷ್ಯರಾದ ಕಾರ್ಲ್ ಗುಸ್ತಾವ್ ಯಂಗ್ ಅವರೂ ಸಹ ಗುರುಗಳಂತೆ ಪ್ರಸಿದ್ಧರು. ಇಂದಿನ ಮನಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಅನೇಖ ಉಲ್ಲೇಖಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ಪ್ರಭಾವಿತನಾಗಿ ನನಗೆ ಅನ್ನಿಸಿದಂತೆ ಬರೆದ ಲೇಖನ ಇದು. ನಿಮಗೂ ಒಪ್ಪಿಗೆ ಆಗುವುದು ಎಂಬ ಭರವಸೆಯಿಂದ ಪ್ರಕಟಿಸುತ್ತೀದ್ದೇನೆ. ಓದಿ, ಆನಂದಿಸಿ, ಸರಿ ಎನ್ನಿಸಿದರೆ ಅಳವಡಿಸಿಕೊಳ್ಳಿ, ಇದರಿಂದ ನಿಮ್ಮ ಜೀವನ ಪಥ ವೇನಾದರೂ ಬದಲಾದರೆ ಇದನ್ನು ಬರೆದಿದ್ದು ಸಾರ್ಥಕ,  ಹಾಗೂ ಮನ್ನಣೆ, ಮೂಲ ಕರ್ತೃಗಳಾದ  ಕಾರ್ಲ್ ಯಂಗ್ ಅವರಿಗೇ ಸೇರಿದ್ದು. 
೧.  ಉತ್ತಮ ಜೀವನ ನಡೆಸಲು ಹೀಗೇ ಇರಬೇಕು ಎಂದು ನಿಯಮವಿಲ್ಲ 

ನಾವೆಲ್ಲರೂ ಜೀವನ ನಡೆಸುತ್ತೇವೆ. ಆದರೆ ಒಬ್ಬೊಬ್ಬರದು ಒಂದೊಂದು ರೀತಿ. ಅವರವರಿಗೆ ಉತ್ತಮ ಅನ್ನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುತ್ತೇವೆ. ನಾವು ಅಂದುಕೊಂಡದ್ದೇ ಉತ್ತಮ ಎನ್ನುವುದು ತಪ್ಪು. ಇದಕ್ಕೆ ನಾವು ವಿಶಾಲವಾದ ಮನೋಭಾವದಿಂದ ಎಲ್ಲವನ್ನು ಓದಿ, ಗಮನಿಸಿ, ವಿದ್ವಾಂಸರ ಮಾರ್ಗದರ್ಶನ ದಿಂದ ಪ್ರೇರಿತರಾದರೆ ಅದು ಉತ್ತಮ ಬಾಳು ಎನ್ನಿಸಿಕೊಳ್ಳುತ್ತದೆ. ಬೇರೆಯವರು ಸಹ ಅವರಿಗೆ ತಿಳಿದ ಮಟ್ಟಿಗೆ ಉತ್ತಮ ಅನ್ನಿಸಿಕೊಂಡಂಥ ಬಾಳನ್ನು ನಡೆಸಲು ಬಿಡಬೇಕು. ನಾನು ನಡೆಸುತ್ತಿರುವ ಜೀವನವೇ ಉತ್ತಮ ಎಂಬ ಅಹಂಭಾವದಿಂದ ದೂರವಿರಬೇಕು. ನಮ್ಮದು ನಿಜವಾಗಿಯೂ ಉತ್ತಮ ಜೀವನವಾದರೆ ಇತರರೇ ನಮ್ಮನ್ನು ಅನುಕರಿಸುತ್ತಾರೆ ಎಂಬ ಮನೋಭಾವ ಹೊಂದಿರಬೇಕು. ಇತರರಿಂದ ನಾವು ಕಲಿಯುವುದು ಏನಾದರೂ ಇದ್ದರೆ ಅದನ್ನು ಶುದ್ಧ ಮನಸ್ಸಿನಿಂದ ಕಲಿಯಬೇಕು. 

೨. ನಮ್ಮ ಜೀವನದ ಉದ್ದೇಶವೇನು ಎಂಬ ಒಳನೋಟ ಅತ್ಯಗತ್ಯ 

ಇಂದು ಅಸ್ತಿ, ಸಂಪತ್ತು, ತೋರ್ಪಡಿಕೆ ಇವುಗಳಿಗೇ ಅಗಾಧವಾದ ಬೆಲೆ ನೀಡುತ್ತಿದ್ದಾರೆ. ದುಡ್ಡಿದ್ದವನೇ ದೊಡ್ಡಪ್ಪ ಎಂಬ ಹಳೆಯ ಗಾದೆ ಇನ್ನೂ ಹಳಸಿಲ್ಲ. ಕೆಲವರಂತೂ ಇವನ್ನು ಗಳಿಸಲು ತಮ್ಮ ಇಡೀ ಜೀವನವನ್ನೇ ಒತ್ತೆ ಇಟ್ಟು ಬಾಳನ್ನು ಸವೆಸುತ್ತಿದ್ದಾರೆ. ಜೀವನ ನಿರ್ವಹಿಸಲು ಬೇಕಾಗುವ ಕನಿಷ್ಠ ಸಂಪತ್ತನ್ನು, ಬಟ್ಟೆಗಳನ್ನು ಇಟ್ಟುಕೊಂಡರೆ ಸಾಕು. ಸುಖಮಯವಾದ ಮಾನಸಿಕ ಅರೋಗ್ಯ ಪಡೆಯಲು ಎಲ್ಲದರಲ್ಲೂ ನಂಬಿಕೆ, ಭರವಸೆ, ಪ್ರೀತಿ ಹಾಗೂ ನಮ್ಮ ಒಳ ನೋಟ ಇವುಗಳಿಗೆ ಬೆಲೆಕೊಟ್ಟರೆ ಸಾಕು. ಎಲ್ಲದಕ್ಕೂ ಅಪಸ್ವರ, ಎಲ್ಲವನ್ನೂ ಅಸೂಯೆ, ದ್ವೇಷದಿಂದ ನೋಡುವುದು, ಹೀಗೆ ಮಾಡಿದರೆ ಉತ್ತಮ ಜೀವನ ಹೇಗೆ ಸಾಧ್ಯ?? ನಮ್ಮ ಜೀವನದ ಉದ್ದೇಶವೇನು ಎಂಬ ಒಳನೋಟವಿದ್ದರೆ ಎಲ್ಲವೂ ಒಳಿತೇ ಆಗುತ್ತದೆ, ಆದರೆ ಅದನ್ನು ಬಹಳ ವಿಶಾಲವಾದ ಮನೋಭಾವದಿಂದ ನೋಡಬೇಕು. ಇಲ್ಲವಾದಲ್ಲಿ ನಮಗೂ, ಭಯೋದ್ಪಾದಕರಿಗೂ, ಧರ್ಮಾಂಧರಿಗೂ ವ್ಯತ್ಯಾಸವೇ ಇರುವುದಿಲ್ಲ. 

೩.  ದುಃಖವು ಸುಖಜೀವನದ ಒಂದು ಅವಿಭಾಜ್ಯ ಅಂಗ. 

ಸುಖ ಸಂತೋಷವನ್ನು ಅಳೆಯುವುದು ಕಷ್ಟ. ಅದು ಅವರವರ ಮನೋಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಸುಖ, ದುಃಖ ವೆಂಬುದು ಒಂದೇ ನಾಣ್ಯದ ಎರಡು ಮುಖದಂತೆ ಅಥವಾ ಹಗಲು ರಾತ್ರಿಯಂತೆ. ಕೇವಲ ಸುಖವೊಂದೇ ಇರಲು ಸಾಧ್ಯವೇ ಇಲ್ಲ. ಜೀವನದಲ್ಲಿ ದುಃಖವಿರಬೇಕು, ಅದರಿಂದ ಕಲಿಯುವುದು ಬಹಳ. ಈ ದುಃಖದಿಂದ ಹೊರಬಂದರೆ ಆಗ ಅದರಿಂದಲೇ ಸುಖದ ಅನುಭವವಾಗುವುದು. ಅತೀ ಸುಖವಿದ್ದರೆ ಸ್ವಲ್ಪ ದುಃಖವಾದರೂ ಸಹಿಸಲು ಅಸಾಧ್ಯ ಎನ್ನಿಸುವುದು. ಹೀಗಾಗಿಯೇ ಇಂದು ಆತ್ಮಹತ್ಯೆಗಳು ಹೆಚ್ಚುತ್ತಿರುವುದು. ದುಃಖವಿದ್ದವರು ಗೋಳಾಡಿದರೂ ಸ್ವಲ್ಪ ಸುಖ ಸಿಕ್ಕರೂ ಅದನ್ನು ಸಂತೋಷದಿಂದ ಅನುಭವಿಸುತ್ತಾರೆ. 

೪.  ಸದುದ್ದೇಶದ ವ್ಯಕ್ತಿತ್ವ ನಮ್ಮದಾಗಬೇಕು 

ನಮ್ಮ ಜೀವನವನ್ನು ಒಂದು ಸದುದ್ದೇಶದಿಂದ ಅನುಭವಿಸಬೇಕು. ಆ ಸದುದ್ದೇಶವನ್ನು ನೆರವೇರಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು. ನಮ್ಮೊಳಗಿನ ವ್ಯಕ್ತಿತ್ವವು ಈ ಸದುದ್ದೇಶಕ್ಕೆ ಪೂರಕವಾಗಿರಬೇಕು. ನಮ್ಮೊಳಗಿನ ವ್ಯಕ್ತಿತ್ವ ಯಾವುದು ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಜೀವನ ನಡೆಸಿದರೆ ಅದರಿಂದ ಸಿಗುವ ಉಪಶಮನಕ್ಕೆ ಸಾಟಿಯೇ ಇಲ್ಲ. ಜಾತಿ, ಪಂಥ, ಧರ್ಮಗಳ ಸಂಕುಚಿತ ಮನೋಭಾವದಿಂದ ಹೊರಬಂದು ನಮ್ಮದೇ ವ್ಯಕ್ತಿತ್ವ ಬೆಳೆಸಿ ಅದನ್ನು ಸಾಧಿಸಲು ಪ್ರಯತ್ನಿಸಿದರೆ ಜೀವನ ಸಾರ್ಥಕವಾಗುತ್ತದೆ. ದಾನ, ಪರೋಪಕಾರ, ಸಮಾಜ ಸೇವೆ ಇವೆಲ್ಲವೂ ನಮ್ಮಲ್ಲಿನ ವ್ಯಕ್ತಿತ್ವಗಳು.  ಇಲ್ಲಿ ಜಾತಿ ಬೇಧವೆಣಿಸದೆ ಉದಾರ ಮನಸ್ಸಿಂದ ಸೇವೆ ಮಾಡಿದರೆ ಅದರಿಂದ ಸುಖವೇ ನಿಜವಾದ ಸುಖ. 

೫.  ಘಟನೆಗಳಿಗೆ ನ್ಯಾಯಯುತವಾದ ತೀರ್ಮಾನ ಮುಖ್ಯ, ಇದಕ್ಕೆ ಅನುಭವ, ಉತ್ತಮ ಮಾರ್ಗದರ್ಶನ ಮುಖ್ಯ 

ಜೀವನದಲ್ಲಿ  ವಿಧ ವಿಧವಾದ ಸಂಧರ್ಭಗಳು, ಘಟನೆಗಳು ಬರುತ್ತವೆ. ನಮ್ಮ ಗ್ರಹಿಕೆಗೆ ತಕ್ಕಂತೆ ಅವನ್ನು ನಾವು ವ್ಯಾಖ್ಯಾನಿಸುತ್ತೇವೆ. ಇದಕ್ಕೆ ನಮ್ಮ ಆಕಾಂಕ್ಷೆ ಹಾಗೂ ನಮ್ಮ ಹಿಂದಿನ ಅನುಭವವೇ ಪ್ರೇರಕವಾಗಿರುತ್ತದೆ. ಹೀಗಾಗಿ ಘಟನೆ ಒಂದೇ ಆದರೂ ವ್ಯಾಖ್ಯಾನಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾವುದೇ ಘಟನೆಗೆ ಆತುರದಿಂದ ತೀರ್ಮಾನಕ್ಕೆ ಬರ ಬಾರದು  ನಮ್ಮ ಅನುಭವ ಹಾಗೂ  ಇತರರ ವ್ಯಾಖ್ಯಾನದ ತುಲನೆ ಇವನ್ನು ಸಮಾಧಾನದಿಂದ. ಸಾವಕಾಶವಾಗಿ ನೋಡಿ ತೀರ್ಮಾನಕ್ಕೆ ಬರಬೇಕು. ಇದರ ಕೊರತೆಯಿಂದಲೇ ಅನೇಕರು ಸರಿಯಾದ ತೀರ್ಮಾನಕ್ಕೆ ಬರದೇ ಸುಖದಿಂದ ವಂಚಿತರಾಗುತ್ತಿದ್ದಾರೆ. ಇಂದು ನಡೆಯುವ ಹಲವಾರು ಘಟನೆಗಳಿಗೆ ಸಮಯಸಾಧಕರು ಜನರ ಮುಗ್ಧತೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.  ಅಚಾತುರ್ಯದ ಘಟನೆ ನಡೆಯುತ್ತದೆ ಆದರೆ ಅದಕ್ಕೆ ನಾವೇ ಕಾರಣರೇ, ಇತರರು ಕಾರಣರೇ ಎಂದು ಯೋಚಿಸಿ ತಪ್ಪು ನಮ್ಮದೇ ಆದರೆ ಒಪ್ಪಿಕೊಂಡು ಬಿಡುವುದು ಒಳ್ಳೆಯದು. ಹಾಗೆಯೆ ತಿಳಿದು ತಿಳಿದೂ ತಪ್ಪು ಮಾಡಬಾರದು. ಉದಾಹರಣೆಗೆ ಲಂಚ, ಅಸೆ ಆಮಿಷಗಳಿಗೆ ಬಲಿಯಾಗುವುದು ಇತ್ಯಾದಿ.  

೬.  ಗುಟ್ಟನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ ನಂಬಿಕೆಗೆ ಪಾತ್ರರಾದ ಒಬ್ಬರು ನಿಮಗಿರಬೇಕು 

ಮಾನವ ಸಂಘ ಜೀವಿ. ಒಬ್ಬನೇ ಇರಲಾರ. ಆದ್ದರಿಂದ ಉತ್ತಮ ಗೆಳೆಯರು ಇರಬೇಕು. ನಿಮ್ಮ ಖಾಸಗಿ ವಿಷಯಗಳನ್ನು ಹಂಚಿ ಕೊಳ್ಳಲು ಒಬ್ಬ ಮಿತ್ರ ಇರಬೇಕು. ಅವರು ನಂಬಿಕಸ್ಥರಾಗಿರಬೇಕು ಎಂಬುದು ಬಹಳ ಮುಖ್ಯ.  ಈ ರೀತಿ ನಿಮ್ಮ ಅನಿಸಿಕೆ , ಅನುಭವಗಳನ್ನು ಒಬ್ಬರೊಂದಿಗೆ ಹಂಚಿಕೊಂಡಾಗ ಮನಸ್ಸು ನಿರಾಳವಾಗಿ ನಮಗೆ ಸಂತೋಷ ಉಂಟಾಗುತ್ತದೆ. ಯಾರೊಂದಿಗೂ ಹಂಚಿಕೊಳ್ಳದೇ ಮುಚ್ಚಿಟ್ಟುಕೊಂಡರೆ ದುಃಖ ಕಟ್ಟಿಟ್ಟ ಬುತ್ತಿ. ಮಿತ್ರ ಎಂದರೆ ಗೆಳೆಯರೇ ಆಗಬೇಕೆಂದಿಲ್ಲ. ಅವರು ನಿಮ್ಮ ಹತ್ತಿರದ ಸಂಭಂದಿ ಯಾಗಿರಬಹುದು, ನಿಮ್ಮ ಮನೆಯವರೇ ಆಗಿರಬಹುದು ಆದರೆ ನಿಮ್ಮ ಗುಟ್ಟನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ ನಂಬಿಕೆಗೆ ಪಾತ್ರರಾಗಿರಬೇಕು. 

೭.  ಅಂತರಾತ್ಮ ಅಥವಾ ಹೃದಯದಿಂದ ಬಂದ ಮಾತು ಯಾವತ್ತಿಗೂ ಸರಿ. 

ಎಲ್ಲ ಮನುಷ್ಯರಲ್ಲೂ ಸುಪ್ತವಾದ ಆತ್ಮವೂ ಇದೆ, ಸುಪ್ತವಾದ ಅಹಂ ಸಹ ಇದೆ. ಆದರೆ ನಮಗೆ ನಮ್ಮ ಒಳ ಮನಸ್ಸು ಏನು ಹೇಳುತ್ತದೆ ಎಂದು ಮನನ ಮಾಡುವ ಸಾಮರ್ಥ್ಯ ಇರಬೇಕು. ನಮ್ಮ ಅಂತರಾತ್ಮ ಖಂಡಿತ ನಮಗೆ ಮೋಸ ಮಾಡುವುದಿಲ್ಲ. ನಮಗೆ ಆಗುವ ತೊಂದರೆಗಳಿಗೆಲ್ಲ ನಮ್ಮ ಒಳ ಹೃದಯ, ಅಂತರಾತ್ಮ ಸರಿಯಾದ ಉತ್ತರವನ್ನು ಕೊಟ್ಟೇಕೊಡುತ್ತದೆ. ಇದು ಎಲ್ಲರಲ್ಲೂ ಸುಪ್ತವಾಗಿ ಇದ್ದೆ ಇರುತ್ತದೆ. ಇದನ್ನು ಮೀರಿ ನಡೆದಾಗಲೇ ಒಂದು ರೀತಿಯ ತಳಮಳ, ಮಾನಸಿಕ ಹಿಂಸೆಗೆ ಗುರಿಯಾಗಿ ದುಃಖದಿಂದ ಝರ್ಜರಿತರಾಗುತ್ತೇವೆ. ಇದಕ್ಕೆ ಸುಪ್ತವಾದ ಅಹಂ ಸಹಾ ಕಾರಣ, ಇದಕ್ಕೆ ದಾರಿ ಮಾಡಿಕೊಡ ಬೇಡಿ. 

೮.  ಒಳ ಮನಕ್ಕೆ ಪ್ರಾಶಸ್ತ್ಯ ಕೊಟ್ಟು ಒಳಮುಖವೊಂದನ್ನೇ ಧರಿಸಿದರೆ ಸಂತೋಷದಿಂದ ಇರಬಹುದು

ಸಾಮಾನ್ಯವಾಗಿ ಎಲ್ಲರಿಗು ಎರಡು ಮುಖಗಳಿರುತ್ತವೆ. ಒಂದು ಒಳಮುಖ, ಇನ್ನೊಂದೇ ಹೊರಮುಖ. ಯಾರಿಗಾದರೂ ಒಂದೇ ಮುಖ ಇದೆ ಎಂದರೆ ಅವರು ಸಾತ್ವಿಕರೋ, ಯೋಗಿಗಳೋ ಆಗಿರುತ್ತಾರೆ. ನಾವು ಸಹ ಹಾಗೆ ಆಗಬಹುದು, ಆದರೆ ನಮ್ಮ ಕೃತಕವಾದ ಹೊರಮುಖವನ್ನು ಕಿತ್ತೊಗೆದಾಗ ಮಾತ್ರ ಸಾಧ್ಯ. ಸಮಾಜದಲ್ಲಿ ಇತರರೊಂದಿಗೆ ಬಾಳುವಾಗ ನಾವು ಅನೇಕಬಾರಿ ಒಂದು ಕೃತಕವಾದ ಮುಖವಾಡ ಹಾಕಿಕೊಳ್ಳುತ್ತೇವೆ. ನಾವು ಮಾಡುತ್ತಿರುವುದು ತಪ್ಪು ಎಂದು ನಮ್ಮ ಒಳ ಮನಸ್ಸು ಹೇಳುತ್ತಿದ್ದರೂ ಕೇಳದೇ ಹೊರಮುಖವಾಡಕ್ಕೆ ಪ್ರಾಶಸ್ತ್ಯ ಕೊಡುತ್ತೇವೆ. ಇದರಿಂದ ಒಳಗೊಳಗೇ ಬೇಯುತ್ತೇವೆ. ಅದಕ್ಕೆ ಬದಲಾಗಿ ನಾವು ನಮ್ಮ ಒಳ ಮನಕ್ಕೆ ಪ್ರಾಶಸ್ತ್ಯ ಕೊಟ್ಟು ಒಳಮುಖವೊಂದನ್ನೇ ಧರಿಸಿದರೆ ಸಂತೋಷದಿಂದ ಇರಬಹುದು. ಆದರೆ ನಮ್ಮ ಒಳಮನ ಶುದ್ಧವಾಗಿರಬೇಕು, ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು. ಇದ್ದುದನ್ನು ಇದ್ದಹಾಗೆ ಹೇಳುವ ರೀತಿಯಲ್ಲಿ ಹೇಳಿದರೆ, ನೋಡಿ, ನಾವು ಇರೋದೇ ಹೀಗೇ ಎಂದು ಜೀವನ ನಡೆಸಿದರೆ ಸಂತೋಷವಾಗಿರಲು ಸಾಧ್ಯ  ಯಾವುದೇ ತೊಂದರೆ ಬಂದರೆ ಒಳ ಮನದಿಂದ ಒಳ ಮುಖದಿಂದ ನೋಡಿದರೆ ಯಾವ ತೊಂದರೆಯೂ ಆಗುವುದಿಲ್ಲ. 

೯.  ನಮ್ಮ ವ್ಯಕ್ತಿತ್ವಕ್ಕೆ ನಾವೇ ಕಾರಣ, ಹೊರಗಿನ ಸಂದರ್ಭಗಳಲ್ಲ. 

ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು, ರೂಪಿಸಿಕೊಳ್ಳಲು  ಹೊರಗಿನ ಪರಿಸರ, ಸಂದರ್ಭ, ಪ್ರಮುಖ ಪಾತ್ರವಹಿಸುತ್ತದೆ ಎಂದು ಅನೇಕರ ಅಂಬೋಣ. ಆದರೆ ಅದು ಸುಳ್ಳು. ನಮ್ಮ ವ್ಯಕ್ತಿತ್ವ  ಕುಂಠಿತಗೊಳ್ಳಲು ಸಂದರ್ಭ, ವಾತಾವರಣಕ್ಕಿಂತ ನಮ್ಮಲ್ಲಿ ಅಡಗಿರುವ ಹೆದರಿಕೆಯೇ ಕಾರಣ. ನನಗೆ ಹೇಗೆ ಬೇಕೋ ಹಾಗೆ ನಾನು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೇನೆ ಎಂದು ಧೈರ್ಯವಾಗಿ ಶಪಥ ಮಾಡಿದರೆ ಹಾಗೆಯೇ ಆಗಲು ಸಾಧ್ಯ. ಸಂದರ್ಭ, ಹೊರಗಿನ ಪರಿಸರ ಇವು ಕಾರಣ ಎಂದು ದೂರಿದರೆ ಅದು ನಮ್ಮ ದುರ್ಬಲತೆಯನ್ನಷ್ಟೇ ತೋರಿಸುತ್ತದೆ. 

೧೦.  ಒಳಗಿನದನ್ನು ವಿಶ್ಲೇಷಿಸಿ ನೋಡಿ ಎಚ್ಚೆತ್ತು ಕೊಳ್ಳೋಣ 

ನಾವು ಏನು ಎಂದು ತಿಳಿದುಕೊಳ್ಳಬೇಕೆಂದರೆ ನಮ್ಮ ಭಾವನೆಗಳೇನು, ಉದ್ದೇಶಗಳೇನು, ಅನಿಸಿಕೆಗಳೇನು ಮೊದಲುದುವುಗಳು ಖಚಿತವಾಗಿರಬೇಕು. ನಮ್ಮನ್ನು ನಾವು ಸರಿಯಾಗಿ ತಿಳಿದುಕೊಂಡರೆ ಎಂಥ ಸಂದರ್ಭಗಳನ್ನೂ ಸಹ ಜಯಿಸಬಹುದು. ನಮ್ಮಲ್ಲಿ ಉಂಟಾಗುವ ಭಾವನೆಗಳನ್ನು ಸರಿಯಾಗಿ ವಿಶ್ಲೇಷೆಸಿ ನಮ್ಮ ಅಂತರಾತ್ಮಕ್ಕೆ ತಕ್ಕಂತೆ ವರ್ತಿಸಿದರೆ ಏನನ್ನಾದರೂ ಸಾಧಿಸಬಹುದು. ಹೊರಗಿನದನ್ನು ವಿಶ್ಲೇಷಿಸಿ ನೋಡಿದರೆ ಕನಸಿನ ಮನೆಯನ್ನು ನಿರ್ಮಿಸಬಹುದು, ಒಳಗಿನದನ್ನು ವಿಶ್ಲೇಷಿಸಿ ನೋಡಿದರೆ ಎಚ್ಚೆತ್ತು ಕೊಳ್ಳಬಹುದು. ಮೊದಲು ಎಚ್ಚೆತ್ತುಕೊಂಡು ನಂತರ ಕನಸಿನ ಸೌಧವನ್ನು ನಿರ್ಮಿಸೋಣ.