ಈ ಚಳಿಯಲಿ ಏನೋ ಇದೆ!
ಈ ಚಳಿಯಲಿ ಏನೋ ಇದೆ
ತಣ್ಣನೆ ಗಾಳಿ ಬೀಸುತ್ತಾ ಇದೆ,ಗಿಡ-ಮರದ ಎಲೆಗಳು ಜೋರಾಗಿ ಅಲುಗುತ್ತಾ ಇವೆ, ರೆಂಬೆ-ಕೊಂಬೆಗಳು ಒಂದಕ್ಕೊ೦ದು ಬಡಿದು ಶಬ್ದ ಮಾಡುತ್ತಿವೆ. ಮುಂಜಾನೆಯ ಮುಸುಕಿನಲ್ಲಿ ಹಕ್ಕಿಗಳ ಕಲರವ ಕಿವಿಗೆ ಮುದ ನೀಡುವಂತಿದೆ.ಆದರೂ ಮೈ ನಡುಗುವ ಚಳಿಯಲ್ಲಿ ಏಕಾದರೂ ಬೆಳಕು ಹರಿಯುವುದೋ ಎಂದು ಹೊದಿಕೆ ಹೊದ್ದು ಮಲಗಿದೆ. ಚಳಿಗಾಲದಲ್ಲಿ ಏಳುವುದೂ ಆಲಸ್ಯ. ಬೆಚ್ಚಗೆ ಮಲಗಿದರೆ ಸಾಕೆಂಬ ಬಯಕೆ. ಇದಕ್ಕೆ ಇಂಬು ನೀಡುವಂತೆ ಕಾಲೇಜಿಗೆ ಬೇರೆ ರಜೆ. ಇನ್ನು ನಿದ್ದೆಗೆ ಅಡ್ಡಿಪಡಿಸುವವರು ಯಾರು? ಅಮ್ಮ ಬಂದು ಸುಪ್ರಭಾತ ಹೇಳಬೇಕಷ್ಟೆ.
ಚಳಿಗಾಲ ಬಂತೆಂದರೆ ಸಾಕು, "ಅಯ್ಯೋ ಹಾಳಾದ್ದು ಚಳಿಗಾಲ ಬಂದೇ ಬಿಟ್ಟಿತು, ಯಾವುದಾದರೂ ಸಹಿಸಬಹುದು ಚಳಿಗಾಲ ಸಹಿಸಲು ಸಾಧ್ಯವಿಲ್ಲ, ಮೈ ರೋಮವೆಲ್ಲಾ ನಿಮಿರಿ ಹೋಗುತ್ತದೆ" ಎಂದು ಚಳಿಗಾಲವನ್ನು ಶಪಿಸುತ್ತಾರೆ. ಹೀಗೆ ಶಪಿಸುವುದರಲ್ಲಿ ಬೇಸಿಗೆ ಕಾಲ, ಮಳೆಗಾಲವೇನೂ ಹೊಸತಲ್ಲ ಬಿಡಿ. ಕಾಲವು ಇದರಿಂದ ಕೊಂಚವೂ ಬೇಸರಿಸದೆ ತನ್ನಪಾಡಿಗೆ ತನ್ನ ಕೆಲಸ ಮುಗಿಸಿ ಹೋಗುತ್ತದೆ.
’ಪ್ರಕೃತಿ’ ಎಂತಹ ಅದ್ಬುತಸೃಷ್ಟಿ ನೋಡಿ! ಒಂದು ವೇಳೆ ಕಾಲವೇ ಇಲ್ಲದಿದ್ದರೆ ನಮ್ಮ ಪಾಡೇನು? ಇತರ ಜೀವಿಗಳ ಪಾಡೇನು? ಯೋಚಿಸಿ ನೋಡಿ. ಕಲ್ಪಿಸಲೂ ಅಸಾಧ್ಯವಾದಂತಹ ಸಂಗತಿ ಇದು. ಬೇಸಿಗೆಯಲ್ಲಿ ಬರಡಾದ ಭೂಮಿ ಮಳೆಯಿಂದ ತಂಪಾಗುತ್ತದೆ. ಚಳಿಯಿಂದ ಫಲಪುಷ್ಪ ಒಡೆದು ಕಾಯಿ ಬಿಡುವಂತಹ ಕಾಲ. ಮೂರೂ ಕಾಲಗಳು ಸೇರಿ ಪರಿಪೂರ್ಣ ಸೃಷ್ಟಿಯಾಗುತ್ತದೆ.
ಭೂಮಿಯ ಧ್ಯಾನಸ್ಥ ಸ್ಥಿತಿ ಇದು. ವಸಂತ ಮಾಸದ ಆಗಮನದ ವೇಳೆಯಲ್ಲಾಗುವ ಪ್ರಕೃತಿಯ ಬಣ್ಣದುಡುಗೆಯ ಮೆರೆದಾಟಕ್ಕೆ ಈ ಕಾಲದಲ್ಲೇ ತಯಾರಿ ನಡೆಯುವುದು. ಗಿಡಮರದ ಎಲೆಗಳೆಲ್ಲಾ ಈಗ ಹೂವಿಲ್ಲದೆ ನಿಂತಿರಬಹುದಾದರೂ ಮುಂದಿನ ನಳನಳಿಸುವಿಕೆಗೆ ಇದು ಮುನ್ನುಡಿ ಬರೆವ ಕೆಲಸವಾಗಿದೆ.
ಪ್ರವಾಸಿಗರಿಗೆ ಚಳಿಗಾಲ ಬಂತೆಂದರೆ ಸಾಕು ಎಲ್ಲಿಲ್ಲದ ಆನಂದ. ಚಳಿಗಾಲದಲ್ಲಿ ಒಂದು ಸ್ವೆಟರ್ ಬೇಕು ಎನ್ನುವುದನ್ನು ಬಿಟ್ಟರೆ ಬೇರೆ ಯಾವ ತೊಂದರೆಯೂ ಇಲ್ಲ. ನಮ್ಮಂತಹ ಕರಾವಳಿ ತೀರದ ಜನರಿಗೆ ಅದರ ಅವಶ್ಯಕತೆಯೂ ಇಲ್ಲ. ಚಳಿಗಾಲದಲ್ಲೂ ಸೆಖೆಯ ಅನುಭವ ನಮ್ಮದು.
ವೈಜ್ಞಾನಿಕವಾಗಿ ಹೇಳುವುದಾದರೆ ಕಾಲವು ನಮ್ಮ ಬೆಳವಣಿಗೆಯ ಮೇಲೆ ಮಹತ್ತರ ಪಾತ್ರ ವಹಿಸುತ್ತದೆ. ವಾತಾವರಣಕ್ಕೆ ತಕ್ಕಂತೆ ಬೆಳವವಣಿಗೆಯಲ್ಲಿ ಏರಿಳಿತವಾಗುತ್ತದೆ. ಆದರೆ ಕಾಲ ಮಾತ್ರ ನಿರಂತರವಾಗಿ ತಿರುಗುತ್ತಲೇ ಇರುತ್ತದೆ ಅಥವಾ ನಮಗೆ ಹಾಗನಿಸುತ್ತದೆ. ಕಾಲವನ್ನು ತಡೆಯೋರು ಯಾರೂ ಇಲ್ಲ!
ಇಂದಿನ ಯುವಜನತೆ ಮಾತಿಗೆ, ’ಕಾಲ ಈಗ ಬದಲಾಗಿದೆ. ನಿಮ್ಮ ಕಾಲವೇ ಬೇರೆ ನಮ್ಮ ಕಾಲವೇ ಬೇರೆ’, ಎಂದು ಹೇಳುವುದುಂಟು. ಆದರೆ ನಿಜವಾಗಿಯೂ ಬದಲಾಗಿರುವುದು ಕಾಲ ಅಲ್ಲ. ಬದಲಾಗಿರುವುದು ಜನತೆ, ಸಮಾಜ ಮತ್ತು ತಂತ್ರಜ್ಞಾನ.
- (ಕನ್ನಡ ಪ್ರಭದ ಕಾಲೇಜು ರಂಗದಲ್ಲಿ ೨೨-೧೨-೨೦೦೮ ರಲ್ಲಿ ಪ್ರಕಟಗೊಂಡ ನನ್ನ ಬರಹ.)