ಈ ಚುನಾವಣೆಯ ಪಾಠಗಳು

ಈ ಚುನಾವಣೆಯ ಪಾಠಗಳು

ಬರಹ

ಈ ಚುನಾವಣೆಯ ಪಾಠಗಳು

ಈ ಅಂಕಣ ಪ್ರಕಟವಾಗುವ ವೇಳೆಗೆ ಕರ್ನಾಟಕದ ಜನತೆ ಒಂದು ಹೊಸ ಸರ್ಕಾರವನ್ನು ಪಡೆದಿರಬಹುದು. ಬಹುಶಃ ಅದು ಬಿಜೆಪಿ ಸರ್ಕಾರವೇ ಆಗಿರಬಹುದು. ಆದರೆ ಇದನ್ನು ಖಚಿತವಾಗಿ ಹೇಳಲಾಗದಿರಲು ಇರುವ ಕಾರಣವೆಂದರೆ, ಸರಳ ಬಹುಮತಕ್ಕೆ ಅಗತ್ಯವಿರುವ ಕನಿಷ್ಠ ಮೂರು ಶಾಸಕರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಭಾರಿ ಕಸರತ್ತನ್ನೇ ಮಾಡಬೇಕಾಗುವಂತಹ ಪರಿಸ್ಥಿತಿ ಉಂಟಾಗಿರುವುದು: ಈ ಬಹುಮತ ಒದಗಿಸಬಲ್ಲ ಆರು ಮಂದಿ ಶಾಸಕರಲ್ಲಿ ನಾಲ್ವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳೇ ಆಗಿದ್ದು, ಅವರ ಒಲವು ಗಳಿಸಲು ಈ ಪಕ್ಷ ಭಾರಿ 'ಬೆಲೆ'ಯನ್ನೇ ತೆರಬೇಕಾಗಿ ಬರಬಹುದು. ಈ 'ಬೆಲೆ' ಹಣದ ರೂಪದಲ್ಲಿ ಮಾತ್ರ ಇರದೆ, ಅವರ ಸಹಕಾರದೊಂದಿಗೆ ರಚಿಸಬಹುದಾದ ಸರ್ಕಾರದ 'ಸ್ಥಿರತೆ' ಮತ್ತು 'ವಿಶ್ವಾಸಾರ್ಹತೆ'ಗಳನ್ನು ಭಂಗಗೊಳಿಸುವ ರೂಪಗಳಲ್ಲಿ ಪಕ್ಷವನ್ನು ನಿರಂತರ ಕಾಡುತ್ತಲೇ ಇರಬಹುದು.

ಆದರೆ ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿಗೆ ಸದ್ಯಕ್ಕೆ 'ಸ್ಥಿರತೆ' ಮತ್ತು 'ವಿಶ್ವಸನೀಯತೆ'ಗಳು ಅಷ್ಟು ದೊಡ್ಡದಾದ ಪ್ರಶ್ನೆಗಳಾಗಿ ಕಾಣಲಾರವು. ಏಕೆಂದರೆ, ಅದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮಾಡುತ್ತಿರುವ ಮತ್ತೊಂದು ಸಮ್ಮಿಶ್ರ ಸರ್ಕಾರ ರಚನೆಯ ಪ್ರಯತ್ನಗಳು ಯಶಸ್ವಿಯಾಗುವ ಮುನ್ನ ತನ್ನ ಸರ್ಕಾರ ರಚನೆಯ ಕಾರ್ಯಾಚರಣೆಯನ್ನು ಕ್ಷಿಪ್ರ ಗತಿಯಲ್ಲಿ ಮುಗಿಸಬೇಕಿದೆ! ಅತಿ ದೊಡ್ಡ ಶಾಸಕಾಂಗ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೇ ರಾಜ್ಯಪಾಲರಿಂದ ಸರ್ಕಾರ ರಚನೆಗಾಗಿ ಮೊದಲ ಕರೆ ಬರಬೇಕು. ಆದರೆ ಅದಕ್ಕೆ ಮುನ್ನವೇ ಕಾಂಗ್ರೆಸ್ - ಜೆಡಿಎಸ್ ತನ್ನ ಬಹುಮತವನ್ನು ಸಾಬೀತು ಪಡಿಸುವಂತಹ ಸಂಯುಕ್ತ ಶಾಸಕಾಂಗ ಪಕ್ಷದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರೆ, ಬಿಜೆಪಿಗೆ ಪರಿಸ್ಥಿತಿ ಕಷ್ಟವಾಗಬಹುದು.

ಅದೇನೇ ಇರಲಿ, ಈ ಚುನಾವಣೆಗಳ ಮೂಲಕ ವ್ಯಕ್ತವಾಗಿರುವ ಜನತೆಯ ತೀರ್ಪಿನ ಹಿಂದಿನ ಭಾವವನ್ನು ಗಮನಿಸಿದರೆ, ಜನತೆ ಬಿಜೆಪಿಗೆ ಹೆಚ್ಚು ಒಲಿದಿದೆ ಮತ್ತು ಏಕ ಪಕ್ಷ ಸರ್ಕಾರಕ್ಕಾಗಿ ಆಶಿಸಿದೆ ಎಂಬುದು ಎದ್ದು ಕಾಣುತ್ತದೆ. ಆದರೆ ಸರ್ಕಾರ ರಚನೆಯಂತಹ ಶುದ್ಧ ವ್ಯಾವಹಾರಿಕ ಕೆಲಸಗಳಲ್ಲಿ ಭಾವಕ್ಕೆ ಆದ್ಯತೆ ಕಡಿಮೆ. ತಾಂತ್ರಿಕವಾಗಿ ಎಲ್ಲ ಸರಿಯಿದ್ದರಾಯಿತಲ್ಲ! ಹಾಗಾಗಿ ಬಿಜೆಪಿಗೆ ರಾಜ್ಯಪಾಲರಿಂದ ಸರ್ಕಾರ ರಚನೆಗಾಗಿ ಆಹ್ವಾನ ಸಿಕ್ಕರೂ ವಿಧಾನ ಮಂಡಲದಲ್ಲಿ ಅದು ತನ್ನ ಬಹುಮತವನ್ನು ಸಾಬೀತುಪಡಿಸುವವರೆಗೂ, ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಯಾವುದೇ ಸರ್ಕಾರ ಬರಲಿ, ಅದು ಯಾರು ಯಾವ ಪಕ್ಷದಲ್ಲಾದರೂ ಇರಬಹುದಾದ ಇಂದಿನ ರಾಜಕೀಯ ವಾತಾವರಣದಲ್ಲಿ ಹೆಚ್ಚಿನ ವ್ಯತ್ಯಾಸವನ್ನೇನೂ ಮಾಡಲಾರದೆಂಬುದು ಇಂದಿನ ಸತ್ಯ. ಆದರೂ ಕೆಲವರಿಗೆ ಏನೇ ಆಗಲಿ ಬಿಜೆಪಿ ಸರ್ಕಾರ ಬರಬಾರದೆಂಬ ಆಸೆ!

ಈ ಆಸೆಗೆ ಕಾರಣಗಳು ಹಲವಾರು. ಕಳೆದ ವಾರ ಮೈಸೂರಿನಲ್ಲಿ ನಡೆದ ನನ್ನ 'ಇದು ಭಾರತ! ಇದು ಭಾರತ!!' ಎಂಬ ಪುಸ್ತಕದ (ಇದು ಕಳೆದೊಂದು ವರ್ಷದಲ್ಲಿ 'ವಿಕ್ರಾಂತ ಕರ್ನಾಟಕ'ಕ್ಕಾಗಿ ನಾನು ಬರೆದ ಆಯ್ದ ಐವ್ವತ್ತು 'ವಾರದ ಒಳನೋಟ'ಗಳ ಸಂಗ್ರಹ) ಬಿಡುಗಡೆ ಸಮಾರಂಭದಲ್ಲಿ ಇಂತಹ ಹಲವಾರು ಕಾರಣಗಳು ಪ್ರಕಟಗೊಂಡವು. ಪುಸ್ತಕದ ಬಗ್ಗೆ ಮಾತನಾಡಹೊರಟ ರವೀಂದ್ರ ರೇಷ್ಮೆಯವರು, ಪುಸ್ತಕ ಬಿಟ್ಟು ತಮ್ಮದೇ ರಾಜಕೀಯ ಲಹರಿಯಲ್ಲಿ ಮಾತನಾಡುತ್ತಾ, 'ಬಿಜೆಪಿ ಅಧಿಕಾರಕ್ಕೆ ಬಂದರೆ ಬರಲಿ ಬಿಡಿ; ಅದನ್ನು ಎದುರಿಸೋಣ' ಎಂದಾಗ, ಎಚ್.ಎಲ್.ಕೇಶವಮೂರ್ತಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ 'ಬಿಜೆಪಿ ಬಂದರೆ ಕಷ್ಟ. ಆದುದರಿಂದ ಅದು ಬರಕೂಡದು' ಎಂದರು. ಇವರ ಈ ಮಾತಿನ ಸುತ್ತ ನಡೆದ ಸಂಕ್ಷಿಪ್ತ ಚರ್ಚೆಯಲ್ಲಿ ಬಿಜೆಪಿಗೆ ವಿರೋಧವಾಗಿ ವ್ಯಕ್ತವಾದ ಕಾರಣಗಳೆಂದರೆ: ಅದೊಂದು ಕೋಮುವಾದಿ ಪಕ್ಷ, ಅದೊಂದು ಫ್ಯಾಸಿಸ್ಟ್ ಪಕ್ಷ, ಅದು ಸಂವಿಧಾನವನ್ನೇ ತಿದ್ದಹೊರಟ ಪಕ್ಷ, ಅದು ಪಠ್ಯ ಪುಸ್ತಕಗಳಲ್ಲಿ ಚರಿತ್ರೆಯನ್ನೇ ಬದಲಿಸ ಹೊರಟ ಪಕ್ಷ ಇತ್ಯಾದಿ.

ನಾನು ಈ ಚರ್ಚೆಯನ್ನು ಆಲಿಸುತ್ತಿದ್ದಾಗ ನನಗನ್ನಿಸಿದ್ದು: ನಾವು ಬಿಜೆಪಿ ಬಗ್ಗೆ ಮಾತನಾಡುವಾಗ ನಾವು ನಮ್ಮ ದೌರ್ಬಲ್ಯಗಳ ನೆಲೆಯಲ್ಲೇ ಮಾತನಾಡುತ್ತಿರುತ್ತೇವೆ. ಹಾಗಾಗಿಯೇ, ಬಿಜೆಪಿ ವಿರೋಧದ ನಮ್ಮೆಲ್ಲ ವಾದ - ವಿವಾದ ಹಾಗೂ 'ಕಾರ್ಯಾಚರಣೆ'ಗಳ ಹೊರತಾಗಿಯೂ, ಅದು ಜನರ ಒಲವನ್ನು ಹೆಚ್ಚಿಸಿಕೊಳ್ಳುತ್ತಲೇ ನಡೆದಿದೆ. ಅಂದಹಾಗೆ, ನಮಗೆ ಕಾಣುವ ಬಿಜೆಪಿಯಲ್ಲಿನ ಅಪಾಯಗಳು ಜನರಿಗೇಕೆ ಕಾಣುತ್ತಿಲ್ಲ? ಜನರೇನು ಮೂಢರೇ? ಹಾಗೆಂದು ಭಾವಿಸುವವರಿಗೆ ಪ್ರಜಾಪ್ರಭುತ್ವದಲ್ಲೇ ನಂಬಿಕೆ ಇಲ್ಲವೆಂದು ಹೇಳಬೇಕಾಗುತ್ತದೆ. ಹಾಗಾದರೆ ಫ್ಯಾಸಿಸ್ಟರು ಯಾರು? ಇಂದು ಜನ ಬಿಜೆಪಿ ಕಡೆಗೆ ಒಲವು ತೋರುತ್ತಿದ್ದರೆ ಅದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾದದ್ದು: ಬಿಜೆಪಿಯೇತರ ಪಕ್ಷಗಳು ಬಿಜೆಪಿಗಿಂತ ಅಲ್ಲದಿದ್ದರೂ ಬಿಜೆಪಿಯಷ್ಟೇ ಭ್ರಷ್ಟ, ದುಷ್ಟ ಹಾಗೂ ಜನವಿರೋಧಿಯಾಗಿವೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಳೆಸಿದವರಾದರೂ ಯಾರು? ಖಂಡಿತ ಯಡಿಯೂರಪ್ಪನವರಲ್ಲ. ಈ ಚುನಾವಣೆಗಳಲ್ಲಿ ಕಾಣುತ್ತಿರುವ ಬಿಜೆಪಿ ಸಾಧನೆಗೆ ಕಾರಣರಾದವರಲ್ಲಿ, ಅವರಿಗೆ ನನ್ನ ಪ್ರಕಾರ ನಾಲ್ಕನೇ ಸ್ಥಾನ!

ಮೊದಲ ಸ್ಥಾನ, ಕಳೆದ ಚುನಾವಣೆಗಳಲ್ಲಿ ಆ ಪಕ್ಷ ಸೇರಿ ಕೆಳ ಜಾತಿಗಳಲ್ಲಿನ ತಮ್ಮ ವ್ಯಾಪಕ ಪ್ರಭಾವದಿಂದಾಗಿ ಅದು ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಮೂಡುವಂತೆ ಮಾಡಿ ಅದರ ಆತ್ಮವಿಶ್ವಾಸ ಹೆಚ್ಚಿಸಿದ ಬಂಗಾರಪ್ಪನವರಿಗೆ. ಎರಡನೇ ಸ್ಥಾನ, ಹೋದ ಚುನಾವಣೆಗಳಲ್ಲಿ ಜನರಿಂದ ತಿರಸ್ಕೃತವಾದರೂ, ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಅಧಿಕಾರದ ಸಾಧ್ಯತೆಯನ್ನು ತಪ್ಪಿಸಲೆಂದೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು, ಕೊನೆಗೆ ಅವಮಾನಕರ ರೀತಿಯಲ್ಲ್ಲಿ ಅಧಿಕಾರ ಕಳೆದುಕೊಳ್ಳುವಂತಹ ಅಧಿಕಾರ ಹಪಾಹಪಿಯ ರಾಜಕಾರಣ ಮಾಡಿದ ಕಾಂಗ್ರೆಸ್ಸಿನ ವರಿಷ್ಠ ನಾಯಕತ್ವಕ್ಕೆ. ಮೂರನೇ ಸ್ಥಾನ, ಕೌಟುಂಬಿಕ ರಾಜಕಾರಣಕ್ಕೆ ಧಕ್ಕೆಯೊದಗುವ ಆತಂಕದಲ್ಲಿ ಕಾಂಗ್ರೆಸ್ಸಿಗೆ ಕೈ ಕೊಟ್ಟು ಬಿಜೆಪಿಯೊಂದಿಗೆ ಸಮಯ ಸಾಧಕ ಮೈತ್ರಿ ಸಾಧಿಸಿದ ಮಗನನ್ನು ಅಮಾಯಕವಾಗಿ ಪ್ರೋತ್ಸಾಹಿಸಿ, ನಂತರ ಮಾತು ಬದಲಾಯಿಸುವ ಮೂಲಕ ಆ ಪಕ್ಷದ ಬಗ್ಗೆ ಜನರಲ್ಲಿ ಸಹಾನುಭೂತಿ ಸೃಷ್ಟಿಸಲು ಕಾರಣರಾದ ದೇವೇಗೌಡರಿಗೆ.

ಇವರೆಲ್ಲ ಸೇರಿ ಈಗ ಬಿಜೆಪಿಯನ್ನು ಸೋಲಿಸಿ ಎಂದರೆ ಜನ ಯಾಕೆ ಇವರ ಮಾತು ಕೇಳಬೇಕು? ಜನಕ್ಕೆ ನಮಗಿಂತ ಸ್ಪಷ್ಟವಾಗಿ ಗೊತ್ತಿದೆ, ಬಿಜೆಪಿ ತನ್ನೆಲ್ಲ ತಾತ್ವಿಕತೆಯನ್ನು ಚುನಾವಣಾ ಯಶಸ್ಸಿಗೆ ಒತ್ತೆ ಇಟ್ಟು ಇತರೆಲ್ಲ ಪಕ್ಷಗಳಂತೆಯೇ ವ್ಯಾವಹಾರಿಕ ರಾಜಕಾರಣ ಮಾಡುವ ಇನ್ನೊಂದು ಸಮಯಸಾಧಕ ಪಕ್ಷ ಮಾತ್ರವೆಂದು. ಆದರೆ ಅದಿನ್ನೂ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸದ ಪಕ್ಷವಾದ್ದರಿಂದ ಮತ್ತು ಬೇರೆ ವಿಶ್ವಾಸಾರ್ಹ ಪರ್ಯಾಯವಿಲ್ಲವಾದ್ದರಿಂದ ಜನರಲ್ಲಿ ಈ ಬಾರಿ ಅದಕ್ಕೂ ಒಂದು ಅವಕಾಶ ಕೊಟ್ಟು ಪರೀಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಜನತೆಯ ಈ ತೀರ್ಪನ್ನು ನಾವು ಗೌರವಿಸಬೇಕಿದೆ. ಹಾಗೇ, ಬಿಜೆಪಿ ಕೂಡಾ - ಅಧಿಕಾರಕ್ಕೆ ಬಂದಲ್ಲಿ - ಇದನ್ನರಿತು, ಅತಿಗಳಿಗೆ ಹೋಗದೆ ನಮ್ಮ ಸಂವಿಧಾನದ ಆಶಯಗಳಿಗೆ ಭಂಗ ಬರದಂತೆ ಆಡಳಿತ ನಡೆಸಬೇಕಿದೆ. ಇಲ್ಲದೇ ಹೋದಲ್ಲಿ ಅದನ್ನು ಜನ ಮುಂದೆ ದುಪ್ಪಟ್ಟು ಕ್ರೋಧದಿಂದ ತಿರಸ್ಕರಿಸುವುದು ಖಂಡಿತ. ಪ್ರಜಾಪ್ರಭುತ್ವದ ಶಕ್ತಿ - ಸೌಂದರ್ಯಗಳಿರುವುದೇ ಜನತೆಯ ಇಂತಹ ಪರಿಣಾಮಕಾರಿ ತೀರ್ಪುಗಳಲ್ಲಿ.

ಅಂದಹಾಗೆ, ಚುನಾವಣೆಗಳಿಗೆ ಮುನ್ನ ಸ್ಪರ್ಧೆಯಲ್ಲಿ ಮುಂದಿದ್ದಂತೆ ತೋರಿದ ಕಾಂಗ್ರೆಸ್ಸೇಕೆ ಅಂತಿಮವಾಗಿ ಹಿಂದೆ ಬಿದ್ದಿತು? ಹಲವು ಮಹತ್ವಾಕಾಂಕ್ಷಿ ನಾಯಕರ ಒಳ ರಾಜಕೀಯದ ಒತ್ತಡಗಳಿಗೆ ಸಿಕ್ಕ ಪಕ್ಷ ಜನತೆಯ ಭಾವನೆಗಳ ಬಗ್ಗೆ ಗೌರವವನ್ನೇ ಕಳೆದುಕೊಂಡಂತೆ, ಅತ್ಯಂತ ಬೇಜವಾಬ್ದಾರಿತನದಿಂದ ನಡೆಸಿದ ಟಿಕೆಟ್ ಹಂಚಿಕೆಯೇ ಅದರ ಹಿನ್ನೆಡೆಗೆ ಪ್ರಮುಖ ಕಾರಣವಾಗಿದ್ದಂತೆ ತೋರುತ್ತದೆ. ಜನರ ವಿವೇಕದಲ್ಲಿ ವಿಶ್ವಾಸವೇ ಇಲ್ಲದಂತೆ ಜಾತಿ ಮತ್ತು ಹಣ ನೋಡಿ, ರಾಜಕಾರಣದ ಗಂಧ ಗಾಳಿಯಿಲ್ಲದ ಸಿನೆಮಾ ನಟ ನಟಿಯರಿಗೆಲ್ಲ ಮತ್ತು ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಮಾತ್ರ ಶಾಸಕರಾಗ ಬಯಸಿದ ಕೋಟ್ಯಾಧೀಶರಿಗೆಲ್ಲ ಟಿಕೆಟ್ ನೀಡಿದ ಕಾಂಗ್ರೆಸ್ ಇತರ ಪಕ್ಷಗಳಿಗಿಂತ ಭಿನ್ನವಾಗಿ ಕಾಣದೆ, ಕ್ರಮೇಣ ಜನರ ಸಹಾನುಭೂತಿ ಕಳೆದುಕೊಳ್ಳುತ್ತಾ ಹೋಯಿತು. ಜೊತೆಗೆ ಬಿಜೆಪಿಯ ಸುಯೋಜಿತ ಮತ್ತು ಸುಸಂಘಟಿತ ಪ್ರಚಾರ ವೈಖರಿಗೆ ಸರಿಸಮವಾದ ಪ್ರಚಾರ ತಂತ್ರವನ್ನು ಆವಿಷ್ಕರಿಸಿಕೊಳ್ಳಲಾಗದ ಅದರ ಮೊದ್ದುತನದಿಂದಾಗಿ ಅದು ಸ್ಪರ್ಧೆಯ ಅಂತಿಮ ಹಂತಗಳಲ್ಲಿ ಇನ್ನಷ್ಟು ಸಹಾನುಭೂತಿಯನ್ನು ಕಳೆದುಕೊಂಡಿತು. ಅಲ್ಲದೆ, ಪಕ್ಷ ಆರಂಭದ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗಬಹುದಾಗಿದ್ದ ಬಿಜೆಪಿ ಹಾಗೂ ಜೆಡಿಎಸ್‌ಗಳಿಗಿದ್ದಂತೆ ಬದ್ಧತೆಯುಳ್ಳ ಯುವಪಡೆಯನ್ನು ಹೊಂದಿಲ್ಲದಿರುವುದೂ ಅದರ ಅಂತಿಮ ಹಿನ್ನೆಡೆಗೆ ಕಾರಣವಾಗಿದ್ದಲ್ಲಿ ಆಶ್ಚರ್ಯವಿಲ್ಲ. ನವ ಚೈತನ್ಯವೇ ಇಲ್ಲದ ಅದರ ಅದೇ ಹಳೆಯ, ಸವೆದ, ಸುಸ್ತಾದ ವೃದ್ಧ ಮುಖಗಳಿಂದ ಕೂಡಿದ ನಾಯಕತ್ವ ಯಾರನ್ನೂ ಹೊಸದಾಗಿ ಸೆಳೆಯಲಾರದು.

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮುಂದೆ ಬದುಕುಳಿಯಬೇಕಾದರೆ, ಮೊದಲು ಅದು ತನ್ನ ಮುಖ ಚಹರೆಯನ್ನು ಬದಲಿಸಿಕೊಳ್ಳಬೇಕಿದೆ. ಜಾಣ, ಯುವ, ಹೊಸ ಮುಖಗಳನ್ನು ತನ್ನೆಡೆಗೆ ಸೆಳೆದುಕೊಳ್ಳಬೇಕಿದೆ. ಅದಕ್ಕಾಗಿ ಅದು ತನ್ನ ದೆಹಲಿ ನಾಯಕತ್ವದ ಚೇಲಾಗಿರಿಯನ್ನು ಕಡಿಮೆ ಮಾಡಿಕೊಂಡು ತನ್ನ ಸ್ವಾಯತ್ತತೆಯನ್ನು ಪುರ್ನಸ್ಥಾಪಿಸಿಕೊಳ್ಳಬೇಕಿದೆ. ಸ್ವಾತಂತ್ರ್ಯ ಮತ್ತು ಸಮಾನತೆಯ ವಾತಾವರಣವಿದ್ದೆಡೆಗೆ ಮಾತ್ರ ಪ್ರತಿಭಾವಂತ ಯುವಜನರು ಆಕರ್ಷಿತರಾಗಬಲ್ಲರು ಎಂಬ ಸತ್ಯವನ್ನು ಅದು ಅರಿಯಬೇಕಾಗಿದೆ. ಹಾಗೇ ಪಕ್ಷಕ್ಕಿಂತ ದೊಡ್ಡವರಂತೆ ವರ್ತಿಸುತ್ತಾ, ವೈಯುಕ್ತಿಕ ಶೈಲಿಯ ರಾಜಕಾರಣ ಮಾಡುವ ಮಹತ್ವಾಕಾಂಕ್ಷಿ ನಾಯಕರನ್ನು ನಿರ್ದಾಕ್ಷಿಣ್ಯವಾಗಿ ಶಿಸ್ತಿಗೆ ಒಳಪಡಿಸುವ ಧೈರ್ಯ ತೋರಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಜೆಡಿಎಸ್ ನೊಂದಿಗೆ ಮತ್ತೆ ಮೈತ್ರಿ ರಾಜಕಾರಣ ಮಾಡುವುದು ಅನಿವಾರ್ಯವೇ ಆದರೆ, ಆ ಪಕ್ಷದ ಬೇಷರತ್ ಬೆಂಬಲವನ್ನು ಖಚಿತಪಡಿಸಿಕೊಂಡೇ ಮುಂದುವರೆಯುವ ಸಹನೆ ಮತ್ತು ವಿವೇಕಗಳನ್ನು ಪ್ರದರ್ಶಿಸಬೇಕಿದೆ. ಅದು ಸಾಧ್ಯವಾಗದಿದ್ದಲ್ಲಿ ಮರ್ಯಾದೆಯಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದು.

ಇನ್ನುಳಿದಂತೆ ಈ ಚುನಾವಣೆ ಅನೇಕ ಸಿಹಿ ಸುದ್ದಿಗಳಿಗೆ ಕಾರಣವಾಗಿದೆ. ತಾತ್ವಿಕತೆಯ ಸೋಗಿನೊಂದಿಗೆ ಬರೀ ವೈಯುಕ್ತಿಕ ಠೇಂಕಾರದ ಮತ್ತು ಕುಟುಂಬ ಕೇಂದ್ರಿತ ರಾಜಕಾರಣ ಮಾಡುತ್ತಾ ಹಲವು ಬಾರಿ ರಾಜ್ಯ ರಾಜಕಾರಣದ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದ ಬಂಗಾರಪ್ಪ ಮತ್ತು ದೇವೇಗೌಡರಿಗೆ ಜನತೆ ಅಂತಿಮವಾಗಿ (?) ಅವರ ಸ್ಥಾನಗಳನ್ನು ತೋರಿಸಿದೆ. ಅಷ್ಟೇ ಅಲ್ಲ, ಇವರ ಪಕ್ಷಗಳಿಗೆ ಇನ್ನು ಪ್ರತ್ಯೇಕ ಅಸ್ತಿತ್ವದ ಅಗತ್ಯವಿಲ್ಲ ಎಂದೂ ಸೂಚಿಸಿದೆ. ಹಾಗೇ, ಸಮಯ ಸಾಧಕ ರಾಜಕಾರಣವನ್ನೇ ಒಂದು ರಾಜಕೀಯ ಮೌಲ್ಯವಾಗಿ ಪ್ರತಿಪಾದಿಸತೊಡಗಿದ್ದ ಬಿಎಸ್‌ಪಿ ಎಂಬ ಪಕ್ಷಕ್ಕೆ ಕರ್ನಾಟಕದಲ್ಲಿ ಸ್ಥಾನವಿಲ್ಲವೆಂದು ಈ ಚುನಾವಣೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ವಾಟಾಳ್ ನಾಗರಾಜ್ ಎಂಬ ಹುಸಿ ನಾಯಕನ ಠೇವಣಿ ಕಳೆದು, ಇಂತಹವರ (ಅಂದರೆ ಇವರ ಜೊತೆಗಾರರಾಗಿದ್ದ ಕಮ್ಯುನಿಸ್ಟ್ ಎಂದು ಹೇಳಲಾಗುತ್ತಿದ್ದ ಸೊಗಸುಗಾರ ಶ್ರೀರಾಮ ರೆಡ್ಡಿ ಮತ್ತು ಶಾಸಕತ್ವವೆಂದರೆ ವಿದೂಷಕತನವೆಂದು ನಂಬಿದಂತಿದ್ದ ರಿಪಬ್ಲಿಕನ್ ಪಕ್ಷದ ರಾಜೇಂದ್ರನ್) ನಾಟಕ ಬಹು ಕಾಲ ನಡೆಯದೆಂದು ಎಚ್ಚರಿಸಿದೆ. ಸರ್ವೋದಯ ಕರ್ನಾಟಕ ಮತ್ತು ಸುವರ್ಣಯುಗಗಳೆಂಬ ಪಕ್ಷಗಳಿಗೆ ರಾಜಕಾರಣವೆಂದರೆ ಬರೀ ಜಾಣ ಮಾತುಗಳು ಅಥವಾ ಸದಾಶಯಗಳಷ್ಟೇ ಅಲ್ಲ, ನಿರಂತರ ಕ್ರಿಯಾಶೀಲತೆಯೂ ಅಗತ್ಯ ಎಂಬುದನ್ನು ತೋರಿಸಿ ಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ, 'ಪ್ರಗತಿಪರತೆ' ಎಂದರೆ ಬಿಜೆಪಿ ವಿರೋಧಿ ರಾಜಕಾರಣವಷ್ಟೇ ಎಂದು ನಂಬಿ ಸುಲಭ ರಾಜಕಾರಣ ಮಾಡಬಯಸುವವರಿಗೆ, ಅದು ವಾಪಸ್ ಕೂಡಾ ಹೊಡೆಯಬಲ್ಲದು ಎಂದು ತೋರಿಸಿಕೊಟ್ಟಿದೆ.

ಹಾಗೆಂದ ಮಾತ್ರಕ್ಕೆ ಈ ಚುನಾವಣೆಗಳಲ್ಲಿ ಎಲ್ಲವೂ ಒಳ್ಳೆಯದೇ ಆಗಿದೆಯೆಂದು ಹೇಳಲಾಗದು. ನಿಜ, ಸೋಲಲಾರೆಂದೇ ಭಾವಿಸಿದ್ದ ಕೆಲವು ದುಷ್ಟರು ಮತ್ತು ಭ್ರಷ್ಟರು ಈ ಚುನಾವಣೆಗಳಲ್ಲಿ ಸೋತಿದ್ದಾರೆ. ಅದರ ಜೊತೆಯಲ್ಲೇ ಕೆಲವು ಒಳ್ಳೆಯ ನಾಯಕರೂ ಕೊಚ್ಚಿ ಹೋಗಿದ್ದಾರೆ ಎಂಬುದನ್ನೂ ನಾವು ಗಮನಿಸಬೇಕು. ಇದು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ - ಅದೆಷ್ಟೇ ಕಟ್ಟುನಿಟ್ಟು ಮಾಡಿದರೂ - ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಮುಖ್ಯವಾಗಿ, ಬಿಜೆಪಿ ಪರವಾಗಿ ಗಣಿ ಉದ್ಯಮದ ಹಾಗೂ ಭೂವ್ಯವಹಾರಗಳ ಹಣ ಮತ್ತು ಜಾತಿ ರಾಜಕಾರಣ ಈ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಎಲ್ಲರೂ ಬಲ್ಲರು. ಇದೇ ಮುಂದೆ ಕರ್ನಾಟಕದಲ್ಲಿ ಬಿಜೆಪಿಯ ಪತನಕ್ಕೂ ಕಾರಣವಾದರೆ ಆಶ್ಚರ್ಯವಿಲ್ಲ!