ಈ ದಿನದ ವಿಶೇಷ ; ಸ್ವರ್ಣಗೌರಿ ಹಬ್ಬ
*ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ/*
*ಶರಣೈತ್ರ್ಯೆಂಬಕೆ ಗೌರಿ ನಾರಾಯಣಿ ನಮೋಸ್ತುತೇ//*
ಗೌರಿ-ಗಣೇಶ ಹಬ್ಬ ಎಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ಗಣೇಶ ಚತುರ್ಥಿಯ ಮುನ್ನಾ ದಿನ ಅಂದರೆ ಭಾದ್ರಪದ ಮಾಸದ ತದಿಗೆ ದಿನ ಗೌರಿ ಹಬ್ಬ. ಗೌರಿ ಎಂದರೆ ಪಾರ್ವತಿಯ ಅವತಾರದಲ್ಲಿ ಒಂದಾದ ಶಕ್ತಿ ಸ್ವರೂಪಿಣಿಯ ಸೌಮ್ಯ ಸ್ವರೂಪ. ಹೆಣ್ಣು ಮಕ್ಕಳ ಹಬ್ಬವೆಂದೇ ಹೇಳಬಹುದು. ಹೆಣ್ಣು ಮಗಳಿಗೆ ತವರಿಗೆ ಹೋಗಿ ಗೌರಿಯನ್ನು ಪೂಜಿಸಿ, ಕೈಗೆ ಗೌರಿದಾರ ಕಟ್ಟಿಕೊಂಡು ಸಂಭ್ರಮಿಸಿ, ಆಕೆಗೆ ಬಾಗಿನ ನೀಡಿ, ತವರು ಮನೆಯವರು ಪ್ರೀತಿಯಿಂದ ನೀಡುವ ಉಡುಗೊರೆ, ಬಾಗಿನ ತೆಗೆದುಕೊಂಡು, ಹಿರಿಯರ ಆಶೀರ್ವಾದ ಪಡೆದು ಬರುವ ಖುಷಿ ಒಂದೆಡೆ. ತನ್ನ ಮತ್ತು ತವರು ಮನೆಯ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಇದೊಂದು ಸುಸಂದರ್ಭ ಸಹ. ಕೆಲಸಗಳ ಒತ್ತಡ, ಸಾಲುಸಾಲು ಹಬ್ಬಗಳ ನಡುವೆಯೂ ಪತಿಯನ್ನು ಕೂಡಿಕೊಂಡು, ತಾನು ಹುಟ್ಟಿ ಬೆಳೆದು, ಓಡಿಯಾಡಿದ ಮನೆಗೆ ಪಯಣಿಸುವ ಆನಂದ ಇನ್ನೊಂದೆಡೆ. ಗೌರಿ ಪ್ರಕೃತಿಯನ್ನು ಪ್ರತಿನಿಧಿಸುವವಳು. ಕೆಲವೆಡೆ ನಮ್ಮ ಜೀವನಾಡಿಗಳಾದ ತುಂಬಿದ ಬಾವಿ, ಜಲಾಶಯ, ಕೆರೆ ಕಟ್ಟೆಗಳಿಗೂ ಪೂಜಿಸಿ ಬಾಗಿನ ಅರ್ಪಿಸುವ ಸಂಪ್ರದಾಯವಿದೆ. ಶ್ರದ್ಧೆ, ನಿಷ್ಠೆ, ನಂಬಿಕೆ, ಭಕ್ತಿಯಿಂದ ಆರಾಧಿಸಿದರೆ ಸಂತಾನಭಾಗ್ಯ, ಅವಿವಾಹಿತರಿಗೆ ವಿವಾಹಯೋಗ, ವಿವಾಹಿತ ಮಹಿಳೆಯರಿಗೆ ದೀರ್ಘಸೌಭಾಗ್ಯ ಕರುಣಿಸುವಳೆಂಬ ಪ್ರತೀತಿಯಿದೆ. ಮರುದಿನ ಗಣೇಶನ ಕೂರಿಸುವ ಹಬ್ಬ.
ಪೌರಾಣಿಕ ಹಿನ್ನೆಲೆ ಓದಿದಾಗ ಒಂದೇ ಹಬ್ಬದ ಆಚರಣೆ ಬಗ್ಗೆ ವೈವಿಧ್ಯಮಯವಾದ ಕಥೆ ಕಾರಣಗಳು, ಹಿನ್ನೆಲೆ ಲಭ್ಯವಾಗುತ್ತದೆ. ಕೈಲಾಸವಾಸಿಯಾದ ಪರಮೇಶ್ವರನ ಕಣ್ಣುಗಳನ್ನು ಪಾರ್ವತಿ ಕೈಗಳಿಂದ ಮುಚ್ಚುತ್ತಾಳಂತೆ. ಶಿವನು ಪಾರ್ವತಿಯನ್ನು ನೋಡಿದಾಗ, ಆಕೆ ಶಿವನ ಚಕ್ಷುಗಳಿಗೆ ಕಪ್ಪಾಗಿ ಕಂಡಳಂತೆ. ಗೌರಿ ಎಂದು ಕರೆದನಂತೆ ಶಿವ. ಗೌರಿ ಎಂದರೆ ಸಂಸ್ಕೃತದಲ್ಲಿ ಕಪ್ಪು ಎಂದರ್ಥ. ಇದು ತಿಳಿದ ದೇವಿಯು ಬೇಸರಮಾಡಿಕೊಂಡು ಹೋದಳಂತೆ. ತೊರೆದ ಗೌರಿಯನ್ನು ಹೇಗಾದರೂ ಮಾಡಿ ಓಲೈಸಲು ಪರಮೇಶ್ವರನು ಸ್ವರ್ಣಗೌರಿ ಎಂದನಂತೆ. ಗೌರಿಗೆ ಸಂತಸವಾಯಿತು. ಅಂದಿನಿಂದ ಸ್ವರ್ಣಗೌರಿ ಎನಿಸಿದಳು ಮಾತೆ. ಕೆಲವೆಡೆ ಗಣೇಶನ ಪ್ರತಿಮೆಯೊಂದಿಗೆ ಗೌರಿಮಾತೆಯನ್ನೂ ಕೂರಿಸುವ ಸಂಪ್ರದಾಯವಿದೆ.
ಇನ್ನೊಂದೆಡೆ ಪರ್ವತರಾಜನ ಮಗಳು ಪಾರ್ವತಿ ಶಿವನನ್ನೇ ವರಿಸಬೇಕೆಂದು ಗಾಳಿ ಮಾತ್ರ ಸ್ವೀಕರಿಸಿ ಕಠಿಣ ವ್ರತವನ್ನಾಚರಿಸುತ್ತಾಳೆ. ಆದರೆ ಪರ್ವತನು ತನ್ನ ಮಗಳನ್ನು ನಾರಾಯಣನಿಗೆ ವಿವಾಹಮಾಡಬೇಕೆಂದು ಯೋಚಿಸುತ್ತಿರುವ ವಿಷಯ ಅರಿತ ಪುತ್ರಿ ಪಾರ್ವತಿಯು ಕಾಡಿಗೆ ಹೋಗುತ್ತಾಳೆ. ಮರಳಿನ ಶಿವಲಿಂಗ ಮಾಡಿ, ವನಸುಮಗಳ ಅರ್ಪಿಸಿ ತಪಸ್ಸನ್ನಾಚರಿಸಿ, ಶಿವನನ್ನು ಮೆಚ್ಚಿಸಿ ಒಲಿಸಿಕೊಳ್ಳುತ್ತಾಳೆ. ಇಲ್ಲಿ ಭಕ್ತಿ,ಶ್ರದ್ಧೆ, ಅಖಂಡ ವಿಶ್ವಾಸ ಕಾಣಬಹುದು. ಈ ಒಲಿದ ದಿನವೇ ಭಾದ್ರಪದ ಶುಕ್ಲ ತೃತೀಯ ಎಂದು ಉಲ್ಲೇಖಿಸಲ್ಪಟ್ಟಿದೆ. ಶಿವನನ್ನು ವರಿಸಿದ ಪಾರ್ವತಿ ಸೌಭಾಗ್ಯವತಿಯಾದ ದಿನ.
ಮಹಾಶಿವ ಕೈಲಾಸವಾಸಿ ತನ್ನ ಪುತ್ರ ಷಣ್ಮುಖನಿಗೆ ಹೇಳಿದ ಈ ವ್ರತದ ಬಗ್ಗೆ ಪೌರಾಣಿಕ ಹಿನ್ನೆಲೆಯಿದೆ. ಸರಸ್ವತಿ ನದಿ ತೀರದ ವಿಮಲ ಎಂಬ ನಗರದ ಚಂದ್ರಪ್ರಭ ಎನ್ನುವ ಅರಸನೋರ್ವ ಒಮ್ಮೆ ಕಾಡಿಗೆ ಬೇಟೆಯಾಡಲು ಹೋದವನು, ಪಕ್ಕದಲ್ಲಿರುವ ಸರೋವರದ ಪರಿಸರದ ನೈಸರ್ಗಿಕ ಅಂದಚಂದವನ್ನು ಕಂಡು ಬೆರಗಾಗಿ ನೋಡುತ್ತಿರುವಾಗ, ಅಲ್ಲಿಯೇ ಅಪ್ಸರ ಸ್ತ್ರೀಯರು ಸ್ವರ್ಣಗೌರಿಯ ಪೂಜೆಯನ್ನು ಮಾಡುತ್ತಿದ್ದರಂತೆ. ೧೬ ಗಂಟುಗಳ ದಾರವನ್ನು ಅರಸನಿಗೆ ನೀಡಿ, ಪೂಜಾ ವಿಧಾನವನ್ನು ತಿಳಿಸಿದರಂತೆ. ಅರಮನೆಗೆ ಹಿಂದಿರುಗಿದ ರಾಜನು ತನ್ನ ಎರಡೂ ಪತ್ನಿಯರಿಗೆ ಆ ದಾರವನ್ನು ಕೊಟ್ಟಾಗ, ದೊಡ್ಡ ರಾಣಿ ಒಣಗಿದ ಮರದ ಮೇಲೆ ಅದನ್ನು ಎಸೆದಳಂತೆ. ಒಣಗಿದ ಮರ ಪುನ: ಚಿಗುರಲು ಆರಂಭಿಸಿತಂತೆ. ಕಿರಿಯ ರಾಣಿ ಇದನ್ನು ನೋಡಿ ದಾರವನ್ನು ಕಟ್ಟಿಕೊಂಡು ಸ್ವರ್ಣಗೌರಿ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಮಾಡಿದ ಪರಿಣಾಮವಾಗಿ ಸಂತಾನಭಾಗ್ಯವನ್ನು ಪಡೆದರಂತೆ. ಅನಂತರ ಉತ್ತಮೋತ್ತಮ ಕೆಲಸಗಳನ್ನು ಮಾಡಿ ಶಿವಲೋಕವನ್ನು ಸೇರಿದರಂತೆ.
ಗಣೇಶನ ಮಾತೆ, ನಮ್ಮೆಲ್ಲರ ಪೂಜಿತೆಯಾದ ಸ್ವರ್ಣಗೌರಿಯನ್ನು ಪೂಜಿಸಿ, ವ್ರತನೇಮಾದಿಗಳನ್ನು ಆಚರಿಸಿ, ಇಷ್ಟಾರ್ಥಗಳನ್ನು ಆ ತಾಯಿಯ ಕೃಪೆಯಿಂದ ಪಡೆಯೋಣ.
(ಪುರಾಣಮಾಲಿಕಾ, ಅಂತರ್ಜಾಲ ತಾಣಗಳಿಂದ ಸಂಗ್ರಹ)
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು