ಈ ದಿನ ತನು ಮನ ಭಾವ....!

ಈ ದಿನ ತನು ಮನ ಭಾವ....!

ಇಂದೇನು ಲೇಖಕಿಯರ ದಿನವೆ?
ಹರಿದಿವೆಯಲ್ಲ ಭಾವದನುಭಾವವೆ!
ಭಾವಜೀವಿಗಳಿಗೆಲ್ಲ ಭಾವ ಯಾತನೆಯೆ?
ಕಿತ್ತೊಡೆದ ಅಣೆಕಟ್ಟಾದವೆ ಮನಛಾಯೆ!

ಹೆಪ್ಪುಗಟ್ಟಿದ ನೆನಪು ಮುಪ್ಪಾಗದ ನುಣುಪು
ಗಿರಿಗಿರಕಿ ಹೊಡೆದಿತ್ತೆ ಕಾಡಿದಾ ಮಸುಕು
ಮೇಲೆದ್ದು ಬರಲ್ಹೇಗೊ ಸಡಿಲಾದ ಉಸುಕು
ಬರಲೆದ್ದು ಹೊರಬಂತೆ ಪತ್ರ ಮಾತಾಗಿ ನಾಕು!

ಹೇಳಲೆಷ್ಟೊ ಭಾವ ಬಿಚ್ಚಿ ಹೇಳದಾ ಸ್ವಭಾವ
ಮುಖಾಮುಖಿಯಲಿತ್ತೇನೆಲ್ಲ ದುಗುಡಾ ಕಾವ
ಹೇಳಿಬಿಡಲೆಬೇಕೆನಿಸಿದರೂ ಆಗದ ಸಂಭವ
ಹೇಳದಿರಲ್ಹೇಗೆ ವಿಲವಿಲ ಹೃದಯಕದಸಂಭವ!

ಪತ್ರವಾದರೆ ಒಳಿತು ಅವಿತು ಹೇಳುವ ಗತ್ತು
ಓದುತಲೆ ಮುಖಭಾವ ಕದ್ದು ನೋಡೆ ಹೊತ್ತು
ಆಸೆ ನಿರಾಸೆಗಳ ನಡುವೆ ಆಶಾಭಾವದ ದೀಪ
ಓದಿ ಮೆಚ್ಚಿದರಾರೊ ಜಗವ ಗೆದ್ದಾ ಅಪರೂಪ!

ಹಗುರಾಗಲಿ ತನುಮನವೆಲ್ಲ ಹತ್ತಿಯ ತರ
ಇಳಿದಾದ ಮೇಲೆ ದುಗುಡ ಮಾತಿನ ಭಾರ
ಸವಿದುಣ್ಣುವ ಸೊಗಸಿನ ಆಹ್ಲಾದತೆ ನಮಗೆ
ಬಡಿಸಿದ ರುಚಿಯೂಟಕೆ ಧನ್ಯವಾದ ನಿಮಗೆ!

 

- ​ನಾಗೇಶ ಮೈಸೂರು, ಸಿಂಗಪುರದಿಂದ

(ಸುಂದರ ಬರಹಗಳಿಗೆಲ್ಲ ಧನ್ಯವಾದದ ರೂಪದಲ್ಲಿ ಸಮರ್ಪಿತ)

 

Comments

Submitted by lpitnal@gmail.com Tue, 06/04/2013 - 20:22

ಆತ್ಮೀಯ ನಾಗೇಶ ಮೈಸೂರರವರೆ, 'ಈ ದಿನ ತನುಮನಭಾವ' ಸುಂದರ ಬರಹಗಳಿಗೆಲ್ಲ ಕೃತಜ್ವತೆ ಸೂಸುವ ಧನ್ಯತೆಯ ಮನದ ಕವನ. ಸುಂದರವಾಗಿದೆ..
Submitted by nageshamysore Tue, 06/04/2013 - 21:10

In reply to by lpitnal@gmail.com

ಆತ್ಮೀಯ ಇಟ್ನಾಳರೆ, ತಮ್ಮ ಮೆಚ್ಚುಗೆಗೆ ಧನ್ಯವಾದ! ತಮ್ಮ ಲೇಖನಿಗೆ ತುಸು ತಾತ್ಕಲಿಕ ವಿಶ್ರಾಂತಿ ಕೊಟ್ಟಂತಿದೆ? :-) - ನಾಗೇಶ ಮೈಸೂರು, ಸಿಂಗಪುರದಿಂದ
Submitted by lpitnal@gmail.com Tue, 06/04/2013 - 21:27

In reply to by nageshamysore

ನಾಗೇಶ ಜಿ, ಕೆಲಸದೊತ್ತಡದ, ಜವಾಬ್ದಾರಿಗಳ ಮಧ್ಯೆ ಒಮ್ಮೊಮ್ಮೆ ಬಿಡುವು ದೊರೆಯದು. ಬರೆಯುವುದಕ್ಕೂ ಸ್ವಲ್ಪ ಸಮಯದ ಬಿಡುವು ಬೇಕೇನೊ.ಸಧ್ಯ ಓದುವುದಷ್ಟೆ ಅಂದ್ಕೋತೀನಿ. ಆದರೂ ಪ್ರಯತ್ನಿಸುತ್ತೇನೆ.
Submitted by nageshamysore Wed, 06/05/2013 - 11:45

In reply to by lpitnal@gmail.com

ಲಕ್ಷ್ಮಿಕಾಂತಜಿ, ಕೆಲವೊಮ್ಮೆ ಒತ್ತಡವೂ ಸಹ ವ್ಯಕ್ತಿಯೊಬ್ಬನ 'ಬೆಸ್ಟು' ಅನ್ನು ಹೊರತರುವುದೆಂದು ಕೇಳಿದ್ದೇನೆ. ನಿಮ್ಮ ಕೆಲಸದ ಒತ್ತಡ ಮುಗಿಯುತ್ತಿದ್ದ ಹಾಗೆ ಬರೆಸುವ ಒತ್ತಡ ಕೆಲಸ ಮಾಡಲಿ :-) - ನಾಗೇಶ ಮೈಸೂರು, ಸಿಂಗಪುರದಿಂದ
Submitted by Vinutha B K Thu, 06/06/2013 - 11:42

ಭಾವಜೀವಿಗಳಿಗೆ ಹೊಸ ರೀತಿಯ ಧನ್ಯವಾದ ತಿಳಿಸಿ ,ಮತ್ತಷ್ಟು ಭಾವೊನ್ಮುಕರಾಗಿ ಲೇಖನಿ ಹಿಡಿಯುವಂತಿದೆ ನಿಮ್ಮ ಕವನ .. ಧನ್ಯವಾದಗಳು ..
Submitted by nageshamysore Thu, 06/06/2013 - 15:28

In reply to by Vinutha B K

ಅರೆರೆರೆ ವಿನುತರವರೆ, ನಿಮಗೆ ಪ್ಲಾನು ಗೊತ್ತಾಗಿ ಹೋಯ್ತಾ? ಓದಿ ಹುಮ್ಮಸ್ಸಾಗಿ ಮತ್ತಷ್ಟು ಫಸಲು ಬರಲಿ ಅಂತಲೆ ಕವನ ಹೆಣೆದಿದ್ದು! ಹಾಗೆಯೆ ನಿಮ್ಮ ಕಾದಂಬರಿ ಯತ್ನವೂ ಯಶಸ್ಸಾಗಲಿ! - ನಾಗೇಶ ಮೈಸೂರು, ಸಿಂಗಪುರದಿಂದ