ಈ ಪಯಣ ನೂತನ

ಈ ಪಯಣ ನೂತನ

ಪುಸ್ತಕದ ಲೇಖಕ/ಕವಿಯ ಹೆಸರು
RJ ನಯನಾ ಶೆಟ್ಟಿ
ಪ್ರಕಾಶಕರು
ವಿನಯ ಪ್ರಕಾಶನ, ಮಣ್ಣಗುಡ್ಡ, ಮಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ವೃತ್ತಿಯಲ್ಲಿ ರೇಡಿಯೋ ಜಾಕಿ (RJ) ಆಗಿರುವ ನಯನಾ ಶೆಟ್ಟಿಯವರ ಚೊಚ್ಚಲ ಕೃತಿ ‘ಈ ಪಯಣ ನೂತನ’. ಈ ಕೃತಿಯ ಮೂಲಕ ನಯನಾ ಶೆಟ್ಟಿ ನಮ್ಮನ್ನೆಲ್ಲಾ ‘ನಗುವ ನಾಳೆಗಳ ಕಡೆಗೆ’ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಬಿಡಿ ಬಿಡಿ ಬರಹಗಳನ್ನು ಲಹರಿ ರೂಪದಲ್ಲಿ ಬರೆದು ಓದುಗರನ್ನು ಸೆಳೆಯುವ ಪ್ರಯತ್ನ ಶ್ಲಾಘನೀಯ. ಈ ಕೃತಿಗೆ ಮುನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ ಪತ್ರಕರ್ತ, ಅಂಕಣಕಾರ ‘ಜೋಗಿ’. ಅವರು ತಮ್ಮ ಮುನ್ನುಡಿ ‘ಅಕ್ಷರಯಾನಕ್ಕೆ ಹ್ಯಾಪಿ ಜರ್ನಿ’ ಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

“ಮಾತನ್ನೇ ನೆಚ್ಚಿಕೊಂಡಿರುವ ವೃತ್ತಿಯಲ್ಲಿ ಇರುವವರು ಬರೆಯುವುದು ಕಡಿಮೆ. ಓದುವುದು ಇನ್ನೂ ಕಡಿಮೆ. ಬರಹಕ್ಕಿಂತ ಮಾತು ಬೇಗ ತಲುಪುತ್ತದೆ ಎಂದು ಎಲ್ಲರೂ ನಂಬಿರುವ ಯುಗದಲ್ಲಿ ನಯನಾ ಶೆಟ್ಟಿ, ತನ್ನ ಅನಿಸಿಕೆ, ತಾನು ನೋಡಿದ್ದು, ಅನುಭವಿಸಿದ್ದು, ಆಹ್ಲಾದಪಟ್ಟದ್ದು, ಮೆಚ್ಚಿಕೊಂಡದ್ದು-ಇವನ್ನೆಲ್ಲ ಲಹರಿಯ ರೂಪದಲ್ಲಿ ಬರೆದಿದ್ದಾರೆ.

ತನ್ನ ಕಾಲದ ಬಹುತೇಕ ಬರಹಗಾರರ ಹಾಗೆಯೇ, ಇವರ ಬರಹಗಳು ಕೂಡ ತನ್ನ ಸಂತೋಷವನ್ನು ಮತ್ತೊಬ್ಬರಿಗೆ ತಕ್ಷಣ ಹೇಳಬೇಕು ಎಂಬ ಉತ್ಸಾಹದಲ್ಲಿ ಹುಟ್ಟಿಕೊಂಡಂಥವು. ಸಂಕಲನದ ಮೊದಲ ಲೇಖನ 'ಖುಷಿಯ ಸುತ್ತ ಒಂದಷ್ಟು ಹೊತ್ತು' ಅತ್ಯಂತ ಖುಷಿಯಾಗಿರುವ ರಾಷ್ಟ್ರ ಯಾವುದು ಎಂಬ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ. ಹೀಗೆ ಹ್ಯಾಪಿನೆಸ್ ಹುಡುಕುತ್ತಾ ಹೋಗುವ ಅನೇಕ ಬರಹಗಳಿರುವ ಈ ಸಂಕಲನಕ್ಕೆ ಅವರು ಈ ಪಯಣಿ ನೂತನ ಎಂಬ ಹೆಸರಿಟ್ಟಿದ್ದಾರೆ. ಮೊದಲ ಸಂಕಲನಕ್ಕೆ ಮತ್ತು ಬರಹ ಎಂಬ ಪ್ರಯಾಣದ ಶುಭಾರಂಭಕ್ಕೆ ಸೂಕ್ತ ಶೀರ್ಷಿಕೆ.

ಸದಾ ಖುಷಿಯಾಗಿರುವುದು ಹೇಗೆ? ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ರೀತಿ, ರಾಮನಗುಡ್ಡಕ್ಕೆ ಪ್ರವಾಸಹೋದ ಅನುಭವ ಕಥನ, ಅರಳಿಮರದ ಸುತ್ತ ಹಬ್ಬಿದ ನಂಬಿಕೆಗಳು, ನಾಯಿ ಸಾಕುವ ಸುಖ-ದುಃಖ, ಹಲಸಿನ ಹಣ್ಣಿನ ವೈಭವ-ಹೀಗೆ ಅನೇಕ ಸಂಗತಿಗಳನ್ನು ರಸವತ್ತಾಗಿ ನಯನಾ ವರ್ಣಿಸುತ್ತಾ ಹೋಗಿದ್ದಾರೆ. ಅನುಭವ ಕಥನಗಳೂ ನೆನಪಿನ ಚಿತ್ರಗಳೂ ಮನೋಲಹರಿಗಳೂ ಕಲ್ಪನಾವಿಹಾರಗಳೂ ಇಲ್ಲಿ ಸೇರಿಕೊಂಡಿವೆ.

ಹಿರಿಯರ ಬಗ್ಗೆ ಕಾಳಜಿ, ಮಕ್ಕಳನ್ನು ಬೆಳೆಸುವ ರೀತಿ, ಸಾಕುಪ್ರಾಣಿಗಳ ಕುರಿತ ಪ್ರೀತಿ, ಸಾಮಾಜಿಕ ನಡವಳಿಕೆ, ಜೀವನದಲ್ಲಿ ಕಲಿಯಲೇಬೇಕಾದ ಪಾಠಗಳು, ಅಲ್ಲಲ್ಲಿ ಕಂಡು ಕಲಿತ ಸಂಗತಿಗಳು- ಹೀಗೆ ಅನೇಕ ಸಂಗತಿಗಳನ್ನು ನಯನಾ ಶೆಟ್ಟಿ ಈ ಬರಹಗಳಲ್ಲಿ ದಾಖಲಿಸಿದ್ದಾರೆ. ನಾನು ಇವುಗಳನ್ನು ಓದುತ್ತಾ, ನಾನು ಮೊದಲು ಬರೆಯಲು ಆರಂಭಿಸಿದ ದಿನಗಳಿಗೆ ಮರಳಿದ್ದೇನೆ.

ತಪ್ಪಿಲ್ಲದ ಸೊಗಸಾದ ಭಾಷೆ, ಸರಳ ಪದಗಳ ಮೂಲಕ ಎಲ್ಲರನ್ನೂ ತಲುಪುವ ಪ್ರಯತ್ನ, ಗಂಭೀರ ವಿಚಾರಗಳನ್ನು ಕೂಡ ತಿಳಿಗೊಳಿಸಿ ಬರೆಯುವ ಚಾಕಚಕ್ಯತೆ ನಯನಾ ಅವರಿಗೆ ಇದೆ ಅನ್ನುವುದು ಈ ಬರಹಗಳನ್ನು ಓದಿದಾಗ ಗೊತ್ತಾಗುತ್ತದೆ. ಇಂಥ ಬರಹಗಳ ಕಷ್ಟವೆಂದರೆ ಕ್ರಮೇಣ ಇಂಥದ್ದನ್ನು ಬರೆಯುವುದು ಕೂಡ ಚಟವಾಗಬಲ್ಲದು. ಹಾಗಾಗುವ ಮೊದಲು, ನಯನಾ ಬೇರೆ ಸಾಹಿತ್ಯಪ್ರಕಾರಗಳಿಗೆ ಹೊರಳಿಕೊಳ್ಳಬೇಕು. ಲಹರಿ ಮನಸ್ಸಿಗೆ ತೋಚಿದ್ದನ್ನು ಥಟ್ಟನೆ ಹೇಳುವ ಕ್ರಮವಾದರೆ, ಕತೆ ಕಾದಂಬರಿಗಳು ಘಟನೆಯನ್ನು ಕಲೆಯಾಗಿಸುವತ್ತ ತುಡಿಯುತ್ತಿರುತ್ತವೆ. ವರದಿಯಾಗುವ ಅಪಾಯದಿಂದ ಬರಹ ಪಾರಾದಾಗಲೇ ಅದು ಬೇರೇನೋ ಆಗುತ್ತದೆ. ಅಂಥ ಬರಹಗಳನ್ನು ಬರೆಯುವ ಶಕ್ತಿ ನಯನಾ ಅವರಿಗಿದೆ ಎಂಬುದಕ್ಕೆ ಈ ಲೇಖನಗಳಲ್ಲಿ ಪುರಾವೆಗಳು ಸಿಗುತ್ತವೆ.”

ಲೇಖಕಿ ನಯನಾ ಶೆಟ್ಟಿಯವರು ತಮ್ಮ ಬೆನ್ನುಡಿಯಲ್ಲಿ ” ಜೀವನದಲ್ಲಿ ಯಶಸ್ಸು ಎಂದರೆ ಏನು? ಹಣ ಗಳಿಸುವುದು, ಜನಪ್ರಿಯತೆ ಗಳಿಸುವುದು, ಅರಮನೆಯಂತಹ ಮನೆ, ದುಬಾರಿ ಕಾರು, ನಾವು ಅಂದುಕೊಂಡಂತೆ ಬದುಕುವುದು - ಹೀಗೆ ಒಂದಿಷ್ಟು ಉತ್ತರಗಳು ಸಿಗುತ್ತವೆ. ಆದರೆ ಇಷ್ಟೇನಾ ಬದುಕು?

ನಿಜವಾದ ಯಶಸ್ಸು – ಒಬ್ಬ ವ್ಯಕ್ತಿ ತಾನು ಬದುಕುವುದರ ಜೊತೆಗೆ ಕೈಲಾದ ಮಟ್ಟಿಗೆ ಒಂದಿಷ್ಟು ಜನರಿಗೆ ಬದುಕು ಕಟ್ಟಿ ಕೊಡುವುದು, ಇತರರ ಬದುಕಿನಲ್ಲಿ ನಗು ಅರಳಿಸುವ ಕಾಯಕ ಮಾಡುವುದು. ಅಂತಹ ಯಶಸ್ಸಿನ ಕಥೆಯಾಗಲು ನಾವಿಡುವ ಪ್ರತೀ ಹೆಜ್ಜೆಯಲ್ಲೂ ಮೌಲ್ಯಗಳು, ಸಂಸ್ಕಾರ, ಜವಾಬ್ದಾರಿ, ದೇಶ ಪ್ರೇಮ, ಪರಿಸರ ಪ್ರೀತಿಯ ಜೊತೆಗೆ ಸಾಗುವ ನಮ್ಮ ಬದುಕು ಮುಂದಿನ ಪೀಳಿಗೆಗೆ ಮಾದರಿಯಾಗುವ ರೀತಿ ಇದ್ದರೆ ಎಷ್ಟು ಚೆಂದ ಅಲ್ಲವೇ? ಮಕ್ಕಳು ನಾವು ಹೇಳಿ ಕೊಟ್ಟಿದ್ದನ್ನು ಕಲಿಯುವುದಿಲ್ಲ ಬದಲಿಗೆ ನಮ್ಮನ್ನು ನೋಡಿ ಕಲಿಯುತ್ತಾರೆ ಎನ್ನುವ ಮಾತಿದೆ. ಯಾವಾಗಲೂ ಒಳ್ಳೆಯ ಬದಲಾವಣೆಗಳನ್ನು ಬೇರೆ ಯಾರೋ ಮಾಡುತ್ತಾರೆಂದು ಕಾಯುವ ಬದಲು ಅದೇ ಬದಲಾವಣೆ ನಮ್ಮಿಂದಲೇ ಶುರುವಾಗಲಿ ಎಂದು ಮುಂದೆ ಹೊರಟರೆ ಹೇಗೆ? ಹಾಗೆ ಹೊರಟವರ ಕಥೆಗಳು, ಅನುಭವಗಳ ಜೊತೆ ಸೇರಿದ ಪಯಣವಿದು.

ಈ ಪುಸ್ತಕದಲ್ಲಿ ಸೋತು ಗೆದ್ದವರ ಕಥೆ ಇದೆ, ಪರಿಸರದ ಜೊತೆಗೆ ಬದುಕು ಕಟ್ಟಿಕೊಂಡವರ ಸಂಭ್ರಮವಿದೆ, ನಮ್ಮ ಹೆಜ್ಜೆ ಗುರುತುಗಳಲ್ಲಿ ನಮ್ಮ ಮಕ್ಕಳನ್ನು ನಡೆಸುವ ಜವಾಬ್ದಾರಿಯಿದೆ, ಹಿರಿಯರು ಪಾಲಿಸುತ್ತಿದ್ದ ನಾವು ಮರೆತ ಪರಿಸರ ಸಂರಕ್ಷಣೆಯ ಪಾಠವಿದೆ. ಜಗತ್ತೆಷ್ಟು ಬದಲಾದರೂ ಮನದೊಳಗೆ ಇನ್ನೂ ಕೂಡ ಜಾಗೃತವಾಗಿರುವ ನಮ್ಮ ಹಿರಿಯರು ಕಟ್ಟಿಕೊಟ್ಟಿದ್ದ ಭಾರತೀಯತೆಯ ಮೂಲ ಸೆಲೆಯಿದೆ. ಇಲ್ಲಿರುವ ಪ್ರತೀ ಲೇಖನವನ್ನು ಬರೆಯುವಾಗ ನನ್ನೊಳಗೆ ಜೀವಂತವಾಗಿದ್ದ 'ಬದಲಾವಣೆ ನಮ್ಮಿಂದಲೇ ಶುರುವಾಗಲಿ' ಎನ್ನುವ ಚಿಂತನೆ ನನ್ನನ್ನು ಆವರಿಸಿದಂತೆ ಜಗತ್ತನ್ನೂ ಆವರಿಸಲಿ ಎನ್ನುವ ಪ್ರಾರ್ಥನೆ ಜೊತೆಗಿದೆ.” ಎನ್ನುವ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ರೇಖಾ ವಿ ಬನ್ನಾಡಿಯವರು ಶುಭಾ ಹಾರೈಸಿದ್ದಾರೆ. ೨೧ ಅಧ್ಯಾಯಗಳನ್ನು ಹೊಂದಿರುವ ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ಓದಲು ಅಪೇಕ್ಷಣೀಯ ಸಂಗತಿಗಳನ್ನು ಒಳಗೊಂಡಿದೆ. ಕೆಲವು ವಿಷಯಗಳಿಗೆ ಪುಟ್ಟ ಪುಟ್ಟ ಕಥೆಗಳು ಜೊತೆಯಾಗಿವೆ. ಈ ಕಾರಣದಿಂದ ಅವನ್ನು ಓದಲು ಇನ್ನಷ್ಟು ಕುತೂಹಲಕಾರಿಯಾಗಿವೆ. ಈ ಅಧ್ಯಾಯಗಳಲ್ಲಿ ನನಗಿಷ್ಟವಾದ ಅಧ್ಯಾಯ ‘ಕರೆಯದೆ ಬರುವ ಅತಿಥಿಗಳ ಬಾಗಿಲು ತೆಗೆದು ಸ್ವಾಗತಿಸಿದರೆ…’. ಇದರಲ್ಲಿ ಪರಿಸರಕ್ಕಾಗಿ ಮಿಡಿಯುವ ಸಹೃದಯ ಮನಸ್ಸುಗಳ ಕತೆಯಿದೆ. ನಾವಿಂದು ಗಿಡ ಮರಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ಬೆಳೆಸಿದ್ದೇವೆ. ಬಿಸಿಲು ಬಂದಾಗ ಬೇಯುತ್ತಾ ‘ಸೆಖೆ, ಸೆಖೆ’ ಎಂದು ಕೂಗಾಡುತ್ತಿದ್ದೇವೆ. ಈ ಅಧ್ಯಾಯದಲ್ಲಿ ನಯನಾ ರಾಜಸ್ಥಾನದ ಉದಯಪುರದ ಮನೆಯೊಳಗಿನ ಮರದ ಕಥೆ ಹೇಳಿದ್ದಾರೆ. ಮನೆಯ ಯಜಮಾನ ಕುಲ್ ಪ್ರದೀಪ್ ಸಿಂಗ್ ಅವರು ಮನೆ ಕಟ್ಟಲು ಅಡ್ಡಿಯಾಗುತ್ತಿದ್ದ ಹಳೆಯ ಮರವನ್ನು ಕಡಿಯಲು ಮನಸ್ಸು ಬಾರದೇ ಆ ಮರವನ್ನು ಸೇರಿಸಿಕೊಂಡೇ ಮನೆ ಕಟ್ಟಿದ್ದಾರಂತೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಾಗಿದೆ. 

ಇದೇ ಅಧ್ಯಾಯದಲ್ಲಿ ದೆಹಲಿ ನಿವಾಸಿ ಹಿರಿಯ ನಾಗರಿಕ ರಾಕೇಶ್ ಎಂಬ ವ್ಯಕ್ತಿ ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳನ್ನು ರಕ್ಷಿಸಲು ತಮ್ಮ ವೃತ್ತಿ ಜೀವನಕ್ಕೆ ತಿಲಾಂಜಲಿ ಇತ್ತು ಲಕ್ಷಾಂತರ ಕೃತಕ ಗೂಡುಗಳನ್ನು ನಿರ್ಮಾಣ ಮಾಡಿದ್ದಾರಂತೆ. ಮಂಗಳೂರಿನ ಡಾ. ಗುರುಪ್ರಸಾದ್ ಭಟ್ ಎನ್ನುವ ವ್ಯಕ್ತಿಯ ಚಿಟ್ಟೆ ಪ್ರೇಮ ಬಹಳ ಅಪರೂಪ. ಅವರ ಮನೆಯ ಉದ್ಯಾನವನದಲ್ಲೇ ಸುಮಾರು ಐವತ್ತಕ್ಕೂ ಅಧಿಕ ಚಿಟ್ಟೆ ಪ್ರಬೇಧಗಳಿವೆ. ಪರಾಗಸ್ಪರ್ಷ, ಬೀಜ ಪ್ರಸಾರಕ್ಕೆ ಚಿಟ್ಟೆ, ಜೇನುನೊಣಗಳು ಬಹಳ ಸಹಕಾರಿ. 

ನೀವು ಇದೊಂದು ಅಧ್ಯಾಯ ಓದಿದರೆ ನಿಜಕ್ಕೂ ಉಳಿದೆಲ್ಲಾ ಅಧ್ಯಾಯಗಳನ್ನು ಒಂದೇ ಗುಟುಕಿನಲ್ಲಿ ಓದಿ ಮುಗಿಸುವುದು  ಖಂಡಿತ. ನಯನಾ ಶೆಟ್ಟಿಯವರ ಸುಮಾರು ೧೨೦ ಪುಟಗಳ ಈ ‘ಪಯಣ’ವನ್ನು ತಮ್ಮ ಜೀವನದ ಹೀರೋ ಆಗಿದ್ದ ಅವರ ಅಪ್ಪ ಮತ್ತು ಎರಡನೇ ತಾಯಿಯಾಗಿದ್ದ ಅವರ ಅಜ್ಜಿಗೆ ಅರ್ಪಣೆ ಮಾಡಿದ್ದಾರೆ. ಪ್ರಥಮ ಪ್ರಯತ್ನದಲ್ಲೇ ಉತ್ತಮ ಲೇಖಕಿಯಾಗುವ ಭರವಸೆ ಮೂಡಿಸಿರುವ ನಯನಾ ಶೆಟ್ಟಿಯವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.