ಈ ಬಗ್ಗೆ ಎಚ್ಚರವಿರಲಿ, ಪ್ರಾಮಾಣಿಕತೆಯಿರಲಿ…!

ಈ ಬಗ್ಗೆ ಎಚ್ಚರವಿರಲಿ, ಪ್ರಾಮಾಣಿಕತೆಯಿರಲಿ…!

ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ. ಸಹಾಯ ಮಾಡಿಯೂ ಅದನ್ನು ಹೇಳಿಕೊಳ್ಳದೆ ತಮ್ಮ ಪಾಡಿಗೆ ತಾವಿರುವವರು ಇರುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಹಾಯ ಮಾಡುವವರು ಇದ್ದಾರೆ. ಈಗ ಸಹಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟದ ಸಮಯದಲ್ಲಿ ಬೇರೆಯವರು ನಮಗೆ ಸಹಾಯ ಮಾಡಬಹುದು ಎಂಬ ಮುಂದಾಲೋಚನೆಯಿಂದ ಸಹಾಯ ಮಾಡುವವರು ಇರುವರು.

ಪಾಪ, ಪುಣ್ಯ - ಸ್ವರ್ಗ, ನರಕದ ನಂಬಿಕೆಯಿಂದ ಸಹಾಯ ಮಾಡುವವರು ಕೆಲವರು. ತಮ್ಮ ವಂಶದ ಅಥವಾ ಮನೆತನದ ಹೆಸರಿನ ಪ್ರತಿಷ್ಟೆಗಾಗಿ ಸಹಾಯ ಮಾಡುವವರು ಹಲವರು. ಸಮಾಜದಲ್ಲಿ ದಾನಿಗಳು ಎಂಬ ಹೆಸರು ಪಡೆಯಲು ಸಹಾಯ ಮಾಡುವವರು ಇದ್ದಾರೆ. ಪ್ರಚಾರ,ಪ್ರಶಸ್ತಿ ಮತ್ತು ಜನಪ್ರಿಯತೆಯ  ಮೂಲ ಉದ್ದೇಶದಿಂದಲೇ ಸಹಾಯ ಮಾಡುವವರು ಇರುತ್ತಾರೆ. ಭವಿಷ್ಯದ ಲಾಭದ ಆಸೆಯಿಂದ, ರಾಜಕೀಯ ಮುಂತಾದ ಅಧಿಕಾರ ದಾಹದಿಂದ ಸಹಾಯ ಮಾಡುವವರು ಕೆಲವರು. ಬೇರೆಯವರ ಒತ್ತಡ ಅಥವಾ ಬಲವಂತಕ್ಕೆ ಸಹಾಯ ಮಾಡುವವರು ಇದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಸಹಾಯ ರೂಪದ ನೆರವು ನೀಡುವವರು ಹಲವರು. ಸಹಾಯ ಮಾಡುವುದನ್ನು ಹವ್ಯಾಸ ಮಾಡಿಕೊಂಡಿರುವವರು ಇರುತ್ತಾರೆ. ಸಹಾಯ ಮಾಡುತ್ತಾ ಸಂಪಾದನೆ ಮಾಡಿಕೊಳ್ಳುವವರು ಇದ್ದಾರೆ.

ತೀರಾ ಕ್ಷುಲ್ಲಕ  ಹತ್ತು ರೂಪಾಯಿ ಅಥವಾ ಎರಡು ಹಣ್ಣೋ, ಬಿಸ್ಕತ್ತೋ ಕೊಟ್ಟು ಸಣ್ಣ ಸಹಾಯವನ್ನು ದೊಡ್ಡದಾಗಿ ಹೇಳಿಕೊಂಡು ಮಹಾನ್ ದಾನಿಗಳಂತೆ ಮೆರೆಯುವವರು ಇದ್ದಾರೆ. ತಮಗೆ ನಿರುಪಯುಕ್ತವಾದ ವಸ್ತುಗಳನ್ನು ಇತರರಿಗೆ ಕೊಟ್ಟು ಅದನ್ನು ಮಹಾ ಉಪಕಾರ ಎಂದು ಬಣ್ಣಿಸಿಕೊಳ್ಳುವವರು ಕೆಲವರು. ಬೇರೆಯವರು ಸಹಾಯ ಮಾಡುವಾಗ ತಾವು ಅದರಲ್ಲಿ ಭಾಗಿಯಾಗಿ ತಾವೇ ಮಾಡಿದಂತೆ ಹೇಳುವವರು ಅನೇಕರು. ಏನೂ ಮಾಡದೆ ಕೇವಲ ಮಾತಿನಲ್ಲೇ ಮಹಾ ದಾನವಂತರಂತೆ ಹೇಳಿಕೊಳ್ಳುವವರು ಇದ್ದಾರೆ. ಸಹಾಯದ ಸಂಧರ್ಭದಲ್ಲಿ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವವರು ಇದ್ದಾರೆ. ತೆರಿಗೆ ತಪ್ಪಿಸಿಕೊಳ್ಳಲು ಆ ಹಣವನ್ನು ದಾನ ಮಾಡುವವರು ಇರುತ್ತಾರೆ. ಹೀಗೆ ಇನ್ನೂ ಅನೇಕ ರೀತಿಯ ಜನಗಳು ನಮ್ಮ ನಡುವೆ ಇದ್ದಾರೆ. ಇದರಲ್ಲಿ ನಾವು ಯಾರು ಎಂಬುದು ಅವರವರ ಆತ್ಮಾವಲೋಕನಕ್ಕೆ ಸೇರಿದ್ದು.

ಇದು ಸಹಾಯ ಮಾಡುವವರ ವಿಧಗಳಾದರೆ ಇದರ ಸಾವಿರ ಪಟ್ಟು ಸಹಾಯದ ಹೆಸರಿನಲ್ಲಿ ಮೋಸ ಮಾಡುವವರು, ಬದುಕು ಕಟ್ಟಿಕೊಳ್ಳುವವರು ಇರುತ್ತಾರೆ. ಸಂಘಟನೆಗಳನ್ನು ಕಟ್ಟುವುದೇ ಸ್ವಾರ್ಥಕ್ಕಾಗಿ ಎಂದಾಗ ಸೇವೆ ಇನ್ನೆಲ್ಲಿ, ಸಂಸ್ಥೆಗಳನ್ನು ಸ್ಥಾಪಿಸುವುದೇ ನಾಯಕರಾಗಲು ಎಂದಾಗ ಸಹಾಯ ಇನ್ನೆಲ್ಲಿ, ಸಂಘ - ಸಂಸ್ಥೆಗಳನ್ನು ಮಾಡುವುದೇ ಹಣಕ್ಕಾಗಿ ಎಂದಾಗ ನೆರವು ಇನ್ನೆಲ್ಲಿ, ಸಂಘಟನೆಗಳನ್ನು ಸ್ಥಾಪಿಸುವುದೇ ಪ್ರಚಾರಕ್ಕಾಗಿ ಎಂದಾಗ ಸೇವೆ ಇನ್ನೆಲ್ಲಿ, ಸಂಸ್ಥೆಗಳನ್ನು ಕಟ್ಟುವುದೇ ಅಧಿಕಾರಕ್ಕಾಗಿ ಎಂದಾಗ ಸಹಾಯ ಇನ್ನೆಲ್ಲಿ, ಹೋರಾಟ - ಚಳವಳಿಗಳನ್ನು ರೂಪಿಸುವುದೇ ತಮ್ಮ ಸ್ವಂತ ಅಸ್ತಿತ್ವಕ್ಕಾಗಿ ಎಂದಾಗ ನೆರವು ಇನ್ನೆಲ್ಲಿ, ದಯವಿಟ್ಟು ಈ ಉದ್ದೇಶಗಳು ನಿಮಗಿದ್ದಾಗ ವ್ಯಾಪಾರ, ಉದ್ದಿಮೆಗಳನ್ನು ಪ್ರಾರಂಭಿಸಿ, ಯಶಸ್ವಿಯಾಗಿ...

ಸೇವೆಯ ಹೆಸರಿನಲ್ಲಿ ವ್ಯವಸ್ಥೆಯ ದುರುಪಯೋಗ ಬೇಡ. ಸಂಘಟನೆ ಬಯಸುವುದು ನಿಸ್ವಾರ್ಥವನ್ನು, ಸಂಸ್ಥೆಗಳು ಬಯಸುವುದು ತ್ಯಾಗವನ್ನು, ಒಕ್ಕೂಟ ಬಯಸುವುದು ಪ್ರೀತಿಯನ್ನು, ಸಂಘ ಬಯಸುವುದು ಕರುಣೆಯನ್ನು, ಸಂಸ್ಥೆ ಬಯಸುವುದು ಮಾನವೀಯತೆಯನ್ನು, ಒಕ್ಕೂಟ ಬಯಸುವುದು ಕ್ಷಮಾಗುಣವನ್ನು, ಜನ ಬಯಸುವುದು ಸರಳತೆ, ಪ್ರಾಮಾಣಿಕತೆಯನ್ನು, ಅದಿಲ್ಲದೆ, ಒಣ ಪ್ರತಿಷ್ಠೆಗೆ ಬುದ್ದಿಯ ಪ್ರದರ್ಶನಕ್ಕೆ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಜನರ ದಾರಿ ತಪ್ಪಿಸಿ ಸಿನಿಕರನ್ನಾಗಿ ಮಾಡಬೇಡಿ. ಲಕ್ಷಾಂತರ ಸಂಘಟನೆಗಳು ನೊಂದಾವಣೆಯಾಗಿವೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ನಿಜವಾದ ಸೇವೆ ಸಲ್ಲಿಸುತ್ತಿವೆ. ಉಳಿದವು ಕೇವಲ ಹೆಸರಿಗೆ, ಸ್ವಾರ್ಥಕ್ಕಾಗಿ ಮಾತ್ರ ಇದ್ದು, ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸುತ್ತಿವೆ. ಈ ಬಗ್ಗೆ ಎಚ್ಚರವಿರಲಿ, ಪ್ರಾಮಾಣಿಕತೆಯಿರಲಿ.

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ