ಈ ಬೆಟ್ಟಗಳೇ ನಮ್ಮ ಮನೆಗಳು

ಈ ಬೆಟ್ಟಗಳೇ ನಮ್ಮ ಮನೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ತೆಮ್ಸೂಲ ಆವೋ, ಅನುವಾದ: ಡಾ. ಎಚ್ ಎಸ್ ಎಂ ಪ್ರಕಾಶ್
ಪ್ರಕಾಶಕರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು - ೫೬೦೦೫೬
ಪುಸ್ತಕದ ಬೆಲೆ
ರೂ. ೮೦.೦೦, ಮುದ್ರಣ : ೨೦೧೦

ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ. ಅಲ್ಲಿಯ ಜನರ ನೋವು, ಕಷ್ಟ, ಸಂಕಟಗಳ ಚಿತ್ರಣ ನಮಗೆ ಬೇರೊಂದು ಅನುಭವವನ್ನು ಕೊಡುತ್ತದೆ. ಆ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಡಾ. ಎಚ್.ಎಸ್.ಎಂ. ಪ್ರಕಾಶ್ ಅವರು ಸ್ಥಳೀಯವಾಗಿದ್ದ ಹಾಗೂ ವಿಶಿಷ್ಟವಾಗಿದ್ದ ತಮ್ಮ ಅನುಭವಗಳ ಸಹಾಯದಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಈ ಕೃತಿಯಲ್ಲಿ ನಾಗಾಲ್ಯಾಂಡಿನ ವಿಶಿಷ್ಟ ಸನ್ನಿವೇಶ ಮತ್ತು ಸಮಸ್ಯೆಗಳ ಹಿನ್ನಲೆಯಲ್ಲಿ ರಚಿತವಾಗಿರುವ ಇಲ್ಲಿನ ಕಥೆಗಳು ನಮಗೆ ವಿಶಿಷ್ಟ ಅನುಭವವನ್ನು ಉಂಟುಮಾಡುತ್ತವೆ. ಬೇರೊಂದು ಲೋಕಕ್ಕೆ ನಮ್ಮನ್ನು ಕರೆದೊಯ್ಯುವಂಥ ಮಹತ್ವವನ್ನು ಪಡೆದುಕೊಂಡಿದೆ. ನಮಗೆ ಸ್ವಲ್ಪ ಮಟ್ಟಿಗೆ ವಿಚಿತ್ರವೂ, ಸಾಮಾನ್ಯವಾದ ರಾಷ್ಟ್ರೀಯ ಧ್ಯೇಯ-ಧೋರಣೆಗಳಿಗಿಂತ ಭಿನ್ನವೂ ಆಗಿರುವ ಅನಿಸಿಕೆಗಳು ಅವರು ಎದುರಿಸಿರುವ ನೋವು-ಕಷ್ಟ-ಸಂಕಟಗಳ ಪ್ರತಿಧ್ವನಿಯೇ ಆಗಿವೆ ಎಂಬುದನ್ನು ಗಮನಿಸುವುದು ಅಗತ್ಯವಾಗುತ್ತದೆ. ಈ ದೃಷ್ಟಿಯಿಂದಲೂ ಇದೊಂದು ವಿಶಿಷ್ಟ ಕಥಾಸಂಕಲನವೆನ್ನಿಸಿಕೊಳ್ಳುತ್ತದೆ.

ಸ್ವತಃ ಭೂವಿಜ್ಞಾನಿಯಾಗಿರುವ ಡಾ. ಎಚ್ ಎಸ್ ಎಂ ಪ್ರಕಾಶ್ ಅವರು ನಾಗಾಲ್ಯಾಂಡಿನಲ್ಲಿನ ತಮ್ಮ ಸೇವಾವಧಿಯಲ್ಲಿ ಈ ಹೊಸ ಸಂವೇದನೆ-ಸಂಕಷ್ಟ-ಸಮಸ್ಯೆಗಳನ್ನು ಅರಿತವರಾಗಿದ್ದು, ಅದನ್ನು ಆಳವಾಗಿ ಅಭ್ಯಾಸ ಮಾಡಿ. ಕನ್ನಡಕ್ಕೆ ಅವುಗಳನ್ನು ತಂದುಕೊಳ್ಳುವ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಬೆರೆ ಭಾಷಾವಲಯಗಳಲ್ಲಿ ನೆಲಸಬೇಕಾಗಿ ಬರುವ ಇತರ ಭಾಷಾಬಾಂಧವರು ಮಾಡಬೇಕಾಗಿರುವಂಥ ಅಪೇಕ್ಷಣೀಯ ಕಾರ್ಯಕ್ಕೆ ಅವರು ಒಂದು ಮಾದರಿಯನ್ನು ಆದರ್ಶವನ್ನು ಹಾಕಿಕೊಟ್ಟಿದ್ದಾರೆ.

ಈ ಕೃತಿಯ ಮೂಲ ಲೇಖಕರಾದ ತೆಮ್ಸೂಲ ಆವೋರವರು ಈಗಾಗಲೇ ಮೌಖಿಕ ಸಂಪ್ರದಾಯ, ಜನಪದ ಗೀತೆಗಳು, ದಂತಕಥೆಗಳು ಮತ್ತು ಆವೋ ನಾಗಗಳ ಸಾಂಸ್ಕೃತಿಕ ಸಂಪ್ರದಾಯಗಳ ಬಗ್ಗೆ ಅನೇಕ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಈ ಕೃತಿಯಲ್ಲಿರುವ ನಾಗಾಲ್ಯಾಂಡಿನ ಕಥೆಗಳು ನಮಗೆ ವಿಶಿಷ್ಟ ಅನುಭವವನ್ನು ಉಂಟುಮಾಡುತ್ತವೆ. ಈ ಸಂಕಲನದ ಕೆಲವು ಕಥೆಗಳು ಸಂಪ್ರದಾಯಬದ್ಧ ನಾಗಾ ಜೀವನ ಶೈಲಿಯ ಆವರಣವನ್ನು ಹಿಡಿದಿಡಲು ಪ್ರಯತ್ನಿಸಿವೆ. ಇಂದಿನ ನಾಗಾಜನರನ್ನು ಆಕರ್ಷಿಸುತ್ತಿರುವ “ಪ್ರಗತಿ" ಮತ್ತು “ಅಭಿವೃದ್ಧಿ"ಗಳ ನಡುವೆ ಅದು ಅದರಲ್ಲೂ ಯುವಜನರಿಗೆ ಅಪ್ರಸ್ತುತವೆನಿಸುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರಶಾಂತ ನೆಲೆಗಳಿಂದ ಪಟ್ಟಣಗಳಲ್ಲಿನ ಗೊಂದಲ ಮತ್ತು ಸಂಘರ್ಷದ ಲೋಕದೊಳಕ್ಕೆ ಇದ್ದಕ್ಕಿದ್ದಂತೆ ಸ್ಥಳಾಂತರಗೊಂಡ ಯುವಜನರ ಏಳುಬೀಳುಗಳು ಇತೀಚಿನ ನಾಗಾ ಚರಿತ್ರೆಯ ಅವನತಿಯ ಒಂದು ಭಾಗ. ಅದು ಅವರನ್ನು ಒಂದಕ್ಕಿಂತ ಹೆಚ್ಚು ರೀತಿಗಳಲ್ಲಿ ಊನಗೊಳಿಸಿದೆ.

ಅಂತಹ ಚರಿತ್ರೆಯ ಅನುವಂಶಿಕರ ಮೇಲೆ ಇರಬಹುದಾದ ಬಹುದೊಡ್ಡ ಜವಾಬ್ದಾರಿಯೆಂದರೆ ಒಟ್ಟಾಗಿ ಅನುಭವಗಳನ್ನು ಶೋಧಿಸಿ, ಆ ಹೋರಾಟವು ಅವರುಗಳ ಬದುಕಿನ ಮೇಲೆ ಉಂಟುಮಾಡಿರಬಹುದಾದ ಮತ್ತು ಪ್ರಕೃತಿ ಹಾಗೂ ನೆರೆಹೊರೆಯವರೊಂದಿಗೆ ಸೌಹಾರ್ದದಿಂದಿರುವುದನ್ನು ನಮ್ಮ ಜನಾಂಗೀಯ ವಿವೇಚನೆಯು ಎತ್ತಿ ತೋರಿಸಿದೆ. ನಾಗಾಜನರು ಇದನ್ನು ಮತ್ತೆ ಸ್ವೀಕರಿಸಿ, ನಾಗಾಲೋಟದಿಂದ ಮುನ್ನಡೆಯುತ್ತಿರುವ ಪ್ರಾಪಂಚಿಕ ಅನಿವಾರ್ಯತೆಗಳ ನಡುವೆಯೂ, ಈ ದೃಷ್ಟಿಯನ್ನು ತಮ್ಮ ಬದುಕಿನ ಹಂದರದೊಳಗೆ ಅಳವಡಿಸಿಕೊಳ್ಳುವುದಾದರೆ, ಆ ವಿಪ್ಲವದ ದಿನಗಳ ನೆನಪುಗಳನ್ನು ಮೆಲುಕು ಹಾಕುವುದರಲ್ಲಿ ಸಾರ್ಥಕತೆಯಿದೆಯೆನ್ನಿಸುತ್ತದೆ ಎಂದಿದ್ದಾರೆ ಮೂಲ ಲೇಖಕರಾದ ತೆಮ್ಸುಲಾ ಆವೋ ಇವರು.

ತೆಮ್ಸುಲಾ ಆವೋ ಅವರ ಈ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹೆಚ್ ಎಸ್ ಎಂ ಪ್ರಕಾಶ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಆವೋ ಅವರ ಕಠಿಣವಾದ ಭಾಷೆಯನ್ನು ಅನುವಾದಗೊಳಿಸುವುದು ಬಹಳ ಕಷ್ಟಕರವಾದ ಕೆಲಸ ಎಂದಿದ್ದಾರೆ. ಈ ಸಂಕಲನದಲ್ಲಿ ಹತ್ತು ಕಥೆಗಳಿವೆ. ಸುಮಾರು ೧೮೦ ಪುಟಗಳಿರುವ ಈ ಪುಸ್ತಕವನ್ನು ಓದಿದರೆ ನಾಗಾಲ್ಯಾಂಡ್ ಗೆ ಒಂದು ಸುತ್ತು ಬಂದಂತಾಗುತ್ತದೆ.