ಈ ಮಾಸ್ತರರಿಗೆ ಹಳ್ಳಿಯೇ ಶಾಲೆ ! (ಭಾಗ 2)

ಈ ಮಾಸ್ತರರಿಗೆ ಹಳ್ಳಿಯೇ ಶಾಲೆ ! (ಭಾಗ 2)

ಕೊಡುಗೆ
ಬೆಳಾಲಿನಂಥ ಹಳ್ಳಿಯ ಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕವಿದೆ. ಇದು ಪಕ್ಕಾ ಗೊಲ್ಲರ ಕೊಡುಗೆ. ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ವಿಜ್ಞಾನ ಘಟಕ ಇದೆಂದು ಹೇಳುತ್ತಾರೆ. ದೀಪ ಯಾಕೆ ಉರಿಯುತ್ತದೆ, ಹಾಲು ಯಾಕೆ ಮೊಸರಾಗುತ್ತದೆ, ಮಂಜು ಯಾಕೆ ಕರಗುತ್ತದೆ.... ಮುಂತಾಗಿ ಹಳ್ಳಿಗರಿಗೆ ವೈಜ್ಞಾನಿಕ ತಿಳಿವಳಿಕೆ ನೀಡುವುದು ಈ ಗ್ರಾಮೀಣ ವಿಜ್ಞಾನ ಘಟಕದ ಉದ್ದೇಶ, ವಿಶೇಷ.

ಬೆಳಾಲಿನ ಗ್ರಾಮೀಣ ವಿಜ್ಞಾನ ಘಟಕದ ಸಾಧನೆ ಊರ್ಜಾ ಯೋಜನೆಯನ್ನು ಬೆಳಾಲಿಗೆ ದೊರಕಿಸಿದ್ದು. ಹಳ್ಳಿಗಳಲ್ಲಿ ಬದಲೀ ಇಂಧನ ರೂಪಿಸುವ ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಊರ್ಜಾ ಯೋಜನೆ ಜಾರಿಯಲ್ಲಿರುವ ಏಕೈಕ ಹಳ್ಳಿ ಬೆಳಾಲು. ಇಲ್ಲಿ ಅಸ್ತ್ರ ಒಲೆ, ಶಕ್ತಿ ಒಲೆ, ಸೌರಶಕ್ತಿ ಚಾಲಿತ ವಾಟರ್ ಹೀಟರ್, ಗಾಳಿ ಯಂತ್ರಗಳನ್ನು ಸ್ಥಾಪಿಸುವವರಿಗೆ ಶೇ. 80 ಸಹಾಯಧನವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡುತ್ತದೆ. ಬೆಳಾಲಿನ ಘಟಕ ಗೊಲ್ಲರ ನಿರ್ದೇಶನದಲ್ಲಿ ಆಗಲೇ ಪ್ರತಿ ಮನೆಗೂ ಹೋಗಿ ಬೇಕಾದ ಬದಲೀ ಇಂಧನದ ಸರ್ವೆ ಮಾಡಿದೆ. ಇಡೀ ಹಳ್ಳಿಯನ್ನು ಬದಲೀ ಇಂಧನ ಬಳಸುವ ಗ್ರಾಮವಾಗಿ ಪರಿವರ್ತಿಸಬೇಕೆಂಬ ಆಸೆ ಗೊಲ್ಲ ಮಾಸ್ತರರದ್ದು. ಎಷ್ಟು ಕನ್ನಡ ಶಾಲೆಯ ಮೇಷ್ಟ್ರು ಗಳಿಗೆ ಇಂಥ ಬಯಕೆಗಳಿರುತ್ತವೆ?

ಇಷ್ಟು ವರ್ಷವೂ ಚಿಕ್ಕ ಮಕ್ಕಳಿಗಾಗಿ ಜೀವ ತೇದ ಅವರಿಗೆ - ಪ್ರಾಥಮಿಕ ಶಾಲೆಗಳು ಮಕ್ಕಳಿಗೆ ನ್ಯಾಯ ಒದಗಿಸುತ್ತಿಲ್ಲ ಎಂಬ ಕೊರಗು. “ನೋಡಿ, ನಮ್ಮಲ್ಲಿ ನಾಲ್ಕು ಶಿಕ್ಷಕರ ಹುದ್ದೆ ಖಾಲಿ ಇದೆ. ಈಗ ಇರುವ ಮೂವರಲ್ಲಿ ಒಬ್ಬರು ಹೆರಿಗೆಗೆ ಹೋಗಿದ್ದಾರೆ. ಇನ್ನೊಬ್ಬರು ಇಂದು ರಜೆಯಲ್ಲಿದ್ದರು. ನಾನ್ನೂರು ಮಕ್ಕಳಿಗೆ ಇಂದು ನಾನೊಬ್ಬನೇ ಶಿಕ್ಷಕನಿದ್ದೆ. ಹಾಜರಿ ಹಾಕುವುದನನ್ನು ಬಿಟ್ಟು ಬೇರೆ ಏನನ್ನೂ ಮಾಡಲಾಗಲಿಲ್ಲ "ಎಂದು ಅಂದಿನ ಅನುಭವ ಅರುಹಿದರು. ಅದು ಎಲ್ಲಾ ಕನ್ನಡ ಶಾಲೆಗಳ ಸ್ಥಿತಿಗೆ ಬರೆದ ಭಾಷ್ಯದಂತತ್ತು.

ಬೆಳಾಲಿನಂಥ ಕೊಂಪೆಯಲ್ಲಿ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ಚೇತನ ಯಾರ ಗಮನಕ್ಕೂ ಬಾರದೇ ಹೋಗಿರುವುದು, ಅತ್ತು ಕರೆದು ಪ್ರಶಸ್ತಿ ಪಡೆಯಬೇಕಾದ ನಮ್ಮ ಸಂಪ್ರದಾಯಕ್ಕೆ ಅನುಗುಣವಾಗೇ ಇದೆ. “ಮಾಷ್ಟ್ರೇ, ನಿಮಗೆ ಪ್ರಶಸ್ತಿಗಳು ಯಾಕೆ ಬಂದಿಲ್ಲ" ಎಂದು ಕೇಳಿದರೆ "ಪ್ರಶಸ್ತಿ ಪಡೆಯಬೇಕಾದರೆ ನಾವೇ ಅರ್ಜಿ ಸಲ್ಲಿಸಬೇಕು. ಅದು ಯಾವನೇ ಸ್ವಾಭಿಮಾನಿ ಶಿಕ್ಷಕ ಮಾಡಲಾಗದ ಕೆಲಸ" ಎಂದು ಖಂಡತುಂಡವಾಗಿ ನುಡಿಯುತ್ತಾರೆ.

ಸಮಾಧಾನ

ಗೊಲ್ಲರು ಆರು ಮಕ್ಕಳ ತಂದೆ. ಇದೊಂದರಲ್ಲಿ ಮಾತ್ರ ನೀವು ಪ್ರಗತಿಪರ ಮನೋಭಾವ ಪ್ರದರ್ಶಿಸಲಿಲ್ಲ ಎಂದು ತಮಾಷೆ ಮಾಡಬೇಕು ಎಂದಯಕೊಂಡೆ. ಆದರೆ ನಿರಂತರ ಕ್ರಯಾಶೀಲತೆಯ ಈ ಹಿರಿಯನೆದುರು ತಮಾಷೆ ಮಾಡಲಾಗದೇ ಸುಮ್ಮನಾದೆ.

“ಮಾನಸಿಕ ನೆಮ್ಮದಿಗೆ ಚಟುವಟಿಕೆಗಳು ಬೇಕು" ಎನ್ನುವ ಗೊಲ್ಲ ಮಾಸ್ತರರು ಐವತ್ತು ದಾಟಿದ್ದರೂ ಅವರ ಉತ್ಸಾಹ ಕುಂದಿಲ್ಲ. ಸುಮ್ಮನೇ ಕೂಡ್ರುವುದು ಅವರ ಜಾಾಯಮಾನವೇ ಅಲ್ಲ. ಶಾಲೆಗಳಲ್ಲಿ ಇಸ್ಪೀಟಾಡುವ ಶಿಕ್ಷಕರು, ವರ್ಷಾನುಗಟ್ಟಲೇ ಬಾಗಿಲು ಮುಚ್ಚಿ ಸಂಬಳ ಪಡೆಯುವ ಶಿಕ್ಷಕರು, ಶಾಲೆಗೆ ಬಾಡಿಗೆಯವರನ್ನು ಕಳಿಸಿ ಹೊಲ ಉಳುವ ಶಿಕ್ಷಕರು... ದಿನನಿತ್ಯ ಕೇಳಿಬರುವ ಇಂಥ ಪರಾಕ್ರಮಿಗಳ ನಡುವೆ ಗೊಲ್ಲರಂಥವರೂ ಇದ್ದಾರೆ ಎಂಬುದು ಎಷ್ಟು ಸಮಾಧಾನ ತರುವ ಸಮಾಚಾರ!

(ಲೇಖನ ಬರೆದ ವರ್ಷ : 1991)