ಈ ವರ್ಷವಾದರೂ ಸುಸೂತ್ರವಾಗಿ ನಡೆಯಲಿ ಶಾಲೆಗಳು

ಈ ವರ್ಷವಾದರೂ ಸುಸೂತ್ರವಾಗಿ ನಡೆಯಲಿ ಶಾಲೆಗಳು

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಜಗತ್ತಿನ ಎಲ್ಲೆಡೆ ಯಾವುದೇ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿಲ್ಲ. ಇದಕ್ಕೆ ಶಾಲಾ-ಕಾಲೇಜುಗಳೂ ಹೊರತಲ್ಲ. ಆರಂಭದಿಂದಲೂ ಎಲ್ಲಿ ಮಕ್ಕಳ ಮೇಲೆ ಕೊರೋನಾ ದಾಳಿ ಮಾಡಿಬಿಡುತ್ತದೆಯೋ ಎಂಬ ಕಾರಣಕ್ಕಾಗಿ ಶಾಲೆಗಳನ್ನು ಮುಚ್ಚಿ ಮಕ್ಕಳಿಗೆ ಆನ್ಲೈನ್ ಪಾಠವನ್ನೇ ಮಾಡಲಾಗುತ್ತಿತ್ತು. ಇದರ ನಡುವೆ ಕೊರೊನಾ ಕಡಿಮೆಯಾದ ವೇಳೆಯಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಶಾಲೆಗಳನ್ನು ಆರಂಭಿಸಿ ಪಾಠ ಮಾಡಿದ್ದೂ ಇದೆ. ಆದರೆ ಈ ವರ್ಷ ಮಾತ್ರ ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೇ ಶಾಲೆಗಳು ಆರಂಭವಾಗುತ್ತಿವೆ.

ಒಂದು ಲೆಕ್ಕಾಚಾರದಲ್ಲಿ ನೋಡಿದರೆ, ಮಕ್ಕಳಿಗೆ ಶೈಕ್ಷಣಿಕ ವರ್ಷಾರಂಭಕ್ಕೇ ಶಾಲೆ ಆರಂಭವಾಗುತ್ತಿರುವುದು ಖುಷಿಯ ವಿಚಾರವೇ. ಈ ಹಿಂದಿನ ಎರಡು ವರ್ಷ ಮಕ್ಕಳು ಕಲಿತದ್ದೇನು ಎಂಬುವುದನ್ನು ಹಿಂದಿರುಗಿ ನೋಡಿದರೆ ಕಾಣಿಸುವುದು ಸೊನ್ನೆಯೇ. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದಿದ್ದಾರೆಯೇ ಎಂಬುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆನ್ಲೈನ್ ಜಗತ್ತಿನಲ್ಲಿ ಶಿಕ್ಷಕರು ಪಠ್ಯಕ್ರಮ ಮುಗಿಸಿದ್ದೇ ಬಂತು. ಆದರೆ ಮಕ್ಕಳು ಎಷ್ಟು ಕಲಿತವು ಎಂಬುದು ಮಾತ್ರ ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಹೀಗಾಗಿಯೇ ರಾಜ್ಯ ಸರಕಾರ ಸೋಮವಾರ ಶಾಲೆ ಆರಂಭಿಸಿ ಮೊದಲಿಗೆ ಕಲಿಕಾ ಚೇತರಿಕೆ ಹೆಸರಿನಲ್ಲಿ ಅವರನ್ನು ಶಾಲೆಯ ವಾತಾವರಣಕ್ಕೆ ಹೊಂದಿಸುವ ಕೆಲಸ ಮಾಡುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಇದು ಅಗತ್ಯವೂ ಹೌದು. ಶಾಲೆಗೆ ಹೋದ ಮಕ್ಕಳಿಗೆ ನೇರವಾಗಿ ಪಾಠ ಮಾಡಲು ಹೊರಟರೆ, ಅವು ಗ್ರಹಿಸಲು ಸಾಧ್ಯವಿಲ್ಲದೇ ಹೋಗಬಹುದು, ಇದಕ್ಕೆ ಕಾರಣ, ಕಲಿಕೆಯಲ್ಲಿನ ಅಂತರ. ಏಕೆಂದರೆ ಸ್ಮಾರ್ಟ್ ಫೋನ್ ಮತ್ತು ಉತ್ತಮ ಇಂಟರ್ನೆಟ್ ಸಿಕ್ಕ ಕಡೆಗಳ ಮಕ್ಕಳು ಒಂದಷ್ಟು ಚೆನ್ನಾಗಿ ಕಲಿತಿರಬಹುದು. ಆದರೆ ಈ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ತಲೆಗೆ ಪಾಠ ಹೋಗಿರಲಿಕ್ಕೂ ಇಲ್ಲ. ಹೀಗಾಗಿ ಈ ಅಂತರ ತುಂಬಲು ಈಗ ನಡೆಸಲು ಉದ್ದೇಶಿಸಿರುವ ಕಲಿಕಾ ಚೇತರಿಕೆ ಉತ್ತಮ ಮಾರ್ಗ. ಈ ನಡುವೆಯೇ ಕೊರೊನಾ ಪೂರ್ವದ ದಿನದಂತೆ ಮಕ್ಕಳು ಶಾಲೆಗೆ ಬರುತ್ತಿದ್ದು ಅವರಿಗೆ ಶಿಕ್ಷಕರು ಒಂದು ಆತ್ಮೀಯ ಸ್ವಾಗತವನ್ನೂ ನೀಡಬೇಕಾಗಿದೆ. ಇದು ಒಂದು ರೀತಿಯ ಹಬ್ಬದಂತೆ ನಡೆದರೆ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಸಿದ್ಧತೆಯನ್ನೂ ನಡೆಸಿದೆ. ಏಕೆಂದರೆ ಕೊರೊನಾದಿಂದಾಗಿ ಮನೆಗೇ ಹೊಂದಿಕೊಂಡಿರುವ ಮಕ್ಕಳನ್ನು ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡುವುದು ಕಷ್ಟಕರ. ಆದರೆ ಶಾಲೆಯೂ ಮನೆಯ ವಾತಾವರಣದಂತೆಯೇ ಇದ್ದರೆ ಆ ಮಕ್ಕಳು ಬೇಗನೆ ಹೊಂದಿಕೊಳ್ಳಬಹುದು.

ಸಂಕಟ, ನೋವಿನ ಮಧ್ಯೆಯೇ ಕೊರೊನಾದ ಎರಡು ವರ್ಷಗಳು ಕಳೆದು ಹೋಗಿವೆ. ಮಕ್ಕಳಲ್ಲಿ ಪಾಠ ಕೇಳುವ ಸಾಮರ್ಥ್ಯವೂ ಕಡಿಮೆಯಾಗಿದೆ. ಎಲ್ಲೋ ಒಂದು ಕಡೆಯಲ್ಲಿ ಮನೆಯಲ್ಲಿ ಕುಳಿತದ್ದರಿಂದ ಮಕ್ಕಳಲ್ಲಿನ ಏಕಾಗ್ರತೆ ಕಡಿಮೆಯಾಗಿರಬಹುದು. ಈ ಎಲ್ಲ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಶಿಕ್ಷಕರ ಜವಾಬ್ದಾರಿ. ಅಷ್ಟೇ ಅಲ್ಲ, ತರಗತಿಗಳನ್ನೂ ಮಕ್ಕಳ ಮಗದೊಂದು ಮನೆಯಂತೆಯೇ ಮಾಡಿ, ಅವರನ್ನು ಹೊಂದಿಕೊಳ್ಳುವಂತೆ ಮಾಡಬೇಕಾದದ್ದು ಅವರ ಕರ್ತವ್ಯವೇ ಆಗಿದೆ. ಇದರ ನಡುವೆಯೇ ಮತ್ತೆ ಕೊರೊನಾ ವಕ್ಕರಿಸಿ, ಮಕ್ಕಳ ಶಾಲೆಗೆ ಅಡ್ಡಿಯಾಗದಿರಲೆಂದು ಆಶಿಸೋಣ.

(ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೬-೦೫-೨೦೨೨) 

ಚಿತ್ರ ಕೃಪೆ: ಅಂತರ್ಜಾಲ ತಾಣ