ಈ ವಿಷಯಗಳಿಗೂ ಬಂದ್ ಆಗಲಿ…!
ಕಾವೇರಿ ನೀರಿನ ಹಕ್ಕು ಮತ್ತು ಹಂಚಿಕೆಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುತ್ತಾ.. ಮುಂದಿನ ದಿನಗಳಲ್ಲಿ ಈ ವಿಷಯಗಳಿಗೂ ಬಂದ್ ಆಚರಿಸಿದರೆ ಕೆಲವೇ ವರ್ಷಗಳಲ್ಲಿ ಯಾವುದೇ ವಿಷಯಕ್ಕೆ ಬಂದ್ ಆಚರಿಸುವ ಪ್ರಮೇಯ ಬರುವುದಿಲ್ಲ.
1) ಜನವರಿ 1 ಹೊಸ ವರ್ಷಾಚರಣೆಯ ಸಭ್ಯ ಸಂಭ್ರಮ ಹೊರತುಪಡಿಸಿ ಯಾವುದೇ ಅತಿರೇಕದ ಜೂಜು, ಕುಡಿತ, ಮಾದಕದ್ರವ್ಯ, ಗಲಭೆ, ಅರಚಾಟ ಮುಂತಾದ ಸ್ವೇಚ್ಚಾಚಾರದ ನಡವಳಿಕೆಗಳನ್ನು ವಿರೋಧಿಸುವ ಬಂದ್.
2) ಪೆಬ್ರವರಿ 1. ಇಡೀ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ರೀತಿಯ ಭ್ರಷ್ಟ ಹಣ ಸ್ವೀಕರಿಸದಂತೆ ತಂದೆ ತಾಯಿ ಮಕ್ಕಳು ಧರ್ಮ ಸಂವಿಧಾನ ಮತ್ತು ಪಂಚ ಭೂತಗಳ ಮೇಲೆ ಪ್ರಮಾಣ ಮಾಡಿ ಹಾಗೆಯೇ ವರ್ತಿಸಲು ಆಗ್ರಹಿಸಿ ಬಂದ್.
3) ಮಾರ್ಚ್ 1. ಕನಿಷ್ಠ 50 ವರ್ಷಗಳ ಹಿಂದೆ ಇಡೀ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲಾ ಕೆರೆ ಕಟ್ಟೆಗಳನ್ನು ಮರು ಸ್ಥಾಪಿಸುವ, ಚಿಕ್ಕ ಚಿಕ್ಕ ಜಲಾಶಯಗಳನ್ನು ನಿರ್ಮಿಸುವ ಮತ್ತು ಅದಕ್ಕಾಗಿ ಈಗ ಅದನ್ನು ಆಕ್ರಮಿಸಿಕೊಂಡಿರುವ ನಿವಾಸಿಗಳಿಗೆ ಮಾನವೀಯ ನೆಲೆಯಲ್ಲಿ ಅಷ್ಟೇ ಉತ್ತಮ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕ್ರಮಕ್ಕೆ ಆಗ್ರಹಿಸಿ ಬಂದ್.
4) ಏಪ್ರಿಲ್ 1. ಎಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದ ಕಟ್ಟಡ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಖಾಸಗಿಯವರಿಗೆ ಸೆಡ್ಡು ಹೊಡೆಯುವಂತ ವ್ಯವಸ್ಥೆ ಮತ್ತು ಅದಕ್ಕಾಗಿ ದಾನಿಗಳಿಂದ ಹಣ ಸಂಗ್ರಹಿಸುವ ಬೃಹತ್ ಯೋಜನೆಗೆ ಆಗ್ರಹಿಸಿ ಬಂದ್.
5) ಮೇ 1. ಇಡೀ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಮನರಂಜನಾ ಉದ್ಯಮದಲ್ಲಿ ಮಾನವೀಯ ಮೌಲ್ಯಗಳ, ನಾಗರಿಕ ತತ್ವಗಳ ನೀತಿ ಸಂಹಿತೆ ಪಾಲಿಸುವಂತೆ ಸ್ವಯಂ ನಿಯಂತ್ರಣ ಮಾಡಿಕೊಳ್ಳಲು ಆತ್ಮಾವಲೋಕನಕ್ಕಾಗಿ ಆಗ್ರಹಿಸಿ ಕರ್ನಾಟಕ ಬಂದ್.
6) ಜೂನ್ 1. ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವಾಗ, ಆಹಾರ ತಯಾರಾದ ನಂತರ ಸಾರ್ವಜನಿಕ ಸಮಾರಂಭಗಳಲ್ಲಿ ಶೇಕಡಾ 25% ಗೂ ಹೆಚ್ಚು ವ್ಯರ್ಥವಾಗುವ ಆಹಾರವನ್ನು ಉಳಿಸಿ ಕೃಷಿ ಮತ್ತು ರೈತರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು " ಆಹಾರ ನೀತಿ ಸಂಹಿತೆ " ಜಾರಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಒಂದು ದಿನ ಇಡೀ ಕರ್ನಾಟಕ ಬಂದ್.
7) ಜುಲೈ 1. ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಧರ್ಮಾಧಿಕಾರಿಗಳು, ವೈದ್ಯರು, ಶಿಕ್ಷಕರು, ವಕೀಲರು, ಪೋಲೀಸರು, ಸಾಹಿತಿಗಳು, ಹೋರಾಟಗಾರರು, ಕಂಟ್ರಾಕ್ಟರ್ ಗಳು, ಲೆಕ್ಕಪರಿಶೋಧಕರು, ಉದ್ಯಮಿಗಳು ಮುಂತಾದವರು ಶ್ರಮದ ಪ್ರಾಮಾಣಿಕ ಹಣ ಹೊರತುಪಡಿಸಿ ಕೆಟ್ಟ, ಭ್ರಷ್ಟ, ವಂಚನೆಯ ಹಣಕಾಸಿನ ವ್ಯವಹಾರಗಳಲ್ಲಿ ಭಾಗವಹಿಸುವುದಿಲ್ಲ, ಅದು ಹೇಸಿಗೆಗೆ ಸಮ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಪ್ರಾಮಾಣಿಕ ದುಡಿಮೆಗೆ ಮಹತ್ವ ನೀಡುತ್ತೇವೆ ಎಂಬ ಪರಿವರ್ತನಾ ಪ್ರತಿಜ್ಞಾ ವಿಧಿಗಾಗಿ ಆಗ್ರಹಿಸಿ ಬಂದ್.
8) ಆಗಸ್ಟ್ 1. ದೇಹ ಮತ್ತು ಮನಸ್ಸಿನ ಶುದ್ದೀಕರಣಕ್ಕಾಗಿ ಯೋಗ ಧ್ಯಾನ ಪ್ರಾಣಾಯಾಮ ಜಿಮ್ ಕ್ರೀಡೆ ಯಾವುದಾದರು ಕಸರತ್ತು, ಓದು ಪ್ರವಾಸ ಚರ್ಚೆ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದು, ಸಾಧ್ಯವಾದಷ್ಟು ಅತ್ಯುತ್ತಮ ಗುಣಮಟ್ಟದ ಆರೋಗ್ಯಕರ ಆಹಾರ ಸೇವಿಸುವುದು, ಉಳಿತಾಯ ಮಾಡಲು ಸಾಧ್ಯವಾಗಬಹುದಾದ ಹಣ ಮತ್ತು ಸಮಯವನ್ನು ಸಾರ್ವಜನಿಕ ಉಪಯೋಗದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಬಂದ್.
9) ಸೆಪ್ಟೆಂಬರ್ 1. ನಮ್ಮ ಸಮಾಜದ ಶಾಪವಾಗಿರುವ ಜಾತಿ ಪದ್ದತಿಯನ್ನು ಸಂಪೂರ್ಣ ಖಾಸಗೀಕರಣಗೊಳಿಸಿ ವೈಯಕ್ತಿಕ ಮಟ್ಟದಲ್ಲಿ ಕನಿಷ್ಠ ಪ್ರಮಾಣದಲ್ಲಿ ಆಚರಿಸಿ ಸಾರ್ವಜನಿಕವಾಗಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬಂತೆ ಯಾವುದೇ ಜಾತಿ ಬೇದ ಮಾಡದೆ ಯಾವುದೇ ಸಾರ್ವಜನಿಕ ಪ್ರದೇಶಗಳಿಗೆ ಯಾರನ್ನೂ ನಿಷೇಧಿಸದೆ, ಎಲ್ಲಾ ಹಬ್ಬಗಳನ್ನು ಎಲ್ಲರೊಟ್ಟಿಗೆ ಆಚರಿಸುವ, ಯಾರು ಯಾವುದೇ ಆಹಾರವನ್ನು ಅವರವರ ಇಚ್ಛೆಗೆ ಅನುಸಾರವಾಗಿ ಸೇವಿಸುವ ಸ್ವಾತಂತ್ರ್ಯ ಗೌರವಿಸುತ್ತಾ ಬದುಕುವ ಜೀವನ ವಿಧಾನ ಅಳವಡಿಸಿಕೊಳ್ಳುವ ಜಾಗೃತ ಮನಸ್ಥಿತಿಯ ನಿರ್ಮಾಣಕ್ಕಾಗಿ ಕರ್ನಾಟಕ ಬಂದ್.
10) ಅಕ್ಟೋಬರ್ 1. ಜಾಗತೀಕರಣದ ನಂತರ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ಜೀವನಶೈಲಿ ಕೃತಕ, ಆಡಂಬರ, ಅಸಹಜವಾಗಿದೆ. ಮನುಷ್ಯ ಸಂಬಂಧಗಳು ಶಿಥಿಲವಾಗಿದೆ. ಕೊಳ್ಳುಬಾಕ ಸಂಸ್ಕೃತಿಯು ನಮ್ಮನ್ನು ಆವರಿಸಿದೆ. ಹಣ ಕೇಂದ್ರೀಕೃತ ಚಿಂತನಾ ಲಹರಿ ನಮ್ಮಲ್ಲಿ ಅಸಹನೆ ಹೆಚ್ಚಿಸಿದೆ. ಈಗ ಮತ್ತೆ ಸರಳ, ಸುಂದರ ಮತ್ತು ಸ್ವಾಭಾವಿಕ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ನಮ್ಮ ನಿಜವಾದ ಸಂಸ್ಕೃತಿ ಉಳಿಯಲು ಸಾಧ್ಯ. ಅದರ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಪುನಶ್ಚೇತನ ಉಂಟುಮಾಡಲು ಕರ್ನಾಟಕ ಬಂದ್.
11) ನವೆಂಬರ್ 1. ತಾಯಿ ಭಾಷೆಯ ಉಳಿವಿಗಾಗಿ ನಮ್ಮ ನಡೆ ನುಡಿ ಎಲ್ಲವನ್ನೂ ಕನ್ನಡೀಕರಣಗೊಳಿಸುವ, ಕನ್ನಡ ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ, ಕನ್ನಡ ಸಂಸ್ಕೃತಿಯನ್ನು ದೇಸೀಕರಣಗೊಳಿಸುವ, ಆಡಳಿತದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಡುವ, ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ಕೊಡುವ ಆಡಳಿತಾತ್ಮಕ ನಿರ್ಧಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸುವ ಕರ್ನಾಟಕ ಬಂದ್.
12) ಡಿಸೆಂಬರ್ 1. ಮೇಲಿನ ಎಲ್ಲಾ ಬಂದ್ ಗಳು ವಾಸ್ತವ ನೆಲೆಯಲ್ಲಿ ಹೇಗೆ ಪ್ರಾಯೋಗಿಕವಾಗಿ ಆಚರಣೆಗೆ ಬಂದಿವೆ, ಯಾವ ಬೇಡಿಕೆಗಳು ಈಡೇರಿವೆ, ಯಾವ ಬೇಡಿಕೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು, ಯಾವ ಹೊಸ ಬೇಡಿಕೆಗಳನ್ನು ಮಂಡಿಸಬೇಕು ಹೀಗೆ ಬಂದ್ ಗಳ ಫಲಿತಾಂಶಗಳನ್ನೇ ಆತ್ಮಾವಲೋಕನಕ್ಕೆ ಒಳಪಡಿಸುವ ವರ್ಷದ ಕೊನೆಯ ಕರ್ನಾಟಕ ಬಂದ್.
ವರ್ಷದ 365 ದಿನಗಳಲ್ಲಿ ಕೇವಲ 12 ದಿನ ಈ ರೀತಿಯ ಬಂದ್ ಆಚರಿಸಿದರೆ ನಿಜಕ್ಕೂ ಜನರ ಜೀವನಮಟ್ಟ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ. ಬಂದ್ ಗಳು ನಷ್ಟವನ್ನು ಮೀರಿ ಲಾಭಗಳಿಕೆಯಾಗಿ ಮಾರ್ಪಡುತ್ತದೆ. ಶಾಂತಿಯುತ ಬಂದ್ ಆದ ಕಾರಣ ಹೆಚ್ಚಿನ ಪೋಲೀಸರು ಅವಶ್ಯಕತೆಯೂ ಇರುವುದಿಲ್ಲ. ಕೆರೆ ಕಟ್ಟೆಗಳನ್ನು ಪುನರುಜ್ಜೀವನಗೊಳಿಸಿದರೆ ಬಹುತೇಕ ನಮ್ಮ ಸ್ಥಳೀಯ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಬಂದ್ ಮಾಡುವ ಮತ್ತು ಮಾಡಿಸುವ ಸಾಮರ್ಥ್ಯ ಇರುವವರು ಈ ಬಗ್ಗೆ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ...
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ