ಈ ವ್ಯಕ್ತಿಯ ಬದುಕು ತೆರೆದ ಪುಸ್ತಕ!

ಈ ವ್ಯಕ್ತಿಯ ಬದುಕು ತೆರೆದ ಪುಸ್ತಕ!

ಬರಹ

(ಇ-ಲೋಕ-24)(28/5/2007)

ಅಮೆರಿಕಾದ ಗೂಢಚಾರ ಸಂಸ್ಥೆ ಎಫ್‍ಬಿಐಯ ಗುಮಾನಿಗೊಳಗಾದ ಹಸನ್ ಇಲಾಹಿ, ತನ್ನ ಜೀವನದ ಕ್ಷಣ-ಕ್ಷಣವನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರಿಗೆ ಬಯಲಾಗಿಸುವ ನಿರ್ಧಾರ ತೆಗೆದುಕೊಂಡ. ಇದು ಐದು ವರ್ಷದ ಹಿಂದಿನಂದಲೇ ನಡೆದು ಬಂದಿದೆ. ಬಾಂಗ್ಲಾ ಸಂಜಾತ ಹಸನ್ ಇಲಾಹಿ ವೃತ್ತಿಯಿಂದ ಕಾಲೇಜು ಪ್ರೊಫೆಸರ್. ಎರಡು ಸಾವಿರದ ಎರಡನೆಯ ಇಸವಿಯಲ್ಲಿ ಆತ ಡೆನ್ಮಾರ್ಕ್‍ನಿಂದ ಡೇಟ್ರಾಯಿಟ್‍ಗೆ ಪ್ರಯಾಣಿಸುತ್ತಿದ್ದಾಗ, ಭಯೋತ್ಪಾದಕನೆಂಬ ಸಂಶಯದಲ್ಲಿ ಆತನನ್ನು ಬಂಧಿಸಲಾಯಿತು. ತಾನು ನಿರಪರಾಧಿಯೆಂದು ಸಾಧಿಸ ಬೇಕಾದರೆ, ಅತನಿಗೆ ಕುತ್ತಿಗೆಗೆ ಬಂತು. ಆಮೇಲೆಯೂ ಆತನು ಗುಮಾನಿಯ ಮೇಲೆ ಬಂಧನಕ್ಕೀಡಾದ. ಅವನ ಅದೃಷ್ಟ, ಅಧಿಕಾರಿಗಳಿಗೆ ಅವನು ತಪ್ಪಿತಸ್ಥನಲ್ಲ ಎಂದು ಬೇಗನೇ ಮನವರಿಕೆಯಾಯಿತು. ಆಗಲೆ ಹಸನ್ ತನ್ನ ಜೀವನವನ್ನು ಬಟಾಬಯಲಾಗಿಸುವ ತೀರ್ಮಾನಕ್ಕೆ ಬಂದ. ಬದುಕಿನ ಖಾಸಗಿ ಕ್ಷಣವನ್ನು ತ್ಯಾಗ ಮಾಡುವ ಮೂಲಕ ತಾನು ಭಯೋತ್ಪಾದಕನೆಂಬ ಗುಮಾನಿಗೊಳಗಾಗುವುದನ್ನು ಆತ ತಪ್ಪಿಸಿಕೊಂಡ. ಈಗ ಆತ ಎಚ್ಚರವಾಗಿರುವಾಗ ಎಲ್ಲಿದ್ದಾನೆ ಅನ್ನುವುದನ್ನು ಜಿಪಿಎಸ್ ಸಾಧನವೊಂದು ಅಂತರ್ಜಾಲ ಪುಟ TrackingTransience.netದಲ್ಲಿ ಪ್ರದರ್ಶಿಸುತ್ತಿರುತ್ತದೆ. ಅತ ತನ್ನ ಮೊಬೈಲ್ ಫೋನಿನ ಮೂಲಕ ತೆಗೆದ ಚಿತ್ರಗಳನ್ನು ಅಂತರ್ಜಾಲ ತಾಣದಲ್ಲಿ ಆಗಾಗ ಹಾಕುತ್ತಾ, ತನ್ನ ಬದುಕಿನ ಪ್ರತಿ ವಿವರಗಳನ್ನೂ ಸಾರ್ವಜನಿಕಗೊಳಿಸುತ್ತನೆ. ಹಸನ್ ಇಲಾಹಿಯ ಪ್ರತಿ ಏಟಿಎಂ ಅಥವಾ ಕ್ರೆಡಿಟ್ ಕಾರ್ಡ್ ಬಳಕೆಯ ವಿವರವೂ ತಾಣದಲ್ಲಿ ಸಿಗುತ್ತದೆ. ಅತ ತನ್ನ ಹಣವನ್ನು ಖರ್ಚು ಮಾಡಿದ್ದು ಹೇಗೆ ಎನ್ನುವುದು ಆತನ ಪತ್ನಿಗೆ ಮಾತ್ರಾ ಅಲ್ಲ,ನನಗೂ ನಿಮಗೂ ಸಿಗುತ್ತದೆ.

ಅಮೆರಿಕಾದ ಬಾಡಿಗೆ ಕಾರುಗಳಲ್ಲೂ ಅಂತರ್ಜಾಲ ಲಭ್ಯ!

ಅಮೆರಿಕಾದ ಕಾರು ಬಾಡಿಗೆ ನೀಡುವ ಅವಿಸ್ ಎನ್ನುವ ಕಂಪೆನಿಯು ತನ್ನ ಕಾರುಗಳಲ್ಲಿ ಅಂತರ್ಜಾಲ ಸೇವೆ ಒದಗಿಸುವ ನಿರ್ಧಾರ ಕೈಗೊಂಡಿದೆ.ಯಾವುದಾದರೂ ನಿಸ್ತಂತು ಸಾಧನ ಇದ್ದರೆ, ಅಂತರ್ಜಾಲ ಸೇವೆ ಪಡೆಯಬಹುದು. ಇದಕ್ಕೆ ಕಾರು ಬಾಡಿಗೆಯ ಮೇಲೆ ಹನ್ನೊಂದು ಡಾಲರು ಶುಲ್ಕ ನೀಡಬೇಕಾಗುತ್ತದೆ.

ಪ್ಲಾಸ್ಟಿಕ್‍ಗೆ ನೂರರ ಸಂಭ್ರಮ

ಪರಿಸರಪ್ರಿಯರ ಕೆಂಗಣ್ಣಿಗೆ ಗುರಿಯಾಗಿರುವ ಪ್ಲಾಸ್ಟಿಕ್ ಈಗಾಗಲೇ ನೂರು ವರ್ಷ ಪೂರೈಸಿದೆ ಎನ್ನುವುದು ನಿಮಗೆ ಗೊತ್ತೇ?ಬೆಲ್ಜಿಯನ್-ಅಮೆರಿಕನ್ ವಿಜ್ಞಾನಿ ಲಿಯೋ ಬ್ಯಾಕ್‍ಲ್ಯಾಂಡ್ 1907ರಲ್ಲಿ ಬೇಕಲೈಟ್ ಎನ್ನುವ ಪ್ಲಾಸ್ಟಿಕನ್ನು ತಯಾರಿಸುವುದರೊಂದಿಗೆ ಪ್ಲಾಸ್ಟಿಕ್‍ನ ಬಳಕೆ ಮೊದಲಿಟ್ಟಿತು.ಪಿವಿಸಿ ಎನ್ನುವ ಒಂದು ಬಗೆಯ ಪ್ಲಾಸ್ಟಿಕ್ ಸಂಶೋಧನೆಯಾದ ನಂತರವಂತೂ ಪ್ಲಾಸ್ಟಿಕ್ ಜನಪ್ರಿಯತೆಯ ತುತ್ತ ತುದಿಗೇರಿತು.ಈಗ ಮಗುವಿನ ಹಾಲಿನ ಬಾಟಲಿನಿಂದ ಹಿಡಿದು,ಬಾಹ್ಯಾಕಾಶ ವಾಹನದ ವರೆಗಿನ ಸರ್ವ ಬಗೆಯ ವಸ್ತುಗಳೂ ಪ್ಲಾಸ್ಟಿಕ್‍ನಿಂದಲೇ ತಯಾರಾಗುತ್ತವೆ.ಪೆಟ್ರೋಲಿಯಮ್ ಮೂಲದ ಪ್ಲಾಸ್ಟಿಕ್, ಮಣ್ಣಿನಲ್ಲಿ ಕೊಳೆಯದೆ, ಪರಿಸರಕ್ಕೆ ಹಾನಿ ತರುತ್ತದೆ ಎನ್ನುವ ಅಂಶ ಪ್ಲಾಸ್ಟಿಕ್ ವಿರೋಧಿ ಅಲೆ ಎಬ್ಬಿಸಿದೆ. ಅದರೆ ಅದರ ಜನಪ್ರಿಯತೆಗೆ ಯಾವ ಬಗೆಯಲ್ಲೂ ಕುಂದು ಬಂದಿಲ್ಲ. ಬದಲಾಗಿ ಅದು ದಿನೇ ದಿನೇ ಹೆಚ್ಚುತ್ತಿದೆ. ಆದರೆ ಪೆಟ್ರೋಲಿಯಂ ವಸ್ತುಗಳು ಖಾಲಿಯಾದ ಬಳಿಕ ಪ್ಲಾಸ್ಟಿಕ್ ಉತ್ಪಾದಿಸುವುದು ಹೇಗೆ ಎನ್ನುವುದು ಯಕ್ಷಪ್ರಶ್ನೆ. ಲಂಡನ್‍ನ ವಿಜ್ಞಾನ ಮ್ಯೂಸಿಯಂನಲ್ಲೀಗ ಪ್ಲಾಸ್ಟಿಕ್ ಬಗ್ಗೆ ವಸ್ತು ಪ್ರದರ್ಶನ ನಡೆದಿದೆ.

ಜನಪ್ರಿಯ ಶತಶೋಧ ಯಾವುದು?

ಅಂತರ್ಜಾಲದಿಂದ ಮಾಹಿತಿ ಹುಡುಕಿ ಕೊಡುವ ಸೇವೆ ನೀಡುವ ಅಂತರ್ಜಾಲ ತಾಣ ಗೂಗಲ್ ಇದೀಗ ತನ್ನ ಸೇವೆ ಬಳಸಿ ಹೆಚ್ಚು ಜನರು ಏನನ್ನು ಶೋಧಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಇತರರಿಗೆ ಒದಗಿಸಲಿದೆ. ಕಾಮುಕ, ವ್ಯಕ್ತಿಯ ಬಗೆಗಿನ ಶೋಧ, ಹವಾಮಾನ ಮತ್ತು ಜನಪ್ರಿಯ ಅಂತರ್ಜಾಲ ತಾಣದ ವಿಳಾಸ ಹುಡುಕಿ ಮಾಡುವ ಶೋಧಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ.ಈ ಮಾಹಿತಿಯನ್ನು ದಿನಕ್ಕೆ ಹಲವಾರು ಸಲ ನವೀಕರಿಸಲಾಗುತ್ತದೆ. ಹಾಡಿನ ಸಾಲಿನ ಶೋಧ,ಮಕ್ಕಳ ಪರೀಕ್ಷೆ ತಯಾರಿಗೆ ಸಹಾಯಕ್ಕಾಗಿ ನಡೆಸುವ ಶೋಧಗಳು ಶೋಧ ಸೇವೆಯ ಮೊದಲ ಸ್ಥಾನಗಳಿಗೆ ಏರುವುದು ಸಾಮಾನ್ಯವಂತೆ.

ಭೂಗತ ಕೇಬಲ್‍ಗಳ ಪರೀಕ್ಷೆಗೆ ರೊಬೋಟ್

ವಿದೇಶಗಳಲ್ಲಿ ವಿದ್ಯುತ್ ಸರಬರಾಜಿಗೂ ಭೂಗತ ಕೇಬಲ್ ಬಳಕೆ ಹೆಚ್ಚು. ಈ ಕೇಬಲ್‍ಗಳು ಮಳೆಯ ಸಂದರ್ಭಗಳಲ್ಲಿ ನಿರೋಧಕ ವಸ್ತುವಿನ ವೈಫಲ್ಯವನ್ನು ಅನುಭವಿಸಬಹುದು. ಕೇಬಲ್‍ನ ಯಾವುದೋ ಒಂದೆಡೆ ಅತಿಯಾಗಿ ಬಿಸಿಯಾಗುವ ತೊಂದರೆಯೂ ಇರುತ್ತದೆ. ಇಂತಹ ತೊಂದರೆಗಳು ವಿದ್ಯುತ್ ಸರಬರಾಜಿನಲ್ಲಿ ಏರುಪೇರು ಉಂಟು ಮಾಡುವ ಮೊದಲೇ ಪತ್ತೆಯಾಗಬೇಕಾದರೆ, ಕೇಬಲ್ ಪರೀಕ್ಷೆ ನಡೆಸುವ ವಿಧಾನ ಬದಲಾಗಬೇಕು. ವಾಶಿಂಗ್ಟನ್ ವಿಶ್ವವಿದ್ಯಾಲಯದವರು ಇದಕ್ಕಾಗಿ ಸರೀಸೃಪದ ಲಕ್ಷಣವುಳ್ಳ ರೊಬೋಟ್ ಕಂಡುಹಿಡಿದಿದ್ದಾರೆ.ಇದು ಭೂಗತ ಕೇಬಲ್‍ನ ಪೈಪ್‍ನಲ್ಲಿ ತೆವಳಿಕೊಂಡು ಹೋಗಿ, ಇನ್‍ಫ್ರಾರೆಡ್ ಕಿರಣಗಳ ಮೂಲಕ ಶಾಖದ ಬಿಂದುಗಳನ್ನು ಕಂಡು ಹಿಡಿಯಬಲ್ಲುದು. ಕಿಡಿ ಬರುವ ಶಬ್ದವನ್ನಾಲಿಸಿ, ನಿರೋಧಕ ವಸ್ತುವಿನ ವೈಫಲ್ಯವನ್ನು ಕಂಡುಕೊಳ್ಳಬಲ್ಲುದು. ವಿಡಿಯೊ ಚಿತ್ರವನ್ನು ರವಾನಿಸಿ, ಕೇಬಲ್ ಜಾಲದ ಸ್ಥಿತಿಯನ್ನು ಹೊರಜಗತ್ತಿಗೆ ಅರುಹಬಲ್ಲುದು.ಈಗಾಗಲೇ ನಗರಗಳಲ್ಲಿ ಇದರ ಬಳಕೆ ಆರಂಭವಾಗಿದೆ.
*ಅಶೋಕ್‍ಕುಮಾರ್ ಎ