ಈ ಸಂಭಾಷಣೆ ... ಮಾಲ್’ನಲ್ಲಿ ಸಂಭಾಷಣೆ !

ಈ ಸಂಭಾಷಣೆ ... ಮಾಲ್’ನಲ್ಲಿ ಸಂಭಾಷಣೆ !

"ಏ!, why are you rushing me?  ನೀ ಬಟ್ಟೆ ನೋಡ್ತಿರು. ಕೆಳಗಿನ ಫ್ಲೋರ್’ನಲ್ಲಿರೋ ಜ್ಯುವಲರಿ ಅಂಗಡೀಗೆ ರಶ್ಮಿ ಬಂದಾಳಂತೆ ನೋಡಿ ಬರ್ತೀನಿ."

"ರಶ್ಮಿ ಬಂದಾಳೆ ಅಂತಾನೆ ನಾ ರಷ್ ಮಾಡ್ತಿರೋದು. ಹೋಗೋಣ"

"ಓ! ನಿನಗೂ ಅವಳನ್ನ ನೋಡೋದ್ ಇದೆಯಾ?"

"ಇಲ್ಲಾ, ನಾ ಹೋಗೋಣ ಅಂತ ರಷ್ ಮಾಡ್ತಿರೋದು ಮನೀಗೆ ಹೋಗೋಣ ಅಂತ. ಇಷ್ಟಕ್ಕೂ ನಿಮಗೆ ಅವಳನ್ನ ನೋಡೋದಿದೆ ಇದೆ ಅಂದರೆ ಆಕೆ ನಿಮಗೇನು ಅಪಾಯಿಂಟ್ಮೆಂಟ್ ಕೊಟ್ಟಾಳೇನು? ನೀವ್ ಅಲ್ಲಿ ಹೋಗೋದ್ ಬ್ಯಾಡ"

"ಯಾವ ಆಯಿಂಟ್ಮೆಂಟೂ ಕೊಟ್ಟಿಲ್ಲ ಕಣೆ. ನಾ ನೋಡ್ಲಿಕ್ಕೆ ಹೋದರೆ ಏನಂತೆ? ನೋಡು ಇಲ್ಲಿ ಭಾಳ ರಶ್ ಇದೆ. ನನಗೆ ಉಸಿರು ಕಟ್ತಿದೆ. ನೀ ಇರು. ನಾ ಹಿಂಗ್ ಹೋಗಿ ಹಂಗ್ ಬರ್ತೀನಿ"

"ಓಹೋ! ನಿಮಗೆ ಇಲ್ಲಿ ರಶ್ ಇದೆ ಅನ್ನಿಸ್ತದೆ. ರಶ್ಮೀ’ನ್ನ ನೋಡ್ಲಿಕ್ಕೆ ರಶ್ ಇರೋಲ್ಲಾ, ಅಲ್ವಾ? ನೀವು ಹೋಗೋ ಹಾಗೆ ಇಲ್ಲ, ಅಷ್ಟೇ!"

"ನೋಡು ನಿನಗೇನು ಅನುಮಾನ ಬ್ಯಾಡ, ಆಯ್ತಾ. ನಾ ಹಂಗೆಲ್ಲ ಯಾರ ಬುಟ್ಟೀಗೂ ಬೀಳೋಲ್ಲ. ಸರೀನಾ?"

"ಅಬ್ಬಬ್ಬ! ಏನ್ ಮಾತು? ನಿಮ್ಮನ್ನ ಬುಟ್ಟೀಲಿ ಇಟ್ಕೊಳ್ಳೋಕ್ಕೆ ನೀವೇನು ಹೂವಾ? ಹಣ್ಣಾ? ಒಣಕಲ್ ನುಗ್ಗೇಕಾಯಿ ಇದ್ದಂಗೆ ಇದ್ದೀರ. ಅದೂ ಅಲ್ದೇ ಆಕೆ ಮಾಲ್ ಶಾಪಿಂಗ್’ಗೆ ಬುಟ್ಟೀ ತರ್ತಾಳೇ ಅಂದುಕೊಂಡ್ರಾ? ಆಕೆ ಬಂದಿರೋದು ಟೇಪ್ ಕತ್ತರಿಸಲಿಕ್ಕೆ. ನೀವು ಆ ರಶ್’ನಾಗೆ ಆಕೀನ್ನ ಬಾಯ್ ಬಾಯ್ ಬಿಟ್ಕೊಂತ ನೋಡ್ತಿರೋವಾಗ ನಿಮ್ ಜೇಬು ಯಾರಾದ್ರೂ ಕತ್ತರಿಯಾರು !"

"ಹಂಗೆಲ್ಲ ಆಗಲ್ಲ ಬಿಡು. ನಾ ಭಾಳ ಹುಷಾರು, ಆಯ್ತಾ. ನಾನು ನನ್ನ ಕೈನ ಜೇಬಿನಲ್ಲೇ ಇಟ್ಕೊಂಡಿರ್ತೀನಿ. ಗೊತ್ತಾ?"

"ಜೇಬು ಕತ್ತರಿಸೋವಾಗ ಕೈ ಅಡ್ಡ ಬಂತು ಅಂತ ಕೈಯೇ ಕತ್ತರಿಸೋ ಜನ ಈಗ. ಬ್ಯಾಡಪ್ಪಾ ಬ್ಯಾಡ. ಹೋದ್ ತಿಂಗಳು ಆ ಪುಷ್ಪ ಬಂದಳೂ ಅಂತ ನೋಡ್ಲಿಕ್ಕೆ ಬಂದ್ರಿ. ಯಾರೋ ನಿಮ್ಮನ್ನ ಪುಶ್ ಮಾಡಿದ್ದಕೆ ತಾವು ಆಕೆ ಪಾದದ ಮೇಲೆ ಪುಸಕ್ಕಂತ ಬಿದ್ರಿ. ಅದನ್ನ ಯಾರೋ ಫೋಟೋ ಹಿಡಿದು ಫೇಸ್ಬುಕ್’ನಾಗೆ ಹಾಕಿದ್ರು. ಆಗ್ಲೇ ಮರೆತುಹೋಯಾ?"

"ಈ ಸಾರಿ ಹಂಗಾಗಲ್ಲ ಬಿಡು. ಆಕೆ ಪುಶ್’ಉ, ಈಕೆ ರಶ್’ಉ"

"ಅಯ್ಯೋ ಪಾಪ! ಇರೋದೇ ಮೋಟುದ್ದ ಹೆಸರು. ಅದನ್ನ ಬೇರೆ ತುಂಡು. ಆಯಮ್ಮಂದಿರ ಲಂಗದ ಥರ ! ಪೂರ್ತಿ ಹೆಸರು ಹೇಳಿಬಿಟ್ರೆ ನಾಜೂಕು ದೇಹ ನಲುಗಿಹೋಗುತ್ತೇನೋ? ಅಲ್ಲಾ, ಈ ಮಾಲ್’ನಲ್ಲಿರೋ ಅಂಗಡಿಯವರಿಗೂ ಬೇರೆ ಕೆಲ್ಸ ಇಲ್ಲ ಅನ್ನಿಸುತ್ತೆ. ಹೊಸಾ ಬ್ರ್ಯಾಂಡ್ ಬಂದಾಗೆಲ್ಲ ಯಾರನ್ನಾದ್ರೂ ಕರಿಸ್ತಾರೆ. ನೀವು ದಂಬಾಲು ಬಿದ್ಗೊಂಡ್ ಹೋಗಿ ಏನೋ ಅನಾಹುತ ಮಾಡ್ಕೊಂಡ್ ಬರೋದು. ಬ್ಯಾಡ, ಬರ್ರಿ ಹೋಗೋಣ"

"ಏನೋ, ಒಂದು ಸಾರಿ ಹಾಗಾಯ್ತು ಅಂತ ನೀನು ಹೀಗೆ ಹೇಳೋದಾ?"

"ಒಂದು ಸಾರೀ? ಕಳೆದ ವರ್ಷ ಆ ’ಹರಿಕುಮಾರ್’ ಬಂದಾಗ ಏನಾಯ್ತು ಹೇಳಿ? ಬೆಳಿಗ್ಗೇ ಬೆಳಿಗ್ಗೆ ಎದ್ದು ಹರಿಬರಿ ಮಾಡ್ಕೊಂಡು ಅಲ್ಲಿಗೆ ಹೋಗಿ ನೂಕುನುಗ್ಗಲಲ್ಲಿ ಅವನ ಆಟೋಗ್ರ್ಯಾಫ್ ತೊಗೊಂಡು ಮನೆಗೆ ಬರೋಷ್ಟರಲ್ಲಿ ಮೈಮೇಲಿನ ಬಟ್ಟೆ ಹರ್ಕೊಂಡ್ ಬಂದಿದ್ರಿ. ಅವನ ಸಹಿ ನಿಮಗ್ಯಾಕ್ಕೆ ಬೇಕಿತ್ತು? ಉಪ್ಪಾರ್ ಪೇಟೆ ಪೋಲೀಸ್ ಸ್ಟೇಷನ್’ಗೆ ಹೋದ್ರೆ ಅಲ್ಲೇ ಸಿಗುತ್ತೆ. ಅವನು ಅಲ್ಲಿಗೆ ದಿನಾ ಹೋಗಿ ಸಹಿ ಹಾಕಬೇಕಂತೆ. ನೀವು ಅಲ್ಲಿಗೇ ಹೋಗಿ ನಿಮ್ ಬುಕ್ ಹಿಡಿದ್ರೆ ಮಾಡಲ್ಲ ಅಂತಾನಾ?"

"ಛೇ! ಛೇ!! ಅವನು ಅಂಥಾವ್ನಲ್ಲ. ಇದೆಲ್ಲ ರಾಜಕೀಯ. ನಿನಗೆ ಅರ್ಥ ಆಗಲ್ಲ"

"ಅವನ ಮೇಲ್ ಕೇಸ್ ಇರೋದೇ ಹೆಂಡತಿಗೆ ಬೀದೀಲಿ ಬಡಿದ ಅಂತ. ಈಗ ನೋಡಿದ್ರೆ ಆಕೆಗೆ ಮೈಸರಿ ಇಲ್ಲ ಅಂತ ಯಾವಾಗ್ಲೂ ಹೊರಗೇ ಇರ್ತಾನೆ. ನನಗೆ ಮೈ ಸರಿ ಇಲ್ಲ ಅಂದ್ರೆ ನಿಮಗೆ ಆಫೀಸ್’ನಿಂದ ಬರೋಕ್ಕೆ ಆಗಲ್ಲ. ಅವನನ್ನ ನೋಡಿ, ಜೈಲಿನಿಂದ ಬರ್ತಾನೆ. ನಿಮ್ ಹೀರೋ’ನಿಂದ ಅದನ್ನಾದರೂ ಕಲೀರಿ"

"ಮೆಲ್ಲಗೆ ಮಾತಾಡು ಮಾರಾಯ್ತೀ. ಎಲ್ಲ ಕಡೆ ಅವನ ಚೇಲಾಗಳು ಇರ್ತಾರೆ. ಆಮೇಲೆ ನಿನ್ ಹಿಡ್ಕೊಂಡು ಬಡಿದಾರು. ಈಗ ನಾ ಹೋಗ್ಲಾ? ಬ್ಯಾಡ್ವಾ?"

"ನಾನೇನು ಜಿರಳೇನಾ ಪರಕೇಲಿ ಬಡಿದು ಹಾಕ್ದಂಗೆ ಬಡಿಯೋಕ್ಕೆ? ನೀವು ಆಕೆ ಫ್ಯಾನು ಅಂತ ಗೊತ್ತು. ಆದ್ರೆ ಹೋಗೋದ್ ಬ್ಯಾಡ. ಸುಮ್ನೆ ಗಲಾಟೆ."

"ಅಯ್ಯೋ! ನೀನು ಈ ಎಲೆಕ್ಷನ್ ಟೈಮಿನಾಗೆ ಅದೂ ಪಬ್ಲಿಕ್ ಜಾಗದಲ್ಲಿ ಪೊರಕೆ, ಫ್ಯಾನು ಅಂತೆಲ್ಲ ವಿಷಯ ತೆಗೀಬ್ಯಾಡ ಅಂತ ಹೇಳ್ಲಿಲ್ವಾ?"

"ಪೊರಕೆ ಅಂತ ಸಿಂಬಲ್ ಇಟ್ಕೊಂಡಾಗಲೇ ಅವರಿಗೆ ಅರ್ಥವಾಗಿರಬೇಕಿತ್ತು. ಪೊರಕೇ ಉಪಯೋಗಕ್ಕೆ ಬರಬೇಕಂದ್ರೆ ಕೈ ಬೇಕೇ ಬೇಕು ಅಂತ"

"ಅಯ್ಯೋ, ಅದನ್ನ ಅಲ್ಲೇ ಬಿಡು. ಕೈ’ಯಿ, ಕೈಕೇಯಿ, ಹೂವು, ಫ್ಯಾನು, ಪೊರಕೆ ಎಲ್ಲ ಆಮೇಲೆ. ಈಗ ನಾ ವಿಷಯಕ್ಕೆ ಬಾ. ಹೋಗ್ಲಾ ಬೇಡ್ವಾ. ನನಗ್ಯಾಕೆ ಇಷ್ಟು ಇಂಟ್ರಸ್ಟು ಅಂತ ನಿನಗೆ ಗೊತ್ತಿಲ್ವಾ? ನನಗೆ ಮೊದಲಿಂದಾನೂ ಸಿನಿಮಾ ನಂಟಿದೆ. ಆಗ ಹೂವು-ಹಣ್ಣು ಸಿನಿಮಾಕ್ಕೆ ನನ್ನನ್ನ ಕೇಳಿದ್ರು, ಗೊತ್ತಾ?"

"ಓಹೋ! ಏನು ದುಡ್ಡು ಹಾಕಿ ಅಂತಾನಾ?"

"ಏ! ಏನ್ ಹಾಗಂತೀ? ಹೀರೋ ಪಾರ್ಟ್’ಗೆ’

"ಈಗ್ಲೂ ನೀವೇನು ಕಮ್ಮಿ ಇಲ್ಲ.  ದೇವಾನಂದ್ ಥರಾನೇ ಇದ್ದೀರಾ. ಅದ್ಕೇ ಹೇಳಿದ್ದು ಆ ರಶ್ಮೀ’ನ್ನ ನೋಡೋಕ್ಕೆ ಹೋಗಬೇಡಿ ಅಂತ"

"ನಿಂಗೆ ಹೊಟ್ಟೆಕಿಚ್ಚು ಕಣೇ"

"ನಾ ಹೇಳಿದ್ದು ಈಗ್ಲೂ ನೀವು ದೇವಾನಂದ್ ಇದ್ದ ಹಾಗೇ ಇದ್ದೀರಾ ಅಂದ್ರೆ ಆತ ಇದ್ದಿದ್ರೆ ಇಬ್ಬರೂ ಒಂದೇ ಥರಾ ಕಾಣ್ತಿದ್ರೀ ಅಂತ"

"ಏನು ಹಾಗಂದ್ರೇ?"

"ಈಗ ದೇವಾನಂದ ಇದ್ದಿದ್ರೆ, ನೀವು ಅವನ ಹಾಗೇ ಕಾಣ್ತಿದ್ರೀ ಅಂತ. ರಶ್ಮಿ ನಿಮ್ಮನ್ನ ನೋಡಿದ್ರೆ ಅಪ್ಪನ ಪಾರ್ಟ್’ಗೆ ಕೇಳಬಹುದು. ಆಗ ನನ್ ಇಮೇಜ್ ಹಾಳಾಗತ್ತೆ ಅಂದೆ"

"ಇದು ಅತೀ ಆಯ್ತು ನೋಡು. ಕೊನೇ ಸಾರಿ ಕೇಳ್ತಿದ್ದೀನಿ. ಈಗ ನಾ ಆಕೀನ್ನ ನೋಡಿ ಬರ್ಲಾ? ಬೇಡ್ವಾ?"

"ಸರಿ. ಈಗ ಆಕೇನ್ನ ನೋಡ್ತೀರಿ ಅಂತ ಇಟ್ಕೊಳ್ಳಿ. ಆಮೇಲೇನ್ ಮಾಡ್ತೀರಿ?"

"ಮಾಡೋದೇನು? ಹೇಳಿದ್ನಲ್ಲ ’ಬರ್ತೀನಿ’ ಅಂತ. ನೋಡಿ ಬರ್ತೀನಿ ಅಷ್ಟೇ"

"ಅಂದರೆ, ನೀವು ನೋಡಿ ಬಂದ್ರೂ, ನೋಡದೇ ಹಾಗೇ ಹೋದ್ರೂ ಎರಡೂ ಒಂದೇ ಅಲ್ವಾ? ನೀವು ಆಕೀನ್ನ ನೋಡ್ಲೇಬೇಕಾ?"

"ಸುಮ್ನೆ ಕುತೂಹಲಕ್ಕೆ ನೋಡೋಣ ಅಂತ, ಅಷ್ಟೇ!"

"ನೀವು ಬೆಳದಿಂಗಳ ಬಾಲೆ ಸಿನಿಮಾ ನೋಡಿದ್ದೀರೇನು?"

"ನೋಡೀನಿ! ಅಂದ್ರೆ ಎದುರಿಗೆ ನೋಡ್ಲಿಕ್ಕೆ ರಶ್ಮಿ ಅಷ್ಟು ಚೆಂದ ಇದ್ದಾಳಾ?"

"ಹಂಗಲ್ಲ ನಾ ಹೇಳಿದ್ದು ! ನಿಮ್ ಕಲ್ಪನೆಯಲ್ಲಿ ಯಾವ ರೀತಿ ಇದ್ದಾಳೋ ಆ ರಶ್ಮಿ’ನ್ನ ಹಾಗೇ ಬಿಡಿ. ಎದುರಿಗೆ ನೋಡಿದರೆ ನಿಮ್ ಭಾವನೆ ಬದಲಾಗಬಹುದು ಅಂತ"

"ಒಟ್ಟು, ನಾನು ಆಕೇನ್ನ ನೋಡೋ ಹಾಗಿಲ್ಲ ಇವತ್ತು. ಹೋಗ್ಲಿ ಬಿಡು, ಅವಳಿಗೇ ಪುಣ್ಯ ಇಲ್ಲ. ನಡಿ ಹೋಗೋಣ. ಅಂದ ಹಾಗೆ . ಈಗ ಟಿಂಗು ಟಿಂಗು ಅಂತ ಹೋಯ್ತಲ್ಲ ಹುಡುಗಿ, ಹಾಗೇ ಇರ್ತಾಳಾ ರಶ್ಮಿ?"

"ಎಲ್ಲಿ? ಯಾವ ಟಿಂಗು ಟಿಂಗು?"

"ಅದೇ ಅಲ್ಲಿ"

"ಓ! ಅದಾ. ನಂ ಹಿಂದಿನ ಬೀದಿಗೆ ಬಂದಿದ್ದಾರಲ್ಲ ರಮ್ಯಾ ಅಂತ "

"ಓ! ಆ ಹೆಣ್ಣು ರಮ್ಯಾ’ನಾ?"

"ಅಲ್ಲಾ! ಅದು ರಮ್ಯಾ ಅವರ ಅಜ್ಜಿ. ನಡೀರಿ. ಯಾರಾದ್ರೂ ಟಿಂಗು ಟಿಂಗು ಅಂತ ಹೋಗ್ಲಿ. ನೀವ್ಯಾಕೆ ತಲೆ ಎತ್ಕೊಂಡ್ ಅವರನ್ನೇ ಪೆಂಗು ಪೆಂಗಾಗಿ ನೋಡ್ತೀರಾ?

"ತಲೆ ಎತ್ತಿ ಬಾಳಬೇಕು ಅಂತ ಹಿರಿಯರು ಹೇಳಿದ್ದಾರೆ ಅಲ್ವೋ? ಅದ್ಕೇ"

"ಹಾಗಿದ್ರೆ, ನಮ್ ಮದುವೇಲಿ ಕುರಿ ಹಂಗ ತಲೀ ಬಗ್ಗಿಸಿದ್ದು ಯಾಕೆ?"

"ಬಲಿ ಕೊಡೋ ಹಂಗ ಹಾರ ಹಾಕಿದ್ರಲ್ಲ, ಅದು ಭಾರ ಇತ್ತು. ಅದಕ್ಕೆ"

"ಇದಂತೂ ಸಕತ್ ಬಿಳೀ ಸುಳ್ಳು. ಇರಲಿ, ಸುಮ್ ಸುಮ್ನೆ ಯಾಕೆ ಎಲ್ರನ್ನೂ ಹಂಗ್ ನೋಡ್ಕೊಂಡ್ ಹೋಗೋದು?"

"ಅಯ್ಯೋ ಮಾರಾಯ್ತೀ ! ನಾನೆಂತ ಮಾಡ್ಲೀ? ಏಲ್ರೂ ಗಗನಸಖಿಯರೇ ! ಎರಡು ಪಾದಕ್ಕೆ ಅಷ್ಟೆತ್ರ ಹೀಲ್ಸ್ ಹಾಕಿದ್ರೆ ನಾನೇನ್ ಮಾಡ್ಲಿ? ತಲೀ ಎತ್ತಿ ತಾನೇ ನೋಡ್ಬೇಕು?"

"ಅವರೆಲ್ಲ ಕನ್ಯಾ ರಾಶಿ ಎರಡೂ ಪಾದ ಇರಬೇಕು ಅದಕ್ಕೆ ! ಇಷ್ಟಕ್ಕೂ ನೀವ್ಯಾಕೆ ನೋಡಬೇಕೂ ಅಂತೀನಿ. ಪಕ್ಕದಲ್ಲಿ ನಾನಿಲ್ಲೇನು?"

"ಮತ್ತೆ ಎಂಥ ಮಾತಾಡ್ತೀಯಾ? ಅಲ್ಲಾ, ಈ ಮಾಲ್’ನಲ್ಲಿ ಇಷ್ಟು ರಶ್’ನಲ್ಲಿ ನಾ ನಿನ್ನೆ ನೋಡ್ಕೊಂತ ಮುಂದೆ ಹೋಗ್ತಿದ್ರೆ ಈ ಹೀಲ್ಸ್ ಹೆಂಗಳು ನನ್ ತುಳಿದುಬಿಟ್ರೆ? ಅದ್ಕೇ ಅವರನ್ನ ನೋಡ್ಕೊಂಡು ಹೋಗೋದು!"

"ಓ! ಹಂಗೆ !! ನೀವು ನೋಡ್ಲಿಲ್ಲ ಅಂದ್ರೆ ಅವರು ಮಾಡ್ಕೊಂಡಿರೋ ಅಲಂಕಾರ ವೇಸ್ಟ್ ಆಗತ್ತೆ ಅಂತ"

"ಇರಲಿ, ಹಂಗೂ ಅಂದುಕೋ"

"ಅಲ್ಲಾ, ನೀವೇನು ಲೋಕಕಲ್ಯಾಣಕ್ಕೆ ಹುಟ್ಟಿದ್ದೀರೋ? ಮೊದಲು ಕಲ್ಯಾಣ ಮಾಡ್ಕೊಂಡಿರೋ ನನ್ ನೋಡ್ಕೊಳ್ಳಿ ಸಾಕು. ನನ್ ಜೋಡೀ ಕಲ್ಯಾಣ ಆಗಿರೋದೇ ದೊಡ್ ವಿಷ್ಯ"

"ಛೇ! ಛೇ!! ಎಂಥ ಮಾತಾಡ್ತೀ ನೀನು? ನಾನೇನು ಕಂಡ ಕಂಡ ಹೆಂಗಳನ್ನೆಲ್ಲ ನೋಡ್ತೀನಾ?"

"ಇಲ್ಲಪ್ಪಾ! ನಾನೆಲ್ಲಿ ಹಂಗಂದೆ. ನನಗೆ ಗೊತ್ತು ನೀವು ಭಾಳಾ ಸೆಲೆಕ್ಟೀವ್ ಅಂತ. ನನ್ನೊಬ್ಬಳನ್ನು ಬಿಟ್ಟು ಮಿಕ್ಕೆಲ್ಲರನ್ನ ನೋಡ್ತೀರಾ. ಈಗ ರಮ್ಯಳ ಅಜ್ಜೀ’ನ್ನ ನೋಡಿದ ಹಾಗೆ"

"ಇದ್ ಬದ್ ಮಾನ ಎಲ್ಲ ಹರಾಜು ಹಾಕಿಬಿಟ್ಟೀ ಮಾರಾಯ್ತೀ ಮಾಲ್’ನಲ್ಲಿ ನೀನು. ಈಗ ಮನೆಗೆ ಹೋಗೋಣ ನಡಿ’

"ಸದ್ಯ ನಡೀರಿ ಹೋಗೋಣ ... ಅಂದ ಹಾಗೆ ರಶ್ಮೀ’ನ್ನ ನೋಡೋಲ್ವೇನು?"

Comments