ಈ ಸಮಾಜದ ನಿಜವಾದ ಬಹುಸಂಖ್ಯಾತರು ಸಾಮಾನ್ಯ ಜನರು…!
ಪ್ರತಿಭಟನೆಗಳು - ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ ಪ್ರೊಫೆಸರ್ ಎಂ ಡಿ ನಂಜುಂಡ ಸ್ವಾಮಿಯವರನ್ನು ಅವರ ಹುಟ್ಟು ಹಬ್ಬದ ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ....ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ ಹೆಸರು ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರದು. ರೈತ ಹೋರಾಟಕ್ಕೆ ತನ್ನ ಸಮಕಾಲೀನರ ಜೊತೆ ಸೇರಿ ಸಂಘಟನಾತ್ಮಕ ಧ್ವನಿ ನೀಡಿದ ಕೀರ್ತಿ ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ.
ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಎರಡೂ ವರ್ಗಕ್ಕೂ ಒಂದು ರೀತಿಯಲ್ಲಿ ಸಿಂಹ ಸ್ವಪ್ನವಾಗಿದ್ದವರು ಎಂ ಡಿ ಎನ್. ಖಾಸಗೀಕರಣದ ವಿರುದ್ಧ, ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳ ಮಾರುಕಟ್ಟೆ ಪ್ರವೇಶದ ವಿರುದ್ಧ, ಬ್ಯಾಂಕುಗಳು ಸಾಲ ವಸೂಲಾತಿಯ ದೌರ್ಜನ್ಯದ ವಿರುದ್ಧ, ರೈತರ ಅನೇಕ ಬೇಡಿಕೆಗಳ ಪರವಾಗಿ ನಿರಂತರ ಪ್ರತಿಭಟನೆ ಮತ್ತು ಹೋರಾಟ ರೂಪಿಸಲು ಶ್ರಮಿಸಿದವರು ನಂಜುಂಡಸ್ವಾಮಿಯವರು. ಅಲ್ಲಿಯವರೆಗೂ ರೈತರನ್ನು ಬಹಳ ಲಘುವಾಗಿ ಪರಿಗಣಿಸಲಾಗುತ್ತಿತ್ತು. ಅವರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯದ ಮನೋಭಾವ ಪ್ರದರ್ಶಿಸಲಾಗುತ್ತಿತ್ತು. ನಂಜುಂಡ ಸ್ವಾಮಿ ಮತ್ತು ಅವರ ಸಮಕಾಲೀನ ಹೋರಾಟಗಾರರು ರೈತ ಶಕ್ತಿಯ ಮಹತ್ವವನ್ನು ವಿಧಾನಸೌಧಕ್ಕೆ ಮನವರಿಕೆ ಮಾಡಿಕೊಟ್ಟು ಒಂದು ಸಂದರ್ಭದಲ್ಲಿ ವಿಧಾನಸೌದವನ್ನೇ ನಡುಗಿಸಿದ್ದರು.
ಎಪ್ಪತ್ತು ಎಂಬತ್ತರ ದಶಕದ ಕನ್ನಡ ಚಳವಳಿ, ದಲಿತ ಚಳವಳಿ, ಬಂಡಾಯ ಚಳವಳಿ ಸಮಯದಲ್ಲಿಯೇ ರೈತ ಚಳವಳಿ ಸಹ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆಗ ವಿಧಾನಸೌಧದ ಮುಂದಿನ ಕಬ್ಬನ್ ಪಾರ್ಕ್ ನಲ್ಲಿ ಸೇರುತ್ತಿದ್ದ ಲಕ್ಷಾಂತರ ರೈತ ಸಮುದಾಯದ ಜನರ ಹೋರಾಟಗಳು ಈಗಲೂ ಮನಸ್ಸಿನಾಳದಲ್ಲಿ ಕಣ್ಣಿಗೆ ಕಟ್ಟುವಂತೆ ಹಸಿಹಸಿಯಾಗಿದೆ.
ಹಸಿರು ಶಾಲುಗಳು, ಊಟದ ಬುತ್ತಿಗಳು, ಹೋರಾಟದ ಹಾಡುಗಳು, ಆಕ್ರೋಶದ ಆಡಿಯೋ ಕ್ಯಾಸೆಟ್ ಗಳು, ಕೈಯಲ್ಲಿ ಭಿತ್ತಿ ಪತ್ರಗಳು, ಲಾರಿ ಟ್ರ್ಯಾಕ್ಟರು ಎತ್ತಿನ ಗಾಡಿಗಳು, ಸರ್ಕಾರ ವಿರುದ್ಧ ಉಗ್ರ ಭಾಷಣಗಳು ಮಧ್ಯೆ ಪೋಲೀಸರು ಎಲ್ಲವೂ ಯುದ್ಧ ಭೂಮಿಯಂತೆ ಕಾಣುತ್ತಿತ್ತು. ಈ ದೇಶದ ಬೆನ್ನೆಲುಬು ರೈತರು. ಅವರು ಮಹಾನ್ ಸ್ವಾಭಿಮಾನಿಗಳು. ಅವರಿಗೆ ಸಿಗಬೇಕಾದ ಗೌರವ ಮತ್ತು ಸೌಕರ್ಯಗಳನ್ನು ಒದಗಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯ ಎಂದು ಬಲವಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಕೀರ್ತಿ ಅಂದಿನ ರೈತ ನಾಯಕರಿಗೆ ಸಲ್ಲುತ್ತದೆ. ಅದು ಸ್ವಲ್ಪ ಹೆಚ್ಚು ಕಡಿಮೆ ಈಗಲೂ ಅದೇ ಅಭಿಪ್ರಾಯ ಮುಂದುವರಿದಿದೆ.
ಮಹತ್ವಾಕಾಂಕ್ಷಿಯಾಗಿದ್ದ ನಂಜುಂಡ ಸ್ವಾಮಿಯವರು ರಾಜಕೀಯ ಪ್ರವೇಶಿಸಿ ಚುನಾವಣಾ ಅಖಾಡದಲ್ಲಿ ರೈತ ಸಂಘಟನೆಯ ಮುಖಾಂತರ ಅಧಿಕಾರಕ್ಕೇರುವ ಕನಸು ಕಂಡವರು. ಜನರೇ ತಮ್ಮ ಕ್ಷೇತ್ರದ ಶಾಸಕರನ್ನು ತಮ್ಮಲ್ಲಿಯೇ ಒಬ್ಬರನ್ನು ಅಭ್ಯರ್ಥಿಯಾಗಿಸಿ ಆಯ್ಕೆ ಮಾಡಿಕೊಳ್ಳುವ ಮುಖಾಂತರ ರಾಜಕೀಯ ಕ್ರಾಂತಿ ಸಾಧ್ಯವಾಗಿಸಬಹುದು ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಅದರಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ ಮತ್ತು ರೈತ ಸಂಘಟನೆ ಹಲವು ವಿಭಾಗಗಳಾಗಿ ಒಡೆದು ಹೋಯಿತು ಎಂಬುದು ನಂತರದ ಇತಿಹಾಸ.
ಎಲ್ಲಕ್ಕಿಂತ ಮುಖ್ಯವಾಗಿ ಅಂದಿನ ದಿನಗಳಲ್ಲಿ ಹೋರಾಟಗಳಿಗೆ ಜನರು ಸ್ಪಂದಿಸುತ್ತಿದ್ದ ರೀತಿಯನ್ನು ಗಮನಿಸಿದರೆ ಇಂದು ಬಹುತೇಕ ಜನ ನೀರ್ವೀರ್ಯವಾಗಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ. ಬೆಲೆ ಏರಿಕೆ, ಅಮಾಯಕರ ಮೇಲಿನ ದೌರ್ಜನ್ಯ, ರಾಜಕೀಯ ಭ್ರಷ್ಟಾಚಾರ, ಖಾಸಗಿ ಕಂಪನಿಗಳ ವಂಚನೆ ಮುಂತಾದ ವಿಷಯಗಳಲ್ಲಿ ಆಗಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸ್ವತಃ ತಾವೇ ಮುನ್ನುಗ್ಗಿ ಭಾಗವಹಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳು ಇಲ್ಲದಿದ್ದ ಸಮಯದಲ್ಲಿ ಇದು ಸಾಧ್ಯವಾಗಿತ್ತು.
ಆದರೆ ಇಂದು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನಸ್ಥಿತಿಯೇ ಕಡಿಮೆಯಾಗಿದೆ. ಇಲ್ಲದ ಉಸಾಬಾರಿ ನಮಗೇಕೆ ಎಂಬ ಗುಲಾಮಿ ಮನೋಭಾವದ ಭಕ್ತಗಣ ಸಮುದಾಯ ಸೃಷ್ಟಿಯಾಗಿದೆ. ಬಹಳಷ್ಟು ಜನರು ತಮ್ಮ ಸ್ವಾಭಿಮಾನವನ್ನೇ ಜಾತಿ ಧರ್ಮ ಹಣಕ್ಕಾಗಿ ಮಾರಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಚ್ಚೆದೆಯ ಹೋರಾಟಗಾರ - ದೂರದೃಷ್ಟಿಯ ನಾಯಕ - ಧೈರ್ಯವಂತ ಮುಂದಾಳು ಪ್ರೊಫೆಸರ್ ನಂಜುಂಡ ಸ್ವಾಮಿಯವರು ಪದೇ ಪದೇ ನೆನಪಾಗುತ್ತಾರೆ.
ಬಹುತೇಕ ಸರ್ಕಾರಿ ಆಸ್ತಿಗಳು ದಿನೇ ದಿನೇ ಮುಕ್ತ ವ್ಯಾಪಾರ ನೀತಿಯ ಫಲವಾಗಿ ಮಾರಾಟವಾಗುತ್ತಿರುವ ಸನ್ನಿವೇಶದಲ್ಲಿ ಆಗಿನ ಕೇವಲ ಒಂದು ಈಸ್ಟ್ ಇಂಡಿಯಾ ಕಂಪನಿ ನಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿತು. ಈಗ ಆ ರೀತಿಯ ಹಲವಾರು ಇನ್ನೂ ಬಲಿಷ್ಠ ಕಂಪನಿಗಳು ನಮ್ಮನ್ನು ಆಕ್ರಮಿಸುತ್ತಿವೆ. ಜನ ಆರ್ಥಿಕ ಅನಿವಾರ್ಯತೆಯ ಜೀತದಾಳುಗಳಾಗುತ್ತಿದ್ದಾರೆ. ಮೇಲ್ನೋಟಕ್ಕೆ ಅಭಿವೃದ್ಧಿ ಎಂದು ಕಾಣುತ್ತಿದ್ದರು ಆಂತರ್ಯದಲ್ಲಿ ಸ್ವಾತಂತ್ರ್ಯ ಕಳೆದುಕೊಂಡು ಗುಲಾಮರಾಗುತ್ತಿದ್ದಾರೆ. ಅದರ ಅರಿವು ಕೂಡ ಇವರಿಗೆ ಆಗುತ್ತಿಲ್ಲ.
ಇಂದಿನ ಯುವ ಪೀಳಿಗೆಗೆ ಸಂಘಟನೆ ಮತ್ತು ಹೋರಾಟದ ದೃಷ್ಟಿಯಲ್ಲಿ ನಂಜುಂಡ ಸ್ವಾಮಿಯವರು ಒಂದು ಮಾದರಿ. ಅವರಿಗೆ ಜನುಮ ದಿನದ ಶುಭಾಶಯಗಳು ಮತ್ತು ಯುವ ಜನಾಂಗಕ್ಕೆ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಾ ರೈತ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವುದು ಪ್ರತಿ ಆಹಾರ ಸೇವಿಸುವ ಮನುಷ್ಯ ಪ್ರಾಣಿಯ ಪ್ರಪ್ರಥಮ ಕರ್ತವ್ಯ ಎಂದು ಜವಾಬ್ದಾರಿಯನ್ನು ನೆನಪಿಸುತ್ತಾ...
ಮಾಧ್ಯಮಗಳು ಚುನಾವಣೆಯ ಹಿಂದೆ ಬಿದ್ದಿದ್ದಾರೆ. ಸಾಮಾನ್ಯ ಜನರಾದ ನಾವು ಆದರ್ಶಗಳನ್ನು ಸ್ಮರಿಸುವ ಮೌಲ್ಯಗಳ ಹಿಂದೆ ಸಾಗೋಣ. ಏಕೆಂದರೆ ಈ ಸಮಾಜದ ನಿಜವಾದ ಬಹುಸಂಖ್ಯಾತರು ಸಾಮಾನ್ಯ ಜನರು…!
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ