ಈ ಸಸ್ಯ ಇಷ್ಟೊಂದು ನಾಚುವುದು ಏಕೆ?

ಈ ಸಸ್ಯ ಇಷ್ಟೊಂದು ನಾಚುವುದು ಏಕೆ?

ನಾವು ಸಣ್ಣವರಿರುವಾಗ ಮನೆ ಮುಂದಿನ ಆಟದ ಮೈದಾನದಲ್ಲಿ, ಗುಡ್ಡಗಾಡುಗಳಲ್ಲಿ ಅಲೆಯುವಾಗ ಈ ಸಸ್ಯ ಸಿಕ್ಕೇ ಸಿಗುತ್ತಿತ್ತು. ಇದರ ಎಲೆಯನ್ನು ಸ್ವಲ್ಪವೇ ಮುಟ್ಟಿದರೆ ಅದು ನಾಚಿಕೆಯಿಂದ ಮುದುಡಿ ಹೋಗುತ್ತಿತ್ತು. ಎಲ್ಲರಿಗೂ ಈ ಸಸ್ಯ ಚಿರಪರಿಚಿತವೇ... ಅದೇ ‘ನಾಚಿಕೆ ಮುಳ್ಳು’ ಎಂಬ ಸಸ್ಯ. ಬಾಲ್ಯದಲ್ಲಿ ಈ ಸಸ್ಯದ ಜೊತೆ ಆಟವಾಡಲು ಒಂದು ರೀತಿಯ ಮಜಾ ಇತ್ತು. ಈ ಸಸ್ಯದ ಜೊತೆ ಆಟವಾಡುವಾಗ ಜಾಗ್ರತೆಯನ್ನೂ ವಹಿಸಬೇಕಿತ್ತು, ಏಕೆಂದರೆ ಸಸ್ಯದಲ್ಲಿ ಮುಳ್ಳುಗಳೂ ಇರುತ್ತಿದ್ದವಲ್ಲಾ. ಅದಕ್ಕೇ ಈ ಸಸ್ಯಕ್ಕೆ ನಾಚಿಕೆ ಮುಳ್ಳು ಎಂಬ ಹೆಸರು ಬಂದಿರಬೇಕು. ನಾಚಿಕೆ ಮುಳ್ಳು ಸಸ್ಯದಲ್ಲಿ ಪುಟ್ಟದಾದ ಗುಲಾಬಿ ವರ್ಣದ ಸುಂದರ ಹೂವೂ ಅರಳುತ್ತಿತ್ತು. ಅದು ಗಿಡವನ್ನು ಇನ್ನಷ್ಟು ಆಕರ್ಷಣೀಯವಾಗಿಸುತ್ತಿತ್ತು.

ನಾಚಿಕೆ ಮುಳ್ಳು ಗಿಡದ ವೈಜ್ಞಾನಿಕ ಹೆಸರು “ಮಿಮೊಸಾ ಪುಡಿಕಾ” (Mimosa pudica). ಇದರ ನಾಚಿಕೆ, ಲಜ್ಜೆಯ ಕಾರಣದಿಂದ ಏನೋ ಸಂಸ್ಕೃತ ಪಂಡಿತರು ಇದಕ್ಕೆ “ಲಾಜ್ವಂತಿ" ಎಂಬ ಹೆಸರನ್ನೇ ದಯಪಾಲಿಸಿದ್ದಾರೆ. ಇದು ಬಟಾಣಿಯ ಕುಟುಂಬಕ್ಕೆ ಸೇರಿದ ಸಸ್ಯ. “ಫ್ಯಾಬೆಸೆ" (Fabaceae) ಎಂಬುವುದು ಈ ಕುಟುಂಬದ ಹೆಸರು. ಈ ಸಸ್ಯವು ಮೊತ್ತಮೊದಲು ಬ್ರೆಝಿಲ್ ದೇಶದಲ್ಲಿ ಕಂಡು ಬಂದರೂ ಈಗ ಉಷ್ಣವಲಯದಲ್ಲಿ ಬರುವ ದೇಶಗಳಲ್ಲೆಲ್ಲಾ ಇದೊಂದು ಕಳೆ ಸಸ್ಯವಾಗಿ ಗುರುತಿಸಲ್ಪಟ್ಟಿದೆ. ಇದನ್ನು ಆಂಗ್ಲ ಭಾಷೆಯಲ್ಲಿ “Touch me not plant” (ಮುಟ್ಟಿದರೆ ಮುನಿ ಸಸ್ಯ) ಎಂದೂ ಕರೆಯುತ್ತಾರೆ.

ಈ ಸಸ್ಯದ ಎಲೆಗಳು ಮುಟ್ಟಿದೊಡನೆ ಮುನಿಯುವುದೇಕೆ? ಗೊತ್ತೇ...ಈ ಸಸ್ಯದ ಎಲೆಗಳ ಮುದುಡುವಿಕೆ ಒಂದು ಬಗೆಯ ಸಂಕೀರ್ಣ ರಾಸಾಯನಿಕ ಪ್ರಕ್ರಿಯೆ. ಜೀವಕೋಶದಲ್ಲಿನ ಕೋಶರಸ ಕೋಶ ಭಿತ್ತಿಯ ಮೇಲೆ ಹೇರುವ ಒತ್ತಡವು ಜೀವಕೋಶದ ಸ್ಥಿರ ರಚನೆಗೆ ಕಾರಣ. ಬಾಹ್ಯ ಪ್ರೇರಣೆಯಿಂದಾಗಿ ಉಂಟಾದ ಒತ್ತಡದ (turgor pressure) ಏರುಪೇರಿನಿಂದಾಗಿ ಜೀವಕೋಶಗಳು ತನ್ನ ಸಹಜತೆಯನ್ನು ಕಳೆದುಕೊಂಡು ಇಳಿಬೀಳುತ್ತವೆ. ಈ ಪ್ರತಿಕ್ರಿಯೆ ಇಡೀ ಎಲೆಯನ್ನು ಆವರಿಸಿ ಎಲೆಯ ಮುದುಡುವಿಕೆಗೆ ಕಾರಣವಾಗುತ್ತದೆ.

ನಿಜವಾಗಿ ಎಲೆ ಮುದುಡುವಿಕೆಯಿಂದ ಸಸ್ಯಕ್ಕೆ ಲಾಭಕ್ಕಿಂತ ಹಾನಿಯೇ ಅಧಿಕ. ಏಕೆಂದರೆ ಎಲೆಗಳು ಮುದುಡಿದರೆ ದ್ಯುತಿ ಸಂಶ್ಲೇಷಣಾ ಕ್ರಿಯೆಗೆ ಅಡಚಣೆಯಾಗುತ್ತದೆ. ಇದರಿಂದ ಸಸ್ಯದ ಶಕ್ತಿಯು ಅನಾವಶ್ಯಕವಾಗಿ ವ್ಯಯವಾಗುತ್ತದೆ. ಕೆಲವು ಬಗೆಯ ಮಾಂಸಹಾರಿ ಸಸ್ಯಗಳು ತಮ್ಮ ಆಹಾರ (ಕೀಟ ಇತ್ಯಾದಿ) ಎಲೆಯ ಮೇಲೆ ಕುಳಿತಾಗ ಅದನ್ನು ಮುಚ್ಚಿ ಬಿಡುತ್ತವೆ. ಇದರಿಂದ ಆ ಸಸ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಆಹಾರ ದೊರೆಯುತ್ತದೆ. ಆದರೆ ನಾಚಿಕೆ ಮುಳ್ಳು ಸಸ್ಯವು ಮಾಂಸಹಾರಿ ಸಸ್ಯವಲ್ಲ. ಆದರೆ ಎಲೆಗಳು ಮುದುಡುವುದರಿಂದ ಈ ಸಸ್ಯವನ್ನು ತಿನ್ನಲು ಬಯಸುವ ಕೆಲವು ಸಸ್ಯಾಹಾರಿ ಪ್ರಾಣಿಗಳಿಗೆ ಗೊಂದಲವಾಗಿ ತಿನ್ನದೇ ಇರುವ ಸಾಧ್ಯತೆಯೂ ಇದೆ. ಸುಲಭವಾಗಿ ತಿನ್ನಲು ಗಿಡದಲ್ಲಿರುವ ಮುಳ್ಳು ಬಿಡಲಾರದು. ಒಂದು ರೀತಿಯ ನೈಸರ್ಗಿಕ ಉಪಾಯ ಈ ಸಸ್ಯದ್ದು ಎಂದು ಹೇಳಬಹುದು.

ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಇವರು ಸಸ್ಯಗಳಿಗೂ ಜೀವವಿದೆ ಎಂದು ತೋರಿಸಿಕೊಟ್ಟಿದ್ದರು. ನಾಚಿಕೆ ಮುಳ್ಳುನಂತಹ ಸಸ್ಯಗಳನ್ನು ಗಮನಿಸುವಾಗ ಇವುಗಳಿಗೆ ಜೀವದ ಜೊತೆಗೆ ಭಾವನೆಗಳೂ ಇವೆ ಎಂಬಂತೆ ಭಾಸವಾಗುತ್ತದೆ. ಏನಾದರಾಗಿರಲಿ ಸಸ್ಯ ಪ್ರಪಂಚದ ಒಂದು ಅಪರೂಪದ ಸಸ್ಯವೆಂದರೆ ನಾಚಿಕೆ ಮುಳ್ಳು. ಆದರೆ ಈಗ ನಗರದಾದ್ಯಂತ ಕಾಂಕ್ರೀಟ್ ಕಾಡುಗಳು ಬೆಳೆದು, ಜನರು ಬಹುಮಹಡಿ ಕಟ್ಟಡಗಳಲ್ಲಿ ನೆಲದ, ಮಣ್ಣಿನ ಸಂಪರ್ಕ ಬಿಟ್ಟು ಬದುಕಲು ಶುರು ಮಾಡಿದ ಬಳಿಕ ಮಕ್ಕಳಿಗೆ ಇಂತಹ ಗಿಡಗಳು ಅಪರೂಪವಾಗಿ ಬಿಟ್ಟಿವೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ