ಈ ಸಾರಿಯ ಚುನಾವಣೆಗೆ ಓಟ್ ಮಾಡಲೇಬೇಕೆ?

ಈ ಸಾರಿಯ ಚುನಾವಣೆಗೆ ಓಟ್ ಮಾಡಲೇಬೇಕೆ?

ಬರಹ

ಓಟ್ ಮಾಡಲೇಬೇಕಾ?
*********************************************************************************************************************************

ಈ ವಾರ 'ಅಂತರಂಗ' ಪತ್ರಿಕೆಗೆ ಲೇಖನ ಬರೆದುಕೊಡಿ ಅಂತ ಅಂದ್ರು ಮಿತ್ರ ಸಂಪಾದಕ ರಮೇಶ್. ನನಗೂ ಇವತ್ತಿನ ರಾಜಕೀಯ-ಚುನಾವಣೆ ಕುರಿತಾಗಿ ಮಾತನಾಡುವ, ಆಲೋಚಿಸುವ, ಏನಾದರೂ ಬರೆಯುವ... ಹೀಗೆ ಮಾಡುತ್ತಾ ನನಗೇ ಒಂದು ಸ್ಪಷ್ಟನೆಯನ್ನು ಪಡೆದುಕೊಳ್ಳುವ ಆಸೆಯೂ ಇದ್ದೇ ಇತ್ತು. ಹಾಗೆಂದೇ ಈಗ ಬರೆಯುತ್ತಾ ಕುಳಿತಿದ್ದೇನೆ. ಬೆಳಕಿಗಾಗಿ ತಡಕಾಡುತ್ತಾ....

ಈಗ ನಿಜಕ್ಕೂ ಝಗ ಝಗಿಸುವ ಜಗತ್ತಿಗೆ ಮಂಕು ಆವರಿಸಿದೆ. ಗ್ಲೋಬಲ್ ಎಕಾನಮಿ ತೀವ್ರ ಚಿಕಿತ್ಸಾ ವಿಭಾಗದಲ್ಲಿದೆ. ಅಮೇರಿಕಾ ಈಗ ಸಂಯಮ ಮತ್ತು ಸಮಾಜವಾದವನ್ನು ಅನುಸರಿಸಬೇಕಾಗಿದೆ. ಅಂತೆಯೇ ಎಲ್ಲಾ ಐರೋಪ್ಯ ದೇಶಗಳೂ ಕೂಡ. ಎಕಾನಮಿ ಮಾತ್ರವಲ್ಲದೇ ಭೂಮಿ ಬಿಸಿಯಾಗುತ್ತಿರುವ ಸಂಗತಿಕೂಡ ಇಡೀ ಜಗತ್ತಿನ ಅತ್ಯಂತ ಆತಂಕಕಾರೀ ಸಂಗತಿ. ಇನ್ನು ಕೇವಲ ಹತ್ತು ಹದಿನೈದು ವರ್ಷಗಳಲ್ಲಿ ಊಹಿಸಲಾಸಾದ್ಯ ಪ್ರಾಕೃತಿಕ ಹಾಗು ಹವಾಮಾನಿಕ ಬದಲಾವಣೆಗಳು ಘಟಿಸಿ ಜಗತ್ತಿನ ಚಿತ್ರ ಬದಲಾಗಲಿದೆ. ಪ್ರಖರ ಬೇಸಿಗೆ ನಂತರ ಘೋರ ಮಳೆಗಾಲಗಳನ್ನು, ಬಿರುಗಾಳಿ - ಸುಂಟರಗಾಳಿಗಳನ್ನೂ ಮನುಕುಲ ಎದುರಿಸಬೇಕು. ಸಮುದ್ರ ಮಟ್ಟ ಏರುತ್ತಾ ಕರಾವಳಿಯ ಅನೇಕ ಪಟ್ಟಣಗಳು, ಕೆಲವು ದೇಶಗಳು ಮುಳುಗಲಿವೆ. ಕೋಟ್ಯಾಂತರ ನಿರಾಶ್ರಿತರನ್ನು ಜಗತ್ತು ನಿಭಾಯಿಸಬೇಕಾಗುತ್ತದೆ. ಕ್ರಮೇಣ ಜರುಗುವ ಈ ಘಟನೆಗಳು ಊಹಾಪೋಹವಲ್ಲ. ವೈಜ್ಞಾನಿಕ ವರದಿ. ಅಮೇರಿಕಾರ ಅಧ್ಯಕ್ಷ ಓಬಾಮ ಏನಾದರೂ
ತನ್ನನ್ನೂ ಒಳಗೊಂಡಂತೆ ಎಲ್ಲಾ ಐರೋಪ್ಯ ದೇಶಗಳನ್ನೂ ಒಪ್ಪಿಸಿ ಭುವಿಯ ಈ ಪರಿಸ್ಥಿತಿಗೆ ಹೆಚ್ಚಿನ ಕಾರಣೀಭೂತರಾದ ತಮ್ಮ ರೀತಿ ನೀತಿಗಳನ್ನು ಬದಲಾಯಿಸಿಕೊಂಡರೆ, ಚೀನಾ ಮೊದಲಾದ ದೇಶಗಳೂ ಬದಲಾದರೆ ಮಾತ್ರ ಈ ಅವಘಡವನ್ನು ತಪ್ಪಿಸಬಹುದೆಂದು ಹೇಳುತ್ತಾರೆ. ಹೀಗೆ ಬರೆಯುತ್ತಿರುವ ಹೊತ್ತಿಗೇ ಬಳ್ಳಾರಿಗ ಗಣಿಗಳಿಂದ ಅದೆಷ್ಟು ಲಕ್ಷ ಟನ್ ಕಭ್ಬಿಣದ ಅದಿರನ್ನು ಬಾಚಿ ತೆಗೆಯಲಾಗುತ್ತಿದೆಯೋ? ಯಾವಯಾವ ದೇಶಗಳಲ್ಲಿ ಅದನ್ನು ಕರಗಿಸುತ್ತಾ ಭುವಿಯ ಶಾಖವನ್ನು ಹೆಚ್ಚಿಸುತ್ತಿದೆಯೋ?

ಇದೇನು ನಮ್ಮ ದೇಶಕ್ಕೆ ಸಂಬಂಧ ಪಟ್ಟಿಲ್ಲವೇ? ಇವತ್ತಿನ ಚುನಾವಣಾ ಸಮಯದಲ್ಲಿ ಯಾವ ದೊಡ್ಡ ಪಕ್ಷವೂ ಈ ಕುರಿತು ಮಾತನಾಡಿಲ್ಲ. ಜಗತ್ತಿನಲ್ಲಿ ಮುರಿದುಬೀಳುತ್ತಿರುವ ಗ್ಲೋಬಲ್ ಎಕಾನಮಿಯ ಕುರಿತೂ ಏನೂಇಲ್ಲ. ರೈತರಿಗೆ ಕೊಡುತ್ತಿರುವ ಪ್ಯಾಕೇಜ್, ಸಾಲ ಮನ್ನ, ಕಡಿಮೆದರದ ಬಡ್ಡಿ ಇತ್ಯಾದಿಗಳ ಹೊರತಾಗಿ ನಮ್ಮ ರಾಜಕಾರಣಿಗಳು ರೈತರ ಬೆಳೆಗೆ ಸಿಗಬೇಕಾದ ನ್ಯಾಯವಾದ ಬೆಲೆಗಳ ಕುರಿತು ತಲೆಕೆಡಿಸಿಕೊಂಡೇ ಇಲ್ಲ. ಇವರ ಎಲ್ಲಾ ಚಿಂತನೆಗಳೂ ಸಿದ್ದ ಮಾದರಿಗಳಂತೆ ಕರಕರೆಯಾಗಿವೆ.

ಪಾಕಿಸ್ಥಾನದಲ್ಲಿ ತಾಲೀಬಾನಿಗಳು ಅಲ್ಲಿನ ಅಣ್ವಸ್ಥ್ರ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಆತುರದಲ್ಲಿದ್ದಾರೆ. ಈಗಾಗಲೇ ಅಲ್ಲಿನ ಅನೇಕ ಪ್ರದೇಶಗಳಲ್ಲಿ ಅವರ ಹಿಡಿತ ಬಂದೇ ಬಿಟ್ಟಿದೆ. ಅವರ ಭಯಾನಕ ಕಾನೂನೇ ಆಚರಣೆಯಲ್ಲಿದೆ. ಒಂದು ಮುಸ್ಲಿಂ ದೇಶ ತಾನೇ ಬೆಳೆಸಿದ ಮತೀಯತೆಗೆ ಹೀಗೆ ತಾನೇ ಬಲಿಯಾಗುತ್ತಿದೆ. ಬಹುಸಂಖ್ಯಾತರ ಮತೀಯತೆ ಏನು ಆಗಬಲ್ಲದೆಂದು ನಾವೂ ಗಮನಿಸಬೇಕು. ಹಿಂದೂ ಉಗ್ರವಾದ ಕೂಡ ಹೀಗೆಯೇ ಅಪಾಯಕಾರಿ ಆಗಬಲ್ಲದು. ನಮ್ಮ ಚುನಾವಣೆ ಈ ಸಂಗತಿಗಳನ್ನೂ ಗಂಭೀರವಾಗಿ ಚರ್ಚಿಸಬೇಕು. ಆದರೆ ಆತರಹದ ನೇರ -ನಿಶ್ಟುರ ನಿಲುವುಗಳೂ ನಮ್ಮ ರಾಜಕಾರಣಿಗಳಲ್ಲಿ ಕಾಣುತ್ತಿಲ್ಲ. ಅವರುಗಳ ಇಡೀ ವ್ಯಕ್ತಿತ್ವ ಅವಕಾಶವಾದಕ್ಕೆ ಒಳಗಾಗಿದೆ.

ಹಾಗಾದರೆ ಮುಂದೆ ನಾವು ಎದುರಿಸಬೇಕಾದ ಇಂಥಹ ಪ್ರಮುಖ ವಿಚಾರಗಳಿಗೆ ಸಮರ್ಪಕ ಉತ್ತರ ಸಿಗಲಾರದೆಂದು ಕಾಣುತ್ತದೆ. ನಮ್ಮ ದೇಶದ ರಾಜಕೀಯ ವ್ಯವಸ್ಥೆ ಹಾಗೂ ಸಮಾಜ ಇನ್ನೂ ಸತ್ಯಕ್ಕೆ ಮುಖಾಮುಖಿ ಯಾಗುವುದನ್ನು ಕಲೆತಿಲ್ಲ.

*****************************************************************************************************************************

ಈ ಹೊತ್ತಿಗೆ ಇಲ್ಲಿ ತಕ್ಷಣ ಅನ್ನುವಹಾಗೆ ಇರುವ ರಾಜಕೀಯ ಸುದ್ದಿಗಳು ಅಂದ್ರೆ ಕುಮಾರ್ ಬಂಗಾರಪ್ಪ ಸೊರಬಾದ ನ್ಯಾಯಾಲಯದ ಮುಂದೆ ಶರಣಾಗಿ ಜಾಮೀನು ಪಡೆದಿದ್ದಾರೆ. ಅಲ್ಲಿ ಅನಾಚಾರ ಮಾಡಿದವರಾರೋ. ಆದ್ರೆ ಕೇಸ್ ಬುಕ್ ಮಾಡಿದ್ದು ಇವರಮೇಲೆ. ನಿಜಕ್ಕೂ ನಮ್ಮ ಪೋಲೀಸ್ ವ್ಯವಸ್ಥೆ ಇಷ್ಟು ನಾಚಿಕೆ ಇಲ್ಲದೇ ಆಡಳಿತ ಯಂತ್ರದ ಕೈಗೊಂಬೆಯಾಗಬಾರದಿತ್ತು. ಏನೇ ಆಗಲಿ ಇದು ಬಂಗಾರಪ್ಪ ಅವರ ಪರವಾದ ಮತಗಳಿಗೆ ಕಾರಣವಾಗುವುದಂತೂ ಹೌದು. ಇದರಂತೆಯೇ ತನಿಕಲ್ ವಿಚಾರ ಕೂಡ. ಅನೀತಿಗಳನ್ನು ಪ್ರತಿಭಟಿಸಲು ಹೋದವರ ಮೇಲೇ ಕೇಸ್ ಜಡಿದಿದ್ದಾರಂತೆ! ಈ ಹೆಂಡ ಹಂಚುವ, ಹಣ - ಸೀರೆ ಕೊಡುವ ಪದ್ದತಿ ದಿನೇ ದಿನೇ ಎಲ್ಲಾ ಕಡೆಗಳಿಂದ ಕೇಳಿಬರ್ತಾಇದೆ. ಈ ಸಂಗತಿಗಳೇ ಚುನಾವಣೆಯ ಸೋಲು - ಗೆಲುವುಗಳನ್ನು ನಿರ್ಧರಿಸಿಬಿಡುತ್ತವೆ ಎಂಬ ಗುಟ್ಟನ್ನು ತಿಳಿದುಬಿಟ್ಟವರಂತೆ ನಾಮುಂದು ತಾಮುಂದೆಂಬಂತೆ ಈ ಹೇಸಿಗೆ ಕೆಲಸದಲ್ಲಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಅಥವ ಅಭ್ಯರ್ಥಿಗಳು ಮುನ್ನುಗ್ಗುತ್ತಿರುವುದು ಇವತ್ತಿನ ದುರಂತ.

ಇದನ್ನೆಲ್ಲ ನೋಡುತ್ತಾ ಈ ಸಾರಿ ಓಟ್ ಮಾಡುವುದೇ ಬೇಡ ಅನ್ನಿಸ್ತಾಇದೆ. ಲೋಕಸಭಾ ಚುನಾವಣೆ ದೇಶದ ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾದಂಥ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಭ್ಯರ್ಥಿಗಳು ನಮಗೆ ಕಾಣುವ ರ್‍ಈತಿಯಲ್ಲಿ ಗಾಬರಿ ಹುಟ್ಟಿಸುತ್ತಾರೆ. ಅವರ ಮಾತು - ನಡವಳಿಕೆಗಳು, ಓಟಿಗಾಗಿ ಅವರ ನಾಟಕ - ಶಡ್ಯಂತ್ರಗಳು, ಹಿನ್ನೆಲೆ ಇವೆಲ್ಲಾ ನೋಡಿದಾಗ ಮತ್ತು ಎಲ್ಲಾರೂ ಒಂದೆಲ್ಲಾ ಒಂದು ರೀತಿಯಲ್ಲಿ ಅದೇರೀತಿ ಕಂಡಾಗ ಯಾರನ್ನು ಆರಿಸುವುದು? ನಮ್ಮ ಜಿಲ್ಲೆಯನ್ನೇ ನೋಡಿದರೆ ಬಂಗಾರಪ್ಪ ಅವರ ಹಿಂದಿನ ಸಾಧನೆ ನೋಡಿದರೆ ಒಬ್ಬ ಉತ್ತಮ ಪ್ರತಿನಿಧಿ ಆಗಿದ್ದರು ಅಂದೇನೂ ಹೇಳುವಹಾಗಿಲ್ಲ. ಸುಮ್ಮನೆ ನೋಡೀದ್ರೆ ಗೊತ್ತಾಗತ್ತೆ ತಮ್ಮ ಸ್ವಂತ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಅವರ ಈ ಎಲ್ಲಾ ಪ್ರಯತ್ನ ಅಂತ. ಅವರು ಸೇರಿದ-ಬಿಟ್ಟ ಪಕ್ಷ ಒಂದೇ ಎರಡೇ? ಹಾಗಂತ ಅದಕ್ಕೆ ಇರುವ ತಾತ್ವಿಕ ಕಾರಣಗಳೂ ಪ್ರಾಮಾಣಿಕವಂದೆನಿಸಲ್ಲ. ಇವರ ಪ್ರತಿಸ್ಪರ್ದಿ ರಾಘವೇಂದ್ರ ಯಡಿಯೂರಪ್ಪ ಅಂದೊಡನೆ ಇವರು ಇಂಥ ದೊಡ್ಡ ಸ್ಥಾನಕ್ಕೆ ಅರ್ಹನೇ ಎಂಬ ಪ್ರಶ್ನೆಯೇ ಎದುರಾಗತ್ತೆ. ಅಲ್ಲದೇ ಒಬ್ಬ ಮುಖ್ಯಮಂತ್ರಿ ತನ್ನ ಪಕ್ಷದಲ್ಲಿ ಬೇರೆಲ್ಲಾ ಅರ್ಹ ವ್ಯಕ್ತಿಗಳಿದ್ದರೂ ಹಣಬಲವಿದೆ ಎಂಬ ಒಂದೇ ಕಾರಣಕ್ಕೆ ತನ್ನ ಮಗನನ್ನು ನಿಲ್ಲಿಸುತ್ತಿರುವುದು ಅಪ್ರಬುದ್ದ- ಸ್ವಾರ್ಥ ರಾಜಕಾರಣ. ಇದಕ್ಕಾಗಿ ಅವರು ನಡೆಸಿದ ಪೂರ್ವಸಿದ್ದತೆ, ನಾಟಕ ಇವೆಲ್ಲ ಹೇಸಿಗೆ ವಿಶಯಗಳು.

ಈ ಪರಿಸ್ಥಿತಿಯಲ್ಲಿ ಇರುವ ಇಬ್ಬರಲ್ಲಿ ಯಾರನ್ನಾದರೂ ಒಬ್ಬರಿಗೆ ಮತ ಕೊಡಲೇಬೇಕೆಂದು ನಿರ್ಧರಿಸಿದರೆ ನಾವು ಯಾರೋ ಒಬ್ಬರನ್ನು ಅವರ ಎಲ್ಲಾ ಅಸಾಮರ್ಥ್ಯ, ಅಪ್ರಾಮಾಣಿಕತನ, ನಾಟಕಗಳನ್ನು ಅರಗಿಸಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಹೀಗೆ ನಾವು ನಮ್ಮ ನಿಜವಾದ ದೇಶದ ಕುರಿತಾದ
ಕಾಳಜಿಗಳನ್ನು ಮರೆಯುತ್ತಾ ಅರಗಿಸಿಕೊಳ್ಳುವುದರಲ್ಲಿ ಮೈಮರೆಯುತ್ತಾ, ಅದನ್ನು ಕ್ರಮೇಣ ಸವಿಯುತ್ತಾ .... ಟಿವಿ, ಪತ್ರಿಕೆಗಳಲ್ಲಿ ಬರುವ ಇವರ ಪರವಾದ ಸುದ್ದಿಗಳನ್ನು ಆಸ್ವಾದಿಸುತ್ತಾಹೋಗಿ ಮತಹಾಕುತ್ತೇವೆ. ಇದು ನಮ್ಮೊಳಗೆ ನಡೆಯುವ ಅಶ್ಲೀಲ ಪರಿವರ್ತನೆ. ಇದು ನಿಜಕ್ಕೂ ಅಗತ್ಯವೆ?

ಕೇಡರ್ ಪಡೆಯ ಪಕ್ಷಗಳು ಸಿದ್ದ ಚಿಂತನೆ - ಕಾರ್ಯಕ್ರಮಗಳನ್ನು ರೂಪಿಸಿಕೊಂಡಿರುತ್ತವೆ. ಅಲ್ಲಿ ಒಬ್ಬ ಅಭ್ಯರ್ಥಿ ಮುಖ್ಯವಾಗುವುದಿಲ್ಲ. ಆದ್ದರಿಂದ ಆಧ್ವಾನಿ ಅವರನ್ನು ಪ್ರಧಾನಮಂತ್ರಿ ಮಾಡಲು ನೀವು ಓಟ್ ಮಾಡಿ ಅಂತ ಯಾರೋ ಹೇಳೀದ್ರು. ಇದು ತುಂಬಾ ಅಪಾಯಕಾರಿ ಚಿಂತನೆ. ಸದಾ ಹೊಸದನ್ನು ಕಾಣುವ, ಹೊಸ ಹೊಸ ಅರ್ಥಗಳನ್ನು ಕಂಡುಕೊಳ್ಳುವ ಬದುಕಿನ ಸಂಸ್ಕೃತಿಗೇ ಇದು ಅಪಾಯಕಾರಿ ಆಲೋಚನೆ. ಅಲ್ಲದೇ ಭಾರತದಂಥ ಭಿನ್ನತೆ - ವೈವಿಧ್ಯತೆಗಳನ್ನು ಒಳಗೊಂಡ ದೇಶದಲ್ಲಿ ಏರುಪೇರಿನ ಸಮಾಜದಲ್ಲಿ ಸಿದ್ದ ಮಾದರಿಗಳು ಅಮಾನವೀಯವಾಗಿ ಕೆಲಸಮಾಡುತ್ತವೆ. ಸದಾ ಹರಿಯಬೇಕಾದ ನದಿಯನ್ನು ಕಟ್ಟಿಹಾಕಿದಂತಾಗುತ್ತದೆ. ಅದು ಕಟ್ಟೆ ಒಡೆದು ಮುಂದೆ ಸಾಗಲೇಬೇಕು. ತಿರುಗುತ್ತಾ ಹೊರಳುತ್ತಾ ಉಕ್ಕುತ್ತಾ ಸಾಗಲೇಬೇಕು. ಹರಿಯುತ್ತಲೇ ಪರಿಶುದ್ದವಾಗಬೇಕು. ಅದು ಎಲ್ಲ ಕಾಡು ಕಣಿವೆಗಳ ತೊರೆಗಳ ಹರಿವಿನ ಸತ್ವಗಳನ್ನು ಮೈಗೂಡಿಸಿಕೊಳ್ಳುತ್ತಾ ಸಾಗಬೇಕು. ಸಿದ್ದ ಮಾದರಿಗಳಿಗೆ ಈ ಹರಿವೇ ಬೇಡ. ಎಲ್ಲವೂ ಪೂರ್ವ ನಿಶ್ಚಿತ. ಒಳಗೊಳ್ಳುವಿಕೆ ವಾಜಿಪೇಯಿಗೆ ಸಾಧ್ಯವಿತ್ತು. ಆದ್ದರಿಂದ ಎನ್.ಡಿ.ಎ. ಸಾಧ್ಯವಾಯ್ತು. ಇದು ಅಧ್ವಾನಿಜಿ ಗೆ ಕಷ್ಟ ಅನ್ನಿಸತ್ತೆ.

ಇದಕ್ಕೆ ಭಿನ್ನವಾದ್ದು ಕಾಂಗ್ರೆಸ್ ಸಂಸ್ಕೃತಿ. ಈ ಸಮುದ್ರದಲ್ಲಿ ಎಲ್ಲವೂ ಇದೆ. ಇದೂ ಅನುಸರಿಸುವುದು ಹೈಕಮಾಂಡ್ ಎಂಬ ಸಿದ್ದ ಮಾದರಿಯನ್ನೇ. ಆದರೆ ಇವತ್ತಿನ ಸಂದರ್ಭದಲ್ಲಿ ಇದು ತನ್ನ ಏಕಾಧಿಪತ್ಯವನ್ನು ಕಳೆದುಕೊಂಡಿರುವುದರಿಂದ ಭಿನ್ನತೆಗೆ ತಲೆಬಾಗಬೇಕಾಗಿದೆ. ಭಿನ್ನವಾದ್ದನ್ನು ಕೇಳಿಸಿಕೊಳ್ಳಬೇಕಾಗಿದೆ. ಸಂಯಮದಿಂದ ವ್ಯವಹರಿಸಬೇಕಾಗಿದೆ. ಆದರೆ ಒಂದು ಪಕ್ಷವಾಗಿ ಇದಕ್ಕೆ ಕೂಡ ಕೈ ಎತ್ತುವ ಒಬ್ಬ ಎಂ.ಪಿ ಆಯ್ಕೆ ಆಗುವುದೇ ಮುಖ್ಯವೇ ಹೊರತು ಹೋರಾಟಗಾರನಲ್ಲ.

ಇವತ್ತಿನ ಸಂದರ್ಭದಲ್ಲಿ ಬಿಜೆಪಿ ಅಪರೂಪಕ್ಕೆ ಹೊಸದಾಗಿ ಅಧಿಕಾರಕ್ಕೆ ಬಂದಿದ್ದರೂ ಅನೀತಿಯ ರಾಜಕಾರಣವನ್ನು ಎಂದೋ ಮೈಗೂಡಿಸಿಕೊಂಡಿದ್ದಂತೆ ಕರತಲಾಮಲಕವೆಂಬಂತೆ ಚುರುಕಾಗಿದೆ. ಅವರು ಮಾಡುತ್ತಿರುವ ಹಣ ಸಂಚಯ, ಆಸ್ತಿ, ಅಧಿಕಾರ ದುರುಪಯೋಗ ಇವೆಲ್ಲ ನೋಡಿದರೆ ಆಶ್ಚರ್ಯವಾಗುತ್ತದೆ. ಕಾಂಗ್ರೆಸ್ ಆಡಳಿತ ಕಾಲದಲ್ಲಿ ಇದ್ದ ಹೀನ ರಾಜಕಾರಣದ ಹತ್ತುಪಟ್ಟು ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದಾರೆ. ಇವರ ಆಪರೇಶನ್ ಕಮಲ ಈ ಕೆಲಸಕ್ಕೆ ಇಟ್ಟ ಕಿರೀಟದಂತೆ ಕಾಣುತ್ತದೆ. ಇವರ ಅಭಿವೃದ್ದಿ ವಿಚಾರಗಳಲ್ಲಿ ಆಳವಾದ ಚಿಂತನೆಗಳು ಕಾಣುವುದೇ ಇಲ್ಲ. ಆಧುನಿಕತೆ - ತಾಂತ್ರಿಕತೆಯನ್ನೇ ಅಭಿವೃದ್ದಿ ಎಂದು ನಂಬಿದಂತಿದೆ. ಅಗಲವಾದ ರಸ್ಥೆಗಳು, ಮಾಲ್ ಗಳು, ಬಿಗ್ ಬಜ಼ಾರ್ ಗಳು ಇವರ ಸಿದ್ದ ಮಾದರಿಗಳಂತೆ ಕಾಣುತ್ತವೆ. ಕೆಲವೊಮ್ಮೆ ಪಾತ್ರ ಬದಲಿಸಿ ಸಾವಯವ ಕೃಷಿ ಮಿಶನ್ ಎಂತಲೋ, ಪಶ್ಚಿಮ ಘಟ್ಟ ಕಾರ್ಯ ಪಡೆ ಎಂತಲೋ ಮಾಡಿ ಎಲ್ಲದರಬಗ್ಗೆಯೂ ನಾವಿದ್ದೀವಿ ಎಂಬಂತೆ ಕಾಣಿಸುತ್ತಾರೆ. ನಿಜವಾಗಿ ಇಲ್ಲಿನ ಬಿ.ಜೆ.ಪಿ ಸರ್ಕಾರ ಇರುವುದು ಗಣಿ ಧನಿಗಳ ಪರವಾಗಿ, ನೈಸರ್ಗೀಕ ಪ್ರಾಕೃತಿಕ ಸಂಪತ್ತನ್ನು ಲೂಟಿಮಾಡುವವರ ಪರವಾಗಿ, ರಿಯಲ್ ಎಸ್ಟೇಟ್ ವ್ಯವಹಾರಿಗಳ ಪರವಾಗಿ ಎಂದು ಮೇಲ್ನೋಟಕ್ಕೆ ಕಂಡುಬಿಡುತ್ತದೆ. ಪುರಾತನ ಭಾರತದ ಸಂಸ್ಕೃತಿಯನ್ನು ಪುನರೂಪಿಸುವ ಕನಸನ್ನು ಹೊತ್ತ ಆರ್.ಎಸ್.ಎಸ್ ಇಲ್ಲಿ ಯಾಕೆ ಸುಮ್ಮನಿದೆ? ಈ ಸರ್ಕಾರದ ದೋರ್‍ಅಣೆಗಳಲ್ಲಿ ನದಿ, ಅರಣ್ಯಗಳ ರಕ್ಷಣೆ ಕುರಿತಾಗಿ ಯಾವ ಕಾರ್ಯಕ್ರಮಗಳೂ ಕಾಣುತ್ತಿಲ್ಲ. ಹಾಗಾದರೆ ನಮ್ಮ ನೆಲ , ಜಲ, ಅರಣ್ಯ ಗಳನ್ನು ರಕ್ಷಿಸದ ಇವರು ಯಾವ ಸಂಸ್ಕೃತಿಯನ್ನು ಉಳಿಸುತ್ತಾರೆ ಹಾಗಾದರೆ?

ಇವತ್ತಿನ ಕಾಂಗ್ರೆಸ್ಸಿಗೆ ಶಕ್ತಿ ಇಲ್ಲ.ನೆಹರೂ ಹೊಂದಿದ್ದ ದೂರದೃಷ್ಟಿ- ಸಾಮಾಜಿಕ ಪರಿವರ್ತನೆಯ ಕನಸಿಲ್ಲ. ಅಲ್ಲಿನ ಸಿದ್ದರಾಮಯ್ಯ ತನ್ನ ಸ್ಥಾನಮಾನಕ್ಕೇ ಸೀಮಿತರಾಗಿದ್ದಾರೆ. ಬಂಗಾರಪ್ಪ ನೆನ್ನೆಯ ಹೊಸ ಸೇರ್ಪಡೆ ಅಷ್ಟೆ. ಇವರೆಲ್ಲ ಎಂಥ ಭಾರತವನ್ನು ಕಟ್ಟಿಯಾರು? ಮನಮೋಹನ ಸಿಂಗ್ ಒಳ್ಳೆಯವರೆಂದು ಇವರಿಗೆಲ್ಲ ಓಟು ಕೊಟ್ಟುಬಿಡುವುದಾ? ಈರುಳ್ಳಿಯ ಕೇಂದ್ರಕ್ಕೆ ಅದರ ಮೇಲಿನ ದಳಗಳೇ ಬಲಕೊಟ್ಟಂತೆ ಈ ಎಲ್ಲಾ ಪ್ರತಿನಿಧಿಗಳ ಶುದ್ದ ಆತ್ಮ ಶಕ್ತಿಯೇ ಕೇಂದ್ರಕ್ಕೆ ಬಲತಾನೆ? ಅಂಥ ಅಭ್ಯರ್ಥಿಗಳನ್ನು ಎಲ್ಲಿ ನಾವು ಹುಡುಕುವುದು? ಅಥವ ಇಡೀ ಸಮಾಜ ಯಾಕೆ ಹೀಗೆ ನಿರಂತರವಾಗಿ ಶಿಥಿಲವಾಗುತ್ತಿದೆ ಎಂಬುದಕ್ಕೆ ಉತ್ತರ ಕಾಣಿಸುತ್ತಿಲ್ಲ.

ಕೆ.ಜಿ.ಶ್ರೀಧರ್
ವಾಸ್ತುಶಿಲ್ಪಿ
ತೀರ್ಥಹಳ್ಳಿ.
kgsdhar@gmail.com
೧೪/೦೪/೦೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet