ಈ ಸಾರಿ - ಒಂದು ಹಳೆಯ ಕಥೆ

ಈ ಸಾರಿ - ಒಂದು ಹಳೆಯ ಕಥೆ

ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಗೊತ್ತಿಲ್ಲ. ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ’ ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನೂ ಪ್ರಾರಂಭಿಸಿದ್ದರು. ಒಂದು ‘ನೂತನ' ಎಂಬ ವಾರ ಪತ್ರಿಕೆ ಹಾಗೂ ಮತ್ತೊಂದು ‘ಭಾವನಾ’ ಎಂಬ ಮಾಸ ಪತ್ರಿಕೆ. ಈ ಎರಡೂ ಪತ್ರಿಕೆಗಳಿಗೆ ಸಂತೋಷ್ ಕುಮಾರ್ ಗುಲ್ವಾಡಿ ಪ್ರಧಾನ ಸಂಪಾದಕರಾಗಿದ್ದರು. ‘ಭಾವನಾ’ ಮಾಸ ಪತ್ರಿಕೆಗೆ ಸಂಪಾದಕರಾಗಿದ್ದವರು ಸಾಹಿತಿ ಜಯಂತ ಕಾಯ್ಕಿಣಿ ಇವರು. ಮಯೂರ, ತುಷಾರ ಗಾತ್ರದಲ್ಲಿ ಹೊರ ಬರುತ್ತಿದ್ದ ಈ ಪತ್ರಿಕೆ ಸುಮಾರು ಒಂದು ವರ್ಷವಷ್ಟೇ ನಡೆದದ್ದು. ನಷ್ಟದ ಕಾರಣ ನೀಡಿ ನೂತನ ಹಾಗೂ ಭಾವನ ಪತ್ರಿಕೆಗಳ ಮುದ್ರಣವನ್ನು ಸ್ಥಗಿತಗೊಳಿಸಿದರು. 

ಇತ್ತೀಚೆಗೆ ಹಳೆಯ ಪುಸ್ತಕಗಳನ್ನು ಹುಡುಕಾಡುತ್ತಿರುವಾಗ 'ಭಾವನಾ’ ಮಾಸಿಕದ ಮೂರು ಪ್ರತಿಗಳು ದೊರೆತವು. ಹಳೆಯ ಪತ್ರಿಕೆಗಳನ್ನು ಓದುವುದೇ ಒಂದು ಸೊಗಸು. ಈ ಪತ್ರಿಕೆಯಲ್ಲಿ ಹಲವಾರು ಆಸಕ್ತಿದಾಯಕ, ಅಪರೂಪದ ವಿಷಯಗಳು, ಕಥೆಗಳು ಎಲ್ಲವೂ ಇವೆ. ‘ಈ ಸಾರಿ' (ಲೇ: ಪ್ರಕಾಶ್ ಆರ್. ಕಮ್ಮಾರ್) ಎಂಬ ಈ ಕೆಳಗಿನ ಪುಟ್ಟ ಕಥೆಯನ್ನು ನವೆಂಬರ್ ೨೦೦೦ದ ಭಾವನಾ ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ. ಓದುವ ಸುಖ ನಿಮ್ಮದಾಗಲಿ…

***

ಈ ಸಾರಿ  

ಶಿರುವಾಳದ ಕನ್ನಪ್ಪ ಬಡವ ಅಂದ್ರೆ ಬಡವ. ಅವನಿಗಿರೋದೆ ಅರ್ಧ ಎಕರೆ ಹೊಲ ಮಾತ್ರ. ಇದರಿಂದ ಬಂದ ಉತ್ಪನ್ನ ಸಂಸಾರಕ್ಕೆ ಸಾಕಾಗುತ್ತಿರಲಿಲ್ಲ. ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಸಂಸಾರ ನಡೆಸಲು ಬಹಳ ಶ್ರಮಿಸುತ್ತಿದ್ದ. ಹೆಂಡತಿ ಗೌರಿಯೂ ಕೂಡ ಅವನ ಜೊತೆಗೂಡುತ್ತಿದ್ದಳು.

ಕನ್ನಪ್ಪ ಪಕ್ಕದ ಗ್ರಾಮದ ಭೀಮನೇರಿಯ ಹೆಣ್ಣನ್ನು ಮದುವೆಯಾಗಿದ್ದ. ಚೊಚ್ಚಲು ಹೆರಿಗೆ. ತೌರು ಮನೆಗೆ ಹೋಗಿದ್ದಾಳೆ ಹೆಂಡತಿ.

ಎರಡು ದಿನ ಕಳೆದ ಮೇಲೆ ಹೆಣ್ಣು ಮಗು ಹುಟ್ಟಿತೆಂಬ ವಿಷಯ ತಿಳಿಯಿತು. ಬೇಜಾರು ಮಾಡಿಕೊಂಡು ಮನೀಗೆ ಹೋಗದೆ ಹೊಲ್ದಾಗೆ ಕೆಲಸ ಮಾಡ್ತಿದ್ದ. ಮತ್ತೊಮ್ಮೆ ಹೇಳಿ ಕಳಿಸಿದ್ರೂ ಹೆಂಡ್ತಿ ಊರಿಗೆ ಹೋಗಿರಲಿಲ್ಲ. ಅವನವ್ವನೇ ಬಂದು, ‘ಏ ಕನ್ನ, ಓಗಿ ಬಾರ್ಲಾ, ಬಾಣಂತೀನ, ಕೂಸ್ನ ನೋಡ್ಕಂಡು ಬಾ’ ಎಂದು ಗದರಿಸಿದಳು.

ಅವ್ವ ಹೇಳಿದ ಮ್ಯಾಕೆ ಕನ್ನಪ್ಪ ಊರಿಗೆ ಹೋಗಿದ್ದ. ಗೌರ ಸಪ್ಪಗಿದ್ದಳು. ಗಂಡನನ್ನು ಕಂಡು, ನಿಧಾನ ದನಿಯಲ್ಲಿ.

“ದ್ಯಾವರು ಈಂಗ ಮಾಡಿಬಿಟ್ಟ. ನಮ್ಮ ಆಸೆ ಈಡೇರ್ಸಲಿಲ್ಲ. ಮುಂದಿನ ಸಾರಿ ಗಂಡೇ ಅಡೀತೀನಿ.” ಎಂದಳು ದೈನ್ಯತೆಯಿಂದ. ಅವನ ಮನಸ್ಸು ಗಂಡು ಮಗುವಾಗಲಿಲ್ಲ ಎಂದು ಹೆಂಡ್ತಿ ಹತ್ತಿರ ಸರಿಯಾಗಿ ಮಾತನಾಡಲಿಲ್ಲ. ಆ ದಿವ್ಸ ಇದ್ದು, ಮಾರನೇ ದಿನ ತನ್ನೂರಿಗೆ ವಾಪಾಸ್ಸಾದ. ಅವನ ತಾಯಿ ಮಗನನ್ನು ಕಂಡು -

“ಏನ್ಲಾ ಕನ್ನ, ಸೊಸೆ ಎಂಗವಳೆ, ಕೂಸು ಚೆನ್ನಾಗೈತೇನ್ಲಾ” ಎಂದು ಕೇಳಿದಳು.

“ವೂ, ಹೆಣ್ಣು ಕೂಸು ಕಣವ್ವಾ” ಎಂದು ಕೂಗಿದ.

ಮುದುಕಿ ಚಡಪಡಿಸುತ್ತಾ “ಕೂಸು ಯಾರಂಗೈತ್ಲಾ” ಎಂದಾಗ ಸುಮ್ಮನಿದ್ದ. ಮತ್ತೆ ಅವನವ್ವ “ಯಾರಂಗೈತ್ಲಾ” ಎಂದು ಜೋರಾಗಿ ಕೇಳಿದಳು.

“ವಸಿ ನಿನ್ನಂಗೈತೆ" ಎಂದು ಸಿಡಿಮಿಡಿಗೊಂಡಿದ್ದ.

ಹಿಂಗೆ ದಿನಾ ಹೊಲಕ್ಕೆ ಹೋಗ್ತಿದ್ದ ಕನ್ನಪ್ಪ. ಕೆಲಸ ಜೋರಾಗಿದೆ. ಅವನೈಗೆ ಸಾಲಾಗಿ ನಾಲ್ಕು ಹೆಣ್ಣು ಆಗಿವೆ. ಗೌರ ಮತ್ತೀಗ ಬಸುರಿ, ದಿನ ತುಂಬಿವೆ. ಮಗಳ ಆರೈಕೆಗೆ, ಬಾಣಂತಿತನಕ್ಕೆ ಅಂತಾ ಅವನ ಅತ್ತೆ ಇಲ್ಲಿಗೆ ಬಂದಿದ್ದಾಳೆ.

ಕನ್ನಪ್ಪ ಅಂದು ಬೆಳಿಗ್ಗೆ ಹೊತ್ಗೆ ಹೊಲಕ್ಕೆ ಹೋಗಿದ್ದ. ಗೌರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿ ಸೂಲಗಿತ್ತೇರೆಲ್ಲಾ ಸೇರಿದ್ದರು. ಮದ್ಯಾಹ್ನ ಊಟಕ್ಕೆ ಬರದೇ, ಕನ್ನಪ್ಪ ರೆಟ್ಟೆ ಮುರಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಮಗಳು ಊಟಕ್ಕೆ ಕರೆದ್ರೆ,

“ಬರಲ್ಲಾ ವೂಗು" ಎಂದು ಸಿಟ್ಟು ಮಾಡಿದ್ದ. ಮಗಳು ಪೆಚ್ಚು ಮೋರೆ ಹಾಕ್ಕೊಂಡು ಮನೆಗೋಗಿದ್ದಳು. ಆಗಲೆ ಅವರವ್ವಂಗೆ ಹೆರಿಗೆ ನೋವು ಜೋರಾಗಿತ್ತು.

ನರಳಾಟ ಜೋರಾಗಿತ್ತು. ಸುಮಾರು ದೂರ ಕೇಳ್ತಿತ್ತು.

ಅವರವ್ವನ ನರಳಾಟ ಕಂಡು ಹೊರಗಡೆ ಇದ್ದ ಹುಡುಗಿಯರು ಗಾಬರಿಯಾಗಿದ್ದರು. 

“ಏ ಅಕ್ಕಾ, ಅವ್ವನ ನರಳಾಟ ನೋಡಿದ್ರೆ, ಗಂಡು ಮಗಾನೆ ಆಗೋದು ಕಣೆ" ಎಂದೊಬ್ಬಳು ಹೇಳಿದಾಗ “ಹೌದು ಕಣೇ, ಈ ಸಾರಿ ಅವ್ವನ ನರಳಾಟ ಜೋರಾಗೈತೆ, ಗಂಡು ಮಗಾನೆ ಆಗೋದು" ಎಂದು ಇನ್ನೊಬ್ಬಳು ಧ್ವನಿಗೂಡಿಸಿದಳು.

ಈ ಹುಡುಗಿಯರು “ಏನೇ ಆದ್ರೂ ನಮ್ಮವ್ವನಿಗೆ ಈ ಸಾರಿಯಾದ್ರೂ ಗಂಡು ಮಗುವಾಗಲೀ’ ಎಂದು ಮನದಲ್ಲಿಯೇ ದೇವರನ್ನು ಧ್ಯಾನಿಸುತ್ತಾ, ತಮ್ಮ ತಮ್ಮಲ್ಲಿಯೇ ಮಾತಾಡಿಕೊಳ್ಳುತ್ತಿದ್ದರು.

ಅಷ್ಟರಲ್ಲಿ ಅಜ್ಜಿ ಹೊರಗೆ ಬಂದ್ಳು. ಆ ಹುಡುಗಿಯರು ಗಾಬರಿಯಿಂದ ಅಜ್ಜೀತವ ಓಡಿ ಬಂದರು. “ಏ ಏ! ಯಾಕಂಗ ಓಡಿ ಬರ್ತೀರಿ! ವಸಿ ನಿಲ್ರಿ.. ನಿಮ್ಮವ್ವಂಗೆ ಗಂಡು ಮಗು ಉಟ್ಟೈತೆ ಕಣ್ರೇ, ನಿಮ್ಮಪ್ಪಂಗೆ ವೋಗಿ ಏಳ್ರೇ’ ಎಂದಳು. ಅಷ್ಟು ಹೇಳಿದ್ದೇ ತಡ, ಆ ಮಕ್ಕಳು ಖುಷಿಯಾಗಿ ಒಂದೇ ಉಸುರಿಗೆ ಹೊಲಕ್ಕೆ ಓಡಿದರು. ಪಾಪ! ಎದುರಿಸುಬಿಡುತ್ತಾ ಅವರ ಅಪ್ಪನ ಮುಂದೆ ನಿಂತ್ಕಾರೆ.

“ಅಪ್ಪಾ.."

“ಏ ಅಪ್ಪಾ..."

“ಅಪ್ಪಾ..."

“ಏ ಅಪ್ಪಾ..." ಎಂದು ಕೂಗೇ ಕೂಗಿದರು. ಏನು ಅಂದ್ರೂ, ಕನ್ನಪ್ಪ ಇವರ ಕಡೆ ಮುಖ ತಿರುಗಿಸದೇ ಬದ ಕಡೀತಾನೆ ಇದ್ದ. ಅದಕ್ಕೆ ಆ ಹುಡಿಗಿಯರು ಪುನಹ-

“ಅಪ್ಪಾ..." ಎಂದು ಒಟ್ಟಿಗೆ ಜೋರಾಗಿ ಕೂಗಿದರು. ಅದಕ್ಕೆ ಅವನು ಕಣ್ಣು ಕೆಂಪಗೆ ಮಾಡಿ

“ಆ ! ಏನ್ರೇ” ಮುಂಡೇರಾ.." ಎಂದು ಗದರಿದ.

ಆ ಮಕ್ಕಳು “ತಮ್ಮಾ ಉಟ್ಯಾನೆ" ಎಂದು ಹೆದರಿಕೆಯಿಂದ ನಿಧಾನವಾಗಿ ಹೇಳಿದರು. ಕಣ್ಣಗಲಿಸಿ, “ಆ! ಅಂಗ! ನಿಜವೇನ್ರೇ.." ಎಂದ.

“ವೂ ಕಣಪ್ಪಾ” ಎಂದಾಕ್ಷಣ ಅವ ಹೊಲದ ಕೆಲಸ ಮಾಡೋದನ್ನೇ ನಿಲ್ಲಿಸಿಬಿಟ್ಟ. ಅವನ ತಲೆಗೆ ಮಿಂಚು ಹೊಡೆದಂಗಾಗಿ - 

“ಇನ್ನು ನಂಗೇನು ಕೆಲ್ಸ. ಈ ಒಲ್ದಾಗೆ, ಬೇಕಾದ್ರೆ ಅವ ಮಾಡ್ಕಂತಾನೆ" ಎಂದು ಗುದ್ದಲಿ, ಪಿಕಾಸಿ ಎಲ್ಲಾ ಬಿಸಾಕಿ, ಮಕ್ಕಳ ಜೊತೆ ಓಡಿದ, ಮನೆಗೆ.

(ಕೇಳಿದ್ದು)- ಪ್ರಕಾಶ್ ಆರ್.ಕಮ್ಮಾರ್

ಚಿತ್ರ: ಅಂತರ್ಜಾಲ ಕೃಪೆ