ಈ ಹುಡುಗಿಯರೇ ಹೀಗೆ !

ಈ ಹುಡುಗಿಯರೇ ಹೀಗೆ !

ಕವನ

ಬೆಟ್ಟದ ಬದಿಯಿಂದ
ಮುಂಜಾನೆಯ ರವಿ ಇಣುಕಿದಂತೆ
ಕಿಟಕಿ ಹಿಂದಿನ ಕಂಗಳು,
ಕಂಡೂ ಕಾಣದ ಮುಂಗುರುಳು
ಗಲಗಲ ಬಳೆಯ ತರಂಗ
ಕಿಲಕಿಲ ನಗುವಿನಂತರಂಗ,

ಎದುರು ಬರಲಾರರು ಚೆಲುವೆಯರು
ಬಂದರೂ ಬಹು ಲಾಸ್ಯ ಲಜ್ಜೆ
ಇಡುತಲಿ ಒಂದೊಂದೇ ಹೆಜ್ಜೆ
ಮುಗಿಲಿಂದ ಬರಗಾಲದಿ ಮಳೆ ಹನಿ
ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ !

ಕಿರು ಹಣತೆ ಉರಿಯಂತೆ ತುಟಿ ರಂಗು
ಪತಂಗ ಹಾರಿದಂತೆ ತೆಳು ಸೆರಗು
ಕಾವ್ಯದೊಡತಿಯರು,
ಮೌನವೇ ಮಾತು.
ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ
ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ
ಒಮ್ಮೆ ಧಾರಾಳ ದಮಯಂತಿ
ಮಗದೊಮ್ಮೆ ಮುನಿದ ಮಗುವಂತೆ
ಅಲ್ಲಿ ಪ್ರೇಮ ಪ್ರೀತಿಯನ್ನರಸುವ
ಹುಡುಗನ ನಿರಂತರ ಬೇಟೆ !

ಅರಿವಾಗುವ ಮುನ್ನವೇ ಮಾನಸಿಕ
ಪತ್ನಿಯಾಗಿರುತ್ತಾಳೆ,
ಛೇಧಿಸಿ ಹೃದಯ ಕೋಟೆ.

Comments