ಉಂಡಲಕಾಳು

ಉಂಡಲಕಾಳು

ಬೇಕಿರುವ ಸಾಮಗ್ರಿ

ಉಪ್ಪು ತೆಗೆದ ಹಲಸಿನ ಸೊಳೆ ೬ ಕಪ್, ತೆಂಗಿನಕಾಯಿ ೧/೨, ಬೆಳ್ತಿಗೆ ಅಕ್ಕಿ ೧ ಕಪ್, ಜೀರಿಗೆ ೧ ಚಮಚ, ತೆಂಗಿನೆಣ್ಣೆ ಕರಿಯಲು.

ತಯಾರಿಸುವ ವಿಧಾನ

ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಿ. ಉಪ್ಪುಸೊಳೆಯನ್ನು ಭರಣಿಯಿಂದ ತೆಗೆದು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಇಡಿ. ಉಪ್ಪು ಬಿಡುವಷ್ಟು ಸಮಯ ನೀರು ಬದಲಿಸಿ(ಮರ‍್ನಾಲ್ಕು ಬಾರಿ). ಸೊಳೆಯಲ್ಲಿರುವ ನೀರನ್ನು ಹಿಂಡಿ ತೆಗೆಯಿರಿ. ನೆನೆ ಹಾಕಿದ ಅಕ್ಕಿಯನ್ನು ತೊಳೆದು ನೀರು ಬಸಿದು ತೆಂಗಿನ ತುರಿ, ಜೀರಿಗೆ, ಹಿಂಡಿದ ಸೊಳೆ ಸೇರಿಸಿ ಗಟ್ಟಿಗೆ ನುಣ್ಣಗೆ ರುಬ್ಬಿ. ಒಂದು ವೇಳೆ ಹಿಟ್ಟು ನೀರು ಆದರೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ. ಹಿಟ್ಟನ್ನು ಚೆನ್ನಾಗಿ ನಾದಿ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿ (ಉಂಡೆಯ ಒಳಗೆ ಕೊಬ್ಬರಿ ಚೂರು ಇಟ್ಟರೆ ರುಚಿ ಜಾಸ್ತಿ). ಎಣ್ಣೆ ಕಾಯಲಿಕ್ಕಿಟ್ಟು ಅದರಲ್ಲಿ ಮುಳುಗುವಷ್ಟು ಉಂಡೆಗಳನ್ನು ಹಾಕಿ ಗರಿಗರಿಯಾಗಿ ಕರಿದು ತೆಗೆಯಿರಿ. ಗಾಳಿ ಸೋಕದಂತೆ ಇಟ್ಟರೆ ನಾಲ್ಕು ತಿಂಗಳಿಗೂ ಅಧಿಕ ಸಮಯ ಉಳಿಯುತ್ತದೆ. 

- ಸಹನಾ ಕಾಂತಬೈಲು, ಮಡಿಕೇರಿ