ಉಂಡ ಮನೆಗೆ ದ್ರೋಹ ಬಗೆದ ಟರ್ಕಿ

ಉಂಡ ಮನೆಗೆ ದ್ರೋಹ ಬಗೆದ ಟರ್ಕಿ

ಸಂಕಷ್ಟ ಒದಗಿ ಬಂದಾಗ ಯಾರು ಸ್ನೇಹಿತರು, ಯಾರು ಹಿತೈಷಿಗಳಲ್ಲ ಎಂಬುದರ ನೈಜ ಅನುಭವ ಎಲ್ಲರ ಜೀವನದಲ್ಲಿಯೂ ಆಗುತ್ತದೆ. ಹಾಗೆಯೇ ಒಂದು ರಾಷ್ಟ್ರಕ್ಕೂ ಇಂಥ ಅನುಭವ ಹೊರತಲ್ಲ. ಪಹಲ್ಗಾಮ್ ನಲ್ಲಿ ೨೬ ಭಾರತೀಯರ ನರಮೇಧದ ಬೆನ್ನಲ್ಲೇ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ’ದ ಸಂದರ್ಭದಲ್ಲಿ ಹೊಸದಿಲ್ಲಿಗೆ ಇದು ಹೆಚ್ಚು ಮನದಟ್ಟಾಗಿದೆ. ಈ ನರಮೇಧವನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಖಂಡಿಸಿದರೂ, ಭಾರತದಿಂದ ಅಪಾರ ಪ್ರಯೋಜನ ಉಂಡ ಕೆಲವು ರಾಷ್ಟ್ರಗಳು ಮಾತ್ರ ಈ ಬಗ್ಗೆ ಕಿಂಚಿತ್ ಕರುಣೆಯನ್ನೂ ವ್ಯಕ್ತಪಡಿಸಿರಲಿಲ್ಲ. ಅದರಲ್ಲೂ ಟರ್ಕಿಗೆ ಈ ಉಗ್ರರ ದುಷ್ಕೃತ್ಯ ಭಾರತಕ್ಕಾದ ಘೋರ ಅನ್ಯಾಯ ಎಂದು ಅನಿಸಿಯೇ ಇಲ್ಲ.

ಟರ್ಕಿಯ ಆ ಮೊದಲ ಧೋರಣೆಯಲ್ಲೇ ಅದು ಯಾರ ಪರ ನಿಂತಿದೆ ಎಂಬ ಸಂಗತಿ ಬಹಿರಂಗವಾಗಿತ್ತು. ಭಾರತ - ಪಾಕ್ ನಡುವಿನ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಟರ್ಕಿ ನಮ್ಮ ಎದುರಾಳಿ ರಾಷ್ಟ್ರದ ಬೆನ್ನಿಗೆ ಕೆಲಸ ಮಾಡಿರುವುದು, ಸಶಸ್ತ್ರ -ಡ್ರೋನ್ ಆದಿಯಾಗಿ ಸೈನಿಕರನ್ನೂ ಪೂರೈಸಿರುವುದು ‘ಉಂಡ ಮನೆಗೆ ದ್ರೋಹ ಬಗೆದ’ ಕೆಲಸವಷ್ಟೇ. ೨೦೨೩ರಲ್ಲಿ ಇದೇ ಟರ್ಕಿ ಭೀಕರ ಭೂಕಂಪಕ್ಕೆ ನಲುಗಿ, ೫೫ ಸಾವಿರ ಜನರನ್ನು ಕಳೆದುಕೊಂಡಾಗ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ೧೪೦ ಕೋಟಿ ಜನ ಟರ್ಕಿಯ ಭೂಕಂಪದ ಸಂತ್ರಸ್ತರೊಂದಿಗಿದ್ದಾರೆ’ ಎಂದಿದ್ದಲ್ಲದೆ, ಟರ್ಕಿಗೆ ತಕ್ಷಣವೇ ಮಾನವೀಯ ನೆರವನ್ನೂ ಪೂರೈಸಿದ್ದರು. ಈ ನೆರವಿನ ಕಾರ್ಯಾಚರಣೆಗೆ ‘ಆಪರೇಷನ್ ದೋಸ್ತ್’ ಎಂದು ಹೆಸರಿಟ್ಟು, ಇದರಡಿಯಲ್ಲಿ ವೈದ್ಯಕೀಯ ನೆರವು ನೀಡಿತ್ತು ಭಾರತ. ಎನ್ ಡಿ ಆರ್ ಎಫ್ ನ ೨ ತಂಡಗಳು ಹಾಗೂ ಶ್ವಾನದಳವನ್ನೂ ರವಾನಿಸಲಾಗಿತ್ತು. ಭಾರತೀಯ ರಕ್ಷಣಾ ತಂಡಗಳು ಅಲ್ಲಿ ೧೦ ದಿನಗಳ ಕಾರ್ಯಾಚರಣೆ ನಡೆಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತವಾಗಿ ಹೊರತೆಗೆಯುವ, ಆರೋಗ್ಯ ಉಪಚಾರ ನೀಡುವ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸಗಳನ್ನೂ ಮಾಡಿದ್ದರು. ೬ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿ ೩೦ ಹಾಸಿಗೆಗಳ ಸಂಚಾರಿ ಆಸ್ಪತ್ರೆಗಳು ಟರ್ಕಿಗೆ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಈ ಮೂಲಕ ಭಾರತ ಮಿತ್ರನಾಗಿರಲಿ, ಶತ್ರುವಾಗಿರಲಿ, ಯಾರಾದರೂ ಸಂಕಷ್ಟದಲ್ಲಿದ್ದಾಗ ಮೊದಲು ನೆರವಾಗುವುದೇ ಮನುಷ್ಯ ಧರ್ಮ. ಆ ದಯವೇ ಧರ್ಮದ ಮೂಲವಯ್ಯ ಎಂಬ ಬಸವ ಸಂದೇಶವನ್ನು ಜಗತ್ತಿಗೆ ಪುನಃ ಸಾರಿತ್ತು.

ಆದರೆ, ಟರ್ಕಿ ಈಗ ಕೃತಘ್ನನಂತೆ ವರ್ತಿಸಿ, ಪಾಕಿಸ್ತಾನವನ್ನು ಬೇಷರತ್ ಬೆಂಬಲಿಸುವ ಮೂಲಕ ಭಾರತದ ವಿರುದ್ಧವೇ ಷಡ್ಯಂತ್ರ ರೂಪಿಸಿರುವುದು ಖಂಡನೀಯ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಆಂತರಿಕ ವಿಚಾರಗಳಲ್ಲಿ ಪದೇಪದೆ ಮೂಗು ತೂರಿಸುವ ಟರ್ಕಿ, ಈ ಹಿಂದೆಯೂ ಸಾಕಷ್ಟು ಬಾರಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಕೇವಲ ಟರ್ಕಿಯಲ್ಲ, ಇತ್ತೀಚಿನ ದಿನಗಳಲ್ಲಿ ಭಾರತದ ವಿರೋಧಿಗಳ ಬೆನ್ನಿಗೆ ನಿಂತಂತೆ ವರ್ತಿಸುತ್ತಿರುವ ಬಾಂಗ್ಲಾದೇಶ, ನೇಪಾಳ, ಕೆಲವೊಮ್ಮೆ ಶ್ರೀಲಂಕಾ, ಮಾಲ್ಡೀವ್ಸ್ ಗಳ ವರ್ತನೆಯೂ ಇದೇ ಹಾದಿಯಲ್ಲಿ ಸಾಗಿದ್ದವು. ‘ದಾನವನ್ನು ಅಪಾತ್ರರಿಗೆ ಮಾಡಬಾರದು’ ಎನ್ನುವ ಭಗವದ್ಗೀತೆಯ ಸಂದೇಶದಂತೆ ಭಾರತ ಮುಂದಿನ ದಿನಗಳಲ್ಲಿ ತನ್ನ ಆಪತ್ಕಾಲದ ಪರಿಹಾರ ನೀತಿಯನ್ನು ಪರಿಷ್ಕರಿಸಬೇಕೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೫-೦೫-೨೦೨೫ 

ಚಿತ್ರ ಕೃಪೆ: ಅಂತರ್ಜಾಲ ತಾಣ