ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಬರಹ
ನಮಗೆಲ್ಲ ಉ ಪ್ರಥಮಾವಿಭಕ್ತಿಪ್ರತ್ಯಯವೆಂದು ಹೇೞಿಕೊಡುತ್ತಾರೆ. ಆದರೆ ಎಲ್ಲೂ ಉಕಾರ ಉಚ್ಚಾರಣೆಯ ಸಲುವಾಗಿ ಇರುವ ಅಕ್ಷರವೇ ಹೊಱತು ವಿಭಕ್ತಿ ಪ್ರತ್ಯಯವಲ್ಲ. ಎಲ್ಲೂ ರಾಮಂ ಬಂದಂ ಎಂಬುದು ಹೊಸಗನ್ನಡದಲ್ಲಿ ಉಚ್ಚಾರದ ಸಲುವಾಗಿ ರಾಮನು ಬಂದನು ಎಂದಾಗುತ್ತದೆ. ಆದರೆ ಇಕಾರಾಂತ ಉಕಾರಾಂತಗಳಿಗೆ ಉ ಪ್ರಥಮಾವಿಭಕ್ತಿಯಾಗಿ ಬೞಕೆ ಕಾಣದು. ಹರಿ ಬಂದಂ. ಗುರು ಬಂದಂ ಎಂದೇ ಸಿಗುತ್ತದೆ. ನ್, ಣ್, ಯ್, ರ್, ಱ್, ಲ್, ಳ್, ೞ್ ಇವುಗಳಿಂದ ಕೊನೆಗೊಳ್ಳುವ ಇತರ ವ್ಯಂಜನಾಂತ ಶಬ್ದಗಳಿಗೆ ಉಕಾರ ಸೇರಿಸಿಕೊಳ್ಳುವುದು ವಾಡಿಕೆ. ಉದಾ: ಕಾಡ್->ಕಾಡು, ನಾಡ್->ನಾಡು. ಇಲ್ಲಿ ನಿಜವಾಗಿ ಉಕಾರವಿಲ್ಲ. ಇಲ್ಲೆಲ್ಲ ಉಚ್ಚರಿಸುವಾಗ ಎರಡು ತುಟಿಗಳು ಉಂಗುರವಾಗುವ ಬದಲು ಸೇರಿಕೊಂಡು ಚಪ್ಪಟೆಯಾಗುತ್ತವೆ. ಆದರೆ ಗುರು ಎಂದಾಗ ಎರಡು ತುಟಿಗಳು ಸುರಳಿ (ಉಂಗುರ)ಯಾಗುತ್ತವೆ. ಬೆಂಗಳೂರ್ ನಮ್ಮ ಅನುಕೂಲಕ್ಕಾಗಿ ಬೆಂಗಳೂರು. ಆದರೆ ನಿಜಕ್ಕೂ ಉಕಾರಾಂತವಲ್ಲ. ಹಾಗಾಗಿ ಬೆಂಗಳೂರುವಿನ ರೂಪ ತಪ್ಪು. ಬೆಂಗಳೂರಿನ ರೂಪ ಸರಿ. ಹಾಗೆಯೇ ಗೋಣಿಕೊಪ್ಪಲ್, ಒಂಟಿಕೊಪ್ಪಲ್ ಇತ್ಯಾದಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ