ಉಕ್ರೇನಿನ ಮಗುವಿನ ಪ್ರಶ್ನೆಗೆ ದೇವರು ಉತ್ತರಿಸುವನೇ…?
ಉಕ್ರೇನಿನ ಸೈನಿಕರೊಬ್ಬರ 5 ವರ್ಷದ ಮಗು ತನ್ನ ತಂದೆ ರಷ್ಯಾದ ಆಕ್ರಮಣದ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಡಿ ಹತ್ಯೆಯಾದಾಗ ತನ್ನ ತಾಯಿಯನ್ನು ಕೇಳುತ್ತದೆ " ಅಮ್ಮಾ ಪ್ರತಿನಿತ್ಯ ನೀನು ಅಪ್ಪನಿಗಾಗಿ ದೇವರನ್ನು ಪ್ರಾರ್ಥಿಸು ಎಂದು ಹೇಳುತ್ತಿದ್ದೆ. ನಾನು ಹಾಗೆಯೇ ಮಾಡುತ್ತಿದ್ದೆ. ಆದರೆ ನನ್ನ ಅಪ್ಪ ಬದುಕಿ ಉಳಿಯಲಿಲ್ಲ. ಹಾಗಾದರೆ ನನ್ನ ಪ್ರಾರ್ಥನೆ ಸರಿ ಇರಲಿಲ್ಲವೇ ಅಥವಾ ಆ ದೇವರು ಇಲ್ಲವೇ " ತಾಯಿಗೆ ಅಳುವಿನ ಹೊರತು ಬೇರೆ ಉತ್ತರ ಹೊಳೆಯಲಿಲ್ಲ. ಶತ ಶತಮಾನಗಳಿಂದ ಈ ಪ್ರಶ್ನೆಗೆ ಉತ್ತರ ದೊರಕಿಲ್ಲ. ಕಾರಣ ದೇವರು ಉತ್ತರಿಸಲೇ ಇಲ್ಲ. ದೇವರ ಪರವಾಗಿ ಮನುಷ್ಯರು ಉತ್ತರಿಸುವರು ?!
ದೇವರು ಎಷ್ಟೊಂದು ಒಳ್ಳೆಯವನಲ್ಲವೇ.. ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇರಾಕ್ ನಡುವೆ ಯುದ್ಧ ಮಾಡಿಸಿದ. ಹಿರೋಷಿಮಾ ನಾಗಸಾಕಿ ಮೇಲೆ ಬಾಂಬ್ ಹಾಕಿಸಿ ಜಪಾನಿನ ಲಕ್ಷಾಂತರ ಜನರನ್ನು ಜೀವಂತ ಶವ ಮಾಡಿಸಿದ. ಸಿರಿಯಾದಲ್ಲಿ ಲಕ್ಷಾಂತರ ಜನರನ್ನು ರಾಸಾಯನಿಕ ಅಸ್ತ್ರ ಬಳಸಿ ಕೊಲ್ಲಿಸಿದ. ಪುಲ್ವಾಮದಲ್ಲಿ ದೇಶ ರಕ್ಷಣೆ ಮಾಡುತ್ತಿದ್ದ ಯೋಧರನ್ನು ಒಮ್ಮೆಗೇ ಸಾಯಿಸಿದ. ಕಾಶ್ಮೀರದಲ್ಲಿ ಪಂಡಿತರ ಮಾರಣ ಹೋಮ ಮಾಡಿಸಿದ. ಅಫ್ಘಾನಿಸ್ಥಾನದಲ್ಲಿ ಈಗಲೂ ಜನರನ್ನು ಹತ್ಯೆ ಮಾಡಿಸುತ್ತಲೇ ಇದ್ದಾನೆ. ಆಫ್ರಿಕಾದ ಕೆಲವು ದೇಶಗಳಲ್ಲಿ ಈಗಲೂ ಅಮಾಯಕರ ರಕ್ತ ಹರಿಸುತ್ತಲೇ ಇದ್ದಾನೆ. ಈಗ ರಷ್ಯಾದ ಪುಟಿನ್ ಮೂಲಕ ಉಕ್ರೇನ್ ಜನರನ್ನು ಸಮಾಧಿ ಮಾಡಿಸುತ್ತಿದ್ದಾನೆ.
ದೇವರು ಎಷ್ಟೊಂದು ಒಳ್ಳೆಯವನಲ್ಲವೇ? ಅನ್ನ ಬೆಳೆಯುವ ರೈತರನ್ನೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ಪುಟ್ಟ ಶಾಲಾ ಮಕ್ಕಳ ವ್ಯಾನನ್ನು ರೈಲಿಗೆ ಗುದ್ದಿಸಿ ಅವರ ಪ್ರಾಣವನ್ನೇ ತೆಗೆಯುತ್ತಾನೆ. ಎಷ್ಟೋ ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿಸಿ ಅವರನ್ನು ಕೊಲ್ಲಿಸುತ್ತಾನೆ. ಅದಕ್ಕಾಗಿಯೇ ಅಲ್ಲವೆ, ವಿಶ್ವದ ಎಲ್ಲಾ ಧರ್ಮಗಳ ಬಹುತೇಕ ಜನ ದೇವರನ್ನು ನಂಬಿ ಆರಾಧಿಸುವುದು. ಇಡೀ ಸೃಷ್ಟಿಯನ್ನು ನಿಯಂತ್ರಿಸುತ್ತಿರುವುದೇ ದೇವರಲ್ಲವೇ?
ಹುಟ್ಟಿಸುವವನೂ ಅವನೇ, ಸಾಯಿಸುವವನೂ ಅವನೇ, ವೃದ್ದಾಶ್ರಮಗಳನ್ನು ಹೆಚ್ಚಿಸುತ್ತಿರುವುದು ಅವನೇ, ಜೈಲುಗಳನ್ನು ತುಂಬಿಸುತ್ತಿರುವುದು ಅವನೇ, ಆಸ್ಪತ್ರೆಗಳನ್ನು ಬೆಳೆಸುತ್ತಿರುವುದು ಅವನೇ, ಭ್ರಷ್ಟರನ್ನು ಚುನಾಯಿಸುತ್ತಿರುವುದು ಅವನೇ,
ಜನಸಂಖ್ಯೆಯನ್ನು ಮುಂದುವರಿಸುತ್ತಿರುವುದು ಅವನೇ, ಜಾತಿವಾದಿ, ಕೋಮುವಾದಿ, ಭ್ರಷ್ಟ, ವಂಚಕ, ಸಮಾಜ ದ್ರೋಹಿ ಮನೋಭಾವದವರನ್ನು ಎಂಎಲ್ಎ, ಎಂಪಿ, ಮಂತ್ರಿಯಾಗಿ ಮಾಡುತ್ತಿರುವುದು ಅವನೇ… ದಗಾಕೋರರಿಂದ ಕಾಣಿಕೆ ಪಡೆದು ಅವರಿಂದಲೇ ಹೋಮ ಹವನ ಪೂಜೆ ಮಾಡಿಸಿಕೊಳ್ಳುತ್ತಿರುವವನು ಅವನೇ. ಮಂದಿರ ಮಸೀದಿ ಚರ್ಚುಗಳ ಮುಂದೆ ಹಸಿದವರನ್ನು ಭಿಕ್ಷೆಗೆ ದೂಡಿ ಗಹಗಹಿಸಿ ನಗುತ್ತಿರುವವನು ಅವನೇ, ಮಾನವೀಯ ಮನಸ್ಸುಗಳಿಗೆ, ಅವರ ಒಳ್ಳೆಯ ಗುಣಗಳಿಗೆ ಅಪಾರ ನೋವು ಕೊಡುತ್ತಿರುವವನು ಅವನೇ, ಆದರೂ ಪ್ರತಿ ಕ್ಷಣ ವಿಶ್ವದ ಎಲ್ಲಾ ಕಡೆ, ಎಲ್ಲಾ ಸಂಧರ್ಭಗಳಲ್ಲೂ, ಬೇರೆ ಬೇರೆ ಹೆಸರುಗಳಿಂದ ವಿವಿಧ ರೀತಿಯಲ್ಲಿ ಅಗ್ರ ಪೂಜೆ ಮಾಡಿಸಿ ಜನರಿಂದ ಮೆರೆಯುತ್ತಿರುವವನು ಅವನೇ...
ಹಿಂದೂ, ಮುಸ್ಲಿಂ , ಕ್ರಿಶ್ಚಿಯನ್ನರು ಸೇರಿದಂತೆ ಬಹುತೇಕ ಧರ್ಮಗಳಲ್ಲಿ ಅಗ್ರಗಣ್ಯ ಅವನೇ, ಅಯ್ಯಾ ದೇವರೇ, ಏನಯ್ಯ ನಿನ್ನ ಲೀಲೆ. ಎಂದೂ, ಎಲ್ಲಿಯೂ ಕಾಣಿಸಿಕೊಳ್ಳದ ನೀನು, ಜನರ ಹೃದಯದಲ್ಲಿ ನೆಲೆಸಿ ಇಡೀ ಸೃಷ್ಟಿಯ ಅಧಿಪತಿ ಎಂದು ಬಿಂಬಿಸಿಕೊಳ್ಳುತ್ತಿರುವೆ. ಕಾಲ್ಪನಿಕ ವ್ಯಕ್ತಿಯೊಬ್ಬ ಒಂದು ಶಕ್ತಿಯಾಗಿ ಮಾನವ ಕುಲವನ್ನು ನಿಯಂತ್ರಿಸುತ್ತಿರುವುದು ಮನುಷ್ಯನ ವಿವೇಚನಾ ಶಕ್ತಿಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಅಂತಹ ದೈತ್ಯ ಶಕ್ತಿಯ ಮುಂದೆ, ನಮ್ಮಂತ ಹುಲುಮಾನವನ ಅಭಿಪ್ರಾಯ ಯಾವ ಲೆಕ್ಕ. ಗಾಳಿ ಬಂದ ಕಡೆ ತೂರಿಕೊಂಡು ಅದರೊಂದಿಗೆ ಬದುಕುವವನೇ ಜಾಣ ಎಂಬ ವ್ಯವಸ್ಥೆಯಲ್ಲಿ ಸತ್ಯದ ಹುಡುಕಾಟವೇ ಒಂದು ಹುಚ್ಚುತನ. ಆದರೂ ಪ್ರಯತ್ನ ಮಾತ್ರ ನಿಲ್ಲಬಾರದು...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ