ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಪುಟಿನ್ ನಡೆ ಅಕ್ಷಮ್ಯ

ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಪುಟಿನ್ ನಡೆ ಅಕ್ಷಮ್ಯ

ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾದ ನಡೆಯನ್ನು ಯಾವುದೇ ರೀತಿಯಲ್ಲಿಯೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪದೇ ಪದೇ ಬಂದು ಮಾನವ ಕುಲವನ್ನು ಕಾಡಿಸಿರುವ ಕೋವಿಡ್ ಸಾಂಕ್ರಾಮಿಕದ ಅಲೆಗಳ ಪರಿಣಾಮಗಳಿಂದ ಜಗತ್ತು ಚೇತರಿಸಿಕೊಳ್ಳಲು ಇನ್ನೂ ಬಹಳ ಸಮಯ ಬೇಕಿದೆ. ಇಂತಹ ವಿಷಮ ಸಂದರ್ಭದಲ್ಲಿ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಸಾರಿದ್ದಾರೆ. ಉಕ್ರೇನ್ ಮಾತ್ರವಲ್ಲ ಇಡೀ ಜಗತ್ತು ಯುದ್ಧದ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪ್ರತಿಯೊಂದು ದೇಶವೂ ಒಂದಲ್ಲ ಒಂದು ರೀತಿಯಲ್ಲಿ ಬೇರೊಂದು ದೇಶವನ್ನು ವಿವಿಧ ವಿಷಯಗಳಿಗಾಗಿ ಅವಲಂಬಿಸಿದೆ ಎಂಬುದು ಈ ಕಾಲದ ವಾಸ್ತವ. ಹಾಗೆಯೇ ಯುದ್ಧದಂತಹ ಸಂದರ್ಭವು ಎಲ್ಲ ದೇಶಗಳಿಗೂ ಕಳವಳ ಉಂಟುಮಾಡುತ್ತದೆ. ರಷ್ಯಾ ಮತ್ತು ಉಕ್ರೇನ್ ದೇಶಗಳೆರಡೂ ಜಗತ್ತಿನ ವಿವಿಧ ದೇಶಗಳಿಗೆ ಹಲವು ಸಾಮಾಗ್ರಿಗಳನ್ನು ಪೂರೈಸುತ್ತವೆ. ಗೋಧಿ, ಸೂರ್ಯಕಾಂತಿ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳು, ರಕ್ಷಣಾ ಸಮಾಗ್ರಿಗಳು... ಹೀಗೆ ವಿವಿಧ ವಸ್ತುಗಳನ್ನು ಈ ದೇಶಗಳು ರಫ್ತು ಮಾಡುತ್ತವೆ. ರಷ್ಯಾದ ಸೇನೆಯು ಉಕ್ರೇನ್ ನಲ್ಲಿ ಮಾಡಬಹುದಾದ ವಿವೇಕ ರಹಿತ ಧ್ವಂಸವು ಉಕ್ರೇನ್ ನ ಉತ್ಪಾದಕ ಸಾಮರ್ಥ್ಯವನ್ನು ಕುಗ್ಗಿಸಬಹುದು. ಅತಿಕ್ರಮಣದ ಕಾರಣಕ್ಕಾಗಿ ರಷ್ಯಾದ ಮೇಲೆ ಹೇರಲಾಗುವ ನಿರ್ಭಂಧಗಳಿಂದಾಗಿ ಆ ದೇಶದ ರಫ್ತು ಕೂಡಾ ಕುಂಠಿತಗೊಳ್ಳುತ್ತದೆ. ಗೋಧಿ, ಸೂರ್ಯಕಾಂತಿ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳಂತಹ ಅಗತ್ಯ ವಸ್ತುಗಳ ಕೊರತೆ ಉಂಟಾಗಿ, ಅವುಗಳ ಬೆಲೆ ಏರಿಕೆಯಾಗಿ , ಜಗತ್ತಿನ ಎಲ್ಲೆಡೆಯೂ ಜನರ ಬದುಕು ದುರ್ಭರವಾಗುತ್ತದೆ ಎಂಬ ಅರಿವು ಯುದ್ಧ ಸಾರಿದ ಪುಟಿನ್ ಗೆ ಇರಬೇಕಿತ್ತು. ರಷ್ಯಾ ಮತ್ತು ಉಕ್ರೇನ್ ನಡುವಣ ಸಂಘರ್ಷವು ೨೦೧೪ರಿಂದ ಹೆಚ್ಚುತ್ತಲೇ ಬಂದಿದೆ. ಉಕ್ರೇನ್ ಭಾಗವಾದ ಕ್ರಿಮಿಯಾದ ಮೇಲೆ ೨೦೧೪ರ ಮಾರ್ಚ್ ನಲ್ಲಿ ರಷ್ಯಾ ನಿಯಂತ್ರಣ ಸಾಧಿಸಿತು. ಬಳಿಕ ಪೂರ್ವ ಉಕ್ರೇನ್ ನ ಡೋನೆಡ್ಸ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳು ಸ್ವಾತಂತ್ರ್ಯ ಘೋಷಿಸಿಕೊಂಡವು. ಈ ಪ್ರದೇಶಗಳಲ್ಲಿನ ಆಂತರಿಕ ಸಂಘರ್ಷಕ್ಕೆ ರಷ್ಯಾದ ಒತ್ತಾಸೆಯೇ ಕಾರಣ ಎಂಬ ಆರೋಪ ಇದೆ. ಉಕ್ರೇನ್ ಮೇಲೆ ಸೈಬರ್ ದಾಳಿಯಂತೂ ಸಾಮಾನ್ಯ ಅನ್ನಿಸಿಬಿಟ್ಟಿದ್ದವು. ಸಾರ್ವಭೌಮ ದೇಶವೊಂದರ ಮೇಲೆ ಈ ರೀತಿಯ ದಾಳಿ ಒಪ್ಪತಕ್ಕ ವಿಷಯವಲ್ಲ.

೨೦೨೧ರ ಅಕ್ಟೋಬರ್ ನಿಂದಲೇ ಗಡಿಯಲ್ಲಿ ಸೇನೆ ಜಮಾಯಿಸುವ ಕೆಲಸವನ್ನು ರಷ್ಯಾ ಮಾಡಿದೆ. ಯುದ್ಧದ ಅಪಾಯ ದಟ್ಟವಾಗುತ್ತಿದಂತೆಯೇ ಜರ್ಮನಿ, ಫ್ರಾನ್ಸ್ ಸೇರಿ ವಿವಿಧ ದೇಶಗಳು ಯುದ್ಧ ತಪ್ಪಿಸುವ ಪ್ರಯತ್ನ ಮಾಡಿವೆ. ನಿರ್ಭಂಧಗಳ ಬೆದರಿಕೆಯನ್ನೂ ಹಾಕಲಾಗಿದೆ. ಆದರೆ, ಪುಟಿನ್ ಅವರು ಇದ್ಯಾವುದನ್ನೂ ಲೆಕ್ಕಿಸಿಲ್ಲ. ಉಕ್ರೇನ್ ನಲ್ಲಿರುವ ರಷ್ಯನ್ ರನ್ನು ರಕ್ಷಿಸಬೇಕು ಎಂಬುದು ಅವರು ಮುಂದಿಟ್ಟಿರುವ ಕಾರಣ. ‘ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಿಕೊಳ್ಳಬಾರದು, ಉಕ್ರೇನ್ ಮತ್ತು ರಷ್ಯಾ ಸಮೀಪದಲ್ಲಿರುವ ಈಸ್ಪೋನಿಯಾ, ಲಿಥುವೇನಿಯಾ, ಲಾತ್ವಿಯಾ ಮತ್ತು ಪೋಲೆಂಡ್ ನಿಂದ ನ್ಯಾಟೋ ಪಡೆಗಳನ್ನು ಕಡಿತಗೊಳಿಸಬೇಕು ಎಂಬ ಬೇಡಿಕೆಯನ್ನು ರಷ್ಯಾ ೨೦೨೧ರ ಡಿಸೆಂಬರ್ ನಲ್ಲಿ ಮುಂದಿಟ್ಟಿತ್ತು. ಈ ಬೇಡಿಕೆಗಳನ್ನು ನ್ಯಾಟೋ ಮತ್ತು ಅಮೇರಿಕಾ ತಿರಸ್ಕರಿಸಿತ್ತು. ಉಕ್ರೇನ್ ನ್ಯಾಟೊ ಸೇರುವುದನ್ನು ತಡೆಯುವುದೇ ಪುಟಿನ್ ಉದ್ದೇಶ. ಆದರೆ ಸಮಸ್ಯೆಗಳಿಗೆ ಯುದ್ಧ ಪರಿಹಾರವಲ್ಲ. ಬದಲಿಗೆ, ಯುದ್ಧವೇ ದೊಡ್ಡ ಸಮಸ್ಯೆ ಮತ್ತು ಅದು ಮತ್ತೂ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಯುದ್ಧದ ಮೊದಲ ದಿನವೇ ೧೩೭ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ದೇಶ ತೊರೆದು ನಿರಾಶ್ರಿತರಾಗಿದ್ದಾರೆ. ಸಂಘರ್ಷ ಮುಂದುವರೆದರೆ ೫೦ ಲಕ್ಷ ಜನರು ನಿರಾಶ್ರಿತರಾಗಬಹುದು ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಸಾವು-ನೋವು, ನಾಶ-ನಷ್ಟದ ವಿವೇಚನೆಯೇ ಇಲ್ಲದ ಯುದ್ಧ ಇದು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಅನಿವಾರ್ಯ ಇರಲಿಲ್ಲ. ದುರಂತವನ್ನು ತಪ್ಪಿಸುವ ವಿವೇಚನೆ ಪುಟಿನ್ ತೋರಿಸಲಿಲ್ಲ ಎಂಬುದು ದೊಡ್ಡ ದುರಂತ. ಯುದ್ಧವನ್ನು ತಕ್ಷಣ ನಿಲ್ಲಿಸಬೇಕು ಎಂದು ಜಗತ್ತಿನ ವಿವಿಧ ದೇಶಗಳು ಮಾಡಿರುವ ಮನವಿಗೆ ಪುಟಿನ್ ಮನ್ನಣೆ ನೀಡಬೇಕು. ಉಕ್ರೇನ್ ನಲ್ಲಿರುವ ಭಾರತದ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರಕಾರ ವ್ಯವಸ್ಥೆ ಮಾಡಬೇಕು.

ಕೃಪೆ: ಪ್ರಜಾವಾಣಿ, ಸಂಪಾದಕೀಯ, ದಿ. ೨೬-೦೨-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ