ಉಕ್ರೇನ್ ವಿದ್ಯಾರ್ಥಿಗಳಿಗೆ ನೆರವಾಗಿ
ಯುದ್ಧದಿಂದಾಗಿ ತವರಿಗೆ ಮರಳಿದವರ ಗತಿ ತ್ರಿಶಂಕು ಸ್ಥಿತಿಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದೂರ ದೇಶಗಳ ನಡುವಣ ಕ್ಷೋಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳಲಾಗುವುದಿಲ್ಲ. ಜಾಗತೀಕರಣ ಮತ್ತು ಮುಕ್ತ ಆರ್ಥಿಕ ನೀತಿಗಳ ಕಾರಣದಿಂದ ಇಡೀ ವಿಶ್ವವೇ ಒಂದು ಪುಟ್ಟ ಊರಾಗಿದೆ. ಇದರಿಂದಾಗಿ ಎಲ್ಲೋ ಏನೋ ಆಗುತ್ತಿದೆ ಎಂದು ನಿರ್ಲಕ್ಷಿಸಲು ಆಗುವುದಿಲ್ಲ. ಈ ಎರಡೂ ದೇಶಗಳ ನಡುವಣ ಸಮರದಿಂದ ತೈಲ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಜಾಗತಿಕ, ಆರ್ಥಿಕ ವ್ಯವಸ್ಥೆ ತಲ್ಲಣಿಸುತ್ತಿದೆ. ತೈಲ ಬೆಲೆ ಏರಿಕೆಯಿಂದ ಸರಣಿ ಸಮಸ್ಯೆಗಳು ಉಂಟಾಗುತ್ತವೆ. ಇದಲ್ಲದೆ ಭಾರತದಿಂದ ೨೨ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೇಂದ್ರದ ಒತ್ತಾಸೆಯಿಂದ ಅವರೆಲ್ಲರೂ ಭಾರತಕ್ಕೆ ಮರಳಿದ್ದಾರೆ. ನೂರಾರು ವಿದ್ಯಾರ್ಥಿಗಳು ಕರ್ನಾಟಕದ ತಮ್ಮ ಹುಟ್ಟೂರು ಸೇರಿಕೊಂಡಿದ್ದಾರೆ. ಇದೀಗ ಅವರ ಭವಿಷ್ಯವೇ ತ್ರಿಶಂಕುವಾಗಿದೆ. ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ' ಎಂದು ಎಲ್ಲರ ಮನಸ್ಸು ದೊಡ್ಡ ದ್ವಂದ್ವಕ್ಕೆ ಸಿಲುಕಿದೆ.
“ಸ್ಥಳೀಯ ವೈದ್ಯಕೀಯ ಕಾಲೇಜುಗಳಲ್ಲಿ ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಲು ಅವಕಾಶ ನೀಡುತ್ತೇವೆ. ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕೆ ದೇಶಾದ್ಯಂತ ನಡೆಸುತ್ತಿರುವ ನೀಟ್ ಪರೀಕ್ಷೆಯ ಸ್ವರೂಪವನ್ನು ಬದಲಿಸುತ್ತೇವೆ. ವೈದ್ಯರಾಗಬೇಕು ಎಂಬ ಹಂಬಲದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಒದಗಿಸುತ್ತೇವೆ" ಎಂಬ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಇಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ವತಃ ವೈದ್ಯರಾಗಿ ಈಗ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಸುಧಾಕರ್ ಧಾರಾಳವಾಗಿ ನೀಡಿದ್ದರು.
ಆದರೆ ಮಾತುಗಳು ಕ್ರಿಯೆಯಾಗಿ, ಅತಂತ್ರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತದೆ ಎಂಬ ನಿರೀಕ್ಷೆ ಇನ್ನೂ ಈಡೇರಿಲ್ಲ. ಇದೇನು ತಕ್ಷಣ ಆಗುವ ಕೆಲಸವಲ್ಲ ಎಂಬುವುದು ನಿಜ. ಏಕೆಂದರೆ ಉಕ್ರೇನ್ ಮತ್ತು ಇಲ್ಲಿ ನೀಡುತ್ತಿರುವ ವೈದ್ಯಕೀಯ ವಿದ್ಯಾಭ್ಯಾಸ ಒಂದೇ ಅಲ್ಲ. ಭೋಧನೆ ಮತ್ತು ಪ್ರಾಯೋಗಿಕ ಕಲಿಕೆಯ ವಿಧಾನಗಳನ್ನು ಬದಲಿಸಬೇಕಾಗುತ್ತದೆ. ಬೋಧಕರು ಎರಡೂ ವಿಧಾನಗಳಲ್ಲಿ ವಿದ್ಯಾರ್ಥಿಗಳ ನಿರ್ವಹಣೆ ಮಾಡಬೇಕಾಗುತ್ತದೆ. ಕರ್ನಾಟಕ ವೈದ್ಯಕೀಯ ಚಿಕಿತ್ಸೆಯಲ್ಲಿ ಇಡೀ ದೇಶ ಮೆಚ್ಚುವಂಥ ತಜ್ಞರಿದ್ದಾರೆ. ಅವರ ನೆರವು ಪಡೆದು ಈ ಸಮಸ್ಯೆಗಳನ್ನು ನಿವಾರಿಸುವುದು ಅಸಾಧ್ಯವೇನೂ ಅಲ್ಲ. ಆದರೆ ಸರಕಾರ ಮುಂದಡಿಯನ್ನೇ ಇಡುತ್ತಿಲ್ಲ. ಕೇಂದ್ರ ಕೂಡ ಮೌನವಾಗಿದೆ. ತಕ್ಷಣ ಕೇಂದ್ರದ ಮೇಲೆ ಒತ್ತಡ ತಂದು, ಉಕ್ರೇನ್ ನಿಂದ ತವರಿಗೆ ಬಂದ ವಿದ್ಯಾರ್ಥಿಗಳ ಬೇಗುದಿಯನ್ನು ಶಮನಗೊಳಿಸಬೇಕು. ಇದಲ್ಲದೆ ಕೇಂದ್ರದ ಮುಂದೆ ಮತ್ತೊಂದು ಸವಾಲು ಎದುರಾಗಿದೆ. ಭಾರತದಿಂದ ೨೨ ಸಾವಿರ ವಿದ್ಯಾರ್ಥಿಗಳು ಚೀನಾದ ನಾನಾ ವಿಶ್ವ ವಿದ್ಯಾಲಯಗಳಲ್ಲಿ ಕಲಿಯುತ್ತಿದ್ದಾರೆ. ಇವರು ತರಗತಿಗಳಿಗೆ ಹಾಜರಾಗಲು ಚೀನಾ ನಿರ್ಬಂಧಿಸಿದೆ. ಇದನ್ನು ರಾಜತಾಂತ್ರಿಕ ಹಾದಿಯಲ್ಲಿ ಬಗೆಹರಿಸುವುದರ ಬದಲು ಭಾರತ, ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವುದನ್ನು ಅಮಾನತುಗೊಳಿಸಿ, ‘ಏಟಿಗೆ ಏಟು' ಎಂದಿದೆ. ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಒಳಗೆ ಮತ್ತು ಹೊರಗಿನ ಬೇಗುದಿಗಳಿಂದ ನಮ್ಮ ವಿದ್ಯಾರ್ಥಿಗಳ ಜೀವನಕ್ಕೆ ಗ್ರಹಣ ಹಿಡಿದಿದೆ. ಇಂಥ ಜ್ವಲಂತ ಸಮಸ್ಯೆಗಳ ನಿವಾರಣೆಗೆ ತಕ್ಷಣ ಮುಂದಾಗಬೇಕು. ಇದು ನಮ್ಮ ಮೂಲಭೂತ ಕರ್ತವ್ಯ ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೫-೦೪-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ