ಉಕ್ರೇನ್ ವಿದ್ಯಾರ್ಥಿಗಳಿಗೆ ಪರಿಹಾರ
ಉಕ್ರೇನ್ ನಲ್ಲಿ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಕೊನೆಗೂ ತುಸು ಪರಿಹಾರ ದೊರೆತಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ಯುದ್ಧದಿಂದ ಸರ್ವ ರೀತಿಯಲ್ಲಿ ನಷ್ಟಕ್ಕೊಳಗಾದ ಭಾರತೀಯ ವಿದ್ಯಾರ್ಥಿಗಳೀಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ರಾಜ್ಯ ಸರ್ಕಾರವೀಗ ಈ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ.
ಕಡಿಮೆ ಖರ್ಚು, ವೆಚ್ಚದಲ್ಲಿ ಮೆಡಿಕಲ್ ಕೋರ್ಸ್ ಮುಗಿಸಿ ವೈದ್ಯರಾಗಬೇಕೆಂದು ಕನಸು ಕಂಡು ಉಕ್ರೇನ್ ದೇಶಕ್ಕೆ ಪ್ರಯಾಣಿಸಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಯುದ್ಧ ಆರಂಭವಾದ ಮೇಲೆ ನಾನಾ ರೀತಿಯಲ್ಲಿ ನಲುಗಿರುವುದು ನಿಜ. ಈ ದೇಶದಲ್ಲಿ ವೈದ್ಯಕೋರ್ಸ್ ನಲ್ಲಿ ತೊಡಗಿದವರು ಯಾರೂ ನೀಟ್ ಪರೀಕ್ಷೆಗಳಲ್ಲಿ ಪಾಸ್ ಆದವರಲ್ಲ. ಮಿಗಿಲಾಗಿ ಇವರೀಗ ಅರ್ಧದಲ್ಲಿಯೇ ಕೋರ್ಸ್ ತ್ಯಜಿಸಿ ಭಾರತಕ್ಕೆ ವಾಪಾಸ್ ಆದರೆ ಇವರ ಮುಂದಿನ ವಿದ್ಯಾಭ್ಯಾಸದ ಹಣೆ ಬರಹವೇನು?
ರಾಜ್ಯ ಸರ್ಕಾರ ಈ ಕುರಿತು ಯಾವ ತೀರ್ಮಾನ ಕೈಗೊಳ್ಳುತ್ತೆ ಎಂಬುದರ ಬಗ್ಗೆ ಕಳೆದ ಕೆಲವು ದಿನಗಳಿಂದ ಗಂಭೀರ ಚರ್ಚೆ ನಡೆಯುತ್ತಿದೆ. ನೀಟ್ ಪರೀಕ್ಷೆಗಳಲ್ಲಿ ಪಾಸಾದವರಿಗೆ ಈ ಸನ್ನಿವೇಶದಲ್ಲಿ ರಾಜ್ಯದ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸುವುದು ಎಂದರೆ ಕೆಲವೊಂದು ಸವಾಲುಗಳನ್ನು ಮತ್ತು ತೊಡಕುಗಳನ್ನು ರಾಜ್ಯ ಸರ್ಕಾರ ಎದುರಿಸಬೇಕಿರುವುದು ಅನಿವಾರ್ಯ. ಈ ವಿಷಯದಲ್ಲಿ ನೀಟ್ ಮತ್ತು ಮೆಡಿಕಲ್ ಕೌನ್ಸಿಲ್ ಉನ್ನತ ಮಂಡಳಿಯ ಜೊತೆಗೂ ಈಗ ರಾಜ್ಯ ಸರಕಾರ ಸೂಕ್ತ ಚರ್ಚೆ ನಡೆಸದೆ ತೀರ್ಮಾನ ಕೈಗೊಳ್ಳುವಂತಿಲ್ಲ. ನೀಟ್ ಅಥವಾ ಮಂಡಳಿಯ ತೀರ್ಮಾನಗಳು ಈ ದಿಶೆಯಲ್ಲಿ ಏನೇ ಇರಲಿ, ರಾಜ್ಯ ಸರಕಾರದ ಪ್ರಸಕ್ತ ತೀರ್ಮಾನವಂತೂ ಸ್ವಾಗತಾರ್ಹ. ಯುದ್ಧ ಪೀಡಿತ ಪ್ರದೇಶದಿಂದ ಭಾರತಕ್ಕೆ ಮರಳಿದ ಎಲ್ಲ ಮೆಡಿಕಲ್ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಮತ್ತು ಶುಲ್ಕದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವುದಾಗಿ ಘೋಷಿಸಿರುವುದು ಗಮನಾರ್ಹ. ರಾಜ್ಯ ಸರ್ಕಾರವೇನಾದರೂ ಇವರ ವಿಷಯದಲ್ಲಿ ಈ ಬಗೆಯ ತೀರ್ಮಾನ ಕೈಗೊಳ್ಳದೆ ಇದ್ದಿದ್ದರೆ ಇಂದು ನೂರಾರು ವಿದ್ಯಾರ್ಥಿಗಳ ಭವಿಷ್ಯವೂ ಇಲ್ಲಿಗೇ ಮುಗಿಯುತ್ತಿತ್ತು ! ಆದರೆ ರಾಜ್ಯ ಸರ್ಕಾರದ ದಿಟ್ಟ ತೀರ್ಮಾನದಿಂದ ಇವರ ಭವಿಷ್ಯ ಕೂಡಾ ಆಶಾದಾಯಕವಾಗಿರುವುದು ಅತಿ ಮುಖ್ಯ.
ಕೇಂದ್ರ ಸರ್ಕಾರದ ಅಥವಾ ಕೇಂದ್ರ ಉನ್ನತ ಮಂಡಳಿಯ ಅನುಮತಿ ಇಲ್ಲದೆ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳಲ್ಲಿ ರಾಜ್ಯ ಸರ್ಕಾರ ಮೆಡಿಕಲ್ ಸೀಟುಗಳನ್ನು ಹೆಚ್ಚಿಸುವಂತಿಲ್ಲ. ಒಂದು ವೇಳೆ ಖಾಸಗಿ ಕಾಲೇಜುಗಳಲ್ಲಿ ಸಂತ್ರಸ್ತರಿಗೆ ಸರ್ಕಾರ ಸೀಟುಗಳನ್ನು ಕಲ್ಪಿಸಿದರೂ ಅವರ ಪ್ರವೇಶಾತಿ ಪ್ರಶ್ನಾರ್ಹವಾಗಬಾರದಲ್ಲವೇ? ಈಗಾಗಲೇ ಉಕ್ರೇನ್ ನಲ್ಲಿ ಹಲವು ಹತ್ತು ಬಗೆಯ ತೊಂದರೆಗಳಿಗೆ ಒಳಗಾದ ವಿದ್ಯಾರ್ಥಿಗಳಿಗೆ ಕಾನೂನಾತ್ಮಕವಾಗಿಯೂ ರಕ್ಷಣೆ ಕಲ್ಪಿಸುವುದು ಸರ್ಕಾರದ ಹೊಣೆಗಾರಿಕೆಯೂ ಹೌದು.
ಇಂತಹ ಯುದ್ಧದಿಂದ ನಮ್ಮ ದೇಶದ ವಿದ್ಯಾರ್ಥಿಗಳು ಈ ಪರಿಯಾಗಿ ತೊಂದರೆ ಅನುಭವಿಸುತ್ತಿರುವುದು ಇದೇ ಮೊದಲು. ಆದ್ದರಿಂದ ಈ ವಿದ್ಯಾರ್ಥಿಗಳ ಪರವಾಗಿ ವಿಶೇಷ ಕಾನೂನು ರಚಿಸುವುದೂ ಸರ್ಕಾರಕ್ಕೀಗ ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಉಕ್ರೇನ್ ಸಮರಭೂಮಿಯಿಂದ ಜೀವಂತವಾಗಿ ಹೊರಬಂದ ನಾಡಿನ ವಿದ್ಯಾರ್ಥಿಗಳ ಪರವಾಗಿ ರಾಜ್ಯ ಸರ್ಕಾರ ಟೊಂಕಕಟ್ಟಿ ನಿಂತಿರುವುದು ಸ್ತುತ್ಯಾರ್ಹ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ.೨೩-೦೩-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ