ಉಗಾದಿ: ಮಾವ Vs ಅಳಿಯ !

ಉಗಾದಿ: ಮಾವ Vs ಅಳಿಯ !

ಬರಹ

ಪರಿಸರ ಪ್ರೇಮಿಯಾದ ಮಾವ ವರ್ಷದ ಮೊದಲ ದಿನವನ್ನು ಸವಿಯಲು ಕಾದಿದ್ದಾರೆ. ಅದೇ ವೇಳೆಗೆ ಅಳಿಯ ಮನೆಗೆ ಬಂದಿಳಿಯುತ್ತಾನೆ. ಮಾವನಿಗೆ ವರ್ಷದ ಮೊದಲ ದಿನದ ಸಡಗರವಾದರೆ ಅಳಿಯನಿಗೆ ವರ್ಷದಲ್ಲಿ ಇದೂ ಒಂದು ದಿನ ಅಷ್ಟೆ. ಶಿಸ್ತಿನ ಜೀವನದ ಮಾವ, ಅಶಿಶ್ತಿನ ಅಳಿಯ ಈ ಕವಿತೆಯ ವಿಷಯ. ಇಷ್ಟಕ್ಕೂ ಈ ಮಾವನಿಗೆ ಅಳಿಯ ವಸಂತಕುಮಾರನ ಮೇಲೆ ಏಕಿಷ್ಟು ಕೋಪ? ನೀವೇ ಓದಿ...

ಮರಳಿ ಬಂದಿದೆ ಯುಗಾದಿ
ಮರಳಿ ಬಂದಿಹನು ವಸಂತ

ಹೊಸ ವರುಷದ ಹೊಸ ಉಲ್ಲಾಸದ
ನವ ವಸಂತನಿಗಾಗಿ ಕಾದಿದ್ದೆ, ಈ ಹೊತ್ತು
ಹೊಸ ವರುಷದ ಸೂರ್ಯನುದಯಿಸುವ ಮೊದಲೇ
ಭರ್ರನೆ ಕಾರು ಬಂದಿತ್ತು, ವಸಂತನ ಹೊತ್ತು

ಹೊಸ ವರುಷದಿ ಮೂಡುವ ದಿನಕರನ
ವಂದನೆಗೆ ನಾನು ಅಣಿಯಾಗಿದ್ದೆ
ಕಾರಲ್ಲಿ ಪ್ರಯಾಣಿಸಿದ ಆಯಾಸಕ್ಕೆ
ಹಾಸಿಗೆ ಮೇಲೆ ಹೊಡೆದಿದ್ದ ನಿದ್ದೆ

ಮುಂಜಾನೆಯ ಹೊತ್ತಿನಲಿ, ಕೆಂಗಿರಣಗಳ
ಚೆಲ್ವ ಚೆಲುವ ದಿನಕರ, ಮೂಡಿಹನು
ಮುಂಜಾನೆಯ ಹೊತ್ತಿನಲಿ, ಕೆಂಗಣ್ಣುಗಳ
ಮುಚ್ಚಿ ವಸಂತ ಹಾಸಿಗೆ ಮೇಲೆ, ಬಿದ್ದಿಹನು

ನವ ವಸಂತವು ಕಾಲಿಟ್ಟೆಡೆ
ಭಣಗುಟ್ಟುವ ಗಿಡಮರಗಳು ಚಿಗುರುವವು
ನಮ್ಮ ವಸಂತ ಕಾಲಿಟ್ಟೊಡೆ
ತುಂಬಿಹ ಡಬ್ಬಗಳು ಭಣಗುಟ್ಟುವವು

ವರುಷಕೊಂದು ಹೊಸದು ಜನ್ಮ
ಏನಿದು ನಿನ್ನ ಮರ್ಮ?
ಪ್ರಮೋಶನ್ ಇಲ್ಲದ ಕತ್ತೆ ದುಡಿಮೆ
ಏನಿದು ನಿನ್ನ ಕರ್ಮ ?

ಪರಿಸರ ಪ್ರೇಮಿ ನುಡಿದಿಹೆ ನಾನು
’ಮಾನವ ಮರಗಳನ್ನು ಸಾಕು’
ಕೆಲಸ ಕಳೆದುಕೊಂಡು ನುಡಿದಿಹನವನು
’ಮಾವ ಮಗಳನ್ನು ಸಾಕು’

ಮರಳಿ ಬಂದಿದೆ ಯುಗಾದಿ
ಮರಳಿ ಬಂದಿಹನು ವಸಂತ

**** ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು