ಉಗುರಿನ ಬಿಳಿ ಚುಕ್ಕೆಗಳು ಕಾಯಿಲೆಯ ಲಕ್ಷಣವೇ?
ಬಹಳಷ್ಟು ಮಂದಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರನ್ನು ಸುಂದರವಾಗಿರಿಸಿಕೊಳ್ಳಬೇಕು ಎನ್ನುವುದು ಮಹದಾಸೆಯಾಗಿರುತ್ತದೆ. ಅದಕ್ಕಾಗಿ ವಿವಿಧ ಬಗೆಯ ನೈಲ್ ಪಾಲೀಶ್ ಬಳಿಯುತ್ತಾರೆ. ತಾವು ಧರಿಸುವ ಬಟ್ಟೆಯ ಬಣ್ಣದ್ದೇ ನೈಲ್ ಪಾಲೀಶ್ ಅನ್ನು ಬಳಸುತ್ತಾರೆ. ಉಗುರನ್ನು ಸುಂದರವಾಗಿ ಕಾಣುವಂತೆ ಕತ್ತರಿಸಲು ಬ್ಯೂಟಿ ಪಾರ್ಲರ್ ಗಳಿಗೆ ಹೋಗುತ್ತಾರೆ. ಕೆಲವರು ಉಗುರು ಉದ್ದವಾಗಿ ಕಾಣುವಂತೆ ಕೃತಕ ಉಗುರನ್ನು ಅಂಟಿಸುತ್ತಾರೆ. ಕೆಲವು ಮಹಿಳೆಯರಿಗೆ ತಮ್ಮ ಉಗುರೇ ಒಂದು ಆಯುಧವಾಗಿರುತ್ತದೆ. ಕೆಲವು ಮಂದಿ ಪುರುಷರೂ ತಮ್ಮ ಉಗುರನ್ನು ಉದ್ದವಾಗಿ ಬೆಳೆಸಲು ಶ್ರಮ ಪಡುತ್ತಾರೆ. ಅದೆಲ್ಲಾ ಉಗುರಿನ ಬಾಹ್ಯ ಸೌಂದರ್ಯದ ಮಾತಾಯಿತು. ಆಂತರಿಕ ಸೌಂದರ್ಯ ಅಂದರೆ ಅದರ ಆರೋಗ್ಯದ ಬಗ್ಗೆ ನೀವು ಗಮನ ಹರಿಸಿರುವಿರಾ?
ಕೆಲವರ ಉಗುರಿನ ಮೇಲೆ ಬಿಳಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಇದಕ್ಕೆ ವೈದ್ಯರು ಲ್ಯುಕೋನಿಚಿಯಾ (Leukonychia) ಎನ್ನುತ್ತಾರೆ. ಇದೊಂದು ಬಗೆಯ ಉಗುರಿನ ಗಾಯ ಎನ್ನಬಹುದು. ನಿಮ್ಮ ಉಗುರು ಅಥವಾ ಬೆರಳಿನ ಮೇಲೆ ಗಾಯಗಳಾದಾಗ ಈ ರೀತಿಯ ಕಲೆಗಳು ಹುಟ್ಟಿಕೊಳ್ಳುತ್ತವೆ. ಲ್ಯುಕೋನಿಚಿಯಾ ಎನ್ನುವುದು ಬೆರಳ ಉಗುರಿನ ಮೇಲೆ ಮಾತ್ರವಲ್ಲದೆ ಕೆಲವು ಬಾರಿ ಕಾಲಿನ ಉಗುರಿನ ಮೇಲೂ ಕಾಣಿಸಿಕೊಳ್ಳುತ್ತವೆ. ನಮ್ಮ ಬೆರಳಿನ ಉಗುರು ತಿಳಿ ಗುಲಾಬಿ ಬಣ್ಣವನ್ನು ಹೊಂದಿರುವುದು ಆರೋಗ್ಯವಂತ ಉಗುರಿನ ಲಕ್ಷಣ. ಉಗುರಿನ ಮೇಲೆ ಕಾಣಿಸುವ ಬಿಳಿ ಚುಕ್ಕೆಗಳು ರಕ್ತಹೀನತೆ ಮತ್ತು ಯಕೃತ್ತಿನ ಕಾಯಿಲೆಯ ಲಕ್ಷಣಗಳು ಆಗಿರಬಹುದು. ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರಿಂದ ವೈದ್ಯೋಪಚಾರಗಳನ್ನು ಪಡೆದುಕೊಳ್ಳುವುದು ಉತ್ತಮ.
ಉಗುರಿನ ಮೇಲೆ ಈ ರೀತಿಯ ಬಿಳಿ ಕಲೆಗಳಾಗುವ ಕೆಲವು ಕಾರಣಗಳು ಹೀಗಿವೆ:
* ನಮ್ಮ ದೇಹಕ್ಕೆ ಸರಿಯಾದ ಪೌಷ್ಟಿಕಾಂಶಗಳು ದೊರೆಯದೇ ಹೋದರೆ ಈ ಬಗೆಯ ಕಲೆಗಳು ಉಂಟಾಗುತ್ತವೆ. ವಿಶೇಷವಾಗಿ ಸತು, ವಿಟಮಿನ್ ಡಿ, ಸೆಲಿನಿಯಂ ಮೊದಲಾದುವುಗಳು ನಿಗದಿತ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿರುತ್ತವೆ. ಇವುಗಳ ಕೊರತೆಯಿಂದ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಈ ಕೊರತೆಯಿಂದ ಉಗುರಿನ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಆಹಾರದಲ್ಲಿ ಸೂಕ್ತ ಬದಲಾವಣೆಯನ್ನು ಮಾಡಿಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.
* ಹಲವು ಮಂದಿಗೆ ಉಗುರು ಸುತ್ತು ಎಂಬ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣ ಒಂದು ಫಂಗಸ್. ಇದರ ಪ್ರಭಾವದಿಂದಲೂ ಉಗುರುಗಳ ಮೇಲೆ ಬಿಳಿ ಚುಕ್ಕೆ ಮೂಡಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಈ ಸಮಸ್ಯೆಯಿಂದ ಬೇಗದಲ್ಲಿ ಮುಕ್ತಿಯನ್ನು ಪಡೆಯಬಹುದು. ಮಳೆಗಾಲದಲ್ಲಿ ಉಗುರು ಸುತ್ತು ಸಮಸ್ಯೆ ಸ್ವಲ್ಪ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಸೂಕ್ತವಾದ ಮದ್ದಿನ ಬಳಕೆಯಿಂದ ಉಗುರು ಸುತ್ತಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು, ಅದರ ಜೊತೆಗೆ ಉಗುರಿನ ಚುಕ್ಕೆಗಳಿಂದಲೂ.
* ನಮ್ಮ ಲಿವರ್ ನ ಸಮಸ್ಯೆಯಿಂದಲೂ ಉಗುರಿನ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳಬಹುದು. ಇದು ಬಹಳ ಅಪಾಯಕಾರಿಯಾಗಿದ್ದು ತಜ್ಞ ವೈದ್ಯರನ್ನು ಕೂಡಲೇ ಭೇಟಿ ಮಾಡಬೇಕು.
* ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇರುವ ವ್ಯಕ್ತಿಗಳಲ್ಲಿ ಉಗುರಿನ ಬಿಳಿ ಚುಕ್ಕೆ ಸಾಮಾನ್ಯ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದಾಗ ಕೈ ಬೆರಳುಗಳ ಉಗುರುಗಳ ಮೇಲೆ ಬಿಳಿ ಚುಕ್ಕೆಗಳು ಕಾಣಿಸಬಹುದು. ಎಲ್ಲಾ ಬೆರಳುಗಳಲ್ಲೂ ಕಾಣಿಸಬಹುದು ಅಥವಾ ಕೆಲವು ಬೆರಳುಗಳ ಉಗುರಿನ ಮೇಲೆ ಮಾತ್ರ ಕಾಣಿಸಲೂ ಬಹುದು.
* ಯಾವುದೋ ಸಂದರ್ಭಗಳಲ್ಲಿ ನಾವು ಬೆರಳಿನ ಮೇಲೆ ಮಾಡಿಕೊಂಡ ಗಾಯಗಳಿಂದಲೂ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
* ನಮ್ಮ ದೇಹದ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಮೂತ್ರ ಪಿಂಡ (ಕಿಡ್ನಿ) ಗಳಲ್ಲಿ ಸಮಸ್ಯೆ ತಲೆದೋರಿದರೆ ಅಗಲೂ ಅದರ ಲಕ್ಷಣಗಳು ಬಿಳಿ ಚುಕ್ಕೆಗಳ ರೂಪದಲ್ಲಿ ನಮ್ಮ ಉಗುರಿನ ಮೇಲೆ ಕಾಣಿಸಬಹುದಾಗಿದೆ.
* ನಮ್ಮ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗುವ ಕ್ಯಾಲ್ಸಿಯಂ ಕೂಡಾ ಉಗುರಿನ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾದರೆ ಉಗುರಿನ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳಬಹುದು.
* ಕೆಲವರಲ್ಲಿ ಹೃದಯದ ಸಮಸ್ಯೆಯಿಂದ ರಕ್ತ ಸರಿಯಾಗಿ ಪಂಪ್ ಆಗುತ್ತಿರುವುದಿಲ್ಲ. ಈ ಕಾರಣದಿಂದ ರಕ್ತದ ಕೊರತೆಯ ಕಾರಣದಿಂದ ದೇಹದ ಭಾಗಗಳಿಗೆ ಸರಿಯಾದ ರಕ್ತ ಸಂಚಲನವಾಗುವುದಿಲ್ಲ. ಈ ಕಾರಣದಿಂದ ಉಗುರಿನ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
ದೇಹದಲ್ಲಿನ ಸಮಸ್ಯೆಗಳನ್ನು ಕೂಡಲೇ ಪರೀಕ್ಷಿಸಿಕೊಂಡು, ವೈದ್ಯರಿಂದ ಅದಕ್ಕೆ ಔಷಧೋಪಚಾರಗಳನ್ನು ಪಡೆದುಕೊಂಡು ನಮ್ಮ ಆರೋಗ್ಯವನ್ನು ಸರಿಯಾದ ಸ್ಥಿತಿಯಲ್ಲಿರಿಸಿದರೆ ಉಗುರಿನ ಬಿಳಿ ಚುಕ್ಕೆಯ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ