ಉಗ್ರರ ಮುಂಬೈ ದಾಳಿ ಹಾಗು ವಿದ್ಯುನ್ಮಾನ ಮಾಧ್ಯಮಗಳ ಭಯೋತ್ಪಾದನೆ!

ಉಗ್ರರ ಮುಂಬೈ ದಾಳಿ ಹಾಗು ವಿದ್ಯುನ್ಮಾನ ಮಾಧ್ಯಮಗಳ ಭಯೋತ್ಪಾದನೆ!

ಬರಹ

ಮಾಧ್ಯಮಗಳ ಭಯೋತ್ಪಾದನೆ...

ಉದಾಹರಣೆ ೧:
ಉಡುಪಿಯ ಶಾಸಕ ರಘುಪತಿ ಭಟ್ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದ್ದು, ಅದನ್ನು ನಮ್ಮ ಕನ್ನಡದ ವಿದ್ಯುನ್ಮಾನ ಸುದ್ದಿ ವಾಹಿನಿಗಳು ರಾಷ್ಟ್ರೀಯ ವಿಪತ್ತು ಎನ್ನುವಂತೆ ಬಿಂಬಿಸಿದ್ದು, ಕೌಟುಂಬಿಕ ಕಲಹಕ್ಕಿಂತ ಈ ನೇರ ಪ್ರಸಾರದಿಂದ ಮನನೊಂದು ಅವರ ಶ್ರೀಮತಿ ಪದ್ಮಪ್ರಿಯಾ ದೆಹಲಿಯ ನಿವಾಸ ಸಂಕೀರ್ಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು..ಶಾಸಕರ ಆಪ್ತಮಿತ್ರ ಅತುಲ್ ಅವರಿಗೂ ಪದ್ಮಪ್ರಿಯಾಗೂ ಸಂಬಂಧ ಕಲ್ಪಿಸಿ ನಮ್ಮ ಮಾಧ್ಯಮಗಳು ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದು ನೆನಪು ಮಾಡಿಕೊಳ್ಳಿ. (ಸತ್ಯ ಇನ್ನು ಬಯಲಿಗೆ ಬರಬೇಕಿದೆ.)

ಉದಾಹರಣೆ ೨:
ದೆಹಲಿ ಸಮೀಪದ ನೋಯ್ಡಾದಲ್ಲಿ ಜರುಗಿದ ‘ಆರುಷಿ’ ಕೊಲೆ ಪ್ರಕರಣ, ಮಾಧ್ಯಮಗಳು ಪೊಲೀಸರ ಹೇಳಿಕೆ ಉಲ್ಲೇಖಿಸಿ, ಆರುಷಿ ಮನೆಯ ಕೆಲಸದಾಳನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಆಕೆಯ ತಂದೆ ದಂತ ವೈದ್ಯ ಡಾ.ರಾಜೇಶ್ ತಲ್ವಾರ್ ‘ಮನೆತನದ ಗೌರವ ಕಾಪಾಡಿಕೊಳ್ಳುವ’ ಉದ್ದೇಶದಿಂದ ಕೊಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ನಂತರದ ಬೆಳವಣಿಗೆಗಳು ಆಘಾತಕಾರಿ ತಿರುವು ಪಡೆದವು. ಸತ್ಯ ಬೆಳಕಿಗೆ ಬಂತು. ಮಾಧ್ಯಮ ಹಾಗು ಪೊಲೀಸ್ ಇಬ್ಬರೂ ಮುಮ್ಮುಖವಾಗಿ ಬಿದ್ದರು!

ಹೀಗಾದಾಗ ಮಾಧ್ಯಮಗಳ ಸುದ್ದಿ, ಮಾಹಿತಿ, ವಿಶ್ಲೇಷಣೆ, ಸಮೀಕ್ಷೆ, ಸಂದರ್ಶನ, ಫಾಲೋ-ಅಪ್, ತಜ್ನರ ಅಭಿಮತ ಇವೆಲ್ಲವುದರ ವಸ್ತುನಿಷ್ಠತೆ, ಸತ್ಯನಿಷ್ಠತೆ, ಸಾರ್ವಜನಿಕ ಹಿತಾಸಕ್ತಿಯ ಆಶಯ-ಒಲವುಗಳು, ಐಕ್ಯತೆ, ಗೌಪ್ಯತೆ ಹಾಗು ಸಂವಿಧಾನ ಬದ್ಧ ಸ್ವಯಂ ನಿಯಂತ್ರಣ ಎಲ್ಲವೂ ಪ್ರಶ್ನಾರ್ಹವಾಗುತ್ತವೆ. ಉತ್ತರಿಸಲಾಗದ, ಉತ್ತರಿಸಿದರೂ ಸಮರ್ಪಕವಾಗದ, ಅರ್ಧ ಸತ್ಯ ಟಾಂ..ಟಾಂ..ಎನಿಸಿದ, ಜನ ಬಯಸದಿದ್ದರೂ ನೀಡಿದ ‘ಸಂತೃಪ್ತಿ’ ಇವು ಅನುಭವಿಸಬೇಕಾಗುತ್ತದೆ.

ಇಂದು ಕೆಲ ಪತ್ರಿಕೆಗಳು ಪರೋಕ್ಷವಾಗಿ ಈ ವಿಷಯವನ್ನು ಎತ್ತಿವೆ. ಹಾಗಂತ ಅವರ ಕಾರ್ಯತ್ಪರತೆಯ ಬಗ್ಗೆ, ವೃತ್ತಿಪರತೆಯ ಬಗ್ಗೆ, ಸುದ್ದಿನಿಷ್ಠೆಯ ಬಗ್ಗೆ ಯಾರದ್ದೂ ಎರಡು ಮಾತಿಲ್ಲ. ಬಿತ್ತರಿಸಿದ ರೀತಿ, ಹಪಾಹಪಿಯಿಂದ ಅರೆಬೆಂದ, ಹಸಿ-ಬಿಸಿ ವಿಶ್ಲೇಷಣೆಗಳು ನೋಡುಗರ ಮನದಲ್ಲಿ ‘ಕ್ಲೀಷೆ’ ಹುಟ್ಟಿಸಿದವು. ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗು ಸ್ಥಳೀಯ ಮಟ್ಟದ ವಿದ್ಯುನ್ಮಾನ ಸುದ್ದಿ ವಾಹಿನಿಗಳು ಬಿತ್ತರಿಸಿದ ದಿನದ ೨೪ ಗಂಟೆಗಳ ಎಡೆಬಿಡದ (ಮೊದಲು ೨೪ ತಾಸಿನಲ್ಲಿ ತಾಸಿಗೊಮ್ಮೆ ಸುದ್ದಿ!) ಭಯೋತ್ಪಾದಕ ಕೃತ್ಯದ ‘ಸುದ್ದಿ ರೂಪದ ತ್ಸುನಾಮಿ’ ಸಹ ನೋಡುಗರಿಗೆ ಅಷ್ಟೇ ಭಯಂಕರವಾಗಿತ್ತು.

ವಿದ್ಯುನ್ಮಾನ ಮಾಧ್ಯಮಗಳು ಬಿತ್ತರಿಸಿದ ಎನ್.ಎಸ್.ಜಿ. ರಾಷ್ಟ್ರೀಯ ಭದ್ರತಾ ದಳದ ಧೀರ ಕಮಾಂಡೋಗಳ ಕಾರ್ಯಾಚರಣೆ ‘ಆಪರೇಷನ್ ಸೈಕ್ಲೋನ್’ ಹಾಗು ‘ಆಪರೇಶನ್ ಬ್ಲ್ಯಾಕ್ ಟಾರ್ನೆಡೋ’ ನೇರ ಪ್ರಸಾರ ಮುಂಬೈನ ಕೆಲ ಸ್ಥಳಗಳಲ್ಲಿ ಅಡಗಿರುವ ಉಗ್ರರಿಗೆ ಪರೋಕ್ಷವಾಗಿ ವರದಾನವಾಗಿ ಪರಿಣಮಿಸಿದೆ. ಸೇನಾ ಯೋಧರು ಮದ್ದುಗೊಂಡುಗಳೊಂದಿಗೆ ಕವಾಯತು ಮಾಡುವುದು, ಹೆಲಿಕಾಪ್ಟರ್ ಮೂಲಕ ಮೇಲ್ಛಾವಣಿಗಳ ಮೇಲೆ ಧುಮುಕುವುದು ಇತ್ಯಾದಿ. ಮಾಧ್ಯಮಗಳ ಟಿ.ಆರ್.ಪಿ ಭರಾಟೆಯ ಹಲ್ಲುಕಡಿತದ ಮಧ್ಯೆ ಈ ‘ಎಕ್ಸ್ ಕ್ಲೂಸಿವ್’ ಕ್ಲಿಪ್ಪಿಂಗ್ಸ್ ಉಗ್ರರಿಗೆ ನೋಡಲು ಸಿಕ್ಕವು. ಹಾಗಾಗಿ ಅನಾಗರಿಕ, ನರರೂಪಿ ರಾಕ್ಷಸರಿಗೆ ನಮ್ಮ ಸಾಹಸಿ ಯೋಧರ ಚಲನವಲನಗಳನ್ನು ಸುಲಲಿತವಾಗಿ ಕಲೆ ಹಾಕಿ, ತಮ್ಮ ಕಾರ್ಯ ಸಾಧಿಸುವಲ್ಲಿ ಅವರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ.

ನಮ್ಮ ದೇಶ ಹಾಗು ನಮ್ಮ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸೈನಿಕರ ಚಲನವಲನಗಳಿಗೆ ಅನುಗುಣವಾಗಿ ಉಗ್ರರು ಯೋಜನೆ ಸಿದ್ಧ ಪಡಿಸಿಕೊಳ್ಳುವಲ್ಲಿ (ಸೂಕ್ತ ಹಾಗು ವಿರುದ್ಧ ಸ್ಟ್ರಾಟರ್ಜಿ) ತಾವು ಅಡಗಿರುವ ಬೃಹತ್ ಕಟ್ಟಡಗಳಲ್ಲಿ ಅಡಗುತಾಣಗಳನ್ನು ಕೂಡಲೇ ಬದಲಿಸಿ, ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡು, ಉಗ್ರರನ್ನು ಕೊಂದು, ಒತ್ತೆಯಾಳುಗಳಿಗೆ ಯಾವುದೇ ತೊಂದರೆಯಾಗದಂತೆ ಬದುಕಿಸಲು ಹರಸಾಹಸ, ಮತ್ತು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದ ನಮ್ಮ ಚಾಣಾಕ್ಷ ಕಮಾಂಡೋಗಳನ್ನು ಬಲಿ ಕೆಡುವುವಲ್ಲಿ ಅವರು ಹಿಂದೆ ಬೀಳಲಿಲ್ಲ. (ಕನ್ನಡಿಗ, ಬೆಂಗಳೂರಿನ (ಎನ್.ಎಸ್.ಜಿ) ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಂಸದರನ್ನು ರಕ್ಷಿಸಿ, ವೀರಮರಣವನ್ನಪ್ಪಿದ್ದು.)

ಹಾಗೆಯೇ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ ಕರ್ಕರೆ, ಸೊಲ್ಲಾಪೂರ್ ಕಮೀಷನರ್ ಆಗಿದ್ದ ದಕ್ಷ ಅಧಿಕಾರಿ ಅಶೋಕ್ ಕಾಮ್ಟೆ (ಆರ್ಕುಟ್ ನಲ್ಲಿ ೪೦೦ ಜನ ಸದಸ್ಯರಿರುವ ಇವರ ಅಭಿಮಾನಿ ಬಳಗದ ಸಮುದಾಯವೇ ಇದೆ!) ಹಾಗು ಎನ್ ಕೌಂಟರ್ ಚತುರ ವಿಜಯ್ ಸಾಸಲ್ಕರ್ ವೀರಮರಣವನ್ನಪ್ಪಿದ ೧೦ ನಿಮಿಷಗಳಲ್ಲಿ ಸುದ್ದಿ ಅಂತಾರಾಷ್ಟ್ರೀಯ ಸ್ಥರದಲ್ಲಿ ಬಿತ್ತರಿಸಲ್ಪಟ್ಟಿತು. ಅವರ ಹತ್ಯೆಯ ಸುದ್ದಿಯನ್ನು ನಾರಿಮನ್ ಭವನದ ಮನೆಯಲ್ಲಿ ಟಿ.ವಿ.ಯಲ್ಲಿ ವೀಕ್ಷಿಸಿದ ಉಗ್ರರು ‘ಗಲುವಿನ ಕೇಕೆ’ ಹಾಕಿ, ಸಂಭ್ರಮಿಸಿದ್ದನ್ನು ತಾವು ಕೇಳಿಸಿಕೊಂಡಿದ್ದಾಗಿ ಅಕ್ಕಪಕ್ಕದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ! ಅದು ಸಹ ಬಿತ್ತರಗೊಂಡಿದೆ.

ಸಮರೋಪಾದಿಯಲ್ಲಿ ಯುದ್ಧ ನಡೆದಾಗ ಭಯೋತ್ಪಾದನೆಗೆ ತುತ್ತಾದ ಎಲ್ಲ ಸ್ಥಳಗಳಲ್ಲಿ ಕೇಬಲ್ ದೂರದರ್ಶನ ಸಂಪರ್ಕ ಜಾಲ ಹಾಗು ವಿದ್ಯುತ್ ಕಡಿತಗೊಳಿಸಲಾಗಿತ್ತು. ಅಲ್ಲಿ ಹೊರತುಪಡಿಸಿ ಎಲ್ಲ ಕಡೆಗಳಲ್ಲಿಯೂ ಖಾಸಗಿ ಸುದ್ದಿವಾಹಿನಿಗಳ ಈ ನೇರ ಪ್ರಸಾರ ೨೪ ಗಂಟೆಗಳ ಕಾಲ ವೀಕ್ಷಿಸಲು ಸಾಧ್ಯವಿತ್ತು. ಸುದ್ದಿಯೋಧರ ಸುದ್ದಿಹೆಕ್ಕುವ ಈ ಪರಿಯ ಧಾವಂತ ಗುಪ್ತವಾಗಿರಬೇಕಾದ ಸೇನಾ ಯೋಧರ ಕಾರ್ಯಾಚರಣೆ ಬೆತ್ತಲಾಗಿ, ಇನ್ನೂ ಹೆಚ್ಚಿನ ಅನಾಹುತ (ಕಾರ್ಯಾಚರಣೆಯಲ್ಲಿ ನಿರತರಿಗೆ, ಒತ್ತೆಯಾಳುಗಳಿಗೆ ಅಥವಾ ಸುದ್ದಿ ಮಾಧ್ಯಮದವರಿಗೆ) ಸಂಭವಿಸದ್ದರೆ ಯಾರು ಹೊಣೆ? ರಾಷ್ಟ್ರದ ಏಕತೆ, ಭದ್ರತೆಗೆ ಧಕ್ಕೆ ತರುವುದಾದರೆ, ಇಂತಹ ಸುದ್ದಿ ನೋಡಿ ನಾವು (ಗ್ರಾಹಕರು!) ಗಳಿಸಬೇಕಾಗಿರುವುದಾದರೂ ಯಾವ ಪುರುಷಾರ್ಥ?

ದೇವರ ದಯೆಯಿಂದ ಎನ್.ಎಸ್.ಜಿ ಯ ಮೇಜರ್ ಜನರಲ್ ಆರ್.ಕೆ.ಹೂಡಾ ಸಕಾಲಿಕವಾಗಿ ಚಿಂತಿಸಿ, ವಿದ್ಯುನ್ಮಾನ ಮಾಧ್ಯಮದವರಿಗೆ ಮನವಿ ಮಾಡಿದರು. ಆಗ ‘ಹಲವಾರು’ ಸುದ್ದಿವಾನಿಗಳು ತಮ್ಮ ‘ನೇರ ಪ್ರಸಾರ’ ವನ್ನು ಶುಕ್ರವಾರ ಮಧ್ಯಾನ್ಹದಿಂದ ಸ್ಥಗಿತಗೊಳಿಸಿ ಉಪಕರಿಸಿದವು. ಆದರೆ ‘ಕೆಲವು’ ಮತ್ತೆ ಅದೇ ಧಾಟಿಯಲ್ಲಿ ಮುಂದುವರೆಸಿಯೇ ಇದ್ದವು! ಒಂದು ರಾಷ್ಟ್ರೀಯ ಸುದ್ದಿವಾಹಿನಿಯ ನಿರೂಪಕಿಯಂತೂ ಎಲ್ಲ ಕಟ್ಟಳೆಗಳನ್ನು ಮೀರಿ..ಸ್ಠಳದಲ್ಲಿ ಮೊಕ್ಕಾಂ ಹೂಡಿದ್ದ ವರದಿಗಾರನಿಗೆ ಕೇಳಿದ ಈ ಪ್ರಶ್ನೆ ನೋಡಿ..ಎಷ್ಟು ಆಭಾಸಕಾರಿಯಾಗಿದೆ ಎಂದರೆ..

"ಹಲೋ..ಹಲೋ..ನನಗೆ ಗೊತ್ತಿಲ್ಲ ನಿಮಗೆ ಈ ಪ್ರಶ್ನೆ ಕೇಳಲೋ ಬೇಡವೋ..? ಆದರೆ ನಮ್ಮ ವೀಕ್ಷಕರ ಪರವಾಗಿ ಕೇಳಲು ಇಚ್ಛಿಸುತ್ತೇನೆ..ಹೇಳಿ..ನಮ್ಮ ಸೇನಾ ಕಮಾಂಡೋಗಳಿಗಿಂತ ಉಗ್ರರೇ ಹೆಚ್ಚು ತರಬೇತಿ ಪಡೆದಿದ್ದಾರೆ ಹಾಗು ಚಾಣಾಕ್ಷರಿದ್ದಾರೆ ಅಂತ ಅನ್ನಿಸುತ್ತಿದೆ..ಹೌದೇ?"

ಯಾವ ದೇಶ ಭಕ್ತ ಈ ‘ಬಾಲಿಶ’ ಮಾಧ್ಯಮ ಯೋಧೆಯನ್ನು ಸಹಿಸಬಲ್ಲ ಹೇಳಿ. ಹಾಗೆಯೇ ಯಾಕೆ ಸಹಿಸಬೇಕು ಹೇಳಿ? ಇವರ ಕೈಯಲ್ಲಿ ಲೇಖನಿ ಬದಲು ಬಂದೂಕು ಕೊಟ್ಟರೆ ಈ ಮಾತು ಬಹುಶ:.. ಆಚಾರವಿಲ್ಲದ ನಾಲಿಗೆ..

ಇನ್ನು ಮುಂದೆ ಭವಿಷ್ಯದಲ್ಲಿ ಇಂತಹ ದಾಳಿಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಲಿವೆ. ಸರಕಾರ ಸತ್ತವರಿಗೆ ಪರಿಹಾರ ಘೋಷಿಸಲು ಬಜೆಟ್ ನಲ್ಲಿ ಪ್ರತ್ಯೇಕ ಭವಿಷ್ಯ ನಿಧಿ ಸ್ಥಾಪಿಸಲಿದೆ! ಹಾಗೆಯೇ ನಮ್ಮ ಜೋಕರ್ ಗಳಂತಹ ಮಹಾನ್ ಮುತ್ಸದ್ದಿಗಳಿಂದ ಇಂತಹ ಇನ್ನೂ ಹಲವಾರು ಪವಾಡಗಳನ್ನು ನಾವು ನಿರೀಕ್ಷಿಸಬಹುದಾಗಿದೆ! ಆದರೆ ಸುದ್ದಿಯೋಧರಿಗೆ ಪುನರಾವರ್ತಿಯಾಗಿ ಇಂತಹ ತಪ್ಪುಗಳನ್ನು ಮಾಡಲು ಅವಕಾಶ ಸಿಗಬಾರದು.

ಈ ನಿಟ್ಟಿನಲ್ಲಿ ಈಗಾಗಲೇ ಪ್ರಚಲಿತವಿರುವ (ಕೇವಲ ಸೇನೆಯ ಹಿರಿಯ ಅಧಿಕಾರಿಗಳಿಗೆ ಮಾತ್ರ ಮೀಸಲು) ‘ಡಿಫೆನ್ಸ್ ಜರ್ನಲಿಸಂ’ ತರಬೇತಿ ವಿದ್ಯುನ್ಮಾನ ಮಾಧ್ಯಮದ ಸುದ್ದಿಧಾವಂತದ ಸುದ್ದಿಯೋಧರಿಗೆ ನೀಡುವಂತಾಗಬೇಕು. ಈಗಾಗಲೇ ತರಬೇತಿ ಪಡೆದಿರುವ ಹಿರಿಯ ಅಧಿಕಾರಿಗಳು ಇಂತಹ ಸೂಕ್ಷ್ಮ ಸನ್ನಿವೇಶಗಳಲ್ಲಿ ಸ್ಥಳದಲ್ಲಿದ್ದು ಮಾಧ್ಯಮದವರಿಗೆ ಅವರ ಸಾಂದರ್ಭಿಕ ಕರ್ತವ್ಯದ ಪ್ರತಿ ಜಾಗ್ರತೆ ಮೂಡಿಸಿ, ಬಿತ್ತರಿಸಬಾರದ ಸುದ್ದಿಯ ಕುರಿತು ಮನವರಿಕೆ ಮಾಡಿಸುವಂತಾಗಬೇಕು. ನಂತರ ‘ಫಾಲೋ ಅಪ್’ ಸುದ್ದಿಗಳನ್ನು ಕೊಡಲು ತಿಂಗಳುಗಳೇ ಕಾಯ್ದಿವೆ!

ಅಷ್ಟಕ್ಕೂ ಸುದ್ದಿಯಿಂದಾಗುವ ‘ಕೊಲ್ಯಾಟರಲ್ ಡ್ಯಾಮೇಜ್’ ಬಗ್ಗೆ ಮಾತನಾಡಲು ಕಳೆದ ೩ ದಿನಗಳಲ್ಲಿ ನಮ್ಮ ‘ಯಾವ’ ಮಾಧ್ಯಮಗಳಿಗೂ ಪುರುಸೊತ್ತು ಸಿಕ್ಕಿರಲಿಲ್ಲ! ಈಗಲಾದರೂ..ಸಿಂಹಾವಲೋಕನಕ್ಕೆ ಅವಕಾಶವಿದೆ. ಕಾದು ನೋಡೋಣ. ದುರ್ದೈವ ಎಂದರೆ ನಮ್ಮ ಮಾಧ್ಯಮ ಮಿತ್ರರಿಗೆ ಇದ್ದ ಕಳಕಳಿ ಮಾತ್ರ ಎನ್.ಎಸ್.ಜಿ.ಕಮಾಂಡೋಗಳಿಂದ ಏನಾದರೂ ‘ಕೊಲ್ಯಾಟರಲ್ ಡ್ಯಾಮೇಜ್’ ಆದರೆ ಎಂಬ ಜಿಜ್ನಾಸೆಯ ಪ್ರಶ್ನೆ? ಇದಕ್ಕೆ ಕಾಲ ಇಲ್ಲ ಮಾಧ್ಯಮ ಗ್ರಾಹಕ ಸೂಕ್ತವಾಗಿ ಉತ್ತರಿಸಲಿ ಎಂಬ ಹೆಬ್ಬಯಕೆ ನನ್ನದು.