ಉಗ್ರಾಣ ಕೀಟಗಳು ಮತ್ತು ಅವುಗಳ ನಿವಾರಣೆ
ದ್ವಿದಳ ಧಾನ್ಯಗಳು ಪ್ರೋಟೀನ್ ಪೋಶಕಾಂಶದ ಆಗರ. ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚುತ್ತಿದ್ದು, ವಿಶ್ವದಲ್ಲಿಯೇ ಮೊದಲನೆಯ ಸ್ಥಾನ ಹೊಂದಿದ್ದರೂ, ಹಲವು ಕಾರಣಗಳಿಂದ ದೇಶದ ಬೇಡಿಕೆ ಪೂರೈಸಲು ಸಾದ್ಯವಾಗುತ್ತಿಲ್ಲ. ಅವುಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಕಡಿಮೆಯಾಗುತ್ತಿರುವ ಕೃಷಿಭೂಮಿ ಮತ್ತು ಕೀಟಭಾದೆ ಪ್ರಮುಖವಾದವುಗಳು. ಕೀಟಭಾದೆ ಹೊಲದಲ್ಲಿ ಮಾತ್ರವಲ್ಲದೆ ಸಂಗ್ರಹಣೆಯಲ್ಲೂ ಕಾಣಬಹುದು. ಆದ್ದರಿಂದ ಕೊಯ್ಲಿನ ನಂತರ ಮತ್ತು ಸಂಗ್ರಹಣೆಯ ಸಮಯದಲ್ಲಿ ಕೀಟಗಳಿಂದಾಗುವ ಹಾನಿಯನ್ನು ನಿಯಂತ್ರಿಸುವುದು ಅನಿವಾರ್ಯ. ದ್ವಿದಳ ಧಾನ್ಯದ ದುಂಬಿ ಮತ್ತು ಕೊಬ್ಬರಿ ಕುಟ್ಟೆ ದುಂಬಿ ದ್ವಿದಳ ಧಾನ್ಯಗಳ ಉಗ್ರಾಣದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ದ್ವಿದಳ ಧಾನ್ಯದ ದುಂಬಿ (ಕ್ಯಾಲೋಸೋಬ್ರೂಚಸ್ ಮ್ಯಾಕುಲಟಸ್) : ಈ ದುಂಬಿಯು ದ್ವಿದಳ ಧಾನ್ಯಗಳ ಉಗ್ರಾಣದಲ್ಲಿ ಕಂಡುಬರುವ ಬಹು ಮುಖ್ಯ ಕೀಟವಾಗಿದೆ. ಇದು ಹೊಲ ಮತ್ತು ಉಗ್ರಾಣ ಎರಡೂ ಕಡೆಗಳಲ್ಲಿ ಕಂಡುಬರುತ್ತದೆ. ಈ ಕೀಟವು ಭಾರತದ ಎಲ್ಲಾ ಭಾಗಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ಬಟಾಣಿ ಕಾಳು, ತೊಗರಿಕಾಳು, ಹೆಸರುಕಾಳು, ಉದ್ದಿನಕಾಳು, ಹುರುಳಿಕಾಳು ಮತ್ತು ಅಲಸಂಡೆ ಕಾಳಿನಲ್ಲಿ ಈ ದುಂಬಿಯ ಭಾದೆಯು ಹೆಚ್ಚಾಗಿ ಕಂಡುಬರುತ್ತದೆ.
ಜೀವನ ಚಕ್ರ: ಒಂದು ಹೆಣ್ಣು ದುಂಬಿಯು ತನ್ನ ಜೀವಿತಾವಧಿಯಲ್ಲಿ ಸುಮಾರು ೮೦ ರಿಂದ ೧೦೦ ಮೊಟ್ಟೆಗಳನ್ನು ದ್ವಿದಳ ಧಾನ್ಯಗಳ ಮೇಲ್ಭಾಗದಲ್ಲಿಡುತ್ತದೆ. ಮರಿ ಹುಳು ಮೊಟ್ಟೆಯಿಂದ ಹೊರಬರಲು ಸುಮಾರು ೩ ರಿಂದ ೭ ದಿನಗಳನ್ನು ತೆಗೆದುಕೊಳ್ಳುತದೆ. ಹೊರಬಂದ ಮರಿಹುಳು ಕಾಳಿನ ಒಳಭಾಗಕ್ಕೆ ಹೊಕ್ಕು, ಕಾಳಿನ ಭ್ರೂಣಾಹಾರವನ್ನು ತಿಂದು ಬೆಳೆಯುತ್ತದೆ, ಸಂಪೂರ್ಣವಾಗಿ ಬೆಳೆದ ಮರಿಹುಳುವಿನ ಕೋಶವಸ್ಥೆಯು ಕಾಳಿನ ಒಳ ಭಾಗದಲ್ಲಿಯೆ ಪೂರ್ಣಗೊಂಡು, ಪ್ರೌಡದುಂಬಿಯು ವರ್ತುಲಾಕಾರದ ರಂದ್ರ ಕೊರೆದು ಹೊರಬರುತ್ತದೆ.
ಕೀಟದ ಗುರುತು: ದುಂಬಿಯ ಮರಿ ಹುಳು ವರ್ತುಲಾಕಾರವಾಗಿದ್ದು, ಮೃದುವಾದ ಮತ್ತು ಸುಕ್ಕಾದ ದೇಹವನ್ನು ಹೊಂದಿರುತ್ತದೆ. ಇವುಗಳಲ್ಲಿ ನಡೆದಾಡುವ ಕಾಲುಗಳು ಇರುವುದಿಲ್ಲ. ಪ್ರೌಢದುಂಬಿಯು ಕೆಂಪು ಕಂದು ಬಣ್ಣದಾಗಿದ್ದು, ಕಪ್ಪುಬೂದು ಬಣ್ಣದ ಗಡುಸಾದ ರೆಕ್ಕೆಗಳನ್ನು ಹೊಂದಿರುತ್ತದೆ. ಇದರ ಗಾತ್ರ ೫ ರಿಂದ ೬ ಮಿ.ಮಿ. ಇರುತ್ತದೆ.
ನಿವಾರಣೆ ಕ್ರಮ:
* ಸಂಗ್ರಹಣೆ ಮಾಡಿದ ಕಾಳುಗಳನ್ನು ನಿಯತವಾಗಿ ಬಿಸಿಲಿನಲ್ಲಿ ಒಣಗಿಸಬೇಕು.
* ಬೇವಿನ ಬೀಜದ ಪುಡಿ ಅಥವಾ ಹೊಂಗೆ ಎಣ್ಣೆಯಿಂದ ಕಾಳುಗಳನ್ನು ಉಪಚರಿಸಬೇಕು.
* ಬೇವಿನ ಎಲೆಗಳನ್ನು ಹಾಕಿ ಕಾಳುಗಳನ್ನು ಸಂಗ್ರಹಿಸಿಡಬಹುದು.
* ಹಳೆಯ ಅಥವಾ ಉಪಯೋಗಿಸಿದ ಗೋಣ ಚೀಲಗಳನ್ನು ೧೫ ನಿಮಿಷ ಬಿಸಿ ನೀರಿನಲ್ಲಿ ನೆನೆಯಿಟ್ಟು, ಒಣಗಿಸಿ, ಕಾಳುಗಳ್ನು ಶೇಖರಿಸಿಡಬೇಕು.
* ಕಾಳುಗಳಲ್ಲಿ ತೇವಾಂಶ ಶೇಕಡ ೧೨ ರಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.
* ಶೇಖರಿಸಲು ಬಳಸುವ ಗೋಣ ಚೀಲಗಳನ್ನು ೧೦% ಮೆಲಾಥಿಯಾನ್ ದ್ರಾವಣದಿಂದ ಉಪಚರಿಸಬೇಕು.
* ಅಲ್ಯೂಮಿನಿಯಂ ಫಾಸ್ಫೇಟ್ ಮಾತ್ರೆಗಳನ್ನು ಒಂದು ಟನ್‌ಗೆ ಮೂರರಂತೆ ಬಳಸಬೇಕು.
ಖಾಪ್ರಾ ದುಂಬಿ/ ಕೊಬ್ಬರಿ ಕುಟ್ಟೆ ದುಂಬಿ: ಈ ಕೀಟವು ಹೆಚ್ಚಾಗಿ ಭತ್ತದ ಉಗ್ರಾಣದಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ದ್ವಿದಳ ಧಾನ್ಯಗಳಲ್ಲಿ ಇದರ ಭಾದೆಯನ್ನು ಕಾಣಬಹುದು. ಇದು ಕಡಿಮೆ ತೇವ ಮತ್ತು ಹೆಚ್ಚು ಉಷ್ಣತೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಹಾನಿಯನ್ನುಂಟುಮಾಡುತ್ತದೆ.
ಜೀವನ ಚಕ್ರ : ಒಂದು ಹೆಣ್ಣು ಪ್ರೌಡ ದುಂಬಿಯು ದ್ವಿದಳ ಧಾನ್ಯಗಳ ಮೇಲೆ ಸುಮಾರು ೫೦ ರಿಂದ ೯೦ ಮೊಟ್ಟೆಗಳನ್ನಿಡುತ್ತದೆ. ಮೊದಲಿಗೆ ಮೊಟ್ಟೆಯ ಬಣ್ಣ ತಿಳಿಬಿಳಿಯಾಗಿದ್ದು, ದಿನಕಳೆದಂತೆ ಹಳದಿ ಬಣ್ಣ ಹೊಂದುತ್ತದೆ. ಮೊಟ್ಟೆಯಿಂದ ಹೊರ ಬಂದ ಮೊದಲನೆಯ ಹಂತದ ಮರಿಹುಳು ಒಡೆದ ಕಾಳುಗಳನ್ನು ತಿನ್ನುತ್ತದೆ. ನಂತರದ ಹಂತಗಳು ಪೂರ್ಣ ಕಾಳುಗಳಿಗೆ ಹಾನಿಯುಂಟುಮಾಡುತ್ತವೆ. ಇದರ ಹಾನಿಯು ಜುಲೈ - ಅಕ್ಟೊಬರ್ ತಿಂಗಳಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಶೇಖರಿಸಿಟ್ಟ ಕಾಳುಗಳ ಮೇಲ್ಭಾಗದಲ್ಲಿ ಹಾನಿಯನ್ನುಂಟುಮಾಡುತ್ತದೆ.
ಕೀಟದ ಗುರುತು: ಮರಿಹುಳುವಿನ ಬಣ್ಣ ಹಳದಿಯಾಗಿದ್ದು, ಕಂದು ಬಣ್ಣದ ತಲೆಯನ್ನು ಹೊಂದಿರುತ್ತದೆ. ದೇಹದ ಮೇಲೆ ಕೂದಲುಗಳು ಕಂಡು ಬರುತ್ತವೆ. ಪ್ರೌಡ ದುಂಬಿಯು ಅಂಡಾಕಾರವಾಗಿದ್ದು, ಕಂದು ಬಣ್ಣ ಹೊಂದಿರುತ್ತದೆ. ದೇಹದ ಮೇಲೆ ಸಣ್ಣ ಕೂದಲನ್ನು ಕಾಣಬಹುದು. ಮುಂಭಾಗದಲ್ಲಿರುವ ಗಡುಸಾದ ರೆಕ್ಕೆಗಳ ಮೇಲೆ ಅಸ್ಪಷ್ಟವಾದ ಕೆಂಪು ಕಂದು ಬಣ್ಣದ ಗುರುತುಗಳಿರುತ್ತವೆ.
ನಿವಾರಣೆ: ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಹಾನಿಗೊಳಗಾದ ಕಾಳುಗಳನ್ನು ಶೇಖರಿಸಿಡಬಾರದು. ೬೦೦ ಸೆಲ್ಸಿಯಸ್‌ನಲ್ಲಿ ೩೦ ನಿಮಿಷ ಶಾಖ ಕೊಡುವುದರಿಂದ ಮರಿ ಹುಳುಗಳು ಮತ್ತು ಪ್ರೌಡ ಕೀಟಗಳನ್ನು ಶೇಖಡ ೧೦೦ ರಷ್ಟು ಕಡಿಮೆ ಮಾಡಬಹುದು. ಮೀಥೈಲ್ ಬ್ರೋಮೈಡ್ ಉಪಯೋಗಿಸಿ ಕಾಳುಗಳಿಗೆ ಹೊಗೆಯಾಡಿಸಬೇಕು. ಬೇವಿನ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಚೀಲದಲ್ಲಿ ಇಡುವುದರಿಂದ ಹುಳುಗಳ ಚಟುವಟಿಕೆ ಕಡಿಮೆಯಾಗುವುದು.
ಮಾಹಿತಿ ಸಹಕಾರ : ಹರ್ಷಿತ ಎ. ಪಿ., ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ
ಚಿತ್ರ ಕೃಪೆ: ಅಂತರ್ಜಾಲ ತಾಣ