ಉಚಿತಗಳ ಆವಾಂತರ - ಭಾಗ 1
ಉಚಿತ….. ಉಚಿತ… ಉಚಿತ! ಈ ಪದ ಕರ್ಣ ತಮಟೆಗೆ ಬಡಿದೊಡನೆಯೇ ಅಗಸನಿಂದ ಅರಸನ ತನಕ ಎಲ್ಲರೂ ಬಾಯಿ ಬಾಯಿ ಬಿಡುವರು. “ಉಚಿತ” ದ ಆಕರ್ಷಣಾ ಬಲ ಭೂಮಿಯ ಆಕರ್ಷಣಾ ಬಲಕ್ಕೂ ಮಿಗಿಲು. “ಫ್ರೀ” ಎಂಬ ಅಯಸ್ಕಾಂತೀಯ ಮಾರುಕಟ್ಟೆ ತಂತ್ರದ ಹಿಂದೆ ಶೀಘ್ರವಾಗಿ ಹಣ ಮಾಡುವ ಮತ್ತು ತಮಗಾಗಬಹುದಾದ ನಷ್ಟವನ್ನು ಗ್ರಾಹಕರ ತಲೆಗೆ ಕಟ್ಟುವ ಭ್ರಷ್ಟ ಜಾಲದ ಭುಗಿಲು ಮುಗಿಲೆತ್ತರ. ಒಂದು ಕೊಂಡರೆ ಇನ್ನೊಂದನ್ನು ಪುಕ್ಕಟೆಯಾಗಿ ನೀಡುವ ಉದಾರ ಮಾರುಕಟ್ಟೆಗಳೂ ಅಸಂಖ್ಯ. ಯಾವುದೇ ವ್ಯವಹಾರದಲ್ಲಿ ಮಾರುವ ಬೆಲೆಯು, ಕೊಂಡು ಕೊಂಡ ಬೆಲೆಗಿಂತ ಕಿಂಚಿತ್ತಾದರೂ ಅಧಿಕವಿರಲೇ ಬೇಕಾದುದು ವ್ಯವಹಾರ ಧರ್ಮ. ಮಾರುವ ಬೆಲೆಯಲ್ಲಿ ಲಾಭದ ಶೇಕಡಾವಾರು ದರವು ವ್ಯಾಪಾರಿಯಿಂದ ವ್ಯಾಪಾರಿಗೆ ಭಿನ್ನವಾಗಿರುತ್ತದೆ. ಒಂದಕ್ಕೊಂದು ಉಚಿತವೆಂದು ಗ್ರಾಹಕನಿಗೆ ನೀಡುವಾಗ ವಸ್ತುಗಳ ಒಟ್ಟು ಬೆಲೆಯು ಆ ವ್ಯಾಪಾರಿಯು ಕೊಂಡ ಬೆಲೆಗಿಂತ ಅಧಿಕವಾಗಿರಲೇ ಬೇಕು. ನಷ್ಟ ಮಾಡಿಕೊಂಡು ವ್ಯವಹಾರ ಮಾಡಿ ಉದಾರತನ ಮೆರೆಯುವವರಿಗೆ ವ್ಯಾಪಾರದ ಉಸಾಬರಿಯಾದರೂ ಯಾಕೆ? ಸಂಬಂಧಿಗಳಿಗೇ ಮಾರುವುದಿದ್ದರೂ ಅಸಲು ಮೊಬಲಗಿನಲ್ಲಿ ಕಡಿತವಾಗದಂತೆ ವ್ಯಾಪಾರಿಗಳು ಜಾಣ್ಮೆಯನ್ನು ಮೆರೆಯುತ್ತಾರೆ ಎಂಬುದು ಮುಕ್ತ ಸತ್ಯ. ಒಂದು ಕೊಳ್ಳುವಾಗ ಇನ್ನೊಂದು ಉಚಿತವೆಂದು ಮಾರಾಟ ಮಾಡಿದರೆ, ತನಗೆ ಅಗತ್ಯವಿರದೇ ಇದ್ದರೂ ಅವುಗಳನ್ನು ಗ್ರಾಹಕ ಕೊಂಡುಕೊಳ್ಳುತ್ತಾನೆ ಎಂಬ ಗ್ರಾಹಕರ ದೌರ್ಬಲ್ಯವನ್ನು ಚತುರ ವ್ಯಾಪಾರಿ ನಗದೀಕರಿಸುತ್ತಾನೆ. ಹಲವು ಉಚಿತಗಳ ಕಾರಣದಿಂದ ಕೆಲವರ ಮನೆಯು ಗೋಡೌನ್ ಆಗುವುದೂ ಇದೆ. ಕೊಳ್ಳು ಬಾಕರಂತೂ ಉಚಿತಕ್ಕೆ ಹೆಚ್ಚಿನ ಅಸ್ಥೆ ಹೊಂದಿರುತ್ತಾರೆ. ಮನೆಯನ್ನು ಸಂತೆಯನ್ನಾಗಿ ಮಾರ್ಪಡಿಸುತ್ತಾರೆ. ವ್ಯಾಪಾರಿಗಳು ಅಮೋಘ ದರಕಡಿತದ ಮಾರಾಟ ಎಂಬ ಜಾಹೀರಾತು ನೀಡುತ್ತಾರೆ. ಈ ತರಹದ ವ್ಯಾಪಾರವು, “ಒಂದು ಕೊಂಡರೆ ಒಂದು ಉಚಿತ” ಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲೂ ಮಾರಾಟಗಾರ ತನಗೆ ನಷ್ಟವನ್ನು ಮಾಡಿಕೊಳ್ಳುವುದಿಲ್ಲ. ತಾನು ಕೊಂಡ ಬೆಲೆಯನ್ನು ಬಹಳಷ್ಟು ಏರಿಸಿಯೇ ಮಾರಾಟದ ಬೆಲೆಯನ್ನು ನಿಗದಿಸಿರುತ್ತಾನೆ. ಖರೀದಿದಾರರ ಜೊತೆಗೆ ಸೋಡಿ ಅಥವಾ ರಿಯಾಯಿತಿಯ ಹೆಸರಿನಲ್ಲಿ ವ್ಯವಹರಿಸುತ್ತಾನೆ. ಉದಾಹರಣೆಗೆ 150ರೂಪಾಯಿಗಳಿಗೆ ಕೊಂಡ ಗಡಿಯಾರವನ್ನು ಶೇಕಡಾ 60ರಷ್ಟು ಅಧಿಕಗೊಳಿಸಿ 240 ರೂಪಾಯಿ ಎಂದು ಮಾರುವ ಬೆಲೆ ನಿಗದಿಸುತ್ತಾರೆ, ನಂತರ ಶೇಕಡಾ ಮೂವತ್ತು ಸೋಡಿಯ ಹೆಸರಿನಲ್ಲಿ ಖರೀದಿದಾರನಿಗೆ 63 ರೂಪಾಯಿ ಕಡಿತಗೊಳಿಸಿ 177ರೂಗಳಿಗೆ ಮಾರುತ್ತಾನೆ. ಆಗ ವ್ಯಾಪಾರಿಗೆ ಇಪ್ಪತ್ತೇಳು ರೂಪಾಯಿಗಳ ಲಾಭವಾಗುವುದು ಶತಃಸಿದ್ಧ. ಕೊಂಡ ವಸ್ತುವನ್ನು ಕಡಿಮೆ ಲಾಭವಿರಿಸಿ ತಕ್ಷಣದಲ್ಲಿ ಮಾರುವುದರಿಂದ ಮೂಲ ಬಂಡವಾಳವನ್ನು ಹಲವು ಬಾರಿ ತೊಡಗಿಸಿ ಹೆಚ್ಚು ಲಾಭ ಮಾಡಲು ಸಾಧ್ಯವಿದೆ ಎಂಬ ಜಾಣ ತಂತ್ರವು ಸೋಡಿ ವ್ಯವಹಾರದಲ್ಲಿ ಅಡಗಿದೆ.
ದರ ಕಡಿತದ ಮಾರಾಟ ಎಂಬ ಜಾಹೀರಾತಿಗೆ ಮರುಳರಾದ ಗೃಹಸ್ಥರೊಬ್ಬರು ಮನೆ ಮಂದಿಗೆಲ್ಲಾ ಉಡುಪುಗಳನ್ನು ಕೊಂಡುಕೊಂಡರು. ಖರೀದಿಸುವಾಗ ಅವರಿಗೆ ಬಹಳ ಖುಷಿಯಾಯಿತು. ಆದರೆ ಅವರು ಕಸಿವಿಸಿಗೊಂಡದ್ದು ತಾನು ತಂದ ಪ್ಯಾಂಟ್ ಮತ್ತು ಷರ್ಟ್ ಗಳನ್ನು ಧರಿಸಿದಾಗಲೇ. ದರಕಡಿತದಿಂದ ಖರೀದಿಸಿದ ಉಡುಪು ಅವರ ಮೈಯನ್ನು ಕಡಿಯಲಾರಂಭಿಸಿತು. ತುರಿಕೆಯೆಂದು ತನ್ನ ಮೈಯನ್ನೆಲ್ಲಾ ಪರಚಿಕೊಂಡರು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೂ ತುರಿಕೆ ನಿಲ್ಲಲಿಲ್ಲ. ವೈದ್ಯ ದರ್ಶನ ಮಾಡಿ ಇನ್ನಷ್ಟು ಖರ್ಚು ಮಾಡಿದ ನಂತರ ತುರಿಕೆ ಕಡಿಮಾಯಾಯಿತು. ಹೇಗೂ ಹಣ ಕೊಟ್ಟು ಕೊಂಡಾಗಿದೆ. ಬಿಸಿ ನೀರಲ್ಲಿ ಹಾಕಿ ತೊಳೆದು ಬಳಸೋಣವೆಂದು ಹೊರಟರೆ, ಆ ಉಡುಪುಗಳು. ಬಣ್ಣ ಬಿಟ್ಟು ನಿಸ್ತೇಜವಾದುವು. ಒಣಗಿಸಿದ ನಂತರ ಅವು ಧರಿಸಲು ಬಹಳ ಸಣ್ಣದಾಗಿ ಹೋಗಿದ್ದುವು. ದರ ಕಡಿತ ಏನನ್ನೆಲ್ಲಾ ಕಡಿತಗೊಳಿಸಿತು ನೋಡಿ. ಬಳಸದೆ ಉಳಿದ ಉಡುಪುಗಳನ್ನು ಮರಳಿಸೋಣ ಎಂದು ಬಟ್ಟೆ ಅಂಗಡಿಗೆ ಬಿಲ್ಲು ಮತ್ತು ಉಡುಪು ಸಮೇತ ಹೋದರೆ, ಮಾಲಕನು ಬಿಲ್ಲಿನ ಪಾದದಲ್ಲಿದ್ದ ಟಿಪ್ಪಣಿಯನ್ನು ತೋರಿಸಿದನು. ಅಲ್ಲಿ ಬರೆದಿತ್ತು; “Goods sold once will not be taken back. Check your purchased materials before leaving the Shop. The shop is not responsible for manufacture defects”. ಹೇಗಿದೆ ದರಕಡಿತದ ಕರಾಮತ್ತು?”
ಹಲವು ವರ್ಷಗಳ ಹಿಂದಿನ ಸ್ವಾನುಭವವೊಂದು ನೆನಪಾಗುತ್ತಿದೆ. 1980ನೇ ಇಸವಿಯ ಸುತ್ತಮುತ್ತ ಈ ಘಟನೆ ಜರಗಿತು. ಬಿ.ಸಿ. ರೋಡ್ ಬಸ್ ನಿಲ್ದಾಣದ ಬಳಿ ಗೃಹಬಳಕೆಯ ವಸ್ತುಗಳನ್ನು ಮಾರುವ ತಂಡವೊಂದು ಬಂದಿತ್ತು. ಅವರು ರೂ ಒಂದು ನೂರು ಪಾವತಿಸಿದವರಿಗೆ ಇಪ್ಪತ್ತೇಳು ದಿನಗಳ ನಂತರ ರೂ ಎರಡು ನೂರು ಮುಖ ಬೆಲೆಯ ಗೃಹೋಪಯೋಗೀ ವಸ್ತುಗಳನ್ನು ಮಾರುತ್ತಿದ್ದರು. ನಮ್ಮಿಂದ ಪಡೆದ ರೂ ಒಂದು ನೂರನ್ನು ವ್ಯವಹಾರದಲ್ಲಿ ತೊಡಗಿಸಿ ಅವರು ಲಾಭಗಳಿಸಿಕೊಂಡು ಗ್ರಾಹಕರಿಗೆ ಪ್ರಯೋಜನ ಒದಗಿಸುವುದಾಗಿ ಪ್ರಚಾರಗಳೂ ನಡೆದುವು. ನಂತರದಲ್ಲಿ ಗ್ರಾಹಕರು ಹೆಚ್ಚಿದಂತೆ ಇಪ್ಪತ್ತೇಳು ದಿನಗಳನ್ನು ನಲುವತ್ತೈದು ದಿನಗಳಿಗೆ ಹೆಚ್ಚಿಸಿ ಸರಕುಗಳನ್ನು ಸರಬರಾಜು ಮಾಡುತ್ತಿದ್ದರು. ನನಗೂ ಆಸೆ ಚಿಗುರಿತು. ನೂರು ರೂಪಾಯಿಗಳು ಹೋದರೆ ಹೋಗಲಿ, ಒಂದು ಪ್ರಯೋಗ ಮಾಡಿ ನೋಡಿಯೇ ಬಿಡೋಣ ಎಂದನಿಸಿತು. ನಲುವತ್ತೈದು ದಿನಗಳ ನಂತರ ಇಡ್ಲೀ ಪಾತ್ರೆ ಕೊಂಡೆ. ಅಂದಿನ ಮಾರುಕಟ್ಟೆಯ ದರದಲ್ಲಿ ನನಗೆ ಸಣ್ಣ ಲಾಭ ಗೋಚರಿಸಿತು. ಈ ಬಾರಿ ಎರಡು ನೂರು ರೂಪಾಯಿಗಳನ್ನು ತೊಡಗಿಸಿದೆ. ಬೇಗ ಬೇಗನೆ ಮನೆ ತುಂಬಿಸುವ ಆಸೆ ಯಾರನ್ನೂ ಬಿಡದು, ನನ್ನನ್ನೂ ಬಿಡಲಿಲ್ಲ. ನಲುವತ್ತೈದು ದಿನ ಕಳೆದು ಹೋದರೆ ಅಂಗಡಿ ತೆರೆದಿರಲಿಲ್ಲ. ದೊಡ್ಡದಾಗಿ ಸೂಚನಾ ಫಲಕ ಕಾಣಿಸಿತು: “ಮಾಲಕರ ಅನುಕೂಲಕ್ಕಾಗಿ ಈ ಅಂಗಡಿಯನ್ನು ಸ್ಥಳಾಂತರಿಸಿದೆ. ನಮಸ್ಕಾರ”. ನಾನೋ ಇಂಗು ತಿಂದ ಮಂಗನಂತಾದೆ. ಎಲ್ಲಿಗೆ ಸ್ಥಳಾಂತರ ಎಂಬ ಮಾಹಿತಿಯೇ ಇಲ್ಲ. ಸಾವಿರಾರು ಮಂದಿಗೆ ಸಹಸ್ರಾರು ರೂಪಾಯಿಗಳ ಪಂಗನಾಮ. ನನಗಾದರೋ ಇನ್ನೂರು ರೂಪಾಯಿ ಎಂಬ ಹುಸಿ ಸಮಾಧಾನ. ಅಂದು ನನಗಿದ್ದ ವೇತನ ನಾಲ್ಕು ನೂರು ರೂಪಾಯಿ. ಅಂಗಡಿ ಮುಚ್ಚಿದ ವರದಿಗಳು ಪತ್ರಿಕೆಗಳಲ್ಲಿ ಬಂದಿದ್ದುವಂತೆ! ನಾನು ಪತ್ರಿಕೆಯಲ್ಲಿ ಗಮನಿಸದಿದ್ದುದರಿಂದ ಪ್ರಯಾಣದ ವೆಚ್ಚವೂ ನಷ್ಟವಾಯಿತು!.
(ಇನ್ನೂ ಇದೆ)
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ