ಉಚಿತಗಳ ಆವಾಂತರ (ಭಾಗ 2)
![](https://saaranga-aws.s3.ap-south-1.amazonaws.com/s3fs-public/styles/article-landing/public/stones.jpeg?itok=MOK41gf9)
1950ರ ಹಿಂದಿನ ಮಾತು. ತಿಗಣೆಗಳ ಕಾಟ ಬಹಳವಿದ್ದ ಕಾಲವದು. ಮಣ್ಣಿನ ಗೋಡೆಯಿರಲಿ, ಕಲ್ಲಿನ ಗೋಡೆಯಿರಲಿ, ಮಲಗುವ ಚಾಪೆಯಿರಲಿ ಎಲ್ಲೆಲ್ಲೂ ತಿಗಣೆಗಳದೇ ಕಾರ್ಬಾರು. ರಕ್ತ ಹೀರುವ ತಿಗಣೆಗಳು ಇಂದು ಮಾಯವಾದಂತೆ ಕಾಣುತ್ತಿವೆ. ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಮೂಲಕ ಸಂಚರಿಸುವಾಗಲೂ ತಿಗಣೆ ಕಡಿತ, ಚಹ ಕುಡಿಯಲೆಂದು ಹೋಟೆಲು ಪ್ರವೇಶಿಸಿದರೆ ಅಲ್ಲೂ ತಿಗಣೆಗಳು. ಸೆಲೂನಿನ ಕುರ್ಚಿಯಲ್ಲಿ ತುಟಿ ಪಿಟಕೆನ್ನದೇ ಕುಳಿತಿರ ಬೇಕು, ತಿಗಣೆ ಕಚ್ಚಿತೆಂದು ಸ್ವಲ್ಪ ಚಡಪಡಿಸಿದರೂ ಕ್ಷೌರಿಕನ ಕತ್ತರಿಯ ತುದಿಯೋ, ಬಾಳುಕತ್ತಿಯ (ಹಿಂದೆ ಬ್ಲೇಡ್ ಬದಲು ಸಾಣೆ ಮಾಡಿ ಕತ್ತಿ ಬಳಸಿ ಗಡ್ಡ ಗೀಸುವ, ಕಿವಿ ಬದಿ ಸೈಡ್ ಕಟ್ ಮಾಡುವ ನಾಜೂಕು ಕೆಲಸಕ್ಕೆ ಕ್ಷೌರಿಕರು ಬಳಸುತ್ತಿದ್ದರು.) ಇರಿತ ಖಚಿತ. ತಿಗಣೆಗಳ ಕೀಟಲೆಯ ಪ್ರಕರಣವನ್ನೇ ಲಾಭಕರಗೊಳಿಸಲು ಹೊಸದೊಂದು ಯಂತ್ರವನ್ನು ಪರಿಚಯಿಸಲು ಸಂಸ್ಥೆಯೊಂದು ಹೊರಟಿತು. ಬೆಲೆ ಕೇವಲ ಹದಿನೈದು ರೂಪಾಯಿಯೆಂದು (ಐವತ್ತು ವರ್ಷ ಹಿಂದೆ ಇದ್ದ ಬೆಲೆ) ಮನೆ ಮನೆಗೆ ಪ್ರಚಾರದ ಭೇಟಿಯು ಆರಂಭವಾಯಿತು. ಹೊಸ ಕೊಡುಗೆಯೊಂದನ್ನೂ ಸಂಸ್ಥೆ ಘೋಷಿಸಿತು. ಇಪ್ಪತ್ತು ರೂಪಾಯಿ ನೀಡಿದರೆ, (ಆ ಒಂದು ತಿಂಗಳು ಮಾತ್ರ) ಎರಡು ಯಂತ್ರ ನೀಡುವ ಕೊಡುಗೆಯದು. ಕೆಲವರಿಗೆ ಬಾಯಿಯಲ್ಲಿ ನೀರೂರಿತು. ಕುತಂತ್ರದ ಬುದ್ಧಿಗಳು ಕೆಲಸ ಮಾಡಲಾರಂಭಿಸಿದುವು. ಖರ್ಚಿಲ್ಲದೆ ಯಂತ್ರ ಪಡೆಯುವುದರೊಂದಿಗೆ ಹಣ ಉಳಿಸುವ ಯೋಚನೆಯೂ ಕೆಲವರಲ್ಲಿ ಹುಟ್ಟಿತು. ಒಮ್ಮಲೇ ನಲುವತ್ತು ರೂಪಾಯಿ ಕೊಟ್ಟರೆ ನಾಲ್ಕು ಯಂತ್ರ ಬರುತ್ತದೆ. ಮೂರನ್ನು ಹದಿನೈದು ರೂಪಾಯಿಗಳಂತೆ ಮಾರಿದರೆ ನಲುವತ್ತೈದು ರೂಪಾಯಿ ದೊರೆತು ಐದು ರೂಪಾಯಿ ಲಾಭ. ರೂ ಐದರ ಗಳಿಕೆಯೊಂದಿಗೆ ಯಂತ್ರ ಉಚಿತವಾಗಿಯೇ ದೊರೆಯುವುದು. ಹೇಗಿದೆ ಲೆಕ್ಕಾಚಾರ!
ಗ್ರಾಮದವರೆಲ್ಲರೂ ಬರೋಬ್ಬರಿ ಹಣ ಕಟ್ಟಿದರು. “ತಿಗಣೆ ಹಂತಕ” ಯಂತ್ರಕ್ಕೆ ಆದೇಶಗಳ ಸುರಿಮಳೆಯೋ ಸುರಿಮಳೆ! ಒಂದೇ ತಿಂಗಳಿನಲ್ಲಿ ಕಂಪೆನಿಯ ಪ್ರತಿನಿಧಿಗಳಿಗೆ ಬ್ಯಾಗ್ ತುಂಬಾ ಹಣ. ನಿಮ್ಮ ಆದೇಶಕ್ಕನುಸಾರವಾಗಿ ಅಂಚೆಯಲ್ಲಿ “ತಿಗಣೆ ಹಂತಕ” ಎಲ್ಲರ ಕೈಸೇರಲಿದೆ ಎಂದು ನಂಬಿಸಿ ಕಂಪೆನಿಯ ಮಂದಿ ದೆಹಲಿ ಸೇರಿದರು. ಕಾಯುವ ಸರದಿ ಗ್ರಾಹಕರದು. ತಿಗಣೆ ಹಂತಕ ಕಂಪನಿಯಿಂದ ಅಂಚೆ ಪಾರ್ಸೆಲ್ ಗಳ ಮಹಾಪೂರ ಬರಲಾರಂಭಿಸಿತು. ಮನೆಗೆ ಬಂದ ಪಾರ್ಸೆಲ್ ನೋಡಿ ಎಲ್ಲರ ಮುಖ ಅಗಲಗಲವಾಯಿತು. ಚಾಕು ತಂದರು. ಪಾರ್ಸೆಲ್ ಬಿಚ್ಚಿದರು. ಅದರಲ್ಲಿ ಎರಡು ಕಲ್ಲಿನ ತುಂಡುಗಳಿದ್ದುವು. ಜೊತೆಗೊಂದು “ಬಳಸುವ ವಿಧಾನ” ಎಂಬ ಚೀಟಿಯೂ ಇತ್ತು. ಅದರಲ್ಲಿ ಬರೆಯಲಾಗಿತ್ತು. “ ತಿಗಣೆಗಳನ್ನು ಒಂದು ಕಲ್ಲಿನ ಮೇಲಿರಿಸಿ ಇನ್ನೊಂದು ಕಲ್ಲಿನಿಂದ ಅದುಮಿ ಹಿಡಿಯಿರಿ. ಆ ತಿಗಣೆ ಹೇಳ ಹೆಸರಿಲ್ಲದೆ ನಾಶವಾಗಿ ಹೋಗುತ್ತದೆ. ಹೇಗಿದೆ ಮಾರುಕಟ್ಟೆದಾರರ ಚಮತ್ಕಾರ! ತಿಗಣೆಗಿಂತ ಬಲವಾದ ಕಡಿತವಾದರೂ, ಎಲ್ಲರೂ ಹೇಳುತ್ತಿದ್ದುದು, ಹುಚ್ಚ! ಹಣ ಕಟ್ಟಿದ. ಕಳಕೊಂಡ!! ನಾನೋ ಬೇಡ ಬೇಡ ಎಂದು ಹೇಳಿ ಏಜೆಂಟ್ ಗಳನ್ನೇ ಓಡಿಸಿದ್ದೆ; ಬಚಾವ್. ಅಂಚೆಯಣ್ಣ ಹೇಳಿದ ಮೇಲೆ ಗೊತ್ತಾದುದು, ಹುಚ್ಚ ಎಂದವರೆಲ್ಲರೂ ಹಣ ಕಳೆದು ಕೊಂಡಿದ್ದ ಹುಚ್ಚರೇ ಆಗಿದ್ದರೆಂದು. ಲಾಭದ ಲಾಲಸೆ ಬೇಕು, ಆದರೆ ಅತಿಯಾಸೆ ಅಥವಾ ದುರಾಸೆಯಿಂದ ಉಚಿತಗಳಿಗೆ ಮರುಳಾದರೆ ಸೋಲು ಖಚಿತ.
ನಾವು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಲುಧಿಯಾನದಿಂದ ಒಂದು ಕೆಟಲಾಗ್ ಬರುತ್ತಿತ್ತು. ಆ ಕೆಟಲಾಗ್ ವಿವಿಧ ಬಣ್ಣದ ಉತ್ತಮ ಗುಣ ಮಟ್ಟದ ಷರ್ಟುಗಳನ್ನು ಪರಿಚಯಿಸುತ್ತಿತ್ತು. ಬಟ್ಟೆಯ ಬಣ್ಣ ಮತ್ತು ಬೆಲೆಯ ವಿವರಣೆಯೊಂದಿಗೆ ಸಣ್ಣ ಚೌಕದೊಳಗೆ ಬಟ್ಟೆ ತುಂಡುಗಳನ್ನು ಕೆಟಲಾಗಿನಲ್ಲಿ ಸಾಲಾಗಿ ಅಂಟಿಸಲಾಗುತ್ತಿತ್ತು. ಒಂದು ಕೊಂಡರೆ, ಅದರ ವಿರುದ್ಧ ಬಣ್ಣದ ಇನ್ನೊಂದು ಷರ್ಟ್ ಉಚಿತವೆಂಬ ಆಫರ್ ಕೂಡಾ ಬರುತ್ತಿತ್ತು. ನನ್ನ ಮಿತ್ರನೊಬ್ಬ ಆರ್ಡರ್ ಮಾಡಿದ. ಆಗ ವಿ.ಪಿ.ಪಿ ಪದ್ಧತಿಯಿತ್ತು. ಅಂಚೆಯಲ್ಲಿ ಬಂದಾಗ ಹಣ ಕೊಟ್ಟು ಬಿಡಿಸಿಕೊಂಡರೆ ಆಯಿತು. ಆರ್ಡರ್ ಮಾಡಿದವರಿಗೆ ವಿ.ಪಿ.ಪಿ ಪಾರ್ಸೆಲ್ ಬರತೊಡಗಿತು. ಆದರೆ ಯಾರೂ ಅವರಿಗಾದ ಕಹಿ ಅನುಭವ ಹೇಳುತ್ತಲೇ ಇರಲಿಲ್ಲ. ಒಂದಕ್ಕೊಂದು ಉಚಿತ ಷರ್ಟು ಇರುತ್ತಿತ್ತು. ಆದರೆ ಆ ಷರ್ಟು ಅಂಗೈ ಗಾತ್ರದ ಶರ್ಟು. ತರಗತಿಯಲ್ಲಿ ಪಾಠ ಮಾಡುವ ಬೋಧಕರಿಗೆ ಬೋಧನೋಪಕರಣವಾಗಿ ಭಾಷೆ ಕಲಿಸಲು ಬಳಕೆ ಮಾಡಬಹುದಿತ್ತೇ ಹೊರತು ಉಡುಗೆಯಾಗಿ ಬಳಸುವಂತಿರದೆ ಮೋಸಗೊಂಡ ಸಾಚಾ ಅನುಭವ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ