ಉಚಿತಗಳ ಆವಾಂತರ (ಭಾಗ 3)
![](https://saaranga-aws.s3.ap-south-1.amazonaws.com/s3fs-public/styles/article-landing/public/filmticket.jpeg?itok=9pW11TG4)
ಓದಿದ ನೆನಪಿದು. ಹೊಸದಾಗಿ ಬಿಡುಗಡೆಯಾದ, ಬಹಳ ಪ್ರಚಾರ ಪಡೆದ ಸಿನಿಮಾದ ಕಾರಣದಿಂದಾದ ಸಿನಿಮೀಯ ಘಟನೆಯೊಂದನ್ನು ತಿಳಿದರೆ ನೀವು ನಗುವಿರಾ! ಅಳುವಿರಾ! ನಾನರಿಯೆ. ಆತನೋ ಬಹಳ ಶ್ರೀಮಂತ. ಅವನ ಬಳಿಗೆ ಬಹಳ ಗಂಭೀರ ಆಕರ್ಷಕ ವ್ಯಕ್ತಿಯೊಬ್ಬ ಬಂದ. ಶ್ರೀಮಂತನೊಡನೆ, “ವಿದೇಶದಲ್ಲಿರುವ ನಿಮ್ಮ ಮಿತ್ರ ಹೇಳಿದ, ನೀವು ಬಹಳ ಒಳ್ಳೆಯವರು, ಕಲಾ ಪೋಷಕರು, ಕಳೆದ ವಾರ ಬಿಡುಗಡೆಯಾದ ಸಿನೇಮಾಕ್ಕೆ ಭಾರೀ ರಶ್. ಯಾರಿಗೂ ಟಿಕೆಟ್ ಸಿಗುತ್ತಿಲ್ಲ. ನೀವು ಆ ಸಿನಿಮಾ ನೋಡಲೇ ಬೇಕು. ನಿಮ್ಮ ಮನೆ ಮಂದಿಗೆಲ್ಲಾ ನಾನೇ ಟಿಕೇಟ್ ಕೊಡುತ್ತೇನೆ. ನನಗೆ ನಿಮ್ಮ ಬಗ್ಗೆ ಬಹಳ ಅಭಿಮಾನ” ಎಂದೆಲ್ಲಾ ರೈಲು ಓಡಿಸಿದ. ಶ್ರೀಮಂತನ ಕಿವಿ ನೆಟ್ಟಗಾಯಿತು. “ನಾಳೆ ನಾನೇ ಕಾರು ಕಳಿಸುತ್ತೇವೆ. ನೀವು ಸಕುಟುಂಬ ಸಿನಿಮಾ ನೋಡಿ ಆನಂದಿಸಿ” ಎನ್ನಬೇಕೇ! ಶ್ರೀಮಂತ ಹಣ ಕೊಡಲು ಬಂದರೂ ಈ ವ್ಯಕ್ತಿ ಸುತಾರಾಂ ಸ್ವೀಕರಿಸದೆ ನಗುತ್ತಾ ಹೊರಟೇ ಬಿಟ್ಟ.
ಮರುದಿನ ಶ್ರೀಮಂತನ ಮನೆಯವರು ಎಲ್ಲರೂ ಸಿನೇಮಾ ನೋಡುವ ಆತುರದಲ್ಲಿದ್ದರು. ಕಾರು ಬಂದೇ ಬಿಟ್ಟಿತು. ಶ್ರೀಮಂತನು ಸಕುಟುಂಬ ಕಾರು ಏರಿದ. ಗೇಟು ಹಾಕಲು ಡ್ರೈವರ್ ಕಾರಿನಿಂದ ಇಳಿದ. ಫಕ್ಕನೆ ನೆನಪಾದವರಂತೆ, “ ಛೇ! ಸರ್, ನನ್ನ ಫೋನ್ ನಿಮ್ಮ ಟೀಪಾಯ್ ಮೇಲೆ ಇಟ್ಟಿದ್ದೆ. ಮರೆತು ಬಂದೆ” ಎಂದ. ಶ್ರೀಮಂತ ಮೊಬೈಲ್ ತರಲೆಂದು ಇಳಿಯ ಹೊರಟ. “ಬೇಡ ಸರ್ ನಾನೇ ತರುತ್ತೇನೆ, ಬಾಗಿಲಿನ ಬೀಗದ ಕೀ ಕೊಡಿ” ಎಂದ. ಶ್ರೀಮಂತ ಕೀ ಕೊಟ್ಠೇ ಬಿಟ್ಟ. ಚಾಲಕ ಬಾಗಿಲು ತೆರೆದು ವಾಪಸ್ ಬಂದ, ಕೈಯಲ್ಲಿ ಮೊಬೈಲಿತ್ತು. ಧನ್ಯವಾದ ಸರ್ ಅಂತ ಹೇಳಿ ಬೀಗದ ಕೀ ಮರಳಿಸಿದ. ಕಾರು ಹೊರಟೇ ಬಿಟ್ಟಿತು.
ಇತ್ತ ಇನ್ನೆರಡು ಕಾರುಗಳು ಮನೆಯ ಮುಂದೆ ಬಂದು ನಿಂತುವು. ಶ್ರೀಮಂತರಲ್ವ! ಜನ ಬರ್ತಾರೆ, ಹೋಗ್ತಾರೆ! ನಮಗೇಕೆ ಉಸಾಬರಿ? ಸುತ್ತ ಮುತ್ತಲಿನವರು ಮಾತನಾಡಲೇ ಇಲ್ಲ. ಕಾರಿನಲ್ಲಿ ಬಂದವರು ಹಾಕಿದ ಬಿಸ್ಕತ್ತುಗಳಿಗೆ ದೊಡ್ಡ ದೊಡ್ಡ ನಾಯಿಗಳೂ ಮಲಗಿಯೇ ಬಿಟ್ಟವು. ಬಂದವರು ಬಾಗಿಲು ತೆರೆದರು, ಮನೆಯೊಳಗಿನಿಂದ ಹಣ, ಒಡವೆ, ಬೆಲೆ ಬಾಳುವ ಎಲ್ಲವನ್ನೂ ತಮ್ಮ ಕಾರುಗಳಲ್ಲಿ ತುಂಬಿಕೊಂಡು ಹೊರಟೇ ಹೋದರು.
ಶ್ರೀಮಂತ ಮತ್ತು ಅವನ ಕುಟುಂಬ ಸಿನಿಮಾ ನೋಡಿ ಹೊರಗೆ ಬಂದು ಹುಡುಕಲಾರಂಭಿಸಿದರು. ಅವರನ್ನು ಕರೆದು ತಂದ ಕಾರು ಕಾಣಿಸಲಿಲ್ಲ. ಫೋನಿಗೆ ರಿಂಗಣಿಸಿದರೆ “ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಎಂದು ಬೊಗಳಿತು. ಅನ್ಯ ಮಾರ್ಗವಿಲ್ಲದೆ ಬಾಡಿಗೆ ರಿಕ್ಷಾ ಮೂಲಕ ಸಿನಿಮಾ ನೋಡಿದ ಹಗುರ ಮನಸ್ಸಿನಲ್ಲಿ ಮನೆಗೆ ತಲುಪಿದರು. ಮನೆಯೊಳಗೆ ಹೋಗಲು ಬೀಗ ತೆಗೆಯಬೇಕಾಗಿರಲಿಲ್ಲ. ಬಾಗಿಲು ತೆರೆದೇ ಇತ್ತು. ಮನೆಯವರಿಗೆ ಗಾಬರಿಯಾಯಿತು. ಒಳಗೆ ನೋಡಿದರೆ ಬಂಗಾರ ಮತ್ತು ಹಣದ ತಿಜೋರಿ ಖಾಲಿ ಖಾಲಿ. ಬೆಲೆ ಬಾಳುವ ಎಲ್ಲವೂ ಕಾಣೆ. ಟೀಪಾಯ್ ಮೇಲೆ ಚೀಟಿಯೊಂದು ಇತ್ತು. “ಬೇಸರ ಮಾಡಬೇಡ, ಹಣ ಬರುತ್ತದೆ, ಹೋಗುತ್ತದೆ. ಕಳ್ಳರ ಗ್ಯಾಂಗ್‌ನ ನಾವು ನಿನಗೆ ಟಿಕೆಟು ಕೊಟ್ಟು ಸಿನಿಮಾದ ರಸದೌತಣ ಉಣಿಸಿದ್ದೇವೆ. ಮನೆ ಗುಡಿಸಿ ಗುಂಡಾಂತರ ಮಾಡಿ, ನಿಮಗೆ ದುಃಖ ರಸದ ಮತ್ತೊಂದು ಸಿನಿಮಾವನ್ನು ಮನೆಯಲ್ಲೂ ತೋರಿಸಿದ್ದೇವೆ." ಮನೆಯವರೆಲ್ಲರೂ ಅಯ್ಯೋ ಎಂದು ಅಳಬೇಕಲ್ಲದೆ ಮತ್ತೇನು ಮಾಡಲು ಸಾಧ್ಯ?
ಆದುದು ಇಷ್ಟೇ. ಎಲ್ಲವೂ ಕಳ್ಳರ ವ್ಯವಸ್ಥಿತ ಜಾಲ. ಮೊಬೈಲಿಗೆಂದು ಚಾಲಕ ಬಾಗಿಲು ತೆರೆದನಾದರೂ ಮತ್ತೆ ಬೀಗ ಹಾಕದೆ ಕೀಯನ್ನು ಮರಳಿಸಿದ್ದ. ಸಿನಿಮಾ ದರ್ಶಿಸುವ ಆತುರದಲ್ಲಿದ್ದ ಶ್ರೀಮಂತನಿಗಾಗಲೀ ಮನೆಯವರಿಗಾಗಲೀ ಗೇಟಿನ ಬೀಗ ಹಾಕುವ ಪರಿವೆಯೂ ಇರಲಿಲ್ಲ. ಎಲ್ಲವೂ ಅಂದಿನ ಡ್ರೈವರ್‌ನ ಕೈಚಳಕ ಮತ್ತು ಪೂರ್ವಯೋಜನೆ. ಸಿನಿಮಾ ಒಂದರ ಉಚಿತ ಟಿಕೇಟಿನ ಆವಾಂತರ ಹೇಗಿದೆ?
ವ್ಯಾಪಾರ ವ್ಯವಹಾರಗಳು ನಡೆಯುವುದರಿಂದಲೇ ಸಮಾಜವು ಉಳಿಯುತ್ತದೆ. ವ್ಯಾಪಾರಿಗಳಿರದೇ ಇದ್ದರೆ ಮನುಜನ ಬದುಕು ಕಷ್ಟಕರವಾದುದು. ವ್ಯಾಪಾರಿಗೂ ಜೀವನ ನಿರ್ವಹಣೆಗೆ ಕಿಂಚಿತ್ ಲಾಭ ಬೇಕೇ ಬೇಕು. ವ್ಯಾಪಾರದಲ್ಲಿ ಕಳಪೆಯೂ ಸಲ್ಲದು, ಮೋಸವೂ ಸಲ್ಲದು. ಗುಣ ಮಟ್ಟ ಪ್ರಮಾಣಿತವಾದ ವ್ಯಾಪಾರಗಳು ಸುಂದರ ಸಮಾಜದ ಆಸ್ತಿಯೆಂಬುದಂತೂ ಸತ್ಯ. ಅಮೋಘ ದರ ಕಡಿತ, ಒಂದರೊಡನೊಂದು ಪುಕ್ಕಟೆ, ಸೋಡಿ ಬಿಟ್ಟು ಮಾರಾಟ, ಸ್ಟಾಕ್ ಖಾಲಿ ಮಾಡಲು ಮಾರಾಟ, ನಿಮಗೆ ಇದೋ ಉಚಿತ ಟಿಕೇಟು ಮುಂತಾದ ಹೆಸರಿನಲ್ಲಿ ನಡೆಯುವ ವ್ಯವಹಾರಗಳೂ ಪ್ರಾಮಾಣಿಕತೆಯಿಂದಲೇ ಕೂಡಿರಬೇಕು. ಮೋಸಗಳಿಗೆ ಇತರರನ್ನು ಬಲಿಗೊಳಿಸದಿರುವುದು ಮತ್ತು ಮೋಸಗಳಿಗೆ ತಾವೂ ಬಲಿಯಾಗದಿರುವುದು ಪ್ರತಿಯೊಬ್ಬರ ನಡೆಯಾಗಿರಲಿ; ಇದೇ ನಮ್ಮ ಜೀವನ ಧರ್ಮವಾಗಿರಲಿ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ