ಉಚಿತಗಳ ದಾಸರಾಗದಿರೋಣ!

ಉಚಿತಗಳ ದಾಸರಾಗದಿರೋಣ!

ಚುನಾವಣೆಗಳಲ್ಲಿ ಉಚಿತಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಪ್ರವೃತ್ತಿ ಅಂತ್ಯಗೊಳ್ಳಬೇಕು. ಜನರು ಕೂಡಾ ಇಂತಹ ಪ್ರವೃತ್ತಿಯನ್ನು ಬೆಂಬಲಿಸಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರು ಜನತೆಯನ್ನು ಆಗ್ರಹಿಸಿದ್ದಾರೆ. ಉಚಿತಗಳ ದಾಸರಾಗುವುದರಿಂದ ಖಂಡಿತ ದೇಶಕ್ಕೂ ಒಳಿತಾಗದು, ಜನತೆಗೂ ಒಳಿತಾಗದು. ಕೇವಲ ತಾತ್ಕಾಲಿಕ ಲಾಭ, ಸ್ವಾರ್ಥಕ್ಕಾಗಿ ಇಂತಹ ಆಮಿಶಗಳಿಗೆ ಬಲಿಯಾಗುವುದರಿಂದ ಪ್ರಜಾತಂತ್ರಕ್ಕೆ ಖಂಡಿತ ಅಪಾಯವಿದೆ. ದೇಶದ ಆರ್ಥಿಕತೆಗೂ ಒಳಿತು ತರದು. ಚುನಾವಣೆಯ ವೇಳೆ, ಉಚಿತಗಳ ಘೋಷಣೆ ಮಾಡುವ ರಾಜಕಾರಣಿಯ ಹಿನ್ನಲೆ ಏನು? ಆತನ ಉತ್ತರದಾಯಿತ್ವ ಏನು? ದೇಶದ ಭವಿಷ್ಯಕ್ಕೆ ಆತನ ಬದ್ಧತೆ ಏನು? ಎಂಬಿತ್ಯಾದಿ ಯಾವುದೇ ಯೋಚನೆ ಮಾಡದೆ ಜನ ಮೈಮರೆಯುತ್ತಾರೆ. ಉಚಿತ ನೀಡಿಕೆ, ಹಣ, ಹೆಂಡ ಹಂಚಿಕೆಯೇ ಫಲಿತಾಂಶದ ಮೇಲೆ ನಿರ್ಣಾಯಕ ಅಂಶಗಳಾಗಿಬಿಡುತ್ತವೆ. ವಿಚಿತ್ರ ಎಂದರೆ ಇಂತಹ ಜನರೇ ಬಳಿಕ ಅಭಿವೃದ್ಧಿ ಪ್ರಜಾತಂತ್ರ, ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಇತರ ಅಭ್ಯರ್ಥಿಗಳೂ ಇಂತಹುದೇ ತಂತ್ರಗಳಿಗೆ ಮೊರೆಹೋಗುವ ದುಃಸ್ಥಿತಿಗೆ ಇಂತಹ ಮತದಾರರೇ ಕಾರಣವಾಗಿ ಕೊನೆಗಿದು 'ವಿಷವೃತ್ತ' ವಾಗಿಬಿಡುತ್ತದೆ.

ಕೇಜ್ರಿವಾಲ್ ಅವರು ದಿಲ್ಲಿಯಲ್ಲಿನ ಉಚಿತಗಳ ತಂತ್ರವನ್ನೇ ಪಂಜಾಬ್ ನಲ್ಲೂ ಬಳಸಿದರು. ತಮಿಳ್ನಾಡು ಚುನಾವಣೆಯಲ್ಲೂ ಉಚಿತಗಳ ಭರಪೂರ ಪೈಪೋಟಿ ನಡೆದು ಪ್ರಜಾತಂತ್ರವನ್ನೇ ಅಣಕಿಸಲಾಯಿತು. ಚುನಾವಣೆಯ ಬಳಿಕ, ಪಂಜಾಬ್ ನ ಆಪ್ ಸಿಎಂ ಉಚಿತಗಳ ಭರವಸೆ ಈಡೇರಿಸಲು ಕೇಂದ್ರದಿಂದ ೫೦ ಸಾವಿರ ಕೋ. ರೂ. ಗಳಿಗೆ ಬೇಡಿಕೆ ಮುಂದಿಟ್ಟರು! ಈಗ ಗುಜರಾತಿನಲ್ಲೂ ಕೇಜ್ರಿವಾಲ್ ಉಚಿತ ವಿದ್ಯುತ್ ಇತ್ಯಾದಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈ ನಡುವೆಯೂ ಕೆಲವು ಆಶಾದಾಯಕ ಬೆಳವಣಿಗೆಗಳು ಕಂಡುಬಂದಿವೆ. ಸಾಧ್ಯ ಇದ್ದವರು ಎಲ್ ಪಿ ಜಿ ಸಬ್ಸಿಡಿಯನ್ನು ತ್ಯಜಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆನೀಡಿದಾಗ ದೇಶದಲ್ಲಿ ಸಾವಿರಾರು ಮಂದಿ ಸಬ್ಸಿಡಿ ತ್ಯಜಿಸಿದರು. ಇತ್ತೀಚೆಗೆ ಗದಗ ಜಿಲ್ಲೆಯ ರೈತರೊಬ್ಬರು, ನನಗೆ ರೈತ ಸನ್ಮಾನ್ ನಿಧಿಯ ಅಗತ್ಯವಿಲ್ಲ. ಸರಕಾರದ ನೀತಿಗಳಿಂದಾಗಿ ಇಂದು ನನ್ನ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಅದನ್ನು ಅಗತ್ಯ ಇರುವ ಬಡ ರೈತರಿಗೆ ನೀಡಿ ಎಂದು ಹೇಳಿರುವುದು ಗಮನಾರ್ಹ. ಹೀಗೆ 'ಉಚಿತ'ಗಳ ಘೋಷಣೆ ಮಾಡುವ ರಾಜಕಾರಣಿಗಳು ನಿಜವಾಗಿಯೂ ಜನರನ್ನು ಗೌರವದಿಂದ ಕಾಣುತ್ತಾರೆಯೇ? ಖಂಡಿತಾ ಇಲ್ಲ. ಬದಲಿಗೆ ಜನರನ್ನು ತುಚ್ಛವಾಗಿ ಕಂಡೇ ಇಂತಹ ಉಚಿತಗಳ ಘೋಷಣೆ ಮಾಡುತ್ತಿರುವುದು. ಜನತೆ ಕೇಳುತ್ತಾರೆ, ನಾವೇನು ಮಾಡಲಿ ಎಂಬ ರಾಜಕಾರಣಿಗಳ ಮಾತು ಅವರು ಉಚಿತ ಬಯಸುವ ಜನರ ಬಗ್ಗೆ ಎಂತಹ ಭಾವನೆ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ. ಉಚಿತಗಳು ಸ್ವಾಭಿಮಾನದ ಸ್ಥಾನದಲ್ಲಿ ಸ್ವಾಭಿಮಾನ ಶೂನ್ಯತೆಯನ್ನು ತುಂಬುತ್ತದೆ. ಕರ್ತವ್ಯದ ಬದಲಿಗೆ ಹಕ್ಕುಗಳ ಹೆಸರಿನಲ್ಲಿ ಸ್ವಾರ್ಥಕ್ಕೆ ಕುಮ್ಮಕ್ಕು ನೀಡುತ್ತದೆ. ಉಚಿತಗಳ ಘೋಷಣೆ ಮಾಡುವ ರಾಜಕಾರಣಿಗಳಿಗೆ ದೇಶದ ಭವಿಷ್ಯ ಬೇಕಾಗಿಲ್ಲ ಎಂಬುದು ಒಂದೆಡೆಯಾದರೆ, ಇದಕ್ಕೆ ಮರುಳಾಗುವ ಜನರು ತಮ್ಮ ಮಕ್ಕಳ ಅಥವಾ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಎನ್ನುತ್ತಾರೆ ಸಮಾಜ ಚಿಂತಕರೊಬ್ಬರು.

ದೇಶದ ಕೆಲವು ರಾಜಕೀಯ ಪಕ್ಷಗಳು ಮತ್ತು ರಾಜಕಾರಣದ ಧೋರಣೆಯಂತೂ ಇನ್ನೂ ಘೋರವಾಗಿದೆ. ಶ್ರೀಲಂಕಾದಲ್ಲಿ ಕಂಡುಬಂದಿರುವ ಆರ್ಥಿಕ ಬಿಕ್ಕಟ್ಟು ಭಾರತದಲ್ಲೂ ಬರಬೇಕು, ಹಾಗಾದರೂ ಮೋದಿಯನ್ನು ನಿವಾರಿಸಿಕೊಳ್ಳಬಹುದೇ ಎಂದು ಕಾಯುತ್ತಿದ್ದಾರೆ. ತೆರಿಗೆ ಎಂದರೆ ಸರಕಾರ ಲೂಟಿ ಮಾಡುವುದು ಎಂಬ ವಿಷಯುಕ್ತ ಪ್ರಚಾರ ನಡೆಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಒಂದೆಡೆ ಸೌಲಭ್ಯಗಳಿಗೆ ಆಗ್ರಹಿಸುತ್ತಿದ್ದಂತೆಯೇ, ಮತ್ತೊಂದೆಡೆ ಅಂತಹ ಅಭಿವೃದ್ಧಿಗಾಗಿ ಜನತೆ ತೆರಿಗೆಯನ್ನು ಪ್ರಾಮಾಣಿಕವಾಗಿ ನೀಡ ಬೇಕೆಂದರೆ ಅದನ್ನು ಶೋಷಣೆ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂಬ ಸತ್ಯ 'ಎಜುಕೇಟೆಡ್' ಎಂದು ಹೇಳಿಕೊಳ್ಳುವವರಿಗೇ ಗೊತ್ತಾಗುತ್ತಿಲ್ಲ ಎಂಬುದು ವಿಷಾದನೀಯ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ 'ಎಜುಕೇಟೆಡ್' ಗಳ ಪ್ರತಿಕ್ರಿಯೆ ನೋಡಿದಾಗ ವಿಷಾದವೆನಿಸುತ್ತದೆ. ಸದ್ಯ ದೇಶದ ಸಾಮಾನ್ಯ ಜನತೆ, ಯುವವರ್ಗ ಇಂತಹ ಪಿಡುಗಿನ ವಿರುದ್ಧ ಜಾಗೃತರಾಗುತ್ತಿರುವುದು ಭರವಸೆಯ ಅಂಶ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೨-೦೭-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ