ಉಚಿತ ಯೋಜನೆಗಳ ದಾಟಿ ಅಭಿವೃದ್ಧಿಗೆ ಒತ್ತು ನೀಡಲೆತ್ನ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ ೧೫ನೇ ಬಜೆಟ್ ಮಂಡಿಸಿದ್ದಾರೆ. ಗಾತ್ರ ಬರೋಬ್ಬರಿ ೩.೭ ಲಕ್ಷ ಕೋಟಿ ರೂಪಾಯಿ. ಅದೂ ದಾಖಲೆಯೇ. ಎಂದಿನಂತೆ ಇದರಲ್ಲಿ ಸುಮಾರು ೧ ಲಕ್ಷ ಕೋಟಿ ರೂ. ನಷ್ಟು ಹಣವನ್ನು ಸಲದ ರೂಪದಲ್ಲು ತಂದು ರಾಜ್ಯದ ಅಭಿವೃದ್ಧಿಗೆ ವೇಗ ನೀಡುವ ಪ್ರಸ್ತಾಪವಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಉಚಿತ ಯೋಜನೆಗಳಿಗೆ ವಾರ್ಷಿಕ ಸುಮಾರು ೬೦ ಸಾವಿರ ಕೋಟಿ ರೂ. ಅಗತ್ಯವಿರುವುದರಿಂದ, ಅದನ್ನು ತುಂಬಿಕೊಂಡು, ಅಭಿವೃದ್ಧಿಗೂ ಇನ್ನಷ್ಟು ಹಣ ಹಂಚಲು ಸಾಲ ಮತ್ತು ಕೆಲ ತೆರಿಗೆ -ಸೆಸ್ ಗಳ ಏರಿಕೆಯ ದಾರಿಯನ್ನು ಮುಖ್ಯಮಂತ್ರಿಗಳು ಹುಡುಕಿದ್ದಾರೆ. ಬಜೆಟ್ ನ ಸಿಂಹಾವಲೋಕನ ನಡೆಸಿದರೆ ಮೂಲ ಸೌಕರ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಂಧನ ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿರುವುದು ಕಾಣಿಸುತ್ತದೆ. ಕಳೆದ ವರ್ಷ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಂಡಿಸಿದ ಮೊದಲ ಬಜೆಟ್ ‘ಉಚಿತ ಗ್ಯಾರಂಟಿ ಯೋಜನೆಗಳ ಬಜೆಟ್' ಆಗಿತ್ತು. ಈ ಬಾರಿ ಉಚಿತ ಯೋಜನೆಗಳನ್ನು ಮೀರಿ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲು ಬಜೆಟ್ ನಲ್ಲಿ ಯತ್ನಿಸಿರುವುದು ನಿಚ್ಚಳವಾಗಿದೆ.
ಸರ್ಕಾರವೊಂದು ಉಚಿತವಾಗಿ ಜನರಿಗೆ ಕೊಡುಗೆಗಳನ್ನು ನೀಡುವುದು ಸರಿಯೇ ಅಥವಾ ತಪ್ಪೇ ಎಂಬುದು ಹಳೆಯ ಚರ್ಚಾತ್ಮಕ ವಿಷಯ. ಇದು ಬೇರೆ ರಾಜಕೀಯ ಪಕ್ಷಗಳ ಸಿದ್ಧಾಂತ ಹಾಗೂ ನಿಲುವುಗಳನ್ನು ಅವಲಂಬಿಸಿದೆ. ಆದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಐದು ಉಚಿತ ಯೋಜನೆಗಳನ್ನು ಬಹುದೊಡ್ಡ ಜನವರ್ಗಕ್ಕೆ ಎಟಕುವ ರೀತಿಯಲ್ಲಿ ಜಾರಿಗೊಳಿಸಿದಾಗ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಯಂತೆ ದೊಡ್ದ ಹೊರೆಯಾಗಿತ್ತು. ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಮಂತ್ರಿಗಳೇ ಇದನ್ನು ಒಪ್ಪಿಕೊಂಡಿದ್ದರು. ಉಚಿತ ಯೋಜನೆಗಳ ಕಾರಣದಿಂದ ಅಭಿವೃದ್ಧಿಯ ಕಾಮಗಾರಿಗಳಿಗೆ ಹಣ ನೀಡಲು ಆಗುತ್ತಿಲ್ಲ ಎಂಬ ಟೀಕೆ ಕೂಡಾ ಎದುರಾಗಿತ್ತು. ಅದಕ್ಕೆ ಈ ಸಲದ ಬಜೆಟ್ ನಲ್ಲಿ ಉತ್ತರಿಸಲು ಯತ್ನಿಸಲಾಗಿದೆ. ಸಮಾಜ ಕಲ್ಯಾಣ, ದುರ್ಬಲ ವರ್ಗದವರನ್ನು ಮೇಲೆತ್ತುವುದು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವುದು ಮುಂತಾದ ಉದಾತ್ತ ಆಶಯಗಳಷ್ಟೇ ರಾಜ್ಯದ ಬೊಕ್ಕಸದಬೊಕ್ಕಸದ ಆರೋಗ್ಯ ಕೂಡ ಮುಖ್ಯ. ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಯಂತ್ರ ನಿಲ್ಲದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಈ ಬಜೆಟ್ ನ ಭರವಸೆಗಳ ಮೂಲಕ ಅದು ಸಾಧ್ಯವಾಗುವಂತೆ ನೋಡಿಕೊಳ್ಳುವ ಹೊಣೆ ಸಿದ್ಧರಾಮಯ್ಯ ಅವರ ಮೇಲಿದೆ. ಬಜೆಟ್ ಮಂಡಿಸಿಯಾಗಿದೆ. ಇನ್ನು ಅದನ್ನು ಜಾರಿಗೊಳಿಸುವ ಕಸರತ್ತು ಬಾಕಿಯುಳಿದಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿನಾಂಕ: ೧೭-೦೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ