ಉಚಿತ ವಿದ್ಯುತ್ ದುರ್ಬಳಕೆ

ಉಚಿತ ವಿದ್ಯುತ್ ದುರ್ಬಳಕೆ

ಬರಹ

ಇತ್ತೀಚೆಗೆ ನಾನು ಕಂಡಂತೆ ಉಚಿತ ವಿದ್ಯುತ್ತನ್ನು ರೈತರು ಹೇಗೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬರೆಯುತ್ತಿದ್ದೇನೆ. ಹದಿನೈದು ಇಪ್ಪತ್ತು ಎಕರೆ ಜಮೀನು ಹೊಂದಿರುವ ರೈತರು ಇಂದು ಉಚಿತ ವಿದ್ಯುತ್ ಸೌಲಭ್ಯವನ್ನು ಸಮರ್ಥವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ವಿಧಾನ 1: ಮನೆಯಲ್ಲಿ 3-4 ಜನ ಅಣ್ಣ ತಮ್ಮಂದಿರಿದ್ದರೆ ಅವರೆಲ್ಲ ಪ್ರತ್ಯೇಕವಾಗಿ ವಿದ್ಯುತ್ ಮೊಟಾರ್ ಗಾಗಿ ಅರ್ಜಿ ಗುಜರಾಯಿಸುತ್ತಾರೆ. ಜಮೀನಿನ ಪ್ರತ್ಯೇಕ ಜಾಗಗಳಲ್ಲಿ ಷೆಡ್ ಗಳನ್ನು ನಿರ್ಮಿಸುತ್ತಾರೆ. 5 ರಿಂದ 10 ಅಶ್ವಶಕ್ತಿಯ ಮೋಟಾರುಗಳನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ರಾಜಕೀಯ ವ್ಯಕ್ತಿಗಳ ಸಂಪರ್ಕವಿದ್ದರೆ ಕೆಲಸ ಸುಲಭ. ಜಮೀನಿಗೆ ನೀರಿನ ಅಗತ್ಯವಿರಲಿ, ಇಲ್ಲದಿರಲಿ, ವಿದ್ಯುತ್ ಇರುವ ವರೆಗೆ ಮೋಟಾರು ಓಡಿಸುತ್ತಾರೆ. ಮೋಟಾರನ್ನು ನಿಗದಿತ ಸಮಯದಲ್ಲಿ ಚಾಲನೆ ಮಾಡಿ, ನಿಗದಿತ ಸಮಯದ ನಂತರ ನಿಲ್ಲಿಸಲು ಆಧುನಿಕ ಟೈಮರ್ ಸ್ವಿಚ್ ಗಳನ್ನು ಬಳಸುತ್ತಾರೆ.

ವಿಧಾನ 2: ಸರ್ಕಾರದಿಂದ 3 ಅಶ್ವಶಕ್ತಿಯ ಮೋಟಾರು ಮಂಜೂರಾಗಿದ್ದರೆ, ಅದನ್ನು ನಿಧಾನವಾಗಿ 5 ರಿಂದ 10 ಅಶ್ವಶಕ್ತಿಗೆ ಬದಲಾಯಿಸಿಕೊಳ್ಳುತ್ತಾರೆ. ಯಾರಾದರೂ ತನಿಖೆಗೆ ಬಂದರೆ ಕೈ ಬೆಚ್ಚಗೆ ಮಾಡಿದರೆ ಮುಗಿಯಿತು.

ವಿಧಾನ 3: 3 ಮತ್ತು ಅಧಿಕ ಅಶ್ವಶಕ್ತಿಯ ಮೋಟಾರುಗಳಿಗೆ 3 ಫೇಸ್ ವಿದ್ಯುತ್ ಅಗತ್ಯ. ಬೇಸಿಗೆಯಲ್ಲಿ 2 ದಿನಕ್ಕೊಮ್ಮೆ 4 - 6 ಗಂಟೆ ವಿದ್ಯುತ್ತನ್ನು ಎಲ್ಲಾ ಮೂರು ಫೇಸ್ ಗಳಲ್ಲಿ ಒದಗಿಸುತ್ತಾರೆ. ಇನ್ನುಳಿದ ಸಮಯದಲ್ಲಿ ಒಂದು ಫೇಸ್ ವಿದ್ಯುತ್ತನ್ನು ಕಡಿತಗೊಳಿಸುತ್ತಾರೆ. ಇದಕ್ಕೆ ರೈತರು ಕಂಡುಕೊಂಡಿರುವ ಉಪಾಯವೆಂದರೆ ಒಂದೇ ಫೇಸ್ ನಲ್ಲಿ ಓಡುವ 2 ಅಶ್ವಶಕ್ತಿಯ ಆಧುನಿಕ ಮೋಟಾರುಗಳು. ಇವು 3 ಅಶ್ವಶಕ್ತಿಯ ಮೋಟಾರುಗಳಿಗೆ ಸಮನಾಗಿ ಕೆಲಸ ಮಾಡುತ್ತವೆ. ಇವುಗಳನ್ನು ಅನಧಿಕೃತವಾಗಿ ಜೋಡಿಸಿಕೊಂಡು ಸರಾಗವಾಗಿ ವಿದ್ಯುತ್ ಸೆಳೆದುಕೊಳ್ಳುತ್ತಾರೆ.

ದುರ್ಬಳಕೆ ಹೇಗೆ ತಡೆಯಬಹುದು?

  • ಪ್ರತಿ ರೈತನಿಗೆ ಉಚಿತವಾಗಿ ಎಷ್ಟು ಯುನಿಟ್ ಕೊಡಬಹುದು ಎಂದು ಸರ್ಕಾರ ನಿಗಧಿಪಡಿಸಬೇಕು.  ಮಿತಿಯಿಲ್ಲದೇ ವಿತರಿಸಿದರೆ ದುರ್ಬಳಕೆ ಸಹಜ. ಕಡ್ಡಾಯವಾಗಿ ಮೀಟರನ್ನು ಅಳವಡಿಸಬೇಕು.
  • ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡು ಉಚಿತವಾಗಿ ವಿದ್ಯುತ್ ನೀಡಬೇಕೇ ಬೇಡವೇ ಎಂದು ನಿರ್ಧರಿಸಬೇಕು. 50 ಲಕ್ಷದಿಂದ ಒಂದು ಕೋಟಿ ವಾರ್ಷಿಕ ಆದಾಯ ಇರುವ ಎಷ್ಟೇಟ್ ಮಾಲಿಕರಿಗೂ ವಿದ್ಯುತ್ತನ್ನು ಉಚಿತವಾಗಿ ಒದಗಿಸುವುದರಲ್ಲಿ ಅರ್ಥವಿದೆಯೇ?