ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಪುಸ್ತಕದ ಲೇಖಕ/ಕವಿಯ ಹೆಸರು
ವಿನಾಯಕ ಭಟ್ಟ/ರೋಹಿತ್ ಚಕ್ರತೀರ್ಥ/ಗೀರ್ವಾಣಿ/ವೃಷಾಂಕ ಭಟ್
ಪ್ರಕಾಶಕರು
ಅಯೋಧ್ಯಾ ನಂ ೮೭೭, ೩ನೇ ಮಹಡಿ, ೧ನೇ ಇ ಮುಖ್ಯ ರಸ್ತೆ, ಗಿರಿ ನಗರ, ಬೆಂಗಳೂರು ೫೬೦೦೮೫
ಪುಸ್ತಕದ ಬೆಲೆ
ರೂ.100.00

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ ಇಂದು ಸಿಎಎ ಅಗತ್ಯ ಇರುತ್ತಿರಲಿಲ್ಲ. ಅದರಲ್ಲೂ ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ದೊಡ್ಡ ತಪ್ಪು. 

ಭಾರತೀಯ ಮುಸಲ್ಮಾನರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಚುನಾವಣಾ ಆಯುಕ್ತರಾದರು. ಆದರೆ ಪಾಕ್-ಬಾಂಗ್ಲಾ-ಅಫ್ಘಾನಿಸ್ಥಾನದ ಅಲ್ಪಸಂಖ್ಯಾತರು ತಮ್ಮ ಧರ್ಮ, ಜೀವ ಮತ್ತು ಮಹಿಳೆಯರ ಗೌರವದ ರಕ್ಷಣೆಗಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿದ್ದಾರೆ. ಅವರ ರಕ್ಷಣೆ ನಮ್ಮ ಜವಾಬ್ದಾರಿ. 

ನಾಲ್ಕು ಮಂದಿ ಲೇಖಕರು ವಿನಾಯಕ ಭಟ್ ಮೂರೂರು, ರೋಹೀತ್ ಚಕ್ರತೀರ್ಥ, ಗೀರ್ವಾಣಿ ಮತ್ತು ವೃಷಾಂಕ್ ಭಟ್ ಈ ಪುಸ್ತಕಕ್ಕೆ ಲೇಖನಗಳನ್ನು ಬರೆದಿದ್ದಾರೆ. ಎಸ್.ಎನ್.ಸೇತೂರಾಂ ತಮ್ಮ ಮುನ್ನುಡಿಯಲ್ಲಿ ೧೯೭೧ರ ಬಾಂಗ್ಲಾ ದೇಶದ ವಿಮೋಚನೆಯ ಯುದ್ಧದಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮದವರ ಘರ್ಷಣೆ ಬಗ್ಗೆ ಬರೆಯುತ್ತಾರೆ. ಇದು ಕೇವಲ ಧರ್ಮಕ್ಕಾಗಿ ಆದುದಲ್ಲ, ಆಸ್ತಿಗಾಗಿ ಹೊಡೆದಾಡಿದ್ದು. ಇದ್ದವರಿಂದ ಇಲ್ಲದವರು ಧರ್ಮದ ಹೆಸರಿನಲ್ಲಿ ಕಿತ್ತುಕೊಂಡದ್ದು, ಪರಿಣಾಮವಾಗಿ ಮುಸಲ್ಮಾನರಿಗೆ ಅಂತ ನಿರ್ಧಾರವಾದ ದೇಶಗಳಿಂದ ಹಿಂದೂಗಳನ್ನು ಎಬ್ಬಿಸಿದರು. ಸಿಂಧನೂರಿನಲ್ಲಿ ಬಂದು ನಿರಾಶ್ರಿತರ ತಾಂಡಾದಲ್ಲಿ ನೆಲೆ ಕಂಡುಕೊಂಡವರೆಲ್ಲಾ ಹಿಂದುಗಳೇ. ಹೇಗೆಲ್ಲಾ ಹಿಂಸಾಚಾರಗಳು ನಡೆಯಿತು ಎಂಬುದಾಗಿ ಮುನ್ನುಡಿಯಲ್ಲಿ ಸುಳಿವು ಕೊಡುತ್ತಾ ಹೋಗುತ್ತಾರೆ.

೧೯ ಲೇಖನಗಳಿವೆ. ಕೆಲವು ಲೇಖನಗಳನ್ನು ಉದಾಹರಣೆಗೆ 'ಪ್ರೀತಿಯ ಬಾತುಕೋಳಿ' ಯನ್ನು ಓದುವಾಗ ಕಣ್ಣಂಚಿನಲ್ಲಿ ನಮಗರಿಯದೇ ನೀರು ತೊಟ್ಟಿಕ್ಕುತ್ತದೆ. ೧೯೭೧ರ ಆಪರೇಷನ್ ಸರ್ಚ್ ಲೈಟ್ ಹತ್ಯಾಕಾಂಡ ನಿರಂತರ ೯ ತಿಂಗಳು ನಡೆದು ೩೦ ಲಕ್ಷದಷ್ಟು ಜನರು ಹತರಾದರು. ೩ ರಿಂದ ೫೦ ವರ್ಷದ ಮಹಿಳೆಯರು, ಹುಡುಗಿಯರು ಭೀಕರ ಅತ್ಯಾಚಾರಕ್ಕೆ ಗುರಿಯಾದರು. ಅದರಲ್ಲೊಂದು ಕುಟುಂಬ ಕಾಲೀದಾಸಿದ್ದು. ಈ ಹತ್ಯಾಕಾಂಡ ನಡೆಯುವಾಗ ಅವಳಿಗೆ ಹದಿನೈದರ ಹರೆಯ. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಓಡಿ ಬರುವಾಗ ಅವರಿಗೆ ನೆನಪಾದದ್ದು ಅವರು ಸಾಕಿಕೊಂಡಿದ್ದ ಬಾತುಕೋಳಿಯ ಕುಟುಂಬಗಳು. ಅದನ್ನು ತರಲು ಹೋದ ಹಿರಿಯರು ಮತ್ತೆ ಹಿಂದಿರುಗಿ ಬರಲೇ ಇಲ್ಲ. ಕಾಲೀದಾಸಿಗೆ ಈಗ ೬೫ ವರ್ಷ. ಭಾರತದ ಗಡಿಯೊಳಗೆ ಬಂದಾಗ ಹದಿಹರಯದ ಹುಡುಗಿ ಈಗ ಮುದುಕಿಯಾಗಿದ್ದಾಳೆ. ಆದರೆ ಪ್ರೀತಿಯ ಬಾತುಕೋಳಿಗಳು ಬರಲೇ ಇಲ್ಲ. ಈ ರೀತಿಯ ಲೇಖನಗಳನ್ನು ಓದಿದಾಗ ನಿಜಕ್ಕೂ ಗಾಬರಿಯಾಗುತ್ತದೆ. ಕೆಲವು ಛಾಯಾಚಿತ್ರಗಳೂ ಇವೆ.

ಅಯೋಧ್ಯಾ ಪ್ರಕಾಶನದವರ ಮೊದಲ ಕೃತಿ ಇದು. ೨೦೨೦ರಲ್ಲಿ ಮೊದಲ ಮುದ್ರಣ ಕಂಡಿದೆ. ೯೬ ಪುಟಗಳು, ವೃದ್ದೆಯೋರ್ವಳ ಮುಖ ಪುಟ ಹೊಂದಿದ ಪುಸ್ತಕವನ್ನು ಒಮ್ಮೆ ಓದಿ ನೋಡ ಬಹುದು