ಉಡಪಿ ರಾಯನ ಹೋಟೆಲ್.............
ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ.....
ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ.....
ಖಾರಾ ಚಕ್ಕುಲಿ ಶೇವು ಚಿವಡಾ ಗೇಳತನ ಮಾಡಿದ್ವ...
ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ.....
ಅಂಟಿನ ಉಂಡಿ ಶಟಗೊಂಡ ಹೋಗಿ ಡಬ್ಬ್ಯಾಗ ಕೂತಿತ್ತ........
ಚಹಾ ಕುಡಿದರ ಪಾನಪಟ್ಟಿ ಓಡೊಡಿ ಬರತಿತ್ತ.......
ಇದೇಲ್ಲಾ ಆದಮ್ಯಾಲೆ ನಾಲ್ಕ ರೂಪಾಯಿ ಬಿಲ್ಲ ಆಗಿತ್ತ....
ಅದನ್ನ ನೋಡಿ ನನ್ನ ಎದಿ ಝಲ್ಲ ಅಂದಿತ್ತ..............
ಈ ಹಾಡನ ನಮ್ಮ ಅಮ್ಮ ಸಣ್ಣವರಿದ್ದಾಗ ತಮ್ಮ ವಾರಿಗಿ ಗೇಳ್ತ್ಯಾರ ಜೋಡಿ ಹಾಡತಿದ್ರಂತ... ಆವಾಗಿನ್ನು ಹೋಟೆಲ್ ಗೊಳ ತಲಿ ಎತ್ತಲಿಕತ್ತ ಕಾಲದಾಗ ಹೋಟೆಲ್ ಅಂದ್ರ ಒಂದು ಆಶ್ಚರ್ಯದ ವಿಷಯ ಆಗಿತ್ತು.ಯಾರರ ಹೋಟೆಲ್ ಕ್ಕ ಹೋಗತಾರಂದ್ರ ಅಂಥವರನ್ನ ಆಗಾಧಪಟ್ಟ ನೋಡತಿದ್ರಂತ. ಮಂದಿ ಈ ಇಡ್ಲಿ ದ್ವಾಸಿ ರುಚಿಗೆ ಮಳ್ಳ ಆಗಿ ಚಹಾದಂಗಡಿಗೆ ಹಗಲೆಲ್ಲಾ ಭೆಟ್ಟಿಕೊಡತಿದ್ರಂತ. ನಮ್ಮಮ್ಮ ಈ ಹಾಡನ್ನ ನನ್ನ ಮಕ್ಕಳ ಮುಂದ ಹಾಡಿತೋರಿಸಿದಾಗ ನನ್ನ ಮಕ್ಕಳು " ಅಜ್ಜಿ ಇಷ್ಟೆಲ್ಲಾ ತಿಂದರು ಬರೆ ಫೊರ ರೂಪಿಸ್ ಬಿಲ್ಲ ಆಗತಿತ್ತೇನು? ನೀವ ಸಣ್ಣವರಿದ್ದಾಗ ಶೇವಪೂರಿ ಮತ್ತ ಗೋಬಿಮಂಚೂರಿ,ಎಲ್ಲಾ ಸಿಗತಿದ್ದಿಲ್ಲೇನ? ಅಂತ ನೂರಾಎಂಟು ಪ್ರಶ್ನೆ ಕೇಳತಿರತಾರ.
ಹೋಟೆಲ್ ಇಟ್ಟವರನ್ನ ಆಗಿನ ಕಾಲದಾಗ ತಿನ್ನೊ ಅನ್ನಾನ ರೊಕ್ಕಕ್ಕ ಮಾರಕೋತಾರ ಕೇಡಗಾಲ ಬಂದದ ಅಂತ ಅಂತಿದ್ರಂತ. ಆದರ ಈಗ ಹೋಟೆಲ್ ಬಿಸಿನೆಸ್ ಒಂದು ಪ್ರತಿಷ್ಠಿತ ಉದ್ಯಮ ಆಗೇದ. ಹಿಂದಕಿನ ಕಾಲದಾಗ ಹೋಟೆಲ್ ಗೆ ಕೆಲವೊಂದಿಷ್ಟು ಆಯ್ದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಇರತಿತ್ತು, " ಹುಬ್ಬಳ್ಳಿ ಅಶೋಕ ಹೋಟೆಲ ಶುರು ಆದ ಹೊಸದಾಗಿನ ಸುದ್ದಿ ಅಂತ ನಮ್ಮ ಮಾಮಾ ಹೇಳ್ತಿದ್ರು , ಆ ಹೋಟೆಲಿಗೆ ಪೈಜಾಮ ಮತ್ತ ಧೋತರಾ ಉಟಗೊಂಡ ಬಂದ ಮಂದಿಗೆ ಪ್ರವೇಶ ಇದ್ದಿಲ್ಲಂತ. ಪ್ಯಾಂಟು ಸೂಟು ಹಾಕ್ಕೊಂಡವರಿಗೆ ಮಾತ್ರ ಒಳಗ ಬಿಡತಿದ್ರಂತ.ಆದ್ರ ಈಗ ಯಾವ ನಿಭಂಧನೆಗಳು ಇಲ್ಲಾ. ಯಾರ ಯಾವ ಹೋಟೆಲಿಗೆ ಬೇಕಂದ್ರ ಹೋಗಬಹುದು.ಕಾಲಾ ಬದಲಾಧಂಘ ಆಯಾ ವಿಷಯಕ್ಕ ಇರೊ ಮಹತ್ವ ಕಡಿಮಿ ಆಕ್ಕೊತ ಹೋಗತದ.ಈಗ ಹೆಜ್ಜಿ ಹೆಜ್ಜಿಗೊಂದ ಹೋಟೆಲ್ ಆಗ್ಯಾವ. ಹೋಟೆಲಗೊಳ ಅಂದ್ರ ಜೀವನದ ಅವಿಭಾಜ್ಯ ಅಂಗಗಳಾಗ್ಯಾವ ಈಗ. ನಾವು ಮನಿ ಊಟಕ್ಕಿಂತಾ ಹೆಚ್ಚು ಹೋಟೆಲ್ ಮ್ಯಾಲೆನ ಭಾಳ ಅವಲಂಬಿತರಾಗೇವಿ. ಮದಲೆಲ್ಲಾ ಮನ್ಯಾಗ ಎನರೆ ಫಂಕ್ಷನ ಇದ್ರ ಮನ್ಯಾಗಿನ ಹೆಣ್ಣಮಕ್ಕಳೆಲ್ಲಾ ಕುಡಿ ಸಿಹಿ ಅಡಗಿ ಮಾಡಿ ಎಲ್ಲಾರನು ಕರದು ಊಟಕ್ಕ ಬಡಸತಿದ್ರು ಆದ್ರ ಈಗ ಅಯ್ಯೊ ಮನ್ಯಾಗ ಧಾವತಿ ಮಾಡಿ ಎಲ್ಲೆ ರಗಳಿ ಸೋಸೊದು, ಥಣ್ಣಗ ಹೋಟೆಲನ್ಯಾಗ ಪಾರ್ಟಿ ಕೊಟ್ಟ್ರಾತು ಅನ್ನೊ ವಿಚಾರ ಮಾಡತಾರ ಮಂದಿ. ಜನರ ಈ ಮನೋಭಾವಕ್ಕ ಯಾವ ಪರಿಹಾರನು ಇಲ್ಲಾ. "ಕಾಲಾಯ ತಸ್ಮೈ ನಮಃ " ಅನಕೋತ ಹೋಗೊದ ಅಷ್ಟ...
Comments
ಸುಮನ ದೇಸಾಯಿಯವರೇ, ಲಕ್ಷ್ಮೀಕಾಂತ
ಅಪ್ಪಟ ಉತ್ತರ ಕರ್ನಾಟಕದ ಭಾಷೆಯ