ಉಡುಗೊರೆ
ವರುಷಗಳ ನಂತರ ತನ್ನ ಬಾಲ್ಯ ಸ್ನೇಹಿತನನ್ನು ಭೇಟಿಯಾಗಲು ಮೋಹನ ಬೆಂಗಳೂರಿಗೆ ಬಂದಿಳಿದ. ತನ್ನ ಸ್ನೇಹಿತ ಗಣೇಶನ "ಗೃಹಪ್ರವೇಶ" ಸಮಾರಂಭಕ್ಕೆಂದು ಬಂದಿದ್ದ ಅವನಿಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನ ಹೊರಗೆ ಬಂದೊಡನೆ ತನ್ನ ಸ್ನೇಹಿತನಿಗೆ ಏನಾದರೂ ಒಂದು ಉಡುಗೂರೆ ಕೊಂಡು ಹೋಗುವ ಮನಸ್ಸಿನಿಂದ ಅಲ್ಲೇ ಹತ್ತಿರ ಇದ್ದ ಅಂಗಡಿಗಳಲ್ಲಿ ಹುಡುಕತೊಡಗಿದ. "ಏನನ್ನು ಕೊಡಲಿ ಅವನಿಗೆ?" ಎಂಬ ಯೋಚನೆಯಲ್ಲೇ ಸುಮಾರು ೧೦-೧೫ ಅಂಗಡಿಗಳ ಮೆಟ್ಟಿಲು ಏರಿಳಿದರೂ ಸೂಕ್ತವಾದ ಉಡುಗೂರೆ ಅವನ ಕಣ್ಣಿಗೆ ಕಾಣಲಿಲ್ಲ, ಮನಸ್ಸಿಗೆ ಹೊಳೆಯಲ್ಲಿಲ್ಲ. ಕೆಲ ಗೃಹ-ಉಪಯೋಗಿ ವಸ್ತುಗಳು ಸೂಕ್ತ ವೆನಿಸಿದರೂ ಅದರ ಕೈಗೆಟುಕದ ಬೆಲೆ ಅವನನ್ನು ಬೆರಗುಗೊಳಿಸಿತು "ಉಡುಗೊರೆಯ ವಿಷಯ ಊರಲ್ಲೇ ಯೋಚಿಸಿ ಒಂದು ಗೋಡೆಗಡಿಯಾರನೋ ಇಲ್ಲ ಒಳ್ಳೆ ಪಾತ್ರೆನೋ ಏನಾದ್ರು ತರಬಹುದಿತ್ತು, ಹಾಸನದಲ್ಲೇ ಕಮ್ಮಿ ಬೆಲೆಗೂ ಸಿಗುತಿತ್ತು ಛೆ" ಎಂದು ಕೈ ಹಿಸುಕಿಕೊಂಡ. "ಇನ್ನೂರುರುಪಾಯಿಯ ಒಳಗೆ" ಎಂಬ ತನ್ನ ಬಜೆಟ್ನನ್ನು ಕೂಡ "ಸಾವಿರಕ್ಕೆ" ಏರಿಸಿದ. ಹನ್ನೊಂದು ಗಂಟೆಯಿಂದ ಹನ್ನೆರಡರ ತನಕ ಹುಡುಕಿದರೂ ತನ್ನ ಗೆಳೆಯನ ಹೊಸಮನೆಗೆ ಸೂಕ್ತ ಉಡುಗೂರೆ ಸಿಕ್ಕಲಿಲ್ಲ. ಹಸಿವು ತಾಳಲಾರದೆ ಅಲ್ಲೇ ಕಂಡ ದರ್ಶಿನಿಯೊಂದರಲ್ಲಿ ಊಟ ಮಾಡುತ ತನ್ನ ಹಾಗು ಗಣೇಶನ ಬಾಲ್ಯದ ನೆನಪಿನಲೋಕದಲ್ಲಿ ಕಳೆದುಹೋದ –ಹತ್ತನೇ ತರಗತಿಯಲ್ಲಿ ಗಣೇಶನಿಗಿಂತಲೂ ಹೆಚ್ಹು ಅಂಕಗಳು ಪಡೆದಿದ್ದು, ಮಾಸ್ತರು ಕೊಟ್ಟ ಬಹುಮಾನ, ಗಣೇಶನ ತಂದೆಯವರ ಪ್ರೋತ್ಸಾಹದ ಮಾತುಗಳು ಎಲ್ಲ ನಿನ್ನೆ ಮೊನ್ನೆ ನಡೆದಹಾಗಿತ್ತು ! ಅದಾದ ನಂತರ ಗಣೇಶ ಬೆಂಗಳೂರಿಗೆ ಬಂದದ್ದು, ಇಂಜಿನಿಯರಿಂಗ್ ಓದಿದ್ದು, ನೌಕರಿ ಸೇರಿದ್ದು ಇದೆಲ್ಲ ತಿಳಿದಿದ್ದು ಮೊನ್ನೆ ಮೊನ್ನೆ ಗಣೇಶ ಟ್ರೆಕ್ಕಿಂಗ್ ನೆಪದಲ್ಲಿ ತನ್ನ ಹಳ್ಳಿಗೆ ಬಂದು ಭೇಟಿಯಾದಾಗಲೇ! ಅಷ್ಟು ವರುಷಗಳು ಕಳೆದು ಭೇಟಿಯಾದರೂ ಗಣೇಶನ ಸ್ನೇಹ ಅಥವಾ ಸ್ವಭಾವದಲ್ಲಿ ಬದಲಾವಣೆ ಕಂಡಿರಲಿಲ್ಲ.
ಹಲವು ಅಂಗಡಿಗಳನ್ನು ಹತ್ತಿಳಿದ ಮೋಹನ, ಒಂದು ಸುಂದರ ಗಣಪತಿಯ ವಿಗ್ರಹ ಒಂದನ್ನು ಖರೀದಿಸಿದ. ಅಲ್ಲಿಂದ ಗಣೇಶನ ಮನೆಯ ಬಿ.ಎಂ.ಟಿ.ಸಿ ಬಸ್ ಏರಿದ. ಬಸ್ ನಿರ್ವಾಹಕನಿಗೆ ಸ್ಟಾಪ್ ಬಂದಾಗ ತಿಳಿಸಲು ಮನವಿ ಮಾಡಿ ಕುಳಿತ ಮೋಹನನಿಗೆ "H.S.R ಕ್ಲಬ್" ಎಂದು ಯಾರೋ ಕೂಗಿ ತಿವಿದಾಗಲೇ ಎಚ್ಚರ! ಕೈಯಲ್ಲಿದ್ದ 'ಕಂಚಿನ ವಿಗ್ರಹದ ಭಾರ' 'ಆರ್ಧನಿದ್ರೆಯ ಮಂಪರು' ಜೊತೆಗೆ 'ಬೆಂಗಳೂರಿನ ವಿಳಾಸ ಶೋಧನೆಯ ಸಾಹಸ' ಇವೆಲ್ಲವೂ ಮೋಹನನನ್ನು ಬಲಿತ-ಬೆಂಡೇಕಾಯಿಯಾಗಿಸಿತ್ತು! ಸ್ನೇಹಿತನ ಅಪಾರ್ಟ್ಮೆಂಟ್ ಸಿಕ್ಕಾಗ ಅವನಿಗಾದ ಆನಂದ ಅವರ್ಣನೀಯ.
ಗಣೇಶ ತನ್ನ ಸ್ನೇಹಿತನನ್ನು ಕಂಡು ತುಂಬುಹೃದಯದಿಂದ ಸತ್ಕರಿಸಿದ. ಸುಮಾರು ಸಂಜೆ ಆರು ಗಂಟೆಯ ಹೊತ್ತಿಗೆ ಗಣೇಶನ ಅತಿಥಿಗಳೆಲ್ಲ ಹೋದಮೇಲೆ "ಬಾರೋ ಮೋಹನ ಮನೆ ತೋರಿಸುತ್ತೇನೆ" ಎಂದಾಗ ಮೋಹನ "ಹೊಸಮನೆಯ ದೇವರ ಕೋಣೆಯಲ್ಲಿ ಈ ಗಣಪತಿಯ ವಿಗ್ರಹವನ್ನು ಇಡು" ಎನುತ ತಾನು ತಂದಿದ್ದ ಉಡುಗೊರೆಯನ್ನು ಸ್ನೇಹಿತನ ಕೈಗಿಟ್ಟ. ಅವಕ್ಕಾದ ಗಣೇಶ ತನ್ನ ಅಡುಗೆಮನೆಯ ಒಂದು ಮೂಲೆಯಲ್ಲಿ ಆ ವಿಗ್ರವನಿಡುತ್ತಾ ಮೋಹನನಿಗೆ ಫ್ಲಾಟಿನ ಪ್ಲಾನ್ ಬಗ್ಗೆ ವಿವರಿಸತೊಡಗಿದ. ಸುಮಾರು ಒಂದು ಗಂಟೆಯ ಬಳಿಕ ಮೋಹನ ತನ್ನ ಸ್ನೇಹಿತನ ಮನೆಯವರನೆಲ್ಲ ಅಭಿನಂದಿಸಿ, ತಾನು ಊರಿಗೆ ಹೊರಡುವುದಾಗಿ ತಿಳಿಸಿದ. ಗಣೇಶನ ತಂದೆಯವರು "ಇವತ್ತು ಇದ್ದು ಹೋಗಬಹುದಲ್ವೇನೋ" ಎಂದರು. ಕೆಲಸದ ಕಾರಣ ಹೇಳಿ ಮೋಹನ ಹೊರಟಾಗ, ಅವನನ್ನು ಹತ್ತಿರದ ಬಸ್ ಸ್ಟಾಪ್ ಗೆ ಗಣೇಶನ ತಂದೆಯವರು ಡ್ರಾಪ್ ಮಾಡಿ "ಅಪ್ಪ ಅಮ್ಮ ಹಾಗು ಮನೆವರನ್ನು ಕರೆದುಕೊಂಡು ಉಳಿಯುವ ಹಾಗೆ ಬಾರೋ ನೆಕ್ಸ್ಟ್ ಟೈಮ್" ಎಂದರು.
ಮೆಜೆಸ್ಟಿಕ್ ಬಸ್ ನಲ್ಲಿ ಕುಳಿತ ಮೋಹನನ ತಲೆಯಲ್ಲಿ ಒಂದು ವಿಷಯ ಕಾಡುತಿತ್ತು "ಎಪ್ಪತ್ತು ಲಕ್ಷ ಕರ್ಚು ಮಾಡಿ ಎಲ್ಲಾ ಆಧುನಿಕ ಸೌಲಭ್ಯಸೌಕರ್ಯಗಳಿರೋ ಮನೆಯಲ್ಲಿ ದೇವರ ಕೋಣೆ ಹೇಗೆ ಮರೆತರು?" ಸುಮಾರು ರಾತ್ರಿ ಹನ್ನೆರಡರ ಹೊತ್ತಿಗೆ ತನ್ನ ಹಳ್ಳಿ ತಲುಪಿ ಮಲಗುವ ಮುನ್ನ "ಛೆ, ನಾ ಸೆಲೆಕ್ಟ್ ಮಾಡಿದ ಉಡುಗೊರೆ ಅನನ್ವಿತವಾಯಿತೇನೋ, ಹೋಗಲಿ ಬಿಡು ಗಣಪತಿಯ ಆಶೀರ್ವಾದ ಇಬ್ಬರ ಮೇಲೂ ಇರಲಿ" ಎಂದು ತನ್ನ ದೈನಂದಿನ ಶ್ಲೋಕ ಹೇಳಿ ಮಲಗಿದ.
Comments
ನಂದೀಶರೆ, ನಿಮ್ಮ ಕಥಾನಾಯಕ ಗಣೇಶನ
In reply to ನಂದೀಶರೆ, ನಿಮ್ಮ ಕಥಾನಾಯಕ ಗಣೇಶನ by ಗಣೇಶ
ಧನ್ಯವಾದ ಗಣೇಶ್ ರವರೇ