ಉಡುಪಿ ಶ್ರೀಕೃಷ್ಣ ಅತ್ತು ಬಿಟ್ಟ!

ಉಡುಪಿ ಶ್ರೀಕೃಷ್ಣ ಅತ್ತು ಬಿಟ್ಟ!

ಬರಹ

ಶಿರೋನಾಮೆ ನೋಡಿ ಅಚ್ಚರಿ ಪಡಬೇಡಿ. ಆದ್ರೆ ಇದು ನಿಜ ಸಂಗತಿ...

ಅಂದು ನಮ್ಮ ಶಾಲೆಯ ವಾರ್ಷಿಕೋತ್ಸವ ದಿನ. ನಾನಾಗ ಎರಡನೇ ತರಗತಿ ವಿದ್ಯಾರ್ಥಿನಿ. ಎಲ್ಲಾ ಮಕ್ಕಳಂತೆ ನನಗೂ ಉತ್ಸಾಹ ಸಂಭ್ರಮ. ಅದಕ್ಕೆ ಕಾರಣವೂ ವಿಶೇಷವಾಗಿತ್ತು. ನಾನು ಇದೇ ಮೊದಲ ಬಾರಿಗೆ ನಾಟಕದಲ್ಲಿ ಅಭಿನಯಿಸುತ್ತಿದೆ. ಅದೂ ಒಂದಲ್ಲ ಎರಡು ನಾಟಕದಲ್ಲಿ ಪ್ಲಸ್ ಒಂದು ಸ್ವಾಗತ ನೃತ್ಯ. ಇನ್ನೇನು ಬೇಕು ಹೇಳಿ?

ನಾಟಕದಲ್ಲಿ ಅಭಿನಯಿಸಬೇಕೆಂಬುದು ಬಲು ದೊಡ್ಡ ಆಸೆಯಾಗಿತ್ತು. ಅಂತೆಯೇ ಯಕ್ಷಗಾನದಲ್ಲೂ ನನಗೆ ತುಂಬಾ ಆಸಕ್ತಿ. ಯಕ್ಷಗಾನದ ಊರಾದ ನಮ್ಮೂರ ಶಾಲೆಯಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದ್ದರೂ ನಾನಾಗ ಶಾಲೆಗೆ ಸೇರಿರಲಿಲ್ಲ. ನಾನು ಒಂದನೇ ಕ್ಲಾಸಿಗೆ ಸೇರಬೇಕಾದರೆ ಆ ಮೇಸ್ಟ್ರು ವರ್ಗವಾಗಿ ಹೋದರು. ಪಕ್ಕದ ಅಂಗನವಾಡಿಗೆ ಹೋಗಲು ಇಷ್ಟವಿಲ್ಲದಿದ್ದರೂ, ಶಾಲೆಯಲ್ಲಿ ನಡೆಯುವ ಯಕ್ಷಗಾನ ಕ್ಲಾಸಿಗೆ ತಪ್ಪದೆ ಹಾಜರಾಗುತ್ತಿದ್ದೆ. ಅಲ್ಲಿ ಕಲಿಸುತ್ತಿದ್ದುದ್ದನ್ನು ನೋಡಿ ಕುಳಿತುಕೊಳ್ಳುವುದೇ ಒಂಥರಾ ಖುಷಿ. ಇದಾದ ಮೇಲೆ ಮನೆಗೆ ಬಂದು ಅಮ್ಮ ಅಪ್ಪನ ಮುಂದೆ ಕಿರು ಬಯಲಾಟ ಪ್ರದರ್ಶನ. ಇಲ್ಲಿನ ಕಲಾವಿದರು ನಾನು, ನನ್ನ ಅಕ್ಕ ಮತ್ತು ಅಣ್ಣ. ಮನೆಯ ಮುಂದಿನ ಜಗಲಿಯೇ ನಮ್ಮ ಸ್ಟೇಜ್, ನನ್ನ ತಮ್ಮ, ಅಪ್ಪ ಅಮ್ಮನೇ ವೀಕ್ಷಕರು.

ಅಂದ ಹಾಗೆ ನಾನು ನಾಟಕದ ವಿಷಯ ಮರೆತೆ. ಮೊದಲ ಬಾರಿಗೆ ನಾನು ಸ್ಟೇಜ್ ಹತ್ತುವ ದಿನವದು. ತಮಿಳು ನಾಟಕದಲ್ಲಿ ಸಂಗೀತ ಕಲಿಯುವ ಹುಡುಗಿಯಾದರೆ ಇನ್ನೊಂದು ನಾಟಕ 'ಕನಕನ ಕಿಂಡಿ'ಯಲ್ಲಿ ಶ್ರೀಕೃಷ್ಣ. ಅದೇ ಮೊದಲ ಬಾರಿಗೆ ನಮ್ಮೂರಿನ ಖ್ಯಾತ ಸಂಗೀತ ಮೇಸ್ಟ್ರು ವೆಳ್ಳಿಕೋತ್ತ್ ವಿಷ್ಣು ಭಟ್ ಸರ್ ನಮಗೆ ನಾಟಕಕ್ಕಾಗಿ ಶಾಸ್ತ್ರೀಯ ಸಂಗೀತ ಕಲಿಸಿದ್ದರು. ಅದಾಗಲೇ ನಾನು ಸಂಗೀತ ಅಭ್ಯಾಸ ಕೂಡಾ ಶುರು ಮಾಡಿದ್ದರಿಂದ ನಾಟಕದಲ್ಲಿ ಹಾಡುವುದು ಅಷ್ಟೇನು ಕಷ್ಟದ ವಿಷಯವಾಗಿರಲಿಲ್ಲ. ಶ್ರೇಷ್ಠ ಸಂಗೀತಕಾರ ಹಾಗೂ ಗಾಯಕರಾದ ವಿಷ್ಣು ಭಟ್ ಸರ್್ನ್ನು ಮೊದಲ ಬಾರಿಗೆ ಪರಿಚಯವಾದುದು ಅತೀವ ಖುಷಿ ತಂದ ಸಂಗತಿಯಾದರೆ ನಾನು ಮೊದಲ ಬಾರಿಗೆ ಶ್ರೀಕೃಷ್ಣನಾಗಿ ಅಭಿನಯಿಸುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿತ್ತು.

ನಾಟಕದಲ್ಲಿ ಶ್ರೀಕೃಷ್ಣನಾಗಿ ಅಭಿನಯಿಸುವುದು ಹೆಮ್ಮೆಯ ವಿಷಯವೇ ಹೌದು. ಎಲ್ಲಾ ಮಕ್ಕಳಿಗೂ ಒಮ್ಮೆಯಾದರೂ ಶ್ರೀಕೃಷ್ಣನಾಗಿ ಅಭಿನಯಿಸಬೇಕೆಂಬ ಹಂಬಲ ಇದ್ದೇ ಇರುತ್ತದೆ ಹಾಗೂ ತಮ್ಮ ಮಕ್ಕಳನ್ನು ಮುದ್ದು ಕೃಷ್ಣನಾಗಿ ಕಾಣಲು ಯಾವ ಅಪ್ಪ ಅಮ್ಮ ತಾನೇ ಹಂಬಲಿಸುವುದಿಲ್ಲ? ಆದರೆ ಶ್ರೀಕೃಷ್ಣನಾಗುವ ಭಾಗ್ಯ ಎಲ್ಲರಿಗೂ ಒಲಿಯುವುದಿಲ್ಲ ಎಂಬುದೂ ಸತ್ಯ ಸಂಗತಿ.

ಶ್ರೀಕೃಷ್ಣನಾಗಬೇಕಾದರೆ,
1. ಕಾಣಲು ಮುದ್ದು ಮುದ್ದಾಗಿರಬೇಕು
2. ಬೆಳ್ಳಗೆ, ದೇಹ ದಪ್ಪಗಿರಬೇಕು
3. ಉತ್ತಮ ಮಾತುಗಾರಿಕೆ, ಮುಗ್ದ ನಗು

ಇಂತಿಷ್ಟು ಶ್ರೀಕೃಷ್ಣನಾಗಲಿರುವ ಯೋಗ್ಯತೆ. ಪ್ರಸ್ತುತ ಪಾತ್ರಕ್ಕೆ ಹೆಚ್ಚಾಗಿ 1 ಅಥವಾ 2ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳೇ ಆಯ್ಕೆಯಾಗುತ್ತಿದ್ದರು. ಅಂತೂ ಸಣಕಲು ದೇಹದವರಾದರೆ ಅಂತವರಿಗೆ ಕೆಲವೊಮ್ಮೆ ಬಲರಾಮನ ಪಾತ್ರವಾದರೂ ದಕ್ಕುತ್ತಿತ್ತು.

ಆದರೆ ನನಗೆ ಶ್ರೀಕೃಷ್ಣನಾಗುವಂತಹ ಯೋಗ್ಯತೆಗಳೇನು ಇರಲಿಲ್ಲ. ಮಾತು ಕಡಿಮೆ, ಬೆಳ್ಳಗೆ ಅಂತೂ ಅಲ್ಲ. ಆವಾಗ ಸಣಕಲು ದೇಹ ಇದ್ದರೂ ನಾನು ಶ್ರೀಕೃಷ್ಣನಾಗಲು ಆಯ್ಕೆಯಾದೆ! ಆದರೆ ನಾನು ಶ್ರೀಕೃಷ್ಣನಾಗುತ್ತಿರುವುದು 'ಶ್ರೀಕೃಷ್ಣ ' ನಾಟಕದಲ್ಲಾಗಿರಲಿಲ್ಲ, ಬದಲಾಗಿ 'ಕನಕನ ಕಿಂಡಿ' ಎಂಬ ನಾಟಕದಲ್ಲಾಗಿತ್ತು.

ರಶ್ಮೀ, 'ಕನಕನ ಕಿಂಡಿ'ಯಲ್ಲಿ ಕೃಷ್ಣನಾಗಬಹುದಾ? ಎಂದು ನಮ್ಮ ದೊಡ್ಡ ಟೀಚರ್ (ನಮ್ಮ ಶಾಲೆಯ ಹಿರಿಯ ಅಧ್ಯಾಪಕಿ ಅವರು) ಕೇಳಿದಾಗ 'ಹೂಂ' ಅಂತಾ ಹೇಳಿದೆ. ಇದಕ್ಕೆ ಕಾರಣವೂ ಇತ್ತು. ನಾನು ನಟಿಸುತ್ತಿರುವ ತಮಿಳು ನಾಟಕ ರಾತ್ರಿ 11 ಗಂಟೆಗೆ, 'ಕನಕನ ಕಿಂಡಿ' ಮಧ್ಯರಾತ್ರಿ 12 ಗಂಟೆಗೆ.ೆ ಈ ಹೊತ್ತಿನಲ್ಲಿ ಎಲ್ಲಾ ಮಕ್ಕಳು ನಿದ್ದೆ ಹೋಗುತ್ತಾರೆ. ಆದ್ರೆ ನನಗೆ ಚಿಕ್ಕಂದಿನಿಂದಲೇ ನಿದ್ದೆ ಕಡಿಮೆ. ಹಾಗೆಂದು ನಾನು ನಿದ್ದೆ ಮಾಡುವುದಿಲ್ಲ ಎಂದಲ್ಲ. ನಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇರುವಾಗ ಅಮ್ಮ ರಾತ್ರಿಯೆಲ್ಲಾ ಕೆಲಸ ಮಾಡುತ್ತಿದ್ದರೆ ನಾನು ಕೂಡಾ ನಿದ್ದೆ ಮಾಡದೆ ಅಮ್ಮ ಏನೇನು ಮಾಡುತ್ತಿದ್ದಾರೆ ಎಂದು ಕುತೂಹಲದಿಂದ ನೋಡುತ್ತಿದ್ದೆ. ಶಾಲೆಯ ಅಧ್ಯಾಪಕರೆಲ್ಲರೂ ನಮ್ಮ ಆಪ್ತರು ಹಾಗೂ ನಮ್ಮ ಮನೆ ಶಾಲೆಯ ಪಕ್ಕದಲ್ಲೇ ಇರುವುದರಿಂದ ಈ ಎಲ್ಲಾ ವಿಷಯಗಳು ನಮ್ಮ ಶಾಲೆಯವರಿಗೆ ಗೊತ್ತು. ಅಂತೂ ಒಟ್ಟಿನಲ್ಲಿ ಈ ಯೋಗ್ಯತೆಯಿಂದಲೇ ಶ್ರೀಕೃಷ್ಣನಾಗುವ ಭಾಗ್ಯ ನನಗೊಲಿದಿತ್ತು.

ಮನೆಯಲ್ಲಿ ಬಂದು "ಅಮ್ಮಾ ನಾನು ಶ್ರೀಕೃಷ್ಣನಾಗುತ್ತಿದ್ದೇನೆ" ಎಂದು ಹೇಳಿದಾಗ ಅಮ್ಮನಿಗೋ ಸಂತಸವೇ ಸಂತಸ. ಅದೂ ಅಮ್ಮನ ಇಷ್ಟ ದೇವರಾದ ಉಡುಪಿ ಶ್ರೀಕೃಷ್ಣ (ನಮ್ಮ ಅಮ್ಮ ದಕ್ಷಿಣ ಕನ್ನಡದವರು)ನಾಗಿ ನನ್ನನ್ನು ಕಾಣುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅಮ್ಮನಿಗೆ ನಾನು ಉಡುಪಿ ಶ್ರೀಕೃಷ್ಣನಂತೆ ಕಂಡರೆ ಅಪ್ಪನಿಗೆ ಗುರುವಾಯೂರಿನ ಉಣ್ಣಿಕಣ್ಣನ್. ಯಾಕೆಂದರೆ ಮಲಯಾಳಿಯಾದ ಅಪ್ಪ, ಕನ್ನಡಿಗರಾದ ಅಮ್ಮ ಎರಡು ಸಂಸ್ಕೃತಿಗಳ ಸಮ್ಮಿಲನ! ಇದಲ್ಲದೆ, ನಮ್ಮ ಮನೆಯ ದೇವರ ಕೋಣೆಯಲ್ಲಿ ಕರ್ನಾಟಕ, ಕೇರಳ ಸಂಗಮವೆಂಬಂತೆ ಎರಡೂ ರಾಜ್ಯಗಳ ವಿವಿಧ ದೇವರುಗಳ ಫೋಟೋವನ್ನು ಕಾಣಬಹುದು. :)

ಅಂತೂ ಇಂತೂ ವಾರ್ಷಿಕೋತ್ಸವದ ದಿನ ಬಂದೇ ಬಿಟ್ಟಿತು. ಇಂದು ನಾನು ಶ್ರೀಕೃಷ್ಣನಾಗುತ್ತಿದ್ದೇನೆ. ಮೈಯೆಲ್ಲಾ ನೀಲಿ ಬಣ್ಣ ಪೂಸಿ, ಹಲವಾರು ಆಭರಣ, ತಲೆಯಲ್ಲಿ ನವಿಲು ಗರಿ, ಕೈಯಲ್ಲಿ ಕೊಳಲು....ಹೀಗೆ ಮುದ್ದು ಮುದ್ದಾಗಿ ಕಾಣುವ ಶ್ರೀಕೃಷ್ಣ. ಆ ವೇಷವನ್ನು ನೆನೆಸಿಕೊಂಡೇ ನಾನು ಪುಳಕಿತಳಾಗುತ್ತಿದ್ದೆ. ಅಂದು ನನಗೆ ಸಾಕ್ಷಾತ್ ಶ್ರೀಕೃಷ್ಣನೇ ನನ್ನ ಮೈ ಮೇಲೆ ಬಂದಂತೆ ಭಾಸವಾಗುತ್ತಿತ್ತು. ದೇವರ ಕೋಣೆಯಲ್ಲಿ ಪ್ರಾರ್ಥಿಸುವಾಗ ಅಲ್ಲಿದ್ದ ಶ್ರೀಕೃಷ್ಣನ ಫೋಟೋ ನೋಡಿ, ಈ ರಾತ್ರಿ ನಾನು ಕೂಡಾ ನಿನ್ನಂತೆಯೇ ಕಾಣಿಸಿಕೊಳ್ಳುವೆನಲ್ಲಾ ಎಂದು ಪಿಸು ಮಾತಲ್ಲಿ ಹೇಳಿಕೊಂಡಿದ್ದೆ.

ವಾರ್ಷಿಕೋತ್ಸದ ಕಾರ್ಯಕ್ರಮ ಆರಂಭವಾಯಿತು. ಮೊದಲಿಗೆ ನನ್ನ ಸ್ವಾಗತ ನೃತ್ಯವೂ ಮುಗಿಯಿತು. ಇದಾದ ಮೇಲೆ ನಾಟಕಕ್ಕಾಗಿ 11ಗಂಟೆಯ ವರೆಗೆ ಕಾಯಬೇಕು. ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸುವಾಗ ನನಗೆ ಕನ್ನಡ ಕೈ ಬರಹದಲ್ಲಿ ಹಾಗೂ ಕಲಿಕೆಯಲ್ಲಿ ಮೊದಲ ಬಹುಮಾನ ಬಂದಿತ್ತು. ಅಲ್ಲಿಯವರೆಗೆ ಕೈ ಬರಹದಲ್ಲಿ ಅಕ್ಕನಿಗೆ ಸಿಗುತ್ತಿದ್ದ ಪ್ರಥಮ ಬಹುಮಾನ ಈ ಬಾರಿ ನನ್ನ ಪಾಲಿಗೆ ಬಂದಿತ್ತು.

ರಾತ್ರಿ 10 ಗಂಟೆಗೆ ಎಲ್ಲಾ ನೃತ್ಯಗಳು ಮುಗಿದ ಮೇಲೆ ನಾಟಕ ಆರಂಭವಾಯಿತು. ಸಂಗೀತ ಕಲಿಯುವ ವಿದ್ಯಾರ್ಥಿನಿಯಾಗಿ ಅಭಿನಯಿಸುತ್ತಿರುವ ತಮಿಳು ನಾಟಕದಲ್ಲಿ ನನ್ನ ಅಣ್ಣ ಕೂಡಾ ಇರುವುದರಿಂದ ಗ್ರೀನ್ ರೂಮ್್ನಲ್ಲಿ ನನಗೆ ಜೊತೆಯಾಗಿ ಅವನಿದ್ದ. ಅಂತೂ 11 ಗಂಟೆಗೆ ನಮ್ಮ ನಾಟಕ ಆರಂಭವಾಯಿತು. ಆ ಶಾಲೆಯಲ್ಲಿ ಇದೇ ಮೊದಲಬಾರಿಗೆ ಮಕ್ಕಳು ತಮಿಳು ನಾಟಕ ಪ್ರದರ್ಶಿಸುತ್ತಿದ್ದುದು ಹೆಚ್ಚಿನ ಜನಶ್ರದ್ದೆಯನ್ನು ಗಳಿಸಿತ್ತು. ಈ ನಾಟಕದಲ್ಲಿ ಒಂದು ಹಾಡು ಹಾಡುವುದಷ್ಟೇ ನನ್ನ ಪಾತ್ರ. ಅದೇ ನನ್ನ ಮೊದಲ ನಾಟಕ ಅಭಿನಯದ ಮೊದಲ ಹೆಜ್ಜೆ. ನನಗೆ ಒಂದಿಷ್ಟು ಸಭಾಕಂಪನವಿರುವುದರಿಂದ ನನ್ನ ಅಪ್ಪ ಮೊದಲನೇ ಸಾಲಲ್ಲಿ ಕುಳಿತು ಕೊಳ್ಳಬೇಕು ಎಂದು ಮೊದಲೇ ಅಪ್ಪನಲ್ಲಿ ಹೇಳಿದ್ದೆ. ವೇದಿಕೆ ಮೇಲೇರಿದರೆ ಮೊದಲು ನಾನು ಅಪ್ಪನನ್ನು ಹುಡುಕುತ್ತೇನೆ. ಅಪ್ಪ ನನ್ನೊಂದಿಗೆ ಇದ್ದರೆ ಮಾತ್ರ ನನಗೆ ಧೈರ್ಯ. ಈ ಅಭ್ಯಾಸವನ್ನು ನಾನು ನನ್ನ ಯುನಿವರ್ಸಿಟಿ ಮಟ್ಟದ ಸ್ಪರ್ಧೆಯ ವರೆಗೂ ರೂಢಿಸಿಕೊಂಡು ಬಂದಿದ್ದೆ.

ಆದಾಗ್ಯೂ, ತಮಿಳು ನಾಟಕ ಹೆಚ್ಚಿನ ಜನರ ಪ್ರಶಂಸೆಗೆ ಕಾರಣವಾಯಿತು. ತದನಂತರ 'ಕನಕನ ಕಿಂಡಿ' ನಾಟಕ ಪ್ರದರ್ಶನ. ನಾನು ಶ್ರೀಕೃಷ್ಣನಾಗುವ ಸಮಯ ಬಂದೇ ಬಿಟ್ಟಿತು.

ಇನ್ನೇನು ನಾನು ಶ್ರೀಕೃಷ್ಣನಾಗಿ ವೇಷ ತೊಡಲಿದ್ದೇನೆ. ಅದಕ್ಕಾಗಿ ಮೇಕಪ್್ಗೆ ಬರುವಂತೆ ನನ್ನನ್ನು ಕರೆದರು. ಅಂಗಿ ಕಳಚಿ ಮೇಕಪ್ ರೂಮ್್ಗೆ ಹೋದ ನನಗೆ ಶಾಕ್!. ನನ್ನ ಮೈಗೆ ಯಾವುದೇ ರೀತಿಯ ಮೇಕಪ್ ಮಾಡದೆ ಬರೀ ಮುಖಕ್ಕೆ ಮಾತ್ರ ಬಣ್ಣ ಹಚ್ಚಿದ್ದರು. ಮೈಗೆ ಒಂದು ನೀಲಿ ಸೀರೆಯನ್ನು ಸುತ್ತಿ ನನ್ನನ್ನು ಕುಳ್ಳಿರಿಸಿದರು. "ನೋಡು, ನೀನಿಲ್ಲೇ ಕುಳಿತಿರು. ನೀನು 'ಪ್ರತ್ಯಕ್ಷ'ವಾಗುವ ಸಮಯ ಬಂದಾಗ ನಿನ್ನನ್ನು ಕರೆದುಕೊಂಡು ಹೋಗಿ ಸ್ಟೇಜ್ ಮೇಲೆ 'ಪ್ರತ್ಯಕ್ಷ' ಮಾಡಲಾಗುವುದು ಎಂಬ ಆದೇಶವನ್ನೂ ನೀಡಿಯಾಯಿತು. "ಇದ್ಯಾಕೆ ಶ್ರೀಕೃಷ್ಣ ಹೀಗೆ ?" ಎಂದು ಅಣ್ಣನಲ್ಲಿ ಕೇಳಿದೆ. "ಅಮ್ಮೀ...ನೀನು ಕನಕನ ಕಿಂಡಿಯಲ್ಲಿ ಕಾಣುವ ಶ್ರೀಕೃಷ್ಣನ ವಿಗ್ರಹ. ಅದಕ್ಕೇ ನೀನನ್ನ ಈ ತರಹ ಮಾಡಿದ್ದಾರೆ "ಎಂದು ಅಣ್ಣ ವಿವರಿಸಿದಾಗ 'ನಾನು ವಿಗ್ರಹವೇ?' ಎಂಬ ಕೀಳರಿಮೆ ನನ್ನನ್ನು ಕಾಡಿತ್ತು. ಇನ್ನು, ಸ್ಟೇಜ್ ಮೇಲೆ ಹೇಗೆ ಕಾಣುವೆನೋ ಎಂಬ ಕುತೂಹಲ, ಏನು ಮಾಡಬೇಕು?, ಹೇಗೆ ಮಾಡಬೇಕು? ಎಂಬ ಭಯ ನನ್ನನ್ನು ಬಹಳವಾಗಿ ಚಿಂತೆಗೀಡು ಮಾಡಿತ್ತು.

ನಾಟಕದ ದೃಶ್ಯ 3ರಲ್ಲಿ ನನ್ನ ಎಂಟ್ರಿ. ಅಲ್ಲಿ ನಾನು ಸ್ಟೇಜ್್ಗೆ ಬೆನ್ನು ಹಾಕಿ ಕುಳಿತಿರಬೇಕು. ಆಮೇಲೆ ನನ್ನ ಮೇಲೆ ಬೆಳಕು ಚೆಲ್ಲುತ್ತಾರೆ. ಆವಾಗ ನಾನು ಸ್ಟೇಜ್್ಗೆ ಮುಖ ಮಾಡಿ ಕುಳಿತು ಕೊಳ್ಳಬೇಕು. ಯಾವಾಗ ಸ್ಟೇಜ್್ನತ್ತ ತಿರುಗಬೇಕೆಂದು ನಾವು ಹೇಳುತ್ತೇವೆ ಎಂದು ಅಧ್ಯಾಪಕರೊಬ್ಬರು ಸಲಹೆ ಕೊಟ್ಟರು. "ಆಯಿತು" ಎಂದೆ.

ಪರದೆ ಎತ್ತಿದಾಗ ನಾನು ಸ್ಟೇಜ್್ಗೆ ಬೆನ್ನು ಹಾಕಿ ಕುಳಿತುಕೊಂಡಿದ್ದೆ. ಆಮೇಲೆ ಅವರು ಹೇಳಿದಂತೆ ಬೆಳಕು ಬಿದ್ದಾಗ ಸ್ಟೇಜ್ ಕಡೆ ತಿರುಗಿದೆ. ಮೊದಲ ಸಾಲಲ್ಲಿ ಬಿಳಿ ಧೋತಿ,ಶರ್ಟ್ ತೊಟ್ಟು ಕುಳಿತಿದ್ದ ಅಪ್ಪನನ್ನು ಕಂಡಾಗ ಸಮಾಧಾನವಾಯಿತು. ಅರೇ...ನನ್ನ ಮುಂದೆ ಕನಕ (ಈ ಪಾತ್ರ ಮಾಡಿದ್ದು ನಮ್ಮ ಶಾಲೆಯ ಏಳನೇ ಕ್ಲಾಸಿನ ಹುಡುಗಿ. ಅವಳು ನಮ್ಮ ಸ್ಕೂಲ್ ಲೀಡರ್ ಕೂಡಾ) ಅಳ್ತಾ ಇದ್ದಾನೆ(ಳೆ).

"ಕೃಷ್ಣಾ....ನಿನ್ನ ನೋಡಿ ನಾ ಧನ್ಯನಾದೆ "ಎಂದು ಆಕೆ ಬಿಕ್ಕಿ ಬಿಕ್ಕಿ ಅಳ್ತಾ ಇದ್ದಳು . ಈವರೆಗೆ ಭಾರೀ ಗಂಭೀರವದನೆಯಾಗಿರುತ್ತಿದ್ದ ಈ ಅಕ್ಕ ನನ್ನನ್ನು ನೋಡಿ ಈ ರೀತಿ ಅಳ್ತಾ ಇದ್ದಾಳಲ್ಲಾ ಎಂದು ನನಗೆ ಬೇಸರವಾಯಿತು. ಅವಳು ಅಳುವುದನ್ನು ನೋಡಿ ನಾನೂ ಅತ್ತು ಬಿಟ್ಟೆ. ಅವಳ ಕಣ್ಣೀರು ಒರೆಸಬೇಕೆಂದು ನನಗೆ ಅನಿಸಿದರೂ ನನ್ನ ಮೈ ,ಕೈಗಳೆರಡನ್ನೂ ಜೋಡಿಸಿ ಸೀರೆ ಬಿಗಿಯಲಾಗಿತ್ತು. ತೆರೆ ಬಿದ್ದಾಗ ನನ್ನ ಕನ್ನೆ ಮೇಲೆ ಕಣ್ಣೀರು ಹರಿಯುತ್ತಲೇ ಇತ್ತು. ಆಮೇಲೆ ಎಲ್ಲರೂ ಸೇರಿ "ಅಯ್ಯೋ ನಮ್ಮ ಕನಕನನ್ನು ನೋಡಿ ಕೃಷ್ಣ ಕೂಡಾ ಅತ್ತು ಬಿಟ್ಟ "ಎಂದು ನನ್ನನ್ನು ತಮಾಷೆ ಮಾಡಿದರು.

ಇದು ನನ್ನ ನಾಟಕದ ಮೊದಲ ಅನುಭವ. ಆಮೇಲೆ ನಾನು ಶಾಲೆಯಲ್ಲಿ ಹಲವಾರು ನಾಟಕದಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದರೂ 'ಕನಕನ ಕಿಂಡಿ'ಯ ಶ್ರೀಕೃಷ್ಣನ ಪಾತ್ರವಂತೂ ಮರೆಯಲಾಗದ ಅನುಭವವೇ ಹೌದು.