ಉಡ್ತಾ ಕರ್ನಾಟಕ : ಎಚ್ಚರ ಎಚ್ಚರ !

ಉಡ್ತಾ ಕರ್ನಾಟಕ : ಎಚ್ಚರ ಎಚ್ಚರ !

ಕೆಲವು ವರ್ಷಗಳ ಹಿಂದೆ ಉಡ್ತಾ ಪಂಜಾಬ್ ಎಂಬ ಪಂಜಾಬಿ ಭಾಷೆಯ ಸಿನಿಮಾ ಒಂದು ಬಿಡುಗಡೆಯಾಗಿತ್ತು. ಅದು ಪಂಜಾಬಿನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ಕುರಿತಾದ ಚಿತ್ರ ಎಂದು ವಿಮರ್ಶೆಗಳಲ್ಲಿ ಓದಿದ್ದೇನೆ. ಡ್ರಗ್ಸ್ ಮಾಫಿಯಾ ಹೇಗೆ ಇಡೀ ಪಂಜಾಬಿನ ಯುವ ಸಮೂಹದ ನಾಶಕ್ಕೆ ಕಾರಣವಾಗಿದೆ ಎಂಬುದನ್ನು ಅದರಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಕರ್ನಾಟಕ ಸಹ ಅದೇ ಪರಿಸ್ಥಿತಿಯನ್ನು ನಿಜವಾಗಲೂ ಎದುರಿಸುತ್ತಿದೆ. ಮಾದಕ ದ್ರವ್ಯಗಳ ದೊಡ್ಡ ಜಾಲವೇ ಬೆಳೆದಿದೆ. ಎಷ್ಟೋ ತಾಯಂದಿರು, ಪೋಷಕರು ವಿಲವಿಲ ಒದ್ದಾಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಹೇಳಿಕೊಂಡರೆ, ಮತ್ತೆ ಕೆಲವರು ಹೇಳಿಕೊಳ್ಳಲು ಸಾಧ್ಯವಾಗದೆ ಕೊರಗುತ್ತಿದ್ದಾರೆ. 

ಈ ವಿಷಯದಲ್ಲಿ ಸಂಪೂರ್ಣವಾಗಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ‌ ಅಥವಾ ವಿಫಲವಾಗಿದೆ. ಅತಿ ಮುಖ್ಯವಾಗಿ, ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಗೃಹ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು, ರಾಜ್ಯ ಪೊಲೀಸ್ ಮುಖ್ಯಸ್ಥರು, ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಇಂಟಲಿಜೆನ್ಸ್ ಮುಖ್ಯಸ್ಥರು ಇದರ ನೇರ ಹೊಣೆಯನ್ನು ಹೊರಬೇಕಾಗುತ್ತದೆ. 

ವಾಸ್ತವದಲ್ಲಿ ಈಗಿನ ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಈ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲು ಅಂತಹ ದೊಡ್ಡ ಸಮಸ್ಯೆ ಏನು ಇಲ್ಲ. ಏಕೆಂದರೆ ಕೊಲೆ, ಅತ್ಯಾಚಾರ, ದರೋಡೆ, ಭ್ರಷ್ಟಾಚಾರ ಇದು ಹೆಚ್ಚು ಕಡಿಮೆ ಖಾಸಗಿಯಾಗಿ ನಡೆದು ಹೋಗುತ್ತದೆ. ಅದನ್ನು ಅಷ್ಟು ಸುಲಭವಾಗಿ ನಿಯಂತ್ರಿಸುವುದು ಸಾಧ್ಯವಿಲ್ಲ. ಇದು ಸಮಾಜದ ಪ್ರತಿಬಿಂಬ. ಆದರೆ ಈ ಡ್ರಗ್ಸ್ ಮಾಫಿಯಾ ಹಾಗಲ್ಲ. ಇದೊಂದು ವ್ಯವಸ್ಥಿತ ಜಾಲವನ್ನು ಹೊಂದಿರುತ್ತದೆ. ತುಂಬಾ ಕ್ರಮಬದ್ಧವಾಗಿ ಹಣಕಾಸಿನ ಮೂಲಗಳನ್ನು ಹೊಂದಿ ಒಂದು ಚೈನ್ ಲಿಂಕ್ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. 

ನಿಜವಾಗಲೂ ಇಚ್ಛಾಶಕ್ತಿ ಇರುವ ಸರ್ಕಾರ ಇದಕ್ಕಾಗಿ ಒಂದು ಬಲಿಷ್ಠ ಡ್ರಗ್ ನಿರ್ಮೂಲನಾ ಪೊಲೀಸ್ ತಂಡವನ್ನು ಸ್ಥಾಪಿಸಿ ಅದನ್ನು ಚೈನ್ ರೀತಿಯಲ್ಲಿ ಹುಡುಕಿಕೊಂಡು ಇಡೀ ಜಾಲವನ್ನೇ ಭೇದಿಸಿ, ಬಂಧಿಸಿ  ವಿಶೇಷ ಕೋರ್ಟ್ ಮುಖಾಂತರ ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ಬೇಗ ನ್ಯಾಯಾಲಯದ ಪರಿಧಿಗೆ ಒಪ್ಪಿಸಿ ಶಿಕ್ಷೆ ಕೊಡಿಸಿದರೆ ಶೇಕಡಾ 80% ಕ್ಕೂ ಹೆಚ್ಚು ಡ್ರಗ್ ಮಾಫಿಯಾ ನಿಂತು ಹೋಗುತ್ತದೆ. 

ಇದು ನಿಜಕ್ಕೂ ಸುಲಭವಾಗಿ ಮಾಡಬಹುದಾದ ಕೆಲಸ. ಏಕೆಂದರೆ ಡ್ರಗ್ ನಿಂದ ಸರ್ಕಾರಕ್ಕೆ ಆದಾಯವೂ ಇಲ್ಲ, ಜೊತೆಗೆ ಸಮಾಜದ ಅತ್ಯಂತ ಮಾರಕ ರೋಗ ನಿವಾರಣೆಯಾಗುತ್ತದೆ. ಇಂತಹ ಘಟನೆಗಳನ್ನು ಸಹ ನಿಯಂತ್ರಿಸಲು ಸರ್ಕಾರಿ ವ್ಯವಸ್ಥೆಗೆ ಸಾಧ್ಯವಿಲ್ಲ ಎನ್ನುವುದಾದರೆ ಇನ್ನು ದೊಡ್ಡ ದೊಡ್ಡ ಕೃತ್ಯಗಳನ್ನು ಹೇಗೆ ರಕ್ಷಿಸುತ್ತಾರೆ. ಜೊತೆಗೆ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವವರ ಸಂಖ್ಯೆ ಕೆಲವೇ ಸಾವಿರಗಳಲ್ಲಿ ಮಾತ್ರವಿದೆ. ಇದೇನು ಭಯೋತ್ಪಾದಕರಂತೆ, ಧಾರ್ಮಿಕ ಮೂಲಭೂತವಾದಿಗಳಂತೆ ಆಳವಾದ ಜಾಲವನ್ನು ಹೊಂದಿರುವುದಿಲ್ಲ. ಕೇವಲ ಹಣಕಾಸಿನ ವ್ಯವಹಾರಕ್ಕಾಗಿ, ಯುವಜನರಲ್ಲಿ ಈ ಡ್ರಗ್ಸ್ ಮಾರಾಟ ಮಾಡಲಾಗುತ್ತದೆ. ಹೃದಯವಂತಿಕೆ ಇರುವ ಯಾರೇ ಅಧಿಕಾರಿಗಳು ಈ ವಿಷಯದಲ್ಲಿ ಕಾನೂನು ಮೀರಿ ಒಂದು ಹೆಜ್ಜೆ ಮುಂದೆ ಹೋದರೆ ಖಂಡಿತವಾಗಲೂ ತಪ್ಪೇನು ಇಲ್ಲ. 

ಏಕೆಂದರೆ ನಮ್ಮ ಯುವಕರಿಗೆ ವಿಷ ಉಣಿಸುತ್ತಿರುವವರ ಬಗ್ಗೆ ಸಹಾನುಭೂತಿ ಏಕೆ ? ಗೃಹ ಸಚಿವರು ಕೇವಲ ಹೇಳಿಕೆಗಳನ್ನು ನೀಡುತ್ತಾ, ಯಾವುದೋ ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿ ಮಾಡಿದರೆ ಪ್ರಯೋಜನವೇನು ?. ಮೆಡಿಕಲ್ ಸ್ಟೋರ್ ಅಲ್ಲದಿದ್ದರೆ ಬೀಡ ಅಂಗಡಿ, ಅದು ಅಲ್ಲದಿದ್ದರೆ ಇನ್ನೊಂದು ಹೀಗೆ ಎಲ್ಲೋ ಅವರು ತಮ್ಮ ಮಾರಾಟ ಜಾಲವನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತಾರೆ. ಈಗ ಮುಖ್ಯವಾಗಿ ಆಗಬೇಕಾಗಿರುವುದು ಇದರ ಮೂಲೋಚ್ಚಾಟನೆಯೇ ಹೊರತು ಕೇವಲ ದಾಳಿ ಮತ್ತು ಬಂಧನವಲ್ಲ. ಅವರನ್ನು ಬಂಧಿಸಿ, ಮುಂದೆ ಶೀಘ್ರ ವಿಚಾರಣೆಗೆ ಒಳಪಡಿಸಿ, ಆರು ತಿಂಗಳ ಒಳಗಾಗಿ ಇವರಿಗೆ ಕನಿಷ್ಠ 10 ವರ್ಷಗಳ ಅವಧಿಗಾದರೂ ಜೈಲು ಶಿಕ್ಷೆಯನ್ನ ವಿಧಿಸಬೇಕು. ಅದಕ್ಕಾಗಿ ಕಾನೂನಿನ ತಿದ್ದುಪಡಿ ಮಾಡುವುದಾದರೆ ವಿಶೇಷ ಅಧಿವೇಶನ ಕರೆದು ತಕ್ಷಣವೇ ಮಾಡಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವೂ ಇರುವುದಿಲ್ಲ. 

ಏಕೆಂದರೆ ಯಾವ ರಾಜಕಾರಣಿಗಳು ಇದನ್ನು ಬೆಂಬಲಿಸುವುದಿಲ್ಲ. ರಾಜಕಾರಣಿಗಳು ಭ್ರಷ್ಟಾಚಾರ ಮಾಡಬಹುದು, ಆದರೆ ಈ ವಿಷ ಉಣಿಸುವ ಕೆಲಸಕ್ಕೆ ಹೃದಯವಿರುವ ಯಾರೂ ಪ್ರೋತ್ಸಾಹ ನೀಡುವುದಿಲ್ಲ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಅದಕ್ಕೆ ಸಂಬಂಧಿಸಿದವರೇ ದಯವಿಟ್ಟು ನಿಮ್ಮ ಪ್ರಾಮುಖ್ಯತೆ ಈ ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ನೀಡಿ. ನೀವೇನು ದಾಳಿ ಮಾಡಬೇಕಾಗಿಲ್ಲ. ಒಂದು ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡಿ. ಅವರು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಡ್ರಗ್ಸ್ ಮಾಫಿಯಾವನ್ನು ಮೂಲೋಚ್ಚಾಟನೆ ಮಾಡೋಣ. 

ಹಾಗೆಯೇ ಈ ರೇವ್ ಪಾರ್ಟಿ ಅಥವಾ ಈ ರೀತಿಯ ದೊಡ್ಡ ದೊಡ್ಡ ಜನಪ್ರಿಯ ವ್ಯಕ್ತಿಗಳ ಪಾರ್ಟಿಗಳ ಮೇಲೆ ನೇರವಾಗಿ ದಾಳಿ ಮಾಡಿ, ಮುಲಾಜಿಲ್ಲದೆ ಅವರ ಮೇಲೆಯೂ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಏಕೆಂದರೆ ಈ ಬಹು ಬೆಲೆಯ ಡ್ರಗ್ಸ್ ಬಡವರು, ಸಾಮಾನ್ಯ ಜನರು ಕೊಳ್ಳಲು ಸಾಧ್ಯವಿಲ್ಲ. ಇದೇನಿದ್ದರೂ ಶ್ರೀಮಂತರ ಶೋಕಿ. ಅದು ಯುವ ಜನಾಂಗಕ್ಕೂ ಹಬ್ಬುತ್ತಿದೆ. ದಯವಿಟ್ಟು ಇದಕ್ಕೆ ಇಡೀ ಕರ್ನಾಟಕದ ಎಲ್ಲ ಹೃದಯವಂತ ಪೋಷಕರು ಧ್ವನಿಗೂಡಿಸಿ. 

ಸಾಮಾಜಿಕ ಜಾಲತಾಣವೋ, ಮಾಧ್ಯಮವೋ, ಮಠಗಳೋ, ಧಾರ್ಮಿಕ ಕೇಂದ್ರಗಳೋ ಯಾವುದೇ ಇರಲಿ ಧೈರ್ಯವಾಗಿ ಧ್ವನಿ ಎತ್ತಿ. ಎಷ್ಟೋ ಸಮಸ್ಯೆಗಳನ್ನು ನಿವಾರಣೆ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ. ಆದರೆ ಈ ಡ್ರಗ್ ಮಾಫಿಯವನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ನಾಶ ಮಾಡಬಹುದು ಸ್ವಲ್ಪ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿ ಇದ್ದಲ್ಲಿ. ಅದನ್ನಾದರೂ ನಮ್ಮ ಕಾಲಘಟ್ಟದಲ್ಲಿ ಮಾಡೋಣ. 

ಈಗಾಗಲೇ ಗಾಳಿ ನೀರು ಆಹಾರ ಮಲಿನವಾಗಿ ಅನಾರೋಗ್ಯ, ಆತ್ಮಹತ್ಯೆ, ಅಪಘಾತಗಳು ನಮ್ಮನ್ನು ಕಾಡುತ್ತಿರುವಾಗ, ಇದ್ಯಾವುದೋ ಡ್ರಗ್ಸ್ ಮಾಫಿಯಾ ನಮ್ಮ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳೋಣ. ನಿಮ್ಮ ಶಾಸಕರು, ಸಂಸತ್ ಸದಸ್ಯರು, ಜನಪ್ರತಿನಿಧಿಗಳು, ಮಂತ್ರಿಗಳು ವಿರೋಧ ಪಕ್ಷದವರು ಎಲ್ಲೇ ಸಿಗಲಿ ಮೊದಲು ಅವರಿಗೆ ಇದರ ಬಗ್ಗೆ ಧೈರ್ಯವಾಗಿ ಪ್ರಶ್ನಿಸಿ, ಛೀಮಾರಿ ಹಾಕಿ. ಮಾಧ್ಯಮಗಳು ಸಹ ಯಾವ ಯಾವುದೋ ವಿಷಯದ ಬೆನ್ನು ಬೀಳುವುದನ್ನು ಬಿಟ್ಟು ಕನಿಷ್ಠ ಎರಡು ಮೂರು ತಿಂಗಳಲ್ಲಿ ಈ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಮಾಡಲು ಸಹಕರಿಸಿ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ