ಉತ್ಕಟ

ಉತ್ಕಟ

ಪುಸ್ತಕದ ಲೇಖಕ/ಕವಿಯ ಹೆಸರು
ಸೃಜನ್ ಗಣೇಶ್ ಹೆಗಡೆ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - ೫೬೨ ೧೨೩
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ : ೨೦೨೩

ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ, ಕಲಾವಿದರ ಬವಣೆಗಳನ್ನು ಸವಿವರವಾಗಿ ತಿಳಿಸುವ ಹೊತ್ತಗೆಯೊಂದು ಬಿಡುಗಡೆಯಾಗಿದೆ. ಯಕ್ಷಪ್ರೇಮಿ ಲೇಖಕರಾದ ಸೃಜನ್ ಗಣೇಶ್ ಹೆಗಡೆ ಅವರು ಬರೆದ ‘ಉತ್ಕಟ' ಎಂಬ ೯೮ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಯಕ್ಷಗಾನ, ಕಲಾವಿದರ ಬದುಕು, ಉಳಿದುಕೊಂಡ ಮೂಲ ಸತ್ವ ಬಗ್ಗೆ ಬಹಳ ಸೊಗಸಾದ ಬರವಣಿಗೆ ಇದೆ. ಸೃಜನ್ ಅವರು ತಮ್ಮ ಪುಸ್ತಕದಲ್ಲಿ ಬರೆದ ಲೇಖಕರ ಮಾತಿನಿಂದ ಆಯ್ದ ಭಾಗ ಇಲ್ಲಿದೆ...

“ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಲೆನಾಡಿನ ಮೂಲೆ ಮೂಲೆಯಲ್ಲಿಯೂ ಅನೇಕ ಜನರ ಬದುಕು ಭಾವಗಳಲ್ಲಿ ರಿಂಗಣಿಸುವ, ಅಂತೆಯೆ ಸದಾ ಚೈತನ್ಯವನ್ನು ಆನಂದಮಯವಾಗಿರಿಸಿರುವ ಕಲೆಯೆಂದರೆ ಯಕ್ಷಗಾನ. ಎಷ್ಟೋ ಕಲಾವಿದರಿಗೆ ಅದೊಂದು ಕಲೆ ಮಾತ್ರವಾಗಿರದೆ ಬದುಕು ಭಾವವೆ ಆಗಿದೆ. ಯಕ್ಷಗಾನ ಕಲೆಯನ್ನು ನಂಬಿಕೊಂಡು ಎಷ್ಟೋ ಕುಟುಂಬಗಳು ಬಾಳ್ಮೆ ಮಾಡುತ್ತಿವೆ. ಆಧುನಿಕ ಮಾಧ್ಯಮಗಳ ಅಲೆಯು ಹೆಚ್ಚಾದಂತೆಯೆ ಕಲೆಯ ನೆಲೆಯ ಪರಿಧಿಯು ಬೆಳೆದಿದೆ.

ಕಾಲ ಬದಲಾದಂತೆಯೆ ಕಲೆಯ ಮತ್ತು ಕಲಾವಿದರ ಮನಃಸ್ಥಿತಿಗಳಾಗಲಿ ವ್ಯವಸ್ಥೆಗಳಾಗಲಿ ಬದಲಾಗಿದೆಯಾದರೂ ಯಕ್ಷಗಾನ ಕಲೆ ಅಂದಿನಂತೆಯೆ ತನ್ನ ಮೂಲ ಸತ್ವವನ್ನು ಉಳಿಸಿಕೊಂಡೆ ಇದೆ. ಅನೇಕ ಬದಲಾವಣೆಗಳಾದಾಗಿಯೂ ಯಕ್ಷಗಾನ ಕಲೆಯು ತನ್ನ ಮೂಲ ಸತ್ವವನ್ನೇನು ಕಳೆದು ಕೊಂಡಿಲ್ಲವೆಂಬುದು ಸಂತಸದ ವಿಷಯ. ಅದರಲ್ಲಿಯೂ ಅಂತರ್ಜಾಲ ಮಾಧ್ಯಮಗಳ ಪರಿಣಾಮಾರ್ಥವಾಗಿ ಯಕ್ಷಗಾನ ಇಂದು ವಿಶ್ವಗಾನವೂ ಆಗಿದೆ ಎನ್ನಬಹುದು.

ಜೀವನದ ನೋವು ನಲಿವುಗಳೆಲ್ಲವನ್ನೂ ಸಮನಾಗಿ ಸ್ವೀಕರಿಸುತ್ತ ಕಲೆಯನ್ನು ಅಪಾರವಾಗಿ ಪೂಜಿಸಿ ಬದುಕುವ ಅದೆಷ್ಟೋ ಕಲಾವಿದರು ಮರೆಯಾಗಿದ್ದಾರೆ. ಅಂತೆಯೆ ಇಂದಿಗೂ ಇದ್ದಾರೆ. -ಯಾವ ಕಲೆಯೂ ಯಾವ ಕಾಲಕ್ಕೂ ಖಾಲಿಯಾಗುವುದಿಲ್ಲ ಉತ್ಕೃಷ್ಟವಾಗಿ ಬೆಳೆಯುತ್ತಲೆ ಸಾಗುತ್ತದೆ- ಎಂಬುದಕ್ಕೆ ಯಕ್ಷಗಾನ ಕಲೆಯೆ ಸಾಕ್ಷಿ. ಒಂದು ಕಾಲದಲ್ಲಿ ತಲೆಯ ಮೇಲೆ ಭಾರವಾದ ಪೆಟ್ಟಿಗೆಗಳನ್ನು ಹೊತ್ತು ದೂರದೂರಿಗೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಿಯೆ ಹುಮ್ಮಸ್ಸಿನಿಂದ ಗೆಜ್ಜೆ ಕಟ್ಟಿ ಪ್ರದರ್ಶನ ಕೊಡುತ್ತಿದ್ದ ಕಲಾವಿದರು ಇಂದು ಗಗನಮಾರ್ಗಿಗಳಾಗಿ ಲೋಹದ ಹಕ್ಕಿಯನ್ನೇರಿ ವಿಶ್ವದ ಬೇರೆ ಬೇರೆ ಕಡೆಗಳಲ್ಲಿಯೂ ಪ್ರದರ್ಶನ ಕೊಡುವಷ್ಟು ಬೆಳೆದಿದ್ದಾರೆಂದರೆ ನಿಜಕ್ಕೂ ಯಕ್ಷಗಾನ ವಿಶ್ವಗಾನವಾಗುತ್ತಿರುವುದಕ್ಕೊಂದು ಉದಾಹರಣೆ.

ಸಾಕಷ್ಟು ಸಂಶೋಧನೆಗಳೂ ಬರಹಗಳೂ ವಿಮರ್ಶೆಗಳೂ ಯಕ್ಷಗಾನದ ಕುರಿತಾದ ಚಿಂತನೆಗಳೂ ಆರಂಭವಾದ ಈ ಕಾಲದಲ್ಲಿ ವಾಟ್ಸಾಪ್ ಫೇಸ್ಬುಕ್ ಯ್ಯೂಟ್ಯೂಬ್‌ಗಳಂತಹ ಮಾಧ್ಯಮಗಳಲ್ಲಿ ನಿತ್ಯವೂ ಯಕ್ಷಗಾನ ಪ್ರಸಾರಗೊಳ್ಳುತ್ತ ಕರದಲ್ಲಿಯೆ ಯಕ್ಷಗಾನದ ಡೇರೆ ಎದ್ದು ನಿಲ್ಲುವ ಸಮಯ ಬಂದಿದೆ. ಕಲಾವಿದರೊಂದಿಗಿನ ಮಾತುಕತೆ, ಅನುಭವದ ಹಂಚಿಕೆ ಎಲ್ಲವೂ ಅಭಿಮಾನಿಗಳನ್ನು ಇನ್ನೂ ಹೆಚ್ಚಿಸುತ್ತಲೆ ಇದೆ. ಮತ್ತು ಕಲಾವಿದರೂ ಹೆಚ್ಚುತ್ತಿದ್ದಾರೆ. ಹಳೆ ಮತ್ತು ಹೊಸ ಯಕ್ಷಗಾನ ಪ್ರದರ್ಶನಗಳ ಸಂಗ್ರಹ ಮತ್ತು ಹಂಚಿಕೆಯ ಕಾರ್ಯವು ಹೊಸದಾಗಿ ಕಲಿಯುವವರಿಗೂ ಮನರಂಜನೆ ಬಯಸುವವರಿಗೂ ಮನೋವಿಕಾಸಕ್ಕೆ ಮೇವು ಬೇಕೆಂಬುವವರಿಗೂ ವರ್ತಮಾನದ ಜಗತ್ತು ಈ ಮೂಲಕ ಹೊಸ ಅವಕಾಶ ಕಲ್ಪಿಸುತ್ತಿದೆ.

ಒಟ್ಟಾರೆಯಾಗಿ ಒಂದು ಹೆಮ್ಮೆಯ ಕಲೆ ತನ್ನ ಹಿರಿಮೆಯನ್ನು ಸದಾ ಉಳಿಸಿಕೊಂಡು ಬೆಳೆಯುತ್ತಲೆ ಇರುವುದು ಆ ಕಲೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ನನ್ನಂತಹ ಎಲ್ಲ ಕಲಾವಿದರಿಗೂ ಸಂತಸದ ಸಂಗತಿಯೆ ಸರಿ. ಈ ಎಲ್ಲ ಸತ್ತ್ ಪ್ರಯತ್ನಗಳ ನಡುವೆ ನನ್ನ ಈ ಒಂದು ಕಲಾಕೃತಿಯೂ ರೂಪುಗೊಂಡುದು ಸಂತೃಪ್ತಿ ತಂದಿದೆ.

ಪೀಳಿಗೆಯಿಂದ ಪೀಳಿಗೆಗೆ ಉಳಿದು ಬರುವ, ಆ ಮೂಲಕ ಬೆಳೆದಷ್ಟೂ ಬೆಳೆಯುವ ಕಲೆಯ ವಂಶವಾಹಿನಿಯ ಗುಣವು ವಿಶೇಷವಾದುದು. ಆ ನಿಟ್ಟಿನಲ್ಲಿಯೆ ಎಷ್ಟೋ ಕುಟುಂಬಗಳು ‘ಯಕ್ಷ ಕುಟುಂಬ’ಗಳಾಗಿಯೆ ಜನಮನದ ನಡುವೆ ಉಳಿದಿರುವುದನ್ನು ಗಮನಿಸಬಹುದು. ಕಲೆಯ ಮೇಲಿನ ಪ್ರೀತಿ ಅಭಿಮಾನ ವಿಶ್ವಾಸ ಶ್ರದ್ಧೆ ಬದ್ಧತೆ ಎಲ್ಲವೂ ಒಬ್ಬ ಕಲಾವಿದನ ಮನಸ್ಸಿನಲ್ಲಿ ಉತ್ಕಟವಾಗಿದ್ದು, ತನ್ನ ವಂಶದಲ್ಲಿ ಕಲೆಯು ಉಳಿದು ಬೆಳೆಯಬೇಕೆಂಬ ಹಂಬಲ ಹಿರಿದಾಗಿರುತ್ತದೆ.

ಈ ಎಲ್ಲ ಅಂಶಗಳನ್ನು ನನ್ನೊಳಗೆ ಇಳಿಸಿಕೊಂಡು ಈ ಕಾದಂಬರಿಯ ಬರಹ ಒಡಮೂಡಿದೆ. ಬದುಕಿನ ಏಳುಬೀಳುಗಳಲ್ಲಿಯೂ ಕಲೆಯನ್ನು ದೃಢವಾಗಿ ನಂಬುವ ಕಲಾವಿದನೋರ್ವನ ಚಿತ್ರಣದಲ್ಲಿಯೆ ಮಾನಸಿಕ ಒಳ ತುಮುಲಗಳೂ ಮಾನ ಸಮ್ಮಾನ ಮರ್ಯಾದೆಗಳಿಗೆ ಕೊಡಮಾಡುವ ಸ್ಥಾನಗಳೂ ಕನಸುಗಳನ್ನು ಕಟ್ಟಿ ಅದರ ಸಾಕಾರಕ್ಕೆ ಹಪಹಪಿಸುವ ನಡೆಯೂ ಈ ಕಲಾಕೃತಿಯ ಮೊದಲ ಭಾಗವಾದರೆ, ಆ ಕಲಾವಿದನ ಉತ್ಕಟತೆಗೆ ಚಿಗುರಾಗುವ ಭಾಗ ಎರಡನೆಯದು.”