ಉತ್ತಮ ಆಡಳಿತ ಎಂದರೇನು?

ಉತ್ತಮ ಆಡಳಿತ ಎಂದರೇನು?

ಒಂದು ವ್ಯವಸ್ಥೆಯ ವ್ಯವಹಾರಗಳನ್ನು ಸುಸಂಗತವಾಗಿ ನಡೆಸುವ ಉದ್ದೇಶದಿಂದ ‘ಆಡಳಿತ’ ದ ಪರಿಕಲ್ಪನೆ ಸೃಷ್ಟಿಯಾಯಿತು. ಪುರಾಣ ಮತ್ತು ಇತಿಹಾಸ ಕಾಲದಲ್ಲಿ ರಾಜನು ದೇಶದ ಆಡಳಿತದ ಕೇಂದ್ರ ಬಿಂದು ಮತ್ತು ಅವನಿಗೆ ಸಹವರ್ತಿಗಳಾಗಿ ಆಡಳಿತದಲ್ಲಿ ರಾಜನ ಸಾಮಂತರು ಮತ್ತು ಆಸ್ಥಾನಿಕರು ಸಹಕರಿಸುತ್ತಿದ್ದರು. ಪ್ರಜಾಪ್ರಭುತ್ವದ ಸಮಕಾಲೀನ ಯುಗದಲ್ಲಿ ಗ್ರಾಮದಿಂದ ಆರಂಭಗೊಡು ರಾಷ್ಟ್ರ ಮಟ್ಟದ ತನಕ ಜನರಿಂದ ಆಯ್ಕೆಯಾದ ಪ್ರಜಾಪ್ರತಿನಿಧಿ ಆಡಳಿತ ವ್ಯವಸ್ಥೆಯು ಬಹುತೇಕ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಹಾಗೆಯೇ ವಿವಿಧ ಇಲಾಖೆಗಳ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳ ಶ್ರೇಣಿ ಮತ್ತು ಸಹಾಯಕ ವಿಭಾಗಗಳಿರುತ್ತವೆ. ಸಣ್ಣ ಮನೆಯ ಆಡಳಿತವೂ ಒಂದು ವ್ಯವಸ್ಥೆಗೊಳಪಟ್ಟು ನಡೆಯುತ್ತಿದೆಯೆಂಬುದು ಸರ್ವರಿಗೂ ವೇದ್ಯವಾದ ವಿಚಾರ.

ಆಡಳಿತ ನಡೆಸುವುದರಲ್ಲಿ ಎಲ್ಲರೂ ನಿಪುಣರೇ ಸರಿ. ಆದರೆ ಅವರ ಆಡಳಿತದ ಫಲ ಅಥವಾ ಪರಿಣಾಮಗಳನ್ನು ಚಿಂತನೆ ಮಾಡಬೇಕಾಗುತ್ತದೆ. ಆಡಳಿತದ ನೀತಿ ನಿರೂಪಗಳು ಗೊಂದಲ, ಅಶಿಸ್ತು ಮತ್ತು ಅರಾಜಕತೆಗೆ ಕಾರಣವಾದರೆ ಅಂತಹ ಆಡಳಿತ ವಿಫಲವೇ ಸರಿ. ಅದಕ್ಕಾಗಿ ಆಡಳಿತದ ಜವಾಬ್ದಾರಿಯ ಅಪೇಕ್ಷಿತರು ಮೊತ್ತಮೊದಲು ತಮ್ಮನ್ನು ತಾವೇ ಆಡಳಿತ ಮಾಡಲು ನೈಪುಣ್ಯತೆ ಗಳಿಸಬೇಕು. ಆಡಳಿತದ ಅನುಭವ ಮತ್ತು ವಿಸ್ತೃತ ಜ್ಞಾನವಿರದೇ ಇದ್ದವರಿಗೆ ದೊಡ್ಡ ಸಂಸ್ಥೆಗಳ ಅಥವಾ ವ್ಯವಸ್ಥೆಗಳ ಆಡಳಿತವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ. ಜನಾಕರ್ಷಕ ಮಾತುಗಾರಿಕೆ, ಕಾರ್ಯಪಟುತ್ವ, ಶಿಸ್ತು, ಇತರರನ್ನು ಸೆಳೆಯಬಲ್ಲ ವ್ಯಕ್ತಿತ್ವ, ತತ್ವ ಅಥವಾ ಸಿದ್ಧಾಂತಗಳಲ್ಲಿ ಬದ್ಧತೆ, ತನ್ನ ಬಗ್ಗೆ ಅರಿವು, ಸ್ವಸಾಮರ್ಥ್ಯದಲ್ಲಿ ವಿಶ್ವಾಸ, ಧೀರನಡೆ, ಸಮಯೋಚಿತ ನಿರ್ಧಾರಕ ಶಕ್ತಿ, ಮೃದುತ್ಬ ಮತ್ತು ಸೌಶೀಲತೆ, ಕಾಠಿಣ್ಯತೆ ಮತ್ತು ಹಿಂಜರಿಯದಿರುವಿಕೆ... ಹೀಗೆ ನೂರಾರು ಗುಣಗಳ ಗಣಿಯಾಗಿರುವ ವ್ಯಕ್ತಿಗಳು ಮಾತ್ರ ಆಡಳಿತ ನಿರ್ವಹಿಸಲು ತಕ್ಕವರಾಗುತ್ತಾರೆ. ನಾಯಕತ್ವವು ಪೀಠದಿಂದ ಒದಗದು, ವ್ಯಕ್ತಿತ್ವವೇ ಪೀಠಕ್ಕೆ ನಾಯಕತ್ವವನ್ನು ನೀಡುವಂತಾಗಬೇಕು.

ಆಡಳಿತದ ಸೂತ್ರ ಹಿಡಿದವರು ಕ್ರೂರಿಗಳೂ ಆಗಿರಬಾರದು. ಆಡಳಿತಕ್ಕೊಳಪಟ್ಟವರು ಕ್ರೂರ ಆಡಳಿತದ ಭಯದಡಿಯಲ್ಲಿದ್ದಾಗ ವ್ಯವಸ್ಥೆಗೆ ಪೂರಕವಾಗಿ ದುಡಿಯದೆ ಇರಬಹುದು, ಇದರಿಂದ ವ್ಯವಸ್ಥೆಯೊಳಗೆ ಅವ್ಯವಸ್ಥೆಗಳೇ ಮೆರೆಯುತ್ತವೆ. ಆಡಳಿತಗಾರನ ವ್ಯಾಪ್ತಿ ಚಿಕ್ಕದಿರಲಿ, ದೊಡ್ಡದಿರಲಿ; ಸಾಮರಸ್ಯ ಮತ್ತು ರಚನಾತ್ಮಕತೆ ಮುಖ್ಯವೇ ಹೊರತು ವ್ಯಾಪ್ತಿಯ ಗಾತ್ರವಲ್ಲ. ಸಮಾನತೆಯೇ ಆಡಳಿತಗಾರನ ಪ್ರಮುಖ ಆಸ್ತಿ. ಜಾತಿ, ಧರ್ಮ, ಮತ, ಲಿಂಗ, ಭಾಷೆ, ವರ್ಣ, ಅಂತಸ್ತು, ವಯಸ್ಸು ಇವುಗಳನ್ನಾವುದನ್ನೂ ಮಾನದಂಡವಾಗಿ ಗಮನಿಸದೆ ಸಮಾನತೆಯ ಚಕ್ಷುವಿನ ಮೂಲಕ ವ್ಯವಹರಿಸುವ ಆಡಳಿತಗಾರ ಸರ್ವಾದರಣೀಯನಾಗುತ್ತಾನೆ. ಅಂತಹ ಆಡಳಿತಗಾರನ ಕಾರ್ಯವ್ಯಾಪ್ತಿಯು ತನ್ನಿಂದ ತಾನಾಗಿಯೇ ವಿಸ್ತರಣೆಯಾಗುತ್ತಾ ಹೋಗುತ್ತದೆ. ನಿಸ್ವಾರ್ಥ ಆಡಳಿತಗಾರರು ವ್ಯವಸ್ಥೆಗೆ ಪೂರಕರಾಗಿರುತ್ತಾರೆ, ಅವರು ಯಾರಿಗೂ ದ್ರೋಹ ಬಗೆಯುವುದಿಲ್ಲ. ಆಧುನಿಕ ಪ್ರಜಾ ತಂತ್ರವ್ಯವಸ್ಥೆಯಲ್ಲಿ ಜನಾಕರ್ಷಕ ಆಡಳಿತಗಾರರು ದುರ್ಲಭ. ಯಾವುದೋ ಲಾಬಿಯೊಳಗೆ ನುಸುಳದವರು ಚುನಾವಣೆಯಲ್ಲಿ ಆಯ್ಕೆಯಾಗಿ ಆಡಳಿತ ನಡೆಸಲು ಇಂದು ಅಸಾಧ್ಯ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಸ್ಪರ್ಧಿಸಿದರೆ ಮತಗಳಿಕೆ ಸಾಧ್ಯ. ರಾಜಕೀಯ ಪಕ್ಷದಿಂದ ಹೊರಗಿನವರು ಸ್ವತಂತ್ರರೆಂಬ ನೆಲೆಯಲ್ಲಿ ಸ್ಪರ್ಧಿಸಿದರೆ ಅವರು ಉತ್ತಮರಾಗಿದ್ದರೂ ಮತ ಪಡೆಯಲಾರರು. ಅವರು ಗೆದ್ದರೂ ಆಡಳಿತ ಚುಕ್ಕಾಣಿ ಒದಗದು. ಆಡಳಿತ ಚುಕ್ಕಾಣಿ ಲಭಿಸದೇ ಇದ್ದರೆ ಕ್ಷೇತ್ರದ ವಿಕಾಸ ಕನಸಿನ ಮಾತು ಎಂಬ ಸಂಧಿಗ್ಧತೆ ಎಲ್ಲರಲ್ಲೂ ಇರುವುದು ಸಹಜ. ದುಡ್ಡಿದ್ದವನು ದೊಡ್ಡಪ್ಪನೆನಿಸುವ ಈ ಕಾಲದಲ್ಲಿ ಉತ್ತಮ ಅಭ್ಯರ್ಥಿಗಳನ್ನೇ ರಾಜಕೀಯ ಪಕ್ಷಗಳು ಕಣಕ್ಕಿಳಿಸುತ್ತವೆ ಎನ್ನುವಂತಿಲ್ಲ. ಒಂದೊಮ್ಮೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಅವರು ಗೆದ್ದರೂ ಅವರಿಗೆ ಆಡಳಿತದಲ್ಲಿ ಸ್ಥಾನದ ಖಾತ್ರಿಯಿರದು. ಅಲ್ಲೂ ಲಾಬಿ ಸಹಜವಲ್ಲವೇ?

2024ರ ಲೋಕ ಸಭಾ ಚುನಾವಣೆಗಳು ನಡೆಯುತ್ತಿವೆ. ಮತಸೆಳೆಯಲು ರಾಜಕೀಯ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಆಯ್ಕೆಯಾದರೆ ತಮ್ಮ ಕಾಯಕ್ರಮಗಳೇನು ಎಂಬ ಆಶ್ವಾಸನಾ ಪತ್ರವನ್ನು ಜಾಹೀರು ಪಡಿಸುವುದು ಸಹಜ. ಆದರೆ ಗೆದ್ದ ಮೇಲೆ ಈ ಆಶ್ವಾಸನಾ ಪತ್ರಗಳು ಮುನ್ನೆಲೆಗೆ ಬಾರದೆ ಅಲ್ಲಿಯೂ ಲಾಬಿ ನಡೆಯುತ್ತದೆ. ಇದರಿಂದಾಗಿ ಆಡಳಿತಗಾರ ವಿಫಲನೇ ಆಗುವುದು ಸತ್ಯ. ಆಡಳಿತವು ಲಾಬಿಮುಕ್ತವಾದರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಇತ್ತೀಚೆಗೆ ಚುನವಾಣಾ ಪ್ರಚಾರ ಸಭೆಗಳಲ್ಲಿ ತಮ್ಮ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳು ಪ್ರಚಾರವಾಗದೆ ಜಾತಿ ನಿಂದನೆ, ಆರೋಪ ಪ್ರತ್ಯಾರೋಪಗಳು, ಅಪಪ್ರಚಾರಗಳು, ಮಿಥ್ಯ ಹೇಳಿಕೆಗಳು, ಕಾರ್ಯಕ್ರಮಗಳ ಹೊರತಾದ ಹೊಸ ಹೊಸ ಆಶ್ವಾಸನೆಗಳೇ ಪ್ರಚಾರ ವಸ್ತುಗಳಾಗುತ್ತಿವೆ. ಇದರಿಂದ ಜನರಲ್ಲಿ ಗೊಂದಲ, ವೈರತ್ವ, ಕಲಹಗಳು ಆರಂಭವಾಗಿ ಅಶಾಂತಿ ಸೃಷ್ಟಿಯಾಗುತ್ತದೆ. 

ಆಡಳಿತಗಾರರಾಗ ಬಯಸುವವರು ಹೇಗಾದರೂ ಅಧಿಕಾರ ಗಿಟ್ಟಿಸಲು ಮಾಡುವ ಅಸಾಂವಿಧಾನಿಕ ಪ್ರಯತ್ನಗಳಿಗೆ ಮಿತಿಯನ್ನು ಹೇರಬೇಕಾಗಿದೆ. ಜನರ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಊರಿನ ಅಭಿವೃದ್ಧಿಯ ಚಿಂತನೆಯಿಂದ ಹೊರ ಸಾಗುವ ಎಲ್ಲ ಕಾರ್ಯಕ್ರಮಗಳು ಜನರಿಗೆ ಹೊರೆಯೇ ಹೊರತು ಲಾಭಕರವಾಗದು. ಅಗತ್ಯವಿಲ್ಲದವರಿಗೂ ನೀಡಲಾಗುತ್ತಿರುವ ಉಚಿತಗಳ ಇಂದಿನ ಮಹಾ ಪ್ರವಾಹ, ಅಸಂಖ್ಯ ಸೋಮಾರಿಗಳನ್ನು ಉತ್ತೇಜಿಸಿವೆ. ಕಾಯಕವೇ ಕೈಲಾಸ ಎನ್ನುವ ಕಲ್ಪನೆಗಿಂತ ‘ಉಚಿತವೇ ಕೈಲಾಸ’ ಎನ್ನುವ ಮನಃಸ್ಥಿತಿಗೆ ಸಮಾಜವನ್ನು ನೂಕಲಾಗಿದೆ. ಹಿರಿಯರು ಹೇಳುವ ಮಾತು, “ಮೀನು ಹಿಡಿದು ಕೊಡ ಬೇಡ, ಮೀನು ಹಿಡಿಯುವುದನ್ನು ಕಲಿಸಿ ಕೊಡು” ಈ ಮಾತಿನ ಶಕ್ತಿ ಕಳೆಗುಂದಿದೆ.

ಆಡಳಿತಗಾರನು ತನ್ನ ಆಧೀನವಿರುವವರನ್ನು ತನ್ನ ಮನೆಯವರೆಂದು ಅರಿಯುವ ಗುಣವನ್ನು ಹೊಂದಿರಬೇಕು. ಸಹಜವಾಗಿ ತನ್ನ ಮನೆಯವರ ಮೇಲೆ ಇರುವ ಕಾಳಜಿಯು ಪಕ್ಕದ ಮನೆಯವರ ಮೇಲಿರುವುದಿಲ್ಲ. ಆಡಳಿತಗಾರ ತೋರುವ ಕಾಳಜಿಯೇ ನಿಜವಾದ ಪ್ರೇಮವಾಗಿದ್ದು ಬಂಧವು ಗಟ್ಟಿಯಾಗಲು ಸಾಧ್ಯವಾಗುತ್ತದೆ. ಎಲ್ಲರನ್ನೂ ತನ್ನವರೆಂದು ಬಗೆದವನ ಮನದೊಳಗೆ ಸ್ವಾರ್ಥ, ಭೇದಭಾವ (discrimination) ಹುಟ್ಟದು. ಆಡಳಿತಗಾರ ಎಲ್ಲವನ್ನೂ ತ್ಯಾಗಮಾಡಿದವರಾಗಿರಬೇಕು. ಅಂತಹವರು ಅರಿಷಡ್ವರ್ಗಗಳನ್ನು ಜಯಿಸಿರುತ್ತಾರೆ. ಲೋಕಹಿತದಲ್ಲೇ ತನ್ನ ಹಿತವನ್ನು ಕಾಣುತ್ತಾರೆ. ನೀವೆಲ್ಲರೂ ಉತ್ತಮ ಆಡಳಿತಗಾರನ ಗುಣ ಲಕ್ಷಣಗಳನ್ನು ನಿಮ್ಮದಾಗಿಸಿಕೊಳ್ಳಿರಿ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ