ಉತ್ತಮ ಆರೋಗ್ಯಕ್ಕೆ ಎಷ್ಟು ಗಂಟೆಗೆ ಏಳಬೇಕು?
ನಿಮಗೆ ಪ್ರತಿನಿತ್ಯ ಹೊಸ ಚೈತನ್ಯ ಹಾಗೂ ಶಕ್ತಿ ಬೇಕೆಂದು ಹಂಬಲಿಸುತ್ತಿದ್ದೀರಾ? ಹಾಗಾದರೆ ಪ್ರತಿನಿತ್ಯ ಬೆಳಿಗ್ಗೆ ಬೇಗ ಏಳಲು ಆರಂಭಿಸಿ. ಬೆಳಿಗ್ಗೆ ಬೇಗ ಏಳುವುದರಿಂದ ಚೈತನ್ಯದ ಜೊತೆಗೆ ಹೆಚ್ಚು ಸಮಯ ಸಿಗುತ್ತದೆ ಜೊತೆಗೆ ಹೊಸ ಹೊಸ ಅಲೋಚನೆಗಳು ಹುಟ್ಟಿಕೊಳ್ಳಲು ಸಹಾಯವಾಗುವುದು.
ಆಯುರ್ವೇದದ ಪ್ರಕಾರ, ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವುದು ಉತ್ತಮ. ಅಂದ್ರೆ 3.30-5.30 ರ ನಡುವೆ ಏಳಬೇಕು. ಇದನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಏಳುವುದು ನಿಮ್ಮ ದೇಹಕ್ಕೆ ಸಕಾರಾತ್ಮಕ ಯೋಚನೆಗಳನ್ನು ನೀಡುತ್ತದೆ. ಏಕೆಂದರೆ ಈ ವೇಳೆ ವಾತಾವರಣ ಶಾಂತವಾಗಿ ಹಾಗೂ ಹಿತವಾಗಿರುತ್ತದೆ. ಹಾಗಾದ್ರೆ ಬ್ರಾಹ್ಮೀ ಮುಹೂರ್ತದಲ್ಲಿ ಏಳಿವುದರಿಂದ ಏನೆಲ್ಲಾ ಲಾಭವಿದೆ ಇಲ್ಲಿ ನೋಡೋಣ.
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದಾಗ ಏನಾಗುತ್ತದೆ?
ಬಹಳಷ್ಟು ಸಾಮಾಜಿಕ ಹಾಗೂ ವೈಜ್ಞಾನಿಕ ಪುರಾವೆಗಳು ನಾವು ಬೆಳಿಗ್ಗೆ ಬೇಗ ಏಳುವುದು ಪ್ರಯೋಜನಕಾರಿ ಎಂದು ಹೇಳಿವೆ. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಮಾತ್ರವಲ್ಲ, ಎದ್ದು ಯೋಗ, ಧ್ಯಾನ ಮತ್ತು ಚಿಕಿತ್ಸಕ ಚಟುವಟಿಕೆಗಳನ್ನು ಮಾಡುವ ಮೂಲಕ ನೀವು ಸಂಪೂರ್ಣ ಸ್ವಾಸ್ತ್ಯ ಸಾಧಿಸಬಹುದು. ಜೊತೆಗೆ ಈ ಸಮಯದಲ್ಲಿ ಮಾಡುವ ಯಾವುದೇ ಚಟುವಟಿಕೆಗಳು ಉತ್ತಮ ಫಲಿತಾಂಶ ನೀಡುತ್ತವೆ.
ಇದರಿಂದ ಸಿಗುವ ಇತರ ಪ್ರಯೋಜನಗಳೆಂದರೆ :
1. ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಮತ್ತು ಸಮತೋಲನಗೊಳಿಸುವುದು.
2. ಬುದ್ಧಿಶಕ್ತಿ ಸಂಬಂಧಿತ ಸಮಸ್ಯೆಗಳು ಗುಣಪಡಿಸುವುದು ಮತ್ತು ಏಕಾಗ್ರತೆಯನ್ನು ಸುಧಾರಿಸುವುದು.
3. ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಆಯುರ್ವೇದ ಏನು ಹೇಳುತ್ತದೆ?
ಈ ಎಲ್ಲಾ ಪ್ರಯೋಜನಗಳ ಎಲ್ಲಾ ಕಾರಣಗಳನ್ನು ಆಯುರ್ವೇದದಲ್ಲಿ ಸರಿಯಾಗಿ ವಿವರಿಸಲಾಗಿದೆ. ಮಾನವ ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ 3 ಅಪಾಯಕಾರಿ ಅಂಶಗಳಿವೆ. ಈ ಅಂಶಗಳ ಪ್ರಮಾಣವು ಸಮಯಕ್ಕೆ ಅನುಗುಣವಾಗಿ ಏರಿಳಿತವನ್ನು ನಡೆಸುತ್ತವೆ. ವಾತ ಸ್ನಾಯು, ಉಸಿರಾಟ,ಅಂಗಾಂಶ ಮತ್ತು ಜೀವಕೋಶದ ಚಲನೆಗಳೊಂದಿಗೆ ಸಂಬಂಧಿಸಿದೆ. ಪಿತ್ತ ಜೀರ್ಣಕ್ರಿಯೆ, ವಿಸರ್ಜನೆ, ಚಯಾಪಚಯ ಮತ್ತು ದೇಹದ ಉಷ್ಣತೆಯ ಪ್ರಕ್ರಿಯೆಗಳೊಂದಿಗೆ ಸಂಬಂಧ ಹೊಂದಿದೆ. ಕಫವು ದೇಹದ ರಚನೆಗೆ ಸಂಬಂಧಿಸಿದೆ, ಅಂದರೆ ಮೂಳೆ, ಸ್ನಾಯುರಜ್ಜು ಮತ್ತು ಸ್ನಾಯುಗಳು, ಕೋಶಗಳನ್ನು ಒಟ್ಟಿಗೆ ಹಿಡಿದಿಡಲು ಬಲವನ್ನು ಒದಗಿಸುತ್ತದೆ. ಇವುಗಳನ್ನು ಸರಿತೂಗಿಸಲು ಬೆಳ್ಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಥವಾ ಬೆಳಿಗ್ಗೆ ಬೇಗ ಏಳಬೇಕು ಎನ್ನುತ್ತದೆ ಆಯುರ್ವೇದ.
ಏಳಲು ಸೂಕ್ತ ಸಮಯ:
ಖಂಡಿತವಾಗಿಯೂ ಬ್ರಾಹ್ಮೀ ಮುಹೂರ್ತದ ನಡುವೆ ಯಾವುದೇ ಸಮಯದಲ್ಲಾದರೂ ಏಳಲು ಪ್ರಯತ್ನಿಸಬೇಕು. ಎದ್ದು ಧ್ಯಾನ ಮತ್ತು ಜ್ಞಾನವನ್ನು ಗಳಿಸುವ ಚಟುವಟಿಕೆಗಳನ್ನು ಅಭ್ಯಾಸ ಮಾಡಬೇಕು. ಬೆಳಿಗ್ಗೆ ಶಾಂತಿಯುತ ಮತ್ತು ಉಲ್ಲಾಸಕರ ವಾತಾವರಣ ಇರುವುದರಿಂದ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು. ದೇಹದ 3 ಅಂಶಗಳನ್ನು ಸಮತೋಲನಗೊಳಿಸುವ ಮೂಲಕ, ದೇಹಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಗುಣಪಡಿಸಬಹುದು ಮತ್ತು ಸೃಜನಶೀಲತೆ, ಬುದ್ಧಿವಂತಿಕೆ ಮುಂತಾದ ಕೌಶಲ್ಯಪೂರ್ಣ ಗುಣಗಳನ್ನು ಸುಧಾರಿಸಬಹುದು.
ಏಳಲು ಉತ್ತಮ ಸಮಯ:
ವಾತಕ್ಕೆ ಸೂರ್ಯೋದಯಕ್ಕೆ 30 ನಿಮಿಷಗಳ ಮೊದಲು
ಪಿತ್ತಕ್ಕೆ ಸೂರ್ಯೋದಯಕ್ಕೆ 45 ನಿಮಿಷಗಳ ಮೊದಲು
ಕಫಕ್ಕೆ ಸೂರ್ಯೋದಯಕ್ಕೆ 90 ನಿಮಿಷಗಳ ಮೊದಲು ನಿದ್ರೆಯ ಅಸ್ವಸ್ಥತೆ ಒತ್ತಡ ಅಥವಾ ತಡವಾಗಿ ನಿದ್ರೆ ಬರುವಂತಹ ಸಂದರ್ಭದಲ್ಲಿ- ವಾತಕ್ಕೆ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಉತ್ತಮ
ಪಿತ್ತಕ್ಕೆ ಬೆಳಿಗ್ಗೆ 6: 30 ಕ್ಕೆ ಮೊದಲು ಉತ್ತಮ
ಕಫಕ್ಕೆ ಬೆಳಿಗ್ಗೆ 6 ಗಂಟೆಯ ಮೊದಲು ಏಳುವುದು ಉತ್ತಮವಾಗಿದೆ.
-ಶ್ರೀರಕ್ಷಾ (ಮಾಹಿತಿ ಸಂಗ್ರಹ)
ಚಿತ್ರ: ಇಂಟರ್ನೆಟ್ ತಾಣ