ಉತ್ತಮ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸುಧಾರಣೆಯ ಸುಳಿವು

ಉತ್ತಮ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸುಧಾರಣೆಯ ಸುಳಿವು

ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆಯ ಫಲಿತಾಂಶ ಬಂದಿದೆ. ಆದರೂ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು. ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯದಲ್ಲಿ ಸಾರ್ವಕಾಲಿಕ ದಾಖಲೆಯ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ೮.೫ ಲಕ್ಷ ಮಕ್ಕಳಲ್ಲಿ ೭.೩ ಲಕ್ಷ ಮಕ್ಕಳು ಪಾಸಾಗಿದ್ದಾರೆ. ಒಟ್ಟಾರೆ ಶೇ.೮೫.೬ ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಕೋವಿಡ್ ನಿಂದಾಗಿ ಪರೀಕ್ಷೆ ಬರೆದವರನೆಲ್ಲ ಪಾಸು ಮಾಡಿದ್ದರಿಂದ ಶೇ.೧೦೦ ರಷ್ಟು ಫಲಿತಾಂಶ ಬಂದಿದ್ದು ಬಿಟ್ಟರೆ ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಶೇ ೮೦ ಕ್ಕಿಂತ ಹೆಚ್ಚು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಯಾವತ್ತೂ ಪಾಸಾಗಿರಲಿಲ್ಲ. ಹೀಗಾಗಿ ಹೆಚ್ಚು ಕಮ್ಮಿ ಒಂದೇ ವರ್ಷದಲ್ಲಿ ಫಲಿತಾಂಶ ಶೇ.೫ ರಷ್ಟು ಸುಧಾರಣೆಯಾದಂತಾಗಿದೆ. ಇದು ಬಹುದೊಡ್ಡ ಪ್ರಗತಿ. ಈ ಶೈಕ್ಷಣಿಕ ವರ್ಷದಲ್ಲೂ ಆರಂಭದಲ್ಲಿ ಕೊರೋನಾ ಇದ್ದಿದ್ದರಿಂದ ೨-೩ ತಿಂಗಳು ವಿದ್ಯಾರ್ಥಿಗಳು ಶಾಲೆಗೆ ಹೋಗಿರಲಿಲ್ಲ. ಅಷ್ಟಾಗಿಯೂ ಉತ್ತಮ ಫಲಿತಾಂಶ ಬಂದಿದೆ ಅಂದರೆ ಅದಕ್ಕೆ ಶಿಕ್ಷಕರು ಹಾಗೂ ಮಕ್ಕಳಿಬ್ಬರನ್ನೂ ಅಭಿನಂದಿಸಲೇ ಬೇಕು. ಇದೇ ಮೊದಲ ಬಾರಿ ಮೂರು ವಿಷಯಗಳಿಗೆ ಶೇ ೧೦ರಷ್ಟು ಕೃಪಾಂಕ ನೀಡಿದ್ದು ಕೂಡ ಫಲಿತಾಂಶ ಸುಧಾರಣೆಗೆ ಕಾರಣವಿರಬಹುದು. ತೇರ್ಗಡೆಯ ಅಂಚಿಗೆ ಬಂದವರಿಗೆ ಇಷ್ಟು ವರ್ಷ ೨ ವಿಷಯಗಳಿಗೆ ಶೇ.೫ರಷ್ಟು ಕೃಪಾಂಕ ನೀಡಿ ಪಾಸು ಮಾಡುವ ವ್ಯವಸ್ಥೆ ಇತ್ತು. ಕೊರೋನಾ ಕಾರಣಕ್ಕೆ ಈ ಬಾರಿ ಅದನ್ನು ಹೆಚ್ಚಿಸಲಾಗಿತ್ತು. ಆದರೆ, ಕೃಪಾಂಕದಲ್ಲಿ ಪಾಸಾದ ೪೦ ಸಾವಿರ ಮಕ್ಕಳಲ್ಲಿ ೩೫ ಸಾವಿರ ಮಕ್ಕಳು ಕೇವಲ ಒಂದು ವಿಷಯದಲ್ಲಿ ಕೃಪಾಂಕ ಪಡೆದು ಪಾಸಾಗಿದ್ದಾರೆಂದು ಪರೀಕ್ಷಾ ಮಂಡಳಿ ಹೇಳಿದೆ. ಹೀಗಾಗಿ ಎಲ್ಲಾ ವಿನಾಯ್ತಿಗಳನ್ನು ಹೊರತುಪಡಿಸಿಯೂ ಪ್ರಗತಿ ಉತ್ತಮವಾಗಿಯೇ ಇದೆ.

ಹಾಗಂತ ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗೆ ಹಾಗೂ ಫಲಿತಾಂಶವನ್ನು ಉತ್ತಮಗೊಳಿಸಿಕೊಳ್ಳುವುದಕ್ಕೆ ಇನ್ನೂ ಸಾಕಷ್ಟು ಅವಕಾಶವಿದೆ. ನಮ್ಮದೇ ನೆರೆ ರಾಜ್ಯಗಳನ್ನು ಗಮನಿಸಿದರೆ ಅಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರತಿ ವರ್ಷ ಶೇ.೯೪-೯೫ರಷ್ಟಿರುತ್ತದೆ. ಸಡಿಲ ಮೌಲ್ಯ ಮಾಪನವೂ ಅದಕ್ಕೆ ಕಾರಣವಿರಬಹುದು. ಆದರೆ ತತ್ಪರಿಣಾಮ, ಆ ರಾಜ್ಯಗಳಿಗೆ ಹೋಲಿಸಿದರೆ ಶೇ ೮-೧೦ರಷ್ಟು ನಮ್ಮ ರಾಜ್ಯದ ಮಕ್ಕಳು ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿರುವುದು ನಿಜ. ಹೀಗಾಗಿ ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕು. ಅದಕ್ಕೆ ಕೇವಲ ಪ್ರೌಢಶಿಕ್ಷಣದ ಮೇಲೆ ಗಮನ ಹರಿಸಿದರೆ ಸಾಲದು. ಪ್ರಾಥಮಿಕ ಶಿಕ್ಷಣವನ್ನೂ ಇನ್ನಷ್ಟು ಸುಧಾರಿಸಬೇಕು. ಶೈಕ್ಷಣಿಕ ಮೂಲ ಸೌಕರ್ಯ ಹೆಚ್ಚಳದಿಂದ ಹಿಡಿದು ಬೋಧನಾ ಗುಣಮಟ್ಟದವರೆಗೆ ಪ್ರತಿಯೊಂದು ಅಂಶವನ್ನೂ ಅದಕ್ಕೆ ಪರಿಗಣಿಸಬೇಕು. ಕೊರೋನಾದಿಂದ ಆದ ಹಿನ್ನಡೆ ಯಾವುದಕ್ಕೂ ನೆಪವಾಗಬಾರದು.

ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೨೦-೦೫-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ