ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೃತ್ಯ ಮಾಡಿ!

ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೃತ್ಯ ಮಾಡಿ!

ಎಲ್ಲೆಡೆ ಕೊರೋನಾ ಮಹಾಮಾರಿ ತಾಂಡವವಾಡುತ್ತಿರುವ ಈ ಸಮಯದಲ್ಲಿ, ಲಾಕ್ ಡೌನ್ ಎಂಬ ಗುಮ್ಮ ಅಮರಿಕೊಂಡಿರುವಾಗ ಮನೆಯಲ್ಲೇ ಕುಳಿತುಕೊಂಡು ಸಿಕ್ಕಿದ್ದು ತಿಂದು, ದೈಹಿಕವಾದ ಶ್ರಮದಾಯಕ ಕೆಲಸ ಯಾವುದೇ ಮಾಡದೇ ಇರುವುದು ಬೊಜ್ಜು ಬೆಳೆಸಲು ದಾರಿಯಾಗುತ್ತದೆ. ವಾಕಿಂಗ್, ಜಾಗಿಂಗ್, ಸೈಕಲ್ ಸವಾರಿ ಎಂದು ಮನೆಯಿಂದ ಹೊರಗೆ ಹೋದರೆ ಪೋಲೀಸರ ಲಾಠಿ ಏಟು ತಿನ್ನಬೇಕಾಗುತ್ತದೆ. ಯಾವ ಆಟವನ್ನೂ ಆಡಲು ಆಗುತ್ತಿಲ್ಲ. ಏಕೆಂದರೆ ಆಟವಾಡಲು ಜನರು ಬೇಕು. ಈ ಸಂದರ್ಭದಲ್ಲಿ ಜನ ಸೇರುವುದು ಅಪಾಯಕಾರಿ. ಹಾಗಾದರೆ ದೈಹಿಕ ಕಸರತ್ತು ಮಾಡಲು ಯಾವ ಸುಲಭೋಪಾಯವಿದೆ?

ನೃತ್ಯವೇ ಇದಕ್ಕೆ ಉತ್ತರ. ನೃತ್ಯ ಸಾಂಪ್ರದಾಯಿಕವಾಗಿರಲಿ, ಪಾಶ್ಚಾತ್ಯ ಶೈಲಿಯೇ ಆಗಿರಲಿ ಅದು ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕವಾಗಿಯೂ ನಿಮಗೆ ಆರಾಮ ನೀಡುತ್ತದೆ. ನಿಮ್ಮ ಟಿವಿ ಅಥವಾ ಮ್ಯೂಜಿಕ್ ಪ್ಲೇಯರ್ ನಲ್ಲಿ ಯಾವುದೇ ಹಾಡು ಹಾಕಿ ನೀವೊಬ್ಬರೇ ಕೋಣೆಯೊಳಗೆ ನೃತ್ಯ ಮಾಡಬಹುದು. ಬೇಕಿದ್ದಲ್ಲಿ ನಿಮ್ಮ ಮನೆಯ ಮಕ್ಕಳನ್ನು ಜೊತೆಗಾರರನ್ನಾಗಿ ಮಾಡಿಕೊಳ್ಳಬಹುದು. ಮಕ್ಕಳಿಗೆ ನೃತ್ಯವೆಂದರೆ ಯಾವಾಗಲೂ ಇಷ್ಟ. ಮನೆಯಲ್ಲೇ ಕುಳಿತು, ಜಂಕ್ ಫುಡ್ಸ್ ತಿಂದು ಅವರೂ ಸೋಮಾರಿಗಳಾಗುತ್ತಿದ್ದಾರೆ. ಸ್ವಲ್ಪ ನೃತ್ಯ ಮಾಡಿದರೆ ಅವರಲ್ಲೂ ಮನೋಲ್ಲಾಸ ಚಿಗುರುತ್ತದೆ. 

ನೃತ್ಯ ಮಾಡಲು ದೇಶ, ವಯಸ್ಸು, ಜಾತಿ, ಭಾಷೆ ಇನ್ನಿತರ ಸಂಗತಿಗಳು ಮುಖ್ಯವಾಗುವುದಿಲ್ಲ. ನಿಮಗೆ ತೋಚಿದ ಹಾಗೆ ಹೆಜ್ಜೆ ಹಾಕಿದರಾಯಿತು. ಮೈ ಬೆವರಬೇಕು. ನಿಮ್ಮಲ್ಲಿರುವ ಕೆಲವು ಕಾಯಿಲೆಗಳ ಬಗ್ಗೆ (ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳು) ಸ್ವಲ್ಪ ಜಾಗರೂಕರಾಗಿದ್ದರೆ ಸಾಕು. ಈ ಬಗ್ಗೆ ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ತೀರಾ ಅತಿಯಾಗಿ ಅಲ್ಲದಿದ್ದರೂ ಸಾಮಾನ್ಯ ನೃತ್ಯ ಪ್ರಕಾರಗಳನ್ನು ಮಾಡಬಹುದು. ಎಲ್ಲರಿಗೂ ಭರತನಾಟ್ಯ ಬಾರದೇ ಇದ್ದರೂ ಕೈಕಾಲು ಅಲ್ಲಾಡಿಸುವಂತಹ ಸಾಮಾನ್ಯ ನೃತ್ಯಗಳನ್ನು ಮಾಡಬಹುದಲ್ಲವೇ?

ನೀವು ಮಾಡುವ ನೃತ್ಯದ ಪ್ರಕಾರ ಯಾವುದೇ ಆಗಿದ್ದರೂ ನಿಮಗೆ ಅದರಿಂದ ದೈಹಿಕ ವ್ಯಾಯಾಮ ದೊರೆಯುವುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಮಾನಸಿಕ ನೆಮ್ಮದಿ, ನಿಮ್ಮ ಮನಸ್ಸಿನ ಒತ್ತಡ ನಿವಾರಣೆಯಾಗುತ್ತದೆ. ನೀವು ನರ್ತಿಸುವ ನೃತ್ಯಕ್ಕೆ ಸೊಗಸಾದ ಹಾಡು ಹಾಕುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಹಾಗೂ ಏಕಾಗ್ರತೆಯೂ ದೊರೆಯುತ್ತದೆ. ಮಕ್ಕಳ ಜೊತೆ ಬೆರೆಯುವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಮಕ್ಕಳಿಗೂ ನಿಮ್ಮ ಈ ನಡೆ ಸಂತಸಕೊಡುವುದರಲ್ಲಿ ಸಂಶಯವಿಲ್ಲ.

ನಾವು ಭಾರತೀಯ ನೃತ್ಯ ಶಾಸ್ತ್ರದ ಬಗ್ಗೆ ಗಮನಿಸಲು ಹೋದರೆ ನಮ್ಮ ದೇಶದ ಇತಿಹಾಸದಲ್ಲಿ ಧರ್ಮಕ್ಕೆ ಪ್ರಥಮ ಸ್ಥಾನ. ನಮ್ಮ ದೇವಸ್ಥಾನ, ಚರ್ಚ್, ಮಸೀದಿಗಳು ಈ ಧರ್ಮದ ಸಂಕೇತ. ಬಹುತೇಕ ಹಳೆಯ ದೇವಾಲಯಗಳ ಶಿಲ್ಪಕಲೆಗಳಲ್ಲಿ ನೃತ್ಯಕ್ಕೆ ಪ್ರಾಶಸ್ತ್ಯ ನೀಡಲಾಗಿರುವುದನ್ನು ನೀವು ಗಮನಿಸಬಹುದು. ಮಂದಿರದಲ್ಲಿರುವ ಗೋಡೆಗಳಲ್ಲಿ ಕಣ್ಣಿಗೆ ಕಟ್ಟುವ ಅಂಶವೆಂದರೆ ದೇವ ದೇವತಾದಿಗಳ ನೃತ್ಯ ಭಂಗಿಗಳು. ಈ ಮೂರ್ತಿಗಳು ಜೀವಂತವಾಗಿ ಕಾಣುತ್ತಿರುವ ಪ್ರಮುಖ ಅಂಶವೇ ನೃತ್ಯ. ಈ ಕಲೆಯ ಪ್ರಮುಖ ಉದ್ದೇಶ ಆತ್ಮ ಸಾಕ್ಷಾತ್ಕಾರ. 

ನೃತ್ಯ ಕಲೆಯನ್ನು ಬ್ರಹ್ಮ ದೇವನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ನಾಲ್ಕು ವೇದಗಳ ಜನಕನಾದ ಬ್ರಹ್ಮ ದೇವನು ಐದನೆಯದಾದ ನಾಟ್ಯ ವೇದವನ್ನು ಸೃಷ್ಟಿಸಿ, ಅದನ್ನು ಭರತ ಮುನಿಗೆ ಅನುಗ್ರಹಿಸಿದನೆಂದು ಪ್ರತೀತಿ ಇದೆ. ಭರತನು ಈ ಶಾಸ್ತ್ರವನ್ನು ತಮ್ಮ ನೂರು ಮಂದಿ ಮಕ್ಕಳಿಗೆ ಉಪದೇಶ ಮಾಡಿ, ಅವರಿಂದ ದೇವರಾಜ ಇಂದ್ರನ ಧ್ವಜೋತ್ಸವ ಕಾಲದಲ್ಲಿ ಪ್ರದರ್ಶಿಸಿದ. ಆ ನಂತರ ಅದನ್ನು ಕೈಲಾಸದಲ್ಲಿ ಶಿವ ಪಾರ್ವತಿಯರ ಸಮ್ಮುಖದಲ್ಲಿ ಪ್ರದರ್ಶಿಸಿದಾಗ, ಅದರಿಂದ ಸಂತುಷ್ಟಗೊಂಡ ಶಿವನು, ಭರತನಿಗೆ ಈ ನೃತ್ಯವನ್ನು ಇನ್ನಷ್ಟು ಉತ್ತಮವಾಗಿ ಮಾಡಬೇಕು ಎಂದು ಉಪದೇಶ ಮಾಡಿದನು. ಅದರಂತೆ ಶಿವನ ನಂದಿಕೇಶ್ವರನಿಂದ ಪ್ರೇರಣೆ ಪಡೆದು ‘ತಾಂಡವ; ನೃತ್ಯವನ್ನೂ, ಪಾರ್ವತಿಯಿಂದ ‘ಲಾಸ್ಯ' ನೃತ್ಯವನ್ನೂ ಕಲಿಯುತ್ತಾನೆ. ಹೀಗೆ ದೇವಾದಿದೇವತೆಗಳಿಂದ ಪುರಸ್ಕರಿಸಲ್ಪಟ್ಟ ನೃತ್ಯ ಕಲೆಗೆ ದೇಶದಲ್ಲಿ ವಿಶಿಷ್ಟ ಸ್ಥಾನವಿರಲೇ ಬೇಕಲ್ಲವೇ? 

ನೃತ್ಯದಲ್ಲಿ ನವರಸಗಳಿಗೆ ವಿಶೇಷ ಸ್ಥಾನವಿದೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭಿತ್ಸ, ಅದ್ಭುತ ಹಾಗೂ ಶಾಂತ ರಸಗಳು. ಇವುಗಳ ಬಳಕೆಯಿಂದ ನೀವು ಮಾಡುವ ನೃತ್ಯದ ಪ್ರಾಧಾನ್ಯತೆ ಹೆಚ್ಚುತ್ತದೆ. ಭಾರತದಲ್ಲಿ ಹಲವಾರು ಸಾಂಪ್ರದಾಯಿಕ ನೃತ್ಯ ಶೈಲಿಗಳಿವೆ. ಅವುಗಳಲ್ಲಿ ಕೆಲವು ಕೂಚಿಪುಡಿ, ಕಥಕ್ಕಳಿ, ಭರತನಾಟ್ಯ, ಮೋಹಿನಿ ಅಟ್ಟಂ, ಒಡಿಸ್ಸಿ, ಮಣಿಪುರಿ, ಕಥಕ್ ಇತ್ಯಾದಿ. ಇವುಗಳಲ್ಲದೇ ಹಲವಾರು ಜಾನಪದ ನೃತ್ಯಪ್ರಕಾರಗಳೂ ಇವೆ. ಕರಾವಳಿಯ ಯಕ್ಷಗಾನದಿಂದ ಹಿಡಿದು, ಅಸ್ಸಾಮಿನ ಸಕ್ಕಿರಿಯಾ, ಕರಾವಳಿಯ ಭೂತ ನೃತ್ಯಗಳು, ತಮಿಳುನಾಡಿನ ಕಾವಡಿ, ನಾಗಾಲ್ಯಾಂಡ್ ಹಾಗೂ ಕರಾವಳಿಯ ನಾಗ ನೃತ್ಯಗಳು, ಪಂಜಾಬಿನ ಭಾಂಗ್ರಾ, ಗುಜರಾತಿನ ಗರ್ಬಾ, ಮಹಾರಾಷ್ಟ್ರದ ತಮಾಶಾ ಮುಂತಾದ ಅನೇಕ ಪ್ರಕಾರಗಳು ಇವೆ. ಆದಿವಾಸಿಗಳಲ್ಲೂ ಹಲವಾರು ನೃತ್ಯ ವಿಧಾನಗಳು ಇವೆ. ಒಳ್ಳೆಯ ಬೇಟೆ ದೊರೆತಾಗ ಮಾಡುವ ಬೇಟೆಯ ನೃತ್ಯಗಳು ಬಹಳ ಖ್ಯಾತಿ ಪಡೆದಿವೆ.

ಈಗಂತೂ ಬ್ರೇಕ್ ಡ್ಯಾನ್ಸ್, ಬ್ಯಾಲೆಟ್ ಮುಂತಾದ ನೃತ್ಯ ಪ್ರಕಾರಗಳು ಬಹಳ ಪ್ರಚಲಿತದಲ್ಲಿವೆ. ಭಾರತೀಯ ಸಿನೆಮಾರಂಗದಲ್ಲಿ ನೃತ್ಯವಿಲ್ಲದೇ ಯಾವ ಸಿನೆಮಾ ಸಹ ಸಂಪೂರ್ಣವೆನಿಸುವುದಿಲ್ಲ. ಚಲನ ಚಿತ್ರದಲ್ಲಿ ನಟಿಸುವ ಕಲಾವಿದರೂ ಉತ್ತಮ ನೃತ್ಯಗಾರರಾಗಲು ಶ್ರಮವಹಿಸುತ್ತಾರೆ. ಹೀಗೆ ನೃತ್ಯವೆಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿದೆ.

ಮೊನ್ನೆ ಎಪ್ರಿಲ್ ೨೯ ವಿಶ್ವ ನೃತ್ಯ ದಿನ. ಹಾಗಾಗಿ ಇಷ್ಟೆಲ್ಲಾ ನೆನಪಾಯಿತು. ಆಧುನಿಕ ಬ್ಯಾಲೆಟ್ ನೃತ್ಯ ಪ್ರಕಾರವನ್ನು ಶೋಧಿಸಿದ ಜೀನ್ ಜೋರ್ಜೆಸ್ ನೊವೆರೆ (೧೭೨೭-೧೮೧೦) ಇವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಎಪ್ರಿಲ್ ೨೯ ನ್ನು ಪ್ರತೀ ವರ್ಷ ನೃತ್ಯ ದಿನ ಎಂದು ಆಚರಿಸಲಾಗುತ್ತದೆ. ಇದನ್ನು ಯುನೆಸ್ಕೋ ಸಹ ಅನುಮೋದಿಸಿದೆ. 

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು