ಉತ್ತಮ ಪೊಟ್ಯಾಶ್ ಸತ್ವದ ಗಿಡ - ಲಂಟಾನ

ಉತ್ತಮ ಪೊಟ್ಯಾಶ್ ಸತ್ವದ ಗಿಡ - ಲಂಟಾನ

ಲಂಟಾನ ಸಸ್ಯವನ್ನು ಸಾಮಾನ್ಯವಾಗಿ ನಾವೆಲ್ಲಾ ಹೂದೋಟದಲ್ಲಿ ನೋಡಿರುತ್ತೇವೆ. ಈ ಸಸ್ಯದಲ್ಲಿ ಮೂಡುವ ಪುಟ್ಟ ಪುಟ್ಟ ವರ್ಣರಂಜಿತ ಹೂವುಗಳು ಬಹಳ ಆಕರ್ಷಣೀಯವಾಗಿರುತ್ತವೆ. ಹಲವಾರು ಬಣ್ಣಗಳಲ್ಲಿ ಲಂಟಾನ ಹೂವುಗಳು ನಮ್ಮ ಕಣ್ಮನಗಳನ್ನು ಸೆಳೆಯುತ್ತವೆ. ಇದು ಮೂಲತಃ ಅಮೇರಿಕಾದ ಉಷ್ಣವಲಯದಲ್ಲಿ ಬೆಳೆಯುವ ಸಸ್ಯ. ಆದರೆ ಈಗ ಪ್ರಪಂಚದ ಸುಮಾರು ನೂರಕ್ಕೂ ಹೆಚ್ಚು ದೇಶಗಳಲ್ಲಿ ಲಂಟಾನ ಸಸ್ಯವನ್ನು ಬೆಳೆಯಲಾಗುತ್ತಿದೆ. ಬಹುತೇಕ ಮಂದಿ ತಮ್ಮ ಉದ್ಯಾನವನದ ಶೋಭೆಯನ್ನು ಹೆಚ್ಚಿಸಲು ಬೆಳೆಯುತ್ತಾರೆ. 

ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು  ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಪೋಷಕಾಂಶಗಳ ಅಸಮತೋಲನ ಉಂಟಾಗುವುದು ಕಂಡು ಬರುತ್ತದೆ.

ಈ ಅಸಮತೋಲನವನ್ನು ನಿವಾರಿಸಲು ಬಳಕೆ ಮಾಡುವ ಒಳಸುರಿಗಳಲ್ಲಿ ಯಾವ ಸತ್ವ ಅಡಗಿದೆ ಎಂಬುದನ್ನು ಅರಿತು ಅದನ್ನು ಬಳಕೆ ಮಾಡಬೇಕು. ನಮ್ಮ ಸುತ್ತಮುತ್ತ ಇರುವ ವೈವಿಧ್ಯಮಯ ಸೊಪ್ಪು, ಸೌದೆಗಳಲ್ಲಿ ಒಂದೊಂದರಲ್ಲಿ ಒಂದೊಂದು  ಪೋಷಕಾಂಶ, ಕೀಟ ವಿಕರ್ಷಕ ಗುಣ, ರೋಗ ನಿರೋಧಕ ಗುಣ ಇರುತ್ತದೆ. ಇವುಗಳ ಬಗ್ಗೆ ಕೆಲವನ್ನು ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ರಾಷ್ಟ್ರೀಯ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಪರೀಕ್ಷೆ ಮಾಡಿದ ವರದಿ ಇದೆ. ಅದನ್ನು ತಜ್ಞರಿಂದ ತಿಳಿದು ಕಾಂಪೋಸ್ಟು ಅಥವಾ ಹಸುರೆಲೆ ಸೊಪ್ಪಾಗಿ ಬೆಳೆಗಳಿಗೆ ಬಳಕೆ ಮಾಡುವುದು ಸೂಕ್ತ.

ಲಂಟಾನ (Lantana Indica )ಸೊಪ್ಪಿನಲ್ಲಿ ಪೊಟ್ಯಾಶಿಯಂ ಸತ್ವ ಉತ್ತಮವಾಗಿದೆ. ಚಿಕ್ಕಮಗಳೂರು, ಹಾಸನ, ಧಾರವಾಡ, ಕೋಲಾರ, ಮೈಸೂರು, ತುಮಕೂರು, ಬೀದರ್ ಮುಂತಾದೆಡೆ ಇದು ಹುಲುಸಾಗಿ ಬೆಳೆಯುತ್ತದೆ. ಅದೇ ರೀತಿಯಲ್ಲಿ ನೆಕ್ಕಿ ಸೊಪ್ಪಿನಲ್ಲಿ (Vitex Negundo ) ಕೀಟ ವಿಕರ್ಷಕ ಶಕ್ತಿ ಇದೆ. ಕಾಸರಕನ ಸೊಪ್ಪಿನಲ್ಲಿ (Strychnos nux Vomica) ಸತು, ಮೆಗ್ನೀಶಿಯಂ ಸತ್ವ ಚೆನ್ನಾಗಿದೆ. ಅಲ್ಲದೆ ಬೆಳೆಗಳಿಗೆ ಉಂಟಾಗುವ ಜಂತು ಹುಳ (ನಮಟೋಡು) ತೊಂದರೆಯನ್ನೂ ಕಡಿಮೆ ಮಾಡುತ್ತದೆ. ಗ್ಲೆರಿಸೀಡಿಯಾ, ಕ್ರೊಟೋಲೋರಿಯಾ ಸೊಪ್ಪಿನಲ್ಲಿ ಸಾರಜನಕ ಅಂಶ ಹೇರಳವಾಗಿರುತ್ತದೆ. ನೆಕ್ಕಿಗಿಡದಲ್ಲಿ ರಂಜಕದ ಅಂಶ ಉತ್ತಮವಾಗಿರುತ್ತದೆ. ಬೆಳೆಗಳಿಗೆ ಹಸುರೆಲೆ ಸೊಪ್ಪುಗಳನ್ನು ಬಳಕೆ ಮಾಡುವಾಗ ಬೇರೆ ಬೇರೆ ಸತ್ವಗಳನ್ನು ಹೊಂದಿರುವಂತದ್ದನ್ನು ಮಿಶ್ರಣ ಮಾಡಿ ಬಳಕೆ ಮಾಡಿದರೆ ಪೋಷಕಾಂಶದ ಸಮತೋಲನಕ್ಕೆ ಸಹಾಯಕವಾಗುತ್ತದೆ.

ನಾವು ಗೊಬ್ಬರವಾಗಿ ಹಸಿರುಸೊಪ್ಪುಗಳನ್ನು ನೀಡುವಾಗ ಒಂದು ಗಿಡದ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಬೇಕಾಗುತ್ತದೆ ಎಂಬ ವಿಷಯವನ್ನು ಮನದಲ್ಲಿಟ್ಟುಕೊಂಡು ಬಳಕೆ ಮಾಡಬೇಕು. ನೈಸರ್ಗಿಕವಾಗಿ ಸಿಗುವ ಗೊಬ್ಬರಗಳನ್ನು ಬಿಟ್ಟು ರಸಾಯನಿಕ ಗೊಬ್ಬರದ ಹಿಂದೆ ಓಡುವ ಅಗತ್ಯವಿರುವುದಿಲ್ಲ. ಹಲವಾರು ಕೀಟವನ್ನು ವಿಕರ್ಷಣೆ ಮಾಡಲು ಪ್ರಕೃತಿಯೇ ವಿವಿಧ ರೀತಿಯ ಸಸ್ಯಗಳನ್ನು ಸೃಷ್ಟಿಸಿದೆ. ಇವುಗಳ ತಿಳುವಳಿಕೆಯನ್ನು ಬೆಳೆಸಿಕೊಂಡರೆ ಕೀಟ ನಾಶಕಗಳ ಬಳಕೆಯನ್ನೂ ಕಮ್ಮಿ ಮಾಡಬಹುದಾಗಿದೆ. 

ಚಿತ್ರ ಕೃಪೆ: ೧. ಲಂಟಾನ ಸಸ್ಯ (ಚಿತ್ರ: ಅಂತರ್ಜಾಲ ತಾಣ)

೨. ನೆಕ್ಕಿ ಸೊಪ್ಪು (ಚಿತ್ರ: ರಾಧಾಕೃಷ್ಣ ಹೊಳ್ಳ)