ಉತ್ತಮ ಬೇಡಿಕೆ ಪಡೆಯುತ್ತಿರುವ ಪೇರಳೆ ಹಣ್ಣು (ಭಾಗ ೧)

ಉತ್ತಮ ಬೇಡಿಕೆ ಪಡೆಯುತ್ತಿರುವ ಪೇರಳೆ ಹಣ್ಣು (ಭಾಗ ೧)

ಒಂದು ಕಾಲದಲ್ಲಿ ಪೇರಳೆ (ಸೀಬೆ) ಹಣ್ಣು ಬಡವರು ತಿನ್ನುವ ಹಣ್ಣು ಎಂಬ ಹಣೆಪಟ್ಟಿಯನ್ನು ಪಡೆದಿತ್ತು. ಶ್ರೀಮಂತರು ಸೇಬು, ದ್ರಾಕ್ಷಿ ಮುಂತಾದ ಒಳ್ಳೆಯ ಬೆಲೆಯ ಹಣ್ಣುಗಳನ್ನು ಬಳಸಿದರೆ ಬಡವರು ಪೇರಳೆಯಂತಹ ಹಣ್ಣು ತಿನ್ನುತ್ತಿದ್ದರು. ಈಗ ಪರಿಸ್ಥಿತಿ ತಿರುವು ಮುರುವಾಗಿದೆ. ಇದರ ಪೌಷ್ಟಿಕ ಗುಣಗಳನ್ನು ಅರಿತು ಜನ ಸೇಬಿಗಿಂತಲೂ ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಈಗ ಸೀಬೆ, ಬಡವರೊಂದಿಗೆ ಶ್ರೀಮಂತರಿಗೂ ಪ್ರಿಯವಾದ ಹಣ್ಣಾಗಿದೆ. 

ಪೇರಳೆ ಒಂದು ಸ್ವಾದಿಷ್ಟವಾದ, ಸಮಶೀತೋಷ್ಣ ವಲಯದ ಅತೀ ಪುರಾತನ ಹಣ್ಣಿನ ಬೆಳೆಯಾಗಿದೆ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಇದರ ಬೆಳೆ ಇದ್ದು, ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದನ್ನು ಉತ್ತಮವಾಗಿ ಬೆಳೆಸಬಹುದು. ಈ ಹಣ್ಣಿನಲ್ಲಿ “ಸಿ” ಜೀವಸತ್ವದ ಪ್ರಮಾಣ ಹೆಚ್ಚಾಗಿದ್ದು ಕ್ಯಾಲ್ಸಿಯಂ ಮತ್ತು ರಂಜಕ ಮುಂತಾದ ಅಗತ್ಯ ಖನಿಜಾಂಶಗಳು ಕೂಡ ಇವೆ. ಉತ್ತರ, ದಕ್ಷಿಣ ಕರ್ನಾಟಕದ ಬಯಲು ಸೀಮೆ, ಅರೆ ಮಲೆನಾಡಿಲ್ಲಿ ಈ ಬೆಳೆ ಬಹಳ ಚೆನ್ನಾಗಿ ಬರುತ್ತದೆ. ಹಾಗೆಂದು ಮಲೆನಾಡು, ಕರಾವಳಿಯಲ್ಲೂ ಬೆಳೆ ಚೆನ್ನಾಗಿಯೇ ಬರುತ್ತದೆ. ಇದಕ್ಕೆ ಇಲ್ಲಿಯ ಸ್ಥಳೀಯ ತಳಿಗಳು ಉದಾಹರಣೆ. ಆದರೆ ವರ್ಷದಲ್ಲಿ ೪-೫ ತಿಂಗಳು ಮಳೆ ಬರುವ ಕಾರಣ ಆಂತ್ರಾಕ್ನೋಸ್ ರೋಗ, ಸಸಿ ಕೊಳೆ, ಕಾಯಿ ಕೊಳೆ ರೋಗಗಳು ಬರುತ್ತವೆ. ಮಳೆಗಾಲದ ಹಣ್ಣಿನಲ್ಲಿ ಸಿಹಿ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ. ಕಾಪಿಡುವ ಶಕ್ತಿ ಕಡಿಮೆ ಇರುತ್ತದೆ.  ಮಳೆಗಾಲದ ನಂತರದ ಕಾಲದಲ್ಲಿ ಬರುವ ಹಣ್ಣುಗಳು ಉತ್ತಮ ರುಚಿಯನ್ನು  ಹೊಂದಿರುತ್ತವೆ. ಹಿಂದೆ ಪೇರಳೆ ಹಣ್ಣನ್ನು ಬರೇ ತಿನ್ನಲು ಮಾತ್ರ ಬಳಕೆ ಮಾಡುತ್ತಿದ್ದರು. ಈಗ ಹಾಗಿಲ್ಲ. ಪೇರಳೆಯ ರಸ ತೆಗೆದು ನೆಕ್ಟರ್ ತಯಾರಿಸಿ (ಮಾವಿನ  ರಸದಂತೆ) ರಫ್ತು ಮಾಡುವ ಉದ್ದಿಮೆಗಳು ನಮ್ಮಲ್ಲಿವೆ. ವಿದೇಶಗಳಲ್ಲಿ ಪೇರಳೆಯ ರಸಕ್ಕೆ ಬಾರೀ ಬೇಡಿಕೆಯೂ ಇದೆ. ದೇಶದಲ್ಲೂ ಈ ಹಣ್ಣಿನ ರಸದ ಬಳಕೆ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಬಹುತೇಕ ಹಣ್ಣುಗಳು ಈ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ವಿಸ್ತ್ರತ ಬೇಡಿಕೆ ಕಾರಣ ಈಗ ಸೀಬೆ ಹಣ್ಣಿನ ಬೆಲೆ ಕಿಲೋಗೆ ೮೦ ರಿಂದ ೧೨೦ ತನಕ ಇರುತ್ತದೆ. ಪೇರಳೆ ಹಣ್ಣನ್ನು ಸಂಸ್ಕರಿಸಿ, ಜಾಮ್, ಜೆಲ್ಲಿ ತಯಾರಿಸುತ್ತಾರೆ.

ನೀರು ಬಸಿಯಲು ಅನುಕೂಲ ಇರುವ ಮರಳು ಮಿಶ್ರಿತ ಮಣ್ಣು ಈ ಬೆಳೆಗೆ ಉತ್ತಮ. ಹಾಗೆಂದು ಕಪ್ಪು ಮಣ್ಣಿನಲ್ಲೂ ಬೆಳೆಯಬಹುದು. ಈ ಬೆಳೆಗೆ ಉತ್ತಮ ಫಲವತ್ತಾದ ಮಣ್ಣಿನ ಅವಶ್ಯಕತೆ ಇಲ್ಲದ ಕಾರಣ ಇಳಿಜಾರು, ಖುಷ್ಕಿ ಭೂಮಿಯಲ್ಲಿ ಬೆಳೆಸಬಹುದು. ಮಳೆ ಬಂದಾಗ ಬುಡದಲ್ಲಿ ನೀರು ನಿಲ್ಲದಂತೆ, ಬಸಿಯಲು ಅನುಕೂಲ ಇರುವ ಮಣ್ಣಾಗಿದ್ದರೆ ಸಾಕು. ಯಾವುದೇ ತರಹದ ಮಣ್ಣಿನಲ್ಲಿ ಬೆಳೆಯುತ್ತದೆ. ಕೆಂಪುಗೋಡು ಮಣ್ಣು ಹೆಚ್ಚು ಸೂಕ್ತ.

ಹವಾಗುಣ ಮತ್ತು ನಾಟಿ ಕಾಲ : ಒಣ ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುತ್ತದೆ. ಹೆಚ್ಚಾಗಿ ಮಳೆ ಬರುವ ಪ್ರದೇಶದಲ್ಲಿ ಗಿಡದ ಬೆಳವಣಿಗೆ ಉತ್ತಮವಾಗಿದ್ದು ಹಣ್ಣುಗಳ ಗುಣ ಉತ್ತಮವಾಗಿರುವುದಿಲ್ಲ. ಜೂನ್- ಜುಲೈ ತಿಂಗಳಿಗೆ ನಾಟಿಗೆ ಯೋಗ್ಯ ಆದರೂ ಹನಿ ನೀರಾವರಿ ಮಾಡಿ ಬೆಳೆಸುವಾಗ ವರ್ಷದ ಯಾವುದೇ ಸಮಯದಲ್ಲೂ ನಾಟಿ ಮಾಡಬಹುದು. ತಳಿಗಳು : ಅಲಹಾಬಾದ್ ಸಫೇದ : ಇದರ ಹಣ್ಣುಗಳು ಗುಂಡಾಗಿದ್ದು ಅವು ನುಣುಪಾದ ಸಿಪ್ಪೆ, ಬಿಳಿ ತಿರುಳು ಮತ್ತು ಕಡಿಮೆ ಬೀಜಗಳನ್ನು ಹೊಂದಿವೆ. (ಚಿತ್ರ ೧)

ಸರ್ದಾರ (ಲಕ್ನೋ-೪೯) : ತಳಿಯ ಗಿಡಗಳು ಗಿಡ್ಡದಾಗಿ ಹರಡಿ ಬೆಳೆಯುತ್ತವೆ. ಮತ್ತು ಹೆಚ್ಚಿನ ಇಳುವರಿ ಕೊಡುತ್ತವೆ. ಹಣ್ಣಿನ ಗಾತ್ರ ದೊಡ್ಡದಿದ್ದು ಗುಂಡನೆಯ ಆಕಾರ, ತಿಳಿ ಹಸಿರುವ ಬಣ್ಣ, ಬಿಳಿ ತಿರುಳು ಮತ್ತು ಕಡಿಮೆ ಹಾಗೂ ಮೃದುವಾದ ಬೀಜಗಳನ್ನು ಹೊಂದಿರುತ್ತದೆ. (ಚಿತ್ರ ೨)

ಅರ್ಕಾ ಮೃದುಲ : ಇದು ಸೀಡ್ಲೆಸ್ (ಬೀಜ ರಹಿತ) ಅಲಹಾಬಾದ್ ಸಫೇದ್ ತಳಿಗಳಿಂದ ಪಡೆದ ಸಂಕರಣ ತಳಿ. ಮಧ್ಯಮ ಎತ್ತರವಾಗಿದ್ದು, ಹೆಚ್ಚು ಫಸಲು ನೀಡುವಂತಹ ತಳಿ. ಹಣ್ಣುಗಳು ಮಧ್ಯಮ ಗಾತ್ರವಿದ್ದು, ತಿರುಳು ಬಿಳುಪು ಮತ್ತು ಮೃದುವಾದ ಬೀಜಗಳನ್ನು ಹೊಂದಿದೆ. ಹಣ್ಣುಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದು ಗುಣಮಟ್ಟ ಉತ್ತಮವೆನಿಸಿದೆ. ಕೊಯ್ಲಿನ ನಂತರದಲ್ಲಿ ಹಣ್ಣು ಬೇಗ ಹಾಳಾಗುವುದಿಲ್ಲ. (ಚಿತ್ರ ೩)

ನವಲೂರು : ಇದು ಧಾರವಾಡ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾದ ತಳಿ. ಹಣ್ಣು ರುಚಿಕರವಾಗಿರುತ್ತದೆ. 

ವಿ ಎನ್ ಆರ್:  ಈ ತಳಿಯ ಹಣ್ಣುಗಳು  ಸುಮಾರು ೨೦೦ ಗ್ರಾಂ ಗೂ ಹೆಚ್ಚಿನ ತೂಕವನ್ನು ಹೊಂದಿರುತ್ತವೆ. ಇದು ಕೆನೆ ಬಣ್ಣದಲ್ಲಿದ್ದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಈ ತಳಿ ಇತ್ತೀಚೆಗೆ ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ. ನಾಟಿ ಮಾಡಿದ ೬ ತಿಂಗಳಲ್ಲಿ ಹೂ ಬಿಟ್ಟು ಮೊದಲ ವರ್ಷವೇ ಸಸಿಯಲ್ಲಿ ೫-೧೦ ಕಾಯಿ ದೊರೆಯುತ್ತದೆ. (ಚಿತ್ರ ೪)

ಅರ್ಕ : ಇದು ಕೆನ್ನೆತ್ತರು ಬಣ್ಣದ  ಸಂಕರಣ ತಳಿಯಾಗಿದೆ. ಇದರ ಇಳುವರಿ ಅಲಹಾಬಾದ್ ಸಫೇದ್, ಲಕ್ನೋ ತಳಿಗಳಷ್ಟು ಇಲ್ಲದಿದ್ದರೂ, ನಾಟಿ ಮಾಡಿದ ಎರಡನೇ ವರ್ಷವೇ ಫಸಲನ್ನು  ಕೊಡುತ್ತದೆ. ಹಣ್ಣುಗಳು ಹೆಚ್ಚಾಗಿ ಕ್ಯಾನಿಂಗ್ ಉದ್ದೇಶಕ್ಕೆ  ಬಳಕೆಯಾಗುತ್ತದೆ. ನೈಸರ್ಗಿಕ ಕೆನ್ನೆತ್ತರು ಬಣ್ಣದಾದ ಕಾರಣ ಉತ್ತಮ ಬೇಡಿಕೆ  ಇದೆ. ಆದರೆ ವಾಣಿಜ್ಯ ಉದ್ದೇಶದ ಬೆಳೆಗೆ  ಸೂಕ್ತವಲ್ಲ. ಕೊಳ್ಳುವ ಕರಾರಿನ ಮೇಲೆ  ಬೆಳೆಸುವುದಾದರೆ ಉತ್ತಮ ತಳಿ.

ಸೀಡ್ ಲೆಸ್ ಸೀಬೆ: ಪೇರಳೆಯ ಸ್ಥಳೀಯ ತಳಿಗಳಲ್ಲಿ  ಬೀಜದ ಗಾತ್ರ ಮತ್ತು ಗಟ್ಟಿತನ ತಿನ್ನುವವರಿಗೆ ಸ್ವಲ್ಪ ಕಿರಿ ಕಿರಿ ಉಂಟು ಮಾಡುತ್ತದೆ. ಹಲ್ಲಿಗೆ ಸಿಕ್ಕಿಕೊಳ್ಳುವಿಕೆ, ಜಗಿಯುವ ಕಷ್ಟಗಳಿಗಾಗಿ ತಳಿ ಸುಧಾರಣೆ ಮಾಡುವಾಗ ಬೀಜಗಳು ಕಡಿಮೆಯಾಗಿ ಬೀಜದಗಾತ್ರ ಸಣ್ಣದಾಗಿರುವಂತೆ ಮಾಡಲಾಯಿತು. ಹೀಗೆ ಬೀಜಗಳು ತೀರಾ ಸಣ್ಣದಾಗಿ ತಿನ್ನುವಾಗ ಯಾವುದೇ ಕಿರಿ ಕಿರು ಉಂಟು ಮಾಡದೇ ಇರುವ ಪೇರಳೆ ತಳಿ ಸೀಡ್ ಲೆಸ್ ಪೇರಳೆ. ಇದು ಒಂದು ಮ್ಯೂಟೆಂಟ್ ( ಪರಿವರ್ತಿತ) ತಳಿಯಾಗಿದೆ. ಈ ಹಣ್ಣಿನ ರುಚಿ ಉತ್ತಮವಾಗಿದೆ. ಕಾಪಿಡುವ ಶಕ್ತಿಯೂ ಉತ್ತಮವಾಗಿದೆ. ಇಳುವರಿಯೂ ಉತ್ತಮವಾಗಿದೆ.

ಪೇರಳೆಯಲ್ಲಿ ಕೆಲವು ಹೈಬ್ರೀಡ್ ತಳಿಗಳನ್ನೂ ಸಹ ಅಭಿವೃದ್ದಿಪಡಿಸಲಾಗಿದ್ದು, ಆದರೆ ಅವು ಹೆಚ್ಚು ಜನಪ್ರಿಯವಾಗಿಲ್ಲ. ಒಟ್ಟಾರೆಯಾಗಿ ನಮ್ಮಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಹೆಸರಾಂತ ಪೇರಳೆ ತಳಿಗಳಿದ್ದು, ಉತ್ತರ ಪ್ರದೇಶ, ಬೆಂಗಳೂರು, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಬೆಳೆಸಲ್ಪಡುತ್ತಿದೆ. 

ಸಸಿಗಳು: ಪೇರಳೆಯನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಸುವಾಗ ಬೀಜದ ಸಸಿಯನ್ನು ಬಳಕೆ ಮಾಡಬಾರದು. ಅದರ ಬದಲಿಗೆ ಈಗ ಕಸಿ ಮಾಡಲ್ಪಟ್ಟ ಸಸಿಗಳು ಲಭ್ಯವಿದೆ. ಕಸಿ ಮಾಡಿದ ಸಸಿಗಳು ತ್ವರಿತವಾಗಿ ಇಳುವರು ಕೊಡುತ್ತವೆ. ತಳಿ ನಿಖರತೆಯೂ ಇರುತ್ತದೆ. ಪೇರಳೆಯಲ್ಲಿ ಎರಡು ಕ್ರಮದ ಕಸಿಯನ್ನು ಮಾಡಲಾಗುತ್ತದೆ. ಎರಡೂ ವಿಧಾನದ ಕಸಿಗಳೂ ಹೆಚ್ಚಿನ ಯಶಸ್ಸನ್ನು ಕೊಡುತ್ತವೆ.

ಗೂಟಿ  ಕಸಿ ಗಿಡಗಳು: ಇವು ಸಸಿಗಳ ಪೆನ್ಸಿಲ್ ಗಾತ್ರದ ಗೆಲ್ಲುಗಳ ಸಿಪ್ಪೆ ತೆಗೆದು ಅದರಲ್ಲಿ ಬೇರು ಬರಿಸಿ ಪಡೆಯಲಾದ ಸಸಿಗಳು. ಬಹುತೇಕ ಹೆಚ್ಚಿನವರು ಈ ಕ್ರಮದಲ್ಲೇ ಸಸ್ಯಾಭಿವೃದ್ದಿ ಮಾಡುತ್ತಾರೆ.

ಸಾಮಿಪ್ಯ ಕಸಿ: ಆಂದ್ರ ಪ್ರದೇಶದ ರಾಜಮುಂಡ್ರಿಯಲ್ಲಿ ಹಲವಾರು ನರ್ಸರಿಗಳಿದ್ದು, ಇಲ್ಲಿ ಪೇರಳೆಯನ್ನು ಸಾಮಿಪ್ಯ ಕಸಿಯ ಮೂಲಕ ಸಸ್ಯಾಭಿವೃದ್ದಿ ಮಾಡಿರುತ್ತಾರೆ. ಈ ಸಸ್ಯಗಳು ಗೂಟಿ ಗಿಡದಂತೆ ಸಣ್ಣದಲ್ಲ. ಸ್ವಲ್ಪ ದೊಡ್ಡದಾಗಿರುತ್ತವೆ. ಇದರ ತೊಂದರೆ ಎಂದರೆ ರೂಟ್ ಸ್ಟಾಕ್‌ನಲ್ಲಿ ಚಿಗುರುಗಳು ಬರುತ್ತಲೇ ಇರುತ್ತವೆ, ಅದನ್ನು ಆಗಾಗ ತೆಗೆಯುತ್ತಿರಬೇಕಾಗುತ್ತದೆ. ಇಲ್ಲವಾದರೆ ಮುಖ್ಯ ಸಸಿಗೆ ಆಹಾರ ಸರಬರಾಜು ಕಡಿಮೆಯಾಗಿ ಗಿಡ ಸೊರಗುತ್ತದೆ. ಇಳುವರಿ ನಾಟಿ ಮಾಡಿದ ೬ ತಿಂಗಳಿಗೇ ಪ್ರಾರಂಭವಾಗುತ್ತದೆ. ಈ ಸಸ್ಯಕ್ಕೆ ಎರಡು ವರ್ಷದ ತನಕ ಆಧಾರ ಬೇಕಾಗುತ್ತದೆ.

ಮೃದು ಕಾಂಡ ಕಸಿ: ಈ ವಿಧಾನದಲ್ಲಿ ಕಸಿ ಮಾಡುವುದು ಕಡಿಮೆ. ಆದರೂ ಕಸಿ ಮಾಡಬಹುದು ಕಣ್ಣು ಕಸಿಯೂ ಸಹ ಪೇರಳೆಯ ಸಸ್ಯಾಭಿವೃದ್ದಿಗೆ ಹೊಂದಿಕೊಳ್ಳುತ್ತದೆ.

ಅಂತರ: ಮುಖ್ಯ ಬೆಳೆಯಾಗಿ ಬೆಳೆಸುವಾಗ ಸಾಂಪ್ರದಾಯಿಕ ಅಂತರ , ಹೆಚ್ಚು ಸಾಂದ್ರ ಬೇಸಾಯ.ಅತೀ ಹೆಚ್ಚು ಸಾಂದ್ರ ಬೇಸಾಯ ವಿಧಾನದಲ್ಲಿ  ಈ ಬೆಳೆಯನ್ನು ಬೆಳೆಸಬಹುದು. 

ನಾಟಿ ಕ್ರಮ: ನಾಟಿ ಮಾಡುವಾಗ ಸುಮಾರು ೨ ಅಡಿ ಆಳ ಅಗಲದ ಹೊಂಡವನ್ನು ಮಾಡಿಕೊಂಡು ಅದರಲ್ಲಿ ¾  ಭಾಗವನ್ನು ಫಲವತ್ತಾದ ಮೇಲು ಮಣ್ಣು ಹಾಗೂ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ನಾಟಿ ಮಾಡಬೇಕು. ನಾಟಿ ಮಾಡುವಾಗ ಒಂದು ಗಟ್ಟಿ ಕೋಲನ್ನು ಹುಗಿದು ಸಸಿ ಅಡ್ಡ ಬೀಳದಂತೆ ಕಟ್ಟಬೇಕು. ಪ್ರತಿ ಗಿಡಕ್ಕೆ  ೨೫ ಕಿಲೋ ಸಾವಯವ ಗೊಬ್ಬರ, ಪ್ರತೀ ವರ್ಷ ೨೫ ಕಿಲೋ ಸಾವಯವ ಗೊಬ್ಬರವನ್ನು ಕೊಡಬೇಕು. ರಾಸಾಯನಿಕ ಗೊಬ್ಬರಗಳನ್ನು ಗಿಡದ ವಯಸ್ಸಿಗನುಗುಣವಾಗಿ ಪ್ರತಿ ಗಿಡಕ್ಕೆ (ಗ್ರಾಂ.) ೧ – ೩ ವರ್ಷಕ್ಕೆ ಸಾರಜನಕ -೫೦, ರಂಜಕ -೨೫,ಪೊಟ್ಯಾಶ್ -೭೫ :೪ - ೬  ಸಾರಜನಕ-೧೦೦, ರಂಜಕ – ೪೦, ಪೊಟ್ಯಾಶ್- ೭೫ , ೭ - ೧೦, ಸಾರಜನಕ - ೨೦೦ ,ರಂಜಕ – ೮೦, ಪೊಟ್ಯಾಶ್- ೧೫೦ ೧೧ನೇ ವರ್ಷದ ನಂತರ   ಸಾರಜನಕ-  ೩೦೦ , ರಂಜಕ -೧೨೦ ಪೊಟ್ಯಾಶ್ -೧೫೦ ಗ್ರಾಂ ನಂತೆ ಕೊಡಬೇಕು.                 

ಸೂಚನೆ : ಕರಾವಳಿ ಪ್ರದೇಶಕ್ಕೆ ಪ್ರತಿ ಗಿಡಕ್ಕೆ ೦.೫ ಕಿ.ಗ್ರಾಂ. ನಷ್ಟು ಸುಣ್ಣ ಹಾಕಬೇಕು.

ಬೇಸಿಗೆಯಲ್ಲಿ ಬರುವ ಬೆಳೆ ಉತ್ತಮವಾಗಿ ಬರಲು ನೀರಾವರಿ ಅವಶ್ಯಕ. ಪ್ರತೀ ದಿನ ಅಥವಾ ಅವಶ್ಯಕತೆಗನುಗುಣವಾಗಿ  ನೀರಾವರಿ ಮಾಡುತ್ತಿರಬೇಕು. ಅಧಿಕ ನೀರು ಅಗತ್ಯವಿಲ್ಲ. ಪ್ರತಿ ಪೇರಳೆ ಗಿಡಕ್ಕೆ ಆರು ವರ್ಷದವರೆಗೆ ಕ್ರಮವಾಗಿ ಪ್ರತಿ ದಿನ ಮುಂಗಾರಿನಲ್ಲಿ ೫ ಲೀಟರ್, ಹಿಂಗಾರಿನಲ್ಲಿ ೯ ಲೀಟರ್ ಮತ್ತು ಬೇಸಿಗೆಯಲ್ಲಿ ೧೨ ಲೀಟರ್ ನೀರು ಒದಗಿಸುವುದರಿಂದ ಮೇಲ್ಮೈ ನೀರಾವರಿಗಿಂತ ಶೇ. ೨೮ರಷ್ಟು ನೀರು ಉಳಿತಾಯ ಆಗಿ ಅಧಿಕ ಇಳುವರಿಯನ್ನು ಪಡೆಯಬಹುದು.

(ಇನ್ನೂ ಇದೆ)

ಮಾಹಿತಿ: ರಾಧಾಕೃಷ್ಣ ಹೊಳ್ಳ